ದಡ್ಡನು ಧೀರನಾದ - ಗ್ರಂಥ : ಬದುಕಲು ಕಲಿಯಿರಿ PART 20

 ಗ್ರಂಥ : ಬದುಕಲು ಕಲಿಯಿರಿ

 ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ

 ಭಾಗ : 20


 ದಡ್ಡನು ಧೀರನಾದ 


 ನಮ್ಮ ಆಶ್ರಮ ನಡೆಸುವ ಒಂದು ಹಾಸ್ಟೆಲಿನಲ್ಲಿ ಒಬ್ಬ ವಿದ್ಯಾರ್ಥಿಯಲ್ಲಾದ ಆಮೂಲಾಗ್ರ ಬದಲಾವಣೆಯನ್ನು ಕುರಿತು ಸೋದರ ಸ್ವಾಮೀಜಿ ಒಮ್ಮೆ ಹೇಳಿದ್ದರು. ಅವರ ಮಾತಿನಲ್ಲೇ ಆ ಘಟನೆಯನ್ನು ಇಲ್ಲಿ ನೀಡುತ್ತಿದ್ದೇನೆ.


 “ಒಂದು ದಿನ ಹಾಸ್ಟೆಲಿನ ಎಲ್ಲ ಹುಡುಗರನ್ನೂ ಹತ್ತಿರ ಕುಳ್ಳಿರಿಸಿಕೊಂಡು ಮಾತನಾಡುತ್ತಿದ್ದೆ. ನಮ್ಮ ದೇಶದಲ್ಲಿ ಎಷ್ಟು ಮಂದಿ ಹುಡುಗರಿಗೆ ಒಳ್ಳೆಯ ರೀತಿಯ ಅಧ್ಯಯನ ಮಾಡಲು ಅವಕಾಶವಿದೆ? ನೋಡಿ, ಮನೆಯವರಿಗೆ ಓದು ಬರಹ ಬಾರದು. ದೂರದಲ್ಲಿರುವ ಹಳ್ಳಿಯ ಶಾಲೆ. ಅಲ್ಲಿ ಸೌಕರ್ಯ ಸಾಲದು. ತಪ್ಪದೇ ಶಾಲೆಗೆ ಹೋಗಲು ಅನುಕೂಲವಿಲ್ಲ. ಶಾಲೆಗೆ ಹೋದರೆ ಒಬ್ಬರೋ, ಇಬ್ಬರೋ ಅಧ್ಯಾಪಕರು ಇನ್ನೂರು ಮಕ್ಕಳಿಗೆ ಪಾಠ ಹೇಳಬೇಕು. ನಾಲ್ಕೈದು ವರ್ಷಗಳ ಕಾಲ ಶಾಲೆಗೆ ಹೋಗಿದ್ದರೂ ಪೇಟೆ ಪಟ್ಟಣಗಳಲ್ಲಿ ಓದಿದ ಹುಡುಗರನ್ನು ಕಂಡಾಗ ಹಳ್ಳಿಯ ಹುಡುಗರಿಗೆ ತಮ್ಮ ಅಭಿವೃದ್ಧಿಯ ಬಗೆಗೆ ಸಂಕೋಚವೆನಿಸಬಹುದು, ಭಯವೂ ಆಗಬಹುದು. ನಿಮಗಾದರೆ ಚೆನ್ನಾಗಿ ಓದಿ ಮುನ್ನಡೆಯಲು ಎಷ್ಟೊಂದು ಅವಕಾಶಗಳಿವೆ. ಒಳ್ಳೆಯ ಪುಸ್ತಕಾಲಯವಿದೆ. ಹಿರಿಯ ವಿದ್ಯಾರ್ಥಿಗಳಿದ್ದಾರೆ. ಓದುವಾಗ ನಿಮಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಸಣ್ಣಪುಟ್ಟ ನಿಯಮಿತವಾದ ಕೆಲಸಗಳನ್ನು ಬಿಟ್ಟರೆ ಬೇರಾವ ತಾಪತ್ರಯವಿಲ್ಲ ಬೇರಾವ ಜವಾಬ್ದಾರಿ, ಚಿಂತೆಗಳಿಲ್ಲ. ನಿಮಗೆ ತೊಂದರೆಗಳೇನಾದರೂ ಇದ್ದರೆ ನಾವು ಅದನ್ನು ದೂರ ಮಾಡಲು ಯತ್ನಿಸುತ್ತೇವೆ. ಆದರೂ ದೇವರು ಕೊಟ್ಟ ಈ ಅವಕಾಶವನ್ನು ನೀವು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೀರಾ? ಯೋಚಿಸಿ! ನಮ್ಮ ಪಾಲಿಗೆ ಬಂದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ, ನಾವು ನಿಂತ ಜಾಗದಿಂದ ಮೇಲೇರಲು ಬೇರಾವ ದಾರಿಯೂ ಇಲ್ಲ. ಈ ಬಗ್ಗೆ ಮುಂದೆ ಪರಿತಪಿಸಬೇಕಾಗುತ್ತದೆ" ಎಂದೆಲ್ಲ ಹೇಳಿದೆ. ಹುಡುಗರೆಲ್ಲರೂ ಮೌನವಾಗಿ ಆಲಿಸುತ್ತಿದ್ದರು.


 ರಾತ್ರಿ ಒಂಬತ್ತರ ಹೊತ್ತಿಗೆ ಏಳನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ ನಿರಂಜನ ನನ್ನ ಕೋಣೆಯೊಳಗೆ ಬಂದು, 'ಸ್ವಾಮೀಜಿ, ನಿಮ್ಮ ಹತ್ತಿರ ಒಂದು ವಿಚಾರ ಕೇಳಬೇಕೆಂದಿದ್ದೇನೆ. ಕೇಳಲೇ?' ಎಂದ.


 'ಖಂಡಿತ ಕೇಳಬಹುದು' ಎಂದೆ.


 'ದಯವಿಟ್ಟು ನನಗೊಬ್ಬನಿಗೇ ಸ್ವಲ್ಪ ಲೆಕ್ಕ ಹೇಳಿಕೊಡುತ್ತೀರಾ?' ಎಂದು ಬಹಳ ದೈನ್ಯದಿಂದ ಕೇಳಿದ.


 'ಆಗಲಿ ಹೇಳಿಕೊಡುತ್ತೇನೆ. ನಿತ್ಯವೂ ಅರ್ಧಗಂಟೆ ಅದಕ್ಕಾಗಿ ಮೀಸಲಿಡುತ್ತೇನೆ. ಏನೂ ಸಂಕೋಚಬೇಡ. ಊಟವಾದ ಮೇಲೆ ಬಾ' ಎಂದೆ.


 ಹಾಸ್ಟೆಲಿನಲ್ಲಿ ಚೆನ್ನಾಗಿ ಅಧ್ಯಯನ ಮಾಡದ, 'ಸೋಮಾರಿ', 'ದಡ್ಡ', 'ಪರೀಕ್ಷೆಯಲ್ಲಿ ಕಾಪಿ, ಮೇಷ್ಟ್ರರಿಗೆ ಟೋಪಿ' ಎಂಬೆಲ್ಲ ಬಿರುದುಗಳನ್ನು ಪಡೆದ ಹುಡುಗನವನು ಎಂಬುದು ನನಗೆ ತಿಳಿದ ವಿಷಯವೇ ಆಗಿತ್ತು. 


ಸಮಯಕ್ಕೆ ಸರಿಯಾಗಿ ಅವನು ಪುಸ್ತಕ ಪೆನ್ಸಿಲುಗಳನ್ನು ತೆಗೆದುಕೊಂಡು ನನ್ನ ಕೋಣೆಯಲ್ಲಿ ಹಾಜರಾದ. ಅವನ ಗಣಿತಜ್ಞಾನದ ಮಟ್ಟ 3 ನೆಯ ತರಗತಿಯಷ್ಟರದು. ಅದಕ್ಕಿಂತ ಹೆಚ್ಚಿನದಲ್ಲ. ಇವನಿಗೆ ಗಣಿತ ಬೋಧನೆ ಮಾಡಿ ಪರೀಕ್ಷೆಯಲ್ಲಿ ಪಾಸುಮಾಡಿಸಲು ನನ್ನಿಂದ ಸಾಧ್ಯವಾಗುವುದೇ ಹೇಗೆ? ಎಂಬ ಯೋಚನೆ ಮನಸ್ಸಿನಲ್ಲಿ ಸುಳಿದು ಮಾಯವಾಯಿತು. ಗಣಿತ ಕಲಿಸಲು ಸಾಧ್ಯವಾಗಲಿ ಬಿಡಲಿ, ಆಗಲೇ ಲೆಕ್ಕದಲ್ಲಿ ತಲೆ ಇಲ್ಲ', 'ಮನಸ್ಸು ಕೊಟ್ಟು ಕಲಿಯುವುದಿಲ್ಲ', 'ತಲೆಯಲ್ಲಿ ಹುಲ್ಲು, ಮಿದುಳಿಲ್ಲ ' ಮುಂತಾದ ವಾಕ್ಯಗಳಿಂದ ಆಘಾತವಾದ ಆತನ ಮನಸ್ಸಿಗೆ ಇನ್ನಷ್ಟು ತಿರಸ್ಕಾರದ ಮಾತುಗಳನ್ನಾಡಿ ನೋಯಿಸಲು ನಾನು ಸರ್ವಥಾ ಸಿದ್ಧನಿರಲಿಲ್ಲ. ಏಕೆಂದರೆ ನಾನು ಬುದ್ಧಿವಂತರೆನಿಸಿಕೊಂಡ ಹೆಚ್ಚಿನವರ ಅನಾವಶ್ಯಕ ಅಹಂಕಾರದಿಂದ ನೊಂದವನು. ಬುದ್ದಿವಂತರು, ಸರಳರೂ, ನಿರಹಂಕಾರಿಗಳೂ, ನಿರಾಡಂಬರಿಗಳೂ ಆಗಿದ್ದರೆ ಚಿನ್ನ ಪರಿಮಳಿಸಿದಂತೆ ಎಂಬುದನ್ನು ಕಂಡವನು. ನಿಂದೆಯ ನುಡಿಯನ್ನು ಕೇಳಿ ನೊಂದುಕೊಂಡ ಆತನಿಗೆ ಹೇಗಾದರೂ ಮಾಡಿ, ಎಷ್ಟೇ ಕಷ್ಟಪಟ್ಟಾದರೂ ಕಲಿಸಲು ಸಾಧ್ಯವೇ ಎಂದು ನೋಡಬೇಕೆಂಬ ಹಂಬಲ ಉದಿಸಿತು. ಏನೇ ಆಗಲಿ, ಪ್ರಯತ್ನಿಸಿ ನೋಡೋಣ ಎಂದು ತೋರಿತು.


 ಸುಮಾರು ಮೂರೂವರೆ ತಿಂಗಳುಗಳ ಕಾಲ ಒಂದು ದಿನವೂ ತಪ್ಪದೆ ನಿಷ್ಠೆಯಿಂದ ಅವನು ಲೆಕ್ಕ ಹೇಳಿಸಿಕೊಳ್ಳಲು ಬಂದ. ಆತನಲ್ಲಿ ಮೊದಲು ಆತ್ಮವಿಶ್ವಾಸ ಮತ್ತು ಅಭಿರುಚಿ ಉಂಟಾಗಲೆಂದು ಅವನು ಒಂದೂ ತಪ್ಪು ಮಾಡಲು ಸಾಧ್ಯವಿರದಂಥ ಸುಮಾರು ನೂರು ಲೆಕ್ಕಗಳನ್ನು ಕೊಟ್ಟಿದ್ದೆ. ಈ ಲೆಕ್ಕಗಳು ಮೊದಮೊದಲು ಬಹಳ ಸುಲಭವಾಗಿದ್ದು ಐವತ್ತರ ನಂತರ ಕ್ರಮವಾಗಿ ಸ್ವಲ್ಪ ಕಠಿಣವಾಗಿದ್ದವು. ಮೊದಲ ದಿನ ಸುಮಾರು ಹತ್ತು ಲೆಕ್ಕಗಳನ್ನು ಸರಿಯಾಗಿ ಮಾಡಿದಾಗ 'ವೆರಿಗುಡ್, ಸರಿಯಾಗಿ ಮಾಡಿದಿ. ನಿನಗೆ ಲೆಕ್ಕದಲ್ಲಿ ಅಭಿರುಚಿ ಇದೆ' ಎಂದೆ. ನೂರು ಲೆಕ್ಕಗಳನ್ನು ತಪ್ಪಿಲ್ಲದೆ ಮಾಡುವಂತಾಗಬೇಕೆಂಬುದು ನಾನು ಹಾಕಿಕೊಂಡ ಯೋಜನೆಯಾಗಿತ್ತು. ದೇವರ ದಯೆಯಿಂದ ಅದು ಯಶಸ್ವಿಯಾಯಿತು. ನೂರು ಲೆಕ್ಕಗಳನ್ನೂ ತಪ್ಪಿಲ್ಲದೇ ಮಾಡಿ ಮುಗಿಸಿದ ಮೇಲೆ 'ಯಾರಯ್ಯ ನಿನಗೆ ಲೆಕ್ಕ ಮಾಡಲು ಬರುವುದಿಲ್ಲ ಎಂದು ಹೇಳಿದವರು? ನೀನು ಒಂದೇ ಒಂದು ತಪ್ಪು ಮಾಡಲಿಲ್ಲ! ನೋಡು ಈ ಬಾರಿ ನಿನಗೆ ಎಪ್ಪತ್ತು ಪರ್ಸೆಂಟ್ ಬರುತ್ತದೆ ಪರೀಕ್ಷೆಯಲ್ಲಿ!' ಎಂದೆ. ಅವನ ಆತ್ಮವಿಶ್ವಾಸ ಚಿಗುರಿ ಉತ್ಸಾಹ ಗರಿಗೆದರಿದುದನ್ನು ನೋಡಿ ನನಗೆ ಸಂತೋಷವಾಯಿತು. ರಾತ್ರಿ ಎಂಟೂವರೆ ಗಂಟೆಯಿಂದ ಕೆಲವೊಮ್ಮೆ ಹತ್ತೂವರೆಯವರೆಗೂ ಅವನು ಬಿಡದೆ ಕುಳಿತು ಲೆಕ್ಕ ಮಾಡುತ್ತಿದ್ದ. ಮುಂದೆ ಅವನು ನಾಲ್ಕು ತಿಂಗಳ ನಂತರ ಪರೀಕ್ಷೆಯಲ್ಲಿ ಕಾಪಿ ಹೊಡೆಯದೇ ಸ್ವಂತ ಬುದ್ಧಿಯನ್ನುಪಯೋಗಿಸಿ ನೂರರಲ್ಲಿ ಎಪ್ಪತ್ತು ಅಂಕಗಳನ್ನು ಪಡೆದ. ಆಗ ಅವನಲ್ಲಿ ಕಂಡು ಬಂದ ಆತ್ಮತೃಪ್ತಿ, ಆನಂದಗಳನ್ನು ವರ್ಣಿಸಲು ಶಬ್ದಗಳಿಗೆ ಶಕ್ತಿ ಸಾಲದು! ಒಂದು ಜೀವ ಹೂವು ಅರಳಿದಂತೆ ಹಿರಿಹಿರಿ ಹಿಗ್ಗಿದುದನ್ನು ನಾನು ಕಂಡೆ. ಒಂದು ದೊಡ್ಡ ಪಾಠವನ್ನೂ ಕಲಿತೆ. ಅವನ ಅಭಿವೃದ್ಧಿಯ ಕತೆಯನ್ನು ಕೇಳಿ ತಿಳಿದ ಅವನ ತಂದೆತಾಯಿ ಆಶ್ರಮಕ್ಕೆ ಬಂದು ನನ್ನನ್ನು ಕಂಡು ಸಂತೋಷದ ಕಂಬನಿಯಿಂದ ಕೃತಜ್ಞತೆಯ ಮಾತುಗಳನ್ನು ಹೇಳಿ ವಂದಿಸಿದರು." 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

Want to know how Deep Learning works? Here’s a quick guide for everyone.