ಗುಂಡಣ್ಣ ಕಾಲೇಜಿಗೆ ಹೋದ - ಗ್ರಂಥ : ಬದುಕಲು ಕಲಿಯಿರಿ PART 26
ಗ್ರಂಥ : ಬದುಕಲು ಕಲಿಯಿರಿ ಲೇಖಕರು : ಸ್ವಾಮಿ ಜಗದಾತ್ಮಾನಂದಜಿ ಭಾಗ : 26 ಗುಂಡಣ್ಣ ಕಾಲೇಜಿಗೆ ಹೋದ ಗುಂಡಣ್ಣ ಹಳ್ಳಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರಿದ. ಸಾಮಾನ್ಯ ಆರ್ಥಿಕ ಶಕ್ತಿಯುಳ್ಳ ಕುಟುಂಬದಿಂದ ಬಂದವನಾತ. ಅವನ ಮನೆಯವರಿಗೆ ಕಾಲೇಜು ಶಿಕ್ಷಣದ ವೆಚ್ಚವನ್ನು ನಿರ್ವಹಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅವನ ಒತ್ತಾಯಕ್ಕೂ ಅಧ್ಯಾಪಕರ ಪ್ರೋತ್ಸಾಹಕ್ಕೂ ಮಣಿದು, ಹುಡುಗನಿಗೆ ಭವ್ಯ ಭವಿಷ್ಯವಿದೆ ಎಂದೆಣಿಸಿ ತಂದೆ ಸಾಲ ಮಾಡಿ ಮಗನನ್ನು ಪದವೀಧರನನ್ನಾಗಿ ಮಾಡಲು ನಿಶ್ಚಯಿಸಿದರು. ತಾನು ಹುಟ್ಟಿ ಬೆಳದು ಓಡಾಡಿದ ಊರನ್ನು ಬಿಟ್ಟು ಪಟ್ಟಣಕ್ಕೆ ಹೊರಟು ನಿಂತಾಗ ಅವನ ತಾಯಿ ಕಂಬನಿದುಂಬಿ ಹೇಳಿದ್ದರು, 'ಮಗೂ, ಚೆನ್ನಾಗಿ ಕಲಿಯಬೇಕು. ನಿನ್ನ ತಂದೆ ಎಷ್ಟು ಕಷ್ಟಪಡುತ್ತಿದ್ದಾರೆಂದು ನೀನು ನೋಡಿದ್ದಿ. ನಿನ್ನ ತಂಗಿ ತಮ್ಮಂದಿರೂ ಕಲಿಯಬೇಕು, ನೆನಪಿರಲಿ. ವೇಳೆ ವ್ಯರ್ಥವಾಗದಂತೆ ನೋಡಿಕೋ.' ಎಷ್ಟು ಕಳಕಳಿಯಿಂದ ಅವರು ಈ ಮಾತು ಹೇಳಿದರೆಂದರೆ ಆತ ಗದ್ಗದಿತನಾಗಿ 'ಆಗಲಮ್ಮ' ಎಂದಷ್ಟೇ ಉತ್ತರಿಸಿದ್ದ. ಹೊರಡುವಾಗ ಊರ ಹೊರಗಿನ ಆಂಜನೇಯಸ್ವಾಮಿಗೆ ನಮಿಸಿ ಪ್ರಾರ್ಥಿಸಿಯೂ ಇದ್ದ. ಕಾಲೇಜು ಮತ್ತು ಹಾಸ್ಟೆಲುಗಳ ವಾತಾವರಣಕ್ಕೆ ಹೊಂದಿಕೊಳ್ಳಲು ಅವನಿಗೆ ಕೆಲವು ದಿನಗಳೇ ಬೇಕಾದವು. ನೂರಾರು ವಿದ್ಯಾರ್ಥಿಗಳು ತುಂಬಿದ ಕ್ಲಾಸುಗಳಲ್ಲಿ ಅವನೊಬ್ಬ ನಗಣ್ಯ ವ್ಯಕ್ತಿ. ಏನು? ಯಾರು? ಎತ್ತ? ಎಂದು ವಿಚಾರಿಸುವವರಿಲ್ಲ. ಯಾರ ಮ...