ಬದುಕಿನ ಸಾರ್ಥಕತೆ - ಗ್ರಂಥ : ಬದುಕಲು ಕಲಿಯಿರಿ PART 23

 ಗ್ರಂಥ : ಬದುಕಲು ಕಲಿಯಿರಿ

 ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

 ಭಾಗ : 23



 ಬದುಕಿನ ಸಾರ್ಥಕತೆ 


 'ಏನು ಆಗಬೇಕೆಂದು ಯೋಚಿಸಿ ಚಿತ್ರಿಸಿ ಕಲ್ಪಿಸಿಕೊಂಡಿರುತ್ತೇವೆಯೋ ಅದನ್ನು ಕುರಿತು ನಾವು ಅರ್ಧಜಾಗೃತರಾಗಿರುತ್ತೇವೆ. ನಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಗಳ ಬಹು ಅಲ್ಪಭಾಗವನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಒಟ್ಟಿನಲ್ಲಿ ಮಾನವನು ತನ್ನ ಶಕ್ತಿಯ ವಿಸ್ತಾರ ಪರಿಧಿಯೊಳಗಣ ತೀರ ಸೀಮಿತ ಕ್ಷೇತ್ರದಲ್ಲೇ ಬದುಕುತ್ತಾನೆ. ನಾನಾವಿಧದ ಶಕ್ತಿಗಳನ್ನು ಪಡೆದೂ, ಅವನ್ನು ಉಪಯೋಗಿಸಲು ಹಂಬಲಿಸದೇ, ಆ ನಿಟ್ಟಿನಲ್ಲಿ ಯತ್ನಿಸದೆ ಅಸಮರ್ಥನಾಗಿಯೇ ಬದುಕುತ್ತಾನೆ.' ಹೀಗೆಂದು ಹೇಳಿದವರು ಪ್ರಸಿದ್ಧ ಮನೋವಿಜ್ಞಾನಿ ವಿಲಿಯಮ್ ಜೇಮ್ಸ್. 


ವಿಶಾಲವಾದ ಮೈದಾನದಲ್ಲಿ ಹಾಯಾಗಿ ಹುಲ್ಲು ಮೇದು ತಿರುಗಾಡುವಷ್ಟು ಉದ್ದವಾದ ಹಗ್ಗವಿದೆ. ಆದರೂ ಗೂಟಕ್ಕೆ ಕಟ್ಟಿದ ಹಸು ಗೂಟದ ಬಳಿಯೇ ಹಗ್ಗ ಸುತ್ತಿಕೊಂಡು ತನ್ನ ಸಂಚಾರದ ಸ್ವಾತಂತ್ರ್ಯ, ಸೌಲಭ್ಯಗಳನ್ನು ಮೊಟಕುಗೊಳಿಸಿಕೊಂಡಂತೆ ಇದು. ಮನುಷ್ಯರೂ ತಮ್ಮಲ್ಲಿರುವ ಶಕ್ತಿ ಸಾಧ್ಯತೆಗಳನ್ನರಿಯದೆ ಬಹಳಷ್ಟು ಪರಿಮಿತ ಪರಿಧಿಯಲ್ಲೇ ಬದುಕಿಕೊಂಡಿರುತ್ತಾರೆಂಬುದು ಮನೋವಿಜ್ಞಾನಿಯ ಮಾತಿನ ಅರ್ಥ.


 ಎಂಥ ಅದ್ಭುತ ಯಂತ್ರ ನಮ್ಮ ದೇಹ! ಎಷ್ಟು ಅದ್ಭುತ ಶಕ್ತಿ ಹುದುಗಿದೆ ನಮ್ಮಲ್ಲಿ! ಆದರೂ ಕಣ್ಣನ್ನು ಮುಚ್ಚಿಕೊಂಡು ಕತ್ತಲೆ ಎಂದು ಅಳುವವರು ನಾವು! 


ನಮಗೆ ಜೀವನದಲ್ಲಿ ಮಹತ್ವಾಕಾಂಕ್ಷೆಗಳಿಲ್ಲ-

 ನಿರ್ದಿಷ್ಟ ಉದ್ದೇಶಗಳಿಲ್ಲ. ನಮ್ಮ ಶಕ್ತಿಯಲ್ಲಿ ನಮಗೆ ವಿಶ್ವಾಸವೂ ಇಲ್ಲ. ನಿಯಮಗಳನ್ನನುಸರಿಸಿ ನಾವು ಕೆಲಸ ಮಾಡುತ್ತಿಲ್ಲ. ಹರಟೆ ಹೊಡೆಯಲು ಮಾತ್ರ ಇಚ್ಛಿಸುತ್ತೇವೆ. ನಾವು ಯಶಸ್ವಿಗಳಾಗಬಲ್ಲೆವೆ?


ಸಂತನೊಬ್ಬ ತನ್ನ ಬದುಕಿನ ಕೊನೆಯ ದಿನಗಳಲ್ಲಿ ಜೀವನಾವಲೋಕನ ಮಾಡುತ್ತ 'ನಾನು ಒಳ್ಳೆಯ ರೀತಿಯಲ್ಲೇ ಹೋರಾಡಿದ್ದೇನೆ' ಎಂದನಂತೆ. ಸತತ ಪ್ರಯತ್ನ ಹಾಗೂ ಬಿಡದ ಛಲಗಳಿಂದ ಅನವರತ ಕಾರ್ಯನಿರತನಾಗಿ ಕಷ್ಟ ಕಾರ್ಪಣ್ಯಗಳನ್ನು ಕೆಚ್ಚೆದೆಯಿಂದ ಎದುರಿಸಿ ಬದುಕಿದ ಬಾಳಿನ ಸಮೀಕ್ಷೆ ಅದು. ನಮ್ಮ ಜೀವನದ ಸಾಫಲ್ಯವು ದಿನದ ಪ್ರತಿಯೊಂದು ಘಂಟೆಯಲ್ಲಿ ಪ್ರತಿಯೊಂದು ಕ್ಷಣದಲ್ಲಿ ನಾವು ಬದುಕುವ ರೀತಿಯನ್ನು ಹೊಂದಿಕೊಂಡಿದೆ. ನಾಳೆ ನೋಡೋಣ, ಮತ್ತೆ ಮಾಡೋಣ ಎನ್ನುವವರು ತಮ್ಮ ಕೊನೆಯ ದಿನಗಳಲ್ಲಿ ಏನು ಹೇಳಿಯಾರು?


'ಅಯ್ಯೋ, ವ್ಯರ್ಥ ವಿಚಾರಗಳಲ್ಲೇ ನನ್ನ ಸಮಯ ಕಳೆದು ಹೋಯಿತು.”  'ಉಪಯುಕ್ತ ವಸ್ತುಗಳನ್ನು ಬಿಟ್ಟು ಮರೀಚಿಕೆಯನ್ನು ಹಿಂಬಾಲಿಸಿದನಲ್ಲ?'


 'ಕೆಟ್ಟ ಮೇಲೆ ಬುದ್ದಿ ಬಂದರೆ ಏನು ಪ್ರಯೋಜನ!' 


'ನಾನು ನನ್ನ ಸ್ನೇಹಿತರ ನಿರೀಕ್ಷೆಯ ಮಟ್ಟವನ್ನೇರದೆ ನನ್ನ ವಿರೋಧಿಗಳು ಹಲ್ಲು ಕಿರಿಯುವಂತೆ ಮಾಡಿದೆ.'


 'ಎಲ್ಲ ವಿಷಯಗಳಲ್ಲೂ ಸುಲಭವಾದುದನ್ನೇ ಆರಿಸಿ ಮೋಸ ಹೋದೆ.' 


'ನಾನು ಸೋತನೆಂದು ಹೇಳಲಾಗದಿದ್ದರೂ ನನ್ನ ಜಯವು ಹೇಳುವಂಥದಲ್ಲ!'


ನೀವು ಮುಂದೆ ಹೀಗೆ ಹೇಳಲು ಇಚ್ಛಿಸುವಿರಾ?


 ನಿಮ್ಮ ಜೀವನದಲ್ಲಿ ನಿರ್ದಿಷ್ಟ ಉದ್ದೇಶಗಳ ಅಭಾವಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ಅಭಿರುಚಿಯ ವಿಷಯದಲ್ಲಿ ನಿಮಗೆ ಬಾಲ್ಯದಿಂದಲೇ ತರಬೇತಿಯ ಅಭಾವವಿರಬಹುದು. ನಿಮ್ಮ ಅನಾರೋಗ್ಯ ದೌರ್ಬಲ್ಯಗಳು ನಿಮ್ಮ ದಾರಿಯಲ್ಲಿ ತೊಡಕುಗಳಾಗಿರಬಹುದು. ನೀವು ಸ್ವಾಭಾವಿಕವಾಗಿ ಚಂಚಲ ಮನಸ್ಕರಾಗಿದ್ದು ದೃಢತೆಯಿಂದ ಏಕಾಗ್ರತೆಯಿಂದ ಹಿಡಿದ ಕೆಲಸವನ್ನು ಮಾಡದೇ ಇರಬಹುದು. ನೀವು ಮಾಡಬೇಕಾಗಿರುವ ಉದ್ಯೋಗದಲ್ಲಿ ನಿಮಗೆ ಅಭಿರುಚಿಯಾಗಲಿ, ಯೋಗ್ಯತೆಯಾಗಲಿ ಇಲ್ಲದೇ ನಿಮ್ಮ ಸತ್ವಶಕ್ತಿಗಳನ್ನು ಪ್ರಕಟಿಸಲು ಅವಕಾಶವಿಲ್ಲದಿರಬಹುದು. ಜೀವನದ ಹಲವು ಕ್ಷೇತ್ರಗಳಲ್ಲಿ ಸೋಲನ್ನು ಕಂಡ ನೀವು ನಿರಾಶಾವಾದಿಗಳಾಗಿರಬಹುದು. ಎಲ್ಲವೂ ವಿಧಿವಶ ಹಣೆಯ ಬರಹ, ಪ್ರಾರಬ್ಧ ಕರ್ಮ ಎನ್ನುತ್ತಿರಬಹುದು. ನಿಮ್ಮ ಬದುಕಿನ ರೀತಿಯನ್ನು ಸ್ವಲ್ಪ ವಿಮರ್ಶಿಸಿಕೊಳ್ಳಿ. ಸ್ವಲ್ಪ ಜಾಗರೂಕತೆಯಿಂದ ನಿಮ್ಮ ಉದ್ದೇಶವನ್ನು ಕಂಡುಕೊಳ್ಳಿ. ಉದ್ದೇಶವಿಲ್ಲದ ಜೀವನ ಚುಕ್ಕಾಣಿ ಇಲ್ಲದ ದೋಣಿಯಂತೆ ಎಲ್ಲೆಲ್ಲೋ ಸಾಗುವುದು.


 


ಬಾಳಿಗೊಂದು ಗುರಿ 


ನಿಮ್ಮಲ್ಲಿರುವ ಸುಪ್ತಶಕ್ತಿಗಳನ್ನು ಬಡಿದೆಬ್ಬಿಸಬೇಕಾದರೆ ನಿಮ್ಮ ಜೀವನಕ್ಕೊಂದು ಗುರಿ ಇರಬೇಕು. ಗುರಿ ಎಂದರೆ ಮೋಕ್ಷಾಕಾಂಕ್ಷೆ ಒಂದೇ ಆಗಬೇಕೆಂದಿಲ್ಲ. ಜೀವನದಲ್ಲಿ ನಿರ್ದಿಷ್ಟವಾದ ಹಾಗೂ ಸ್ಪಷ್ಟವಾದ ಉದ್ದೇಶ ಬೇಕು. ಒಂದು ಸಣ್ಣ ತಾತ್ಕಾಲಿಕ ಅಭಿಲಾಷೆ ಒಂದು ಉದ್ದೇಶವಲ್ಲ. ನೀವು ಕೈಗೊಂಡ ಕೆಲಸದಲ್ಲೆಲ್ಲ ಯಶಸ್ವಿಯಾಗಬೇಕೆಂಬ ಕೇವಲ ಆಸೆ ಮಾತ್ರ ಇದ್ದರೆ ಸಾಲದು.‌ ಗೊತ್ತುಪಡಿಸಿಕೊಂಡ ಕೆಲಸವನ್ನು ಗೊತ್ತುಪಡಿಸಿದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾಡಿ ಮುಗಿಸುವ ಉದ್ದೇಶ ಬಹಳ ಆವಶ್ಯಕ. ಕಾರ್ಯ ಯೋಜನೆಯೊಂದು ಇಲ್ಲದಿದ್ದರೆ ನಿಮ್ಮ ಅಮೂಲ್ಯವಾದ ಮಾನಸಿಕ ಶಕ್ತಿ ಮತ್ತು ಸಮಯ ವ್ಯರ್ಥವಾಗಿ ವ್ಯಯವಾಗುತ್ತದೆ.


 ನೀವು ಸಭೆಯೊಂದರಲ್ಲಿ ಭಾಷಣ ಮಾಡಲು ಯೋಚಿಸಿರಬಹುದು. ವ್ಯಾಪಾರ ನಡೆಯಿಸಲು ಯೋಜನೆ ಹಾಕಿರಬಹುದು. ಕಲಾವಿದನಾಗಲು, ಕಾದಂಬರಿಗಾರನಾಗಲು ಇಚ್ಛಿಸಿರಬಹುದು. ನಿಮ್ಮ ಉದ್ಯೋಗದಲ್ಲೇ ಚೆನ್ನಾಗಿ ದುಡಿದು ಹೆಚ್ಚು ಹಣಗಳಿಸುವ ಯೋಚನೆ ಇರಬಹುದು. ಏನೇ  ಇರಲಿ, ನಿಮ್ಮ ಉದ್ದೇಶವನ್ನು ಕುರಿತು ಸ್ಪಷ್ಟವಾದ ಅರಿವು ನಿಮಗಿರಬೇಕಾಗುತ್ತದೆ. ಆ ಒಂದು ವಿಶಿಷ್ಟ ಆಸೆ ಅಥವಾ ಭಾವನೆ ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ.


 ಅನಿಶ್ಚಿತತೆಯಿಂದ ಪಾರಾಗಲು ನಾನು ಜೀವನದಲ್ಲಿ ಅತ್ಯಂತ ಹೆಚ್ಚಾಗಿ ಆಶಿಸುವುದು ಯಾವುದು ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು. ಆಗ ನಿಮ್ಮ ಜೀವನದಲ್ಲಿ ನೀವಿರಿಸಿಕೊಳ್ಳಬಹುದಾದ ಮುಖ್ಯ ಉದ್ದೇಶದ ಚಿತ್ರ ಹೆಚ್ಚು ಸ್ಪಷ್ಟವಾಗುವುದು. ಆಗ ನಿಮ್ಮ ಮಾನಸಿಕ ಶಕ್ತಿ ಆ ದಿಸೆಯಲ್ಲಿ ಹರಿಯಲು ತೊಡಗುವುದು. 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box