ಗ್ರಂಥ : ಬದುಕಲು ಕಲಿಯಿರಿ PART 21
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 21
ನಿಜವಾಗಿಯೂ ವಿದ್ಯಾರ್ಥಿಯು ದಡ್ಡನಾಗಿರಲಿಲ್ಲ. ಅವನ ತಂದೆ ಓದು ಬರಹ ಬಲ್ಲ ವಿದ್ಯಾವಂತರು ಮಾತ್ರವಲ್ಲ, ವಿದ್ವಾಂಸರೂ ಆಗಿದ್ದರು. ಅವರ ವೈಶಿಷ್ಟ್ಯವೋ, ದೋಷವೋ, ಮಕ್ಕಳು ಬೇಗನೆ ಓದು ಕಲಿತು ಮುಂದೆ ಬರಬೇಕು ಎಂಬ ಆತುರದವರು. ಅವರು ತಾವು ಕಲಿಯುತ್ತಿದ್ದಾಗ ಎಲ್ಲ ಕ್ಲಾಸುಗಳಲ್ಲೂ ಪ್ರಥಮದರ್ಜೆಯವರಂತೆ. ಯಾವುದೇ ವಿಚಾರವನ್ನು ಬಹುಬೇಗನೇ ಗ್ರಹಿಸಬಲ್ಲವರು. ಮಗನನ್ನು ಮಹಾ ಮೇಧಾವಿಯನ್ನಾಗಿ ಮಾಡಲು ನಾಲ್ಕನೇ ವಯಸ್ಸಿನಿಂದಲೇ ಅವನ ತಲೆಯಲ್ಲಿ ಗಣಿತವನ್ನು ತುರುಕಲು ತೊಡಗಿದ್ದರು. ಅವನು ಥಟ್ಟನೆ ಗ್ರಹಿಸದಿದ್ದಾಗ ತಾಳ್ಮೆಗೆಟ್ಟ ಅವರು ಬೈದು ಹೊಡೆದು ಹೇಳಿಕೊಡಲು ಯತ್ನಿಸಿ ವಿಫಲರಾದರು. ಅವರು ಹೆಚ್ಚು ಹೆಚ್ಚು ವ್ಯಗ್ರರಾಗಿ ಬೋಧಿಸಹೊರಟಂತೆ ಹುಡುಗನ ಮನಸ್ಸು ಅಷ್ಟಷ್ಟೂ ಭಯದಿಂದ ಒರಟಾಗುತ್ತ ಬಂದಿತು. ಆ ಬಳಿಕ ತಮ್ಮ ಗಣಿತ ಬೋಧನೆಯಿಂದ ಹುಡುಗನನ್ನು ಬಾಧಿಸದಿದ್ದರೂ, ಆಗಾಗ 'ಕಲಿಯುವುದರಲ್ಲಿ ಹಿಂದೆ ಊಟದಲ್ಲಿ ಮುಂದೆ' ಎಂದು ಚಟಾಕಿ ಹಾರಿಸುತ್ತಿದ್ದರು. ಹುಡುಗ ಆಗಲೇ ತನಗೆ ಲೆಕ್ಕಬಾರದು ಎಂದುಕೊಂಡು ತನಗರಿವಿಲ್ಲದೆ ಲೆಕ್ಕವನ್ನು ದ್ವೇಷಿಸತೊಡಗಿದ. ಆತ ಶಾಲೆ ಸೇರಿಕೊಂಡಾಗ ಅಲ್ಲಿಯೂ ಇತರ ವಿದ್ಯಾರ್ಥಿಗಳೊಂದಿಗೆ ತನ್ನನ್ನು ಹೋಲಿಸಿಕೊಂಡಾಗ ತಾನು ಲೆಕ್ಕದಲ್ಲಿ ಹಿಂದೆ ಎಂಬುದನ್ನು ಇಷ್ಟವಿಲ್ಲದಿದ್ದರೂ ಒಪ್ಪಬೇಕಾಯಿತು. ದಿನದಿನವೂ ಉಳಿದ ಹುಡುಗರು, ಅಧ್ಯಾಪಕರು 'ಅರ್ಥವಾಯಿತೆ?' ಎಂದು ಕೇಳಿದಾಗ 'ಹೌದು' ಎಂದು ಒಕ್ಕೊರಲಿನಿಂದ ಹೇಳುವಾಗ ತಾನು ಮಾತ್ರ ಅರ್ಥವಾಗದೆ ಭಯದಿಂದ 'ಹೌದು' ಎನ್ನುವ ಹೌದಪ್ಪರ ಜೊತೆ ಸೇರಿಕೊಳ್ಳುತ್ತಿದ್ದ. ಒಂದು ದಿನ ಅರೆನಿದ್ರೆಯಲ್ಲಿರುವಾಗ ತಂದೆ ತನ್ನ ತಾಯಿಯ ಹತ್ತಿರ 'ಹುಡುಗನಿಗೆ ಲೆಕ್ಕದಲ್ಲಿ ತಲೆ ಇಲ್ಲವೆಂದು ಮೇಷ್ಟರು ಹೇಳುತ್ತಾರೆ, ಏನು ಮಾಡುವುದೊ?' ಎಂದದ್ದು ಕೇಳಿಸಿತು. ಮುಂದೆ ತ್ರೈಮಾಸಿಕ ಪರೀಕ್ಷೆಯ ನಂತರ ಮಾರ್ಕ್ಸ್ ಕಾರ್ಡ್ ಬಂದಾಗ ಬಹಳ ಕಡಿಮೆ ಅಂಕಗಳು ಬಂದು ಫೇಲಾದುದು ಗೊತ್ತಾಯಿತು. ಹೀಗೆ ಹಲವಾರು ಸಾಕ್ಷ್ಯಾಧಾರ ಮತ್ತು ಸ್ವಂತ ಅನುಭವಗಳಿಂದ ತನಗೆ ಲೆಕ್ಕ ಬರುವುದಿಲ್ಲ ಮಾತ್ರವಲ್ಲ, ತನಗೆ ಲೆಕ್ಕದಲ್ಲಿ ತಲೆಯೇ ಇಲ್ಲ ಎನ್ನುವ ಸಂಗತಿ ಸತ್ಯ ಎಂಬುದನ್ನು ಅವನ ಒಳ ಮನಸ್ಸು ಸ್ವೀಕರಿಸಿತ್ತು. ಮುಂದೆ ಲೆಕ್ಕದ ಅಧ್ಯಾಪಕರು ಕ್ಲಾಸಿಗೆ ಬಂದಾಗ ಅವನಿಗೆ ತನ್ನ ಎದೆ ಬಡಿತ ಕೇಳಲು ಶುರುವಾಯಿತು. ಪರೀಕ್ಷೆಯಲ್ಲಿ ಲೆಕ್ಕದ ಪೇಪರು ಕಂಡಾಗ ಸರ್ವಾಂಗವೂ ಬೆವೆತು, ತನ್ನ ಜಾಗವನ್ನು ಬಿಟ್ಟು ಬೇಗನೆ ಹೊರಗೆ ಹೋಗೋಣವೆನಿಸುತ್ತಿತ್ತು. ಸ್ನೇಹಿತರಲ್ಲಿ ಇವನಿಗಿಂತ ಹೆಚ್ಚು ಬುದ್ಧಿವಂತರನ್ನೇನೊ 'ಲೆಕ್ಕ ಹೇಳಿಕೊಡುತ್ತೀಯಾ?' ಎಂದು ಕೇಳಿದ್ದ. ಅವರು ಆಸೆ ತೋರಿಸಿದರೂ ತಾಳ್ಮೆಯಿಂದ ಹೇಳಿಕೊಡಲಿಲ್ಲ. ಆಗ ಬೇರೆ ದಾರಿ ಕಾಣದೆ ಮೇಷ್ಟರಿಗೆ ಟೋಪಿ ಹಾಕಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ವಿದ್ಯೆಯನ್ನು ಕರಗತಮಾಡಿಕೊಂಡ.
ತನಗೆ ಲೆಕ್ಕ ಬರುವುದಿಲ್ಲ ಎನ್ನುವ ಬೇರುಬಿಟ್ಟ ಭಾವನೆಯನ್ನು ಪ್ರಯತ್ನದಿಂದ ಕಿತ್ತೆಸೆಯಬಹುದು. ಯಾವೆಲ್ಲ ಅನುಭವ ಸಾಕ್ಷಿ ಆಧಾರಗಳಿಂದ ಆ ಭಾವನೆ ಬೇರು ಬಿಟ್ಟಿದೆಯೊ ಅದಕ್ಕೆ ವಿರೋಧವಾದ ಅನುಭವ ಸಾಕ್ಷಿ ಆಧಾರಗಳಿಂದ ಅದನ್ನು ದೂರೀಕರಿಸಬಹುದು. ಶಾಲೆಗೆ ಸೇರಿದ ಪ್ರಥಮದಿಂದಲೇ ಅಥವಾ ಮೊದಲೇ ಗಣಿತದಲ್ಲಿ ಮುಗ್ಗರಿಸಿ ಆತ್ಮವಿಶ್ವಾಸವನ್ನು ಕ್ರಮವಾಗಿ ಕಳೆದುಕೊಂಡ ಆತನಿಗೆ ಪ್ರಾರಂಭದ ಹಂತದಿಂದಲೇ ಹಲವಾರು ಸಣ್ಣಪುಟ್ಟ ವಿಜಯಗಳನ್ನು ತಂದುಕೊಟ್ಟು ಆತ್ಮವಿಶ್ವಾಸವನ್ನು ಪುನಃ ಚಿಗುರುವಂತೆ ಮಾಡಬೇಕು. ಅಪಜಯದ ನಿಷೇಧಾತ್ಮಕ ಭಾವನೆಯನ್ನು ಹೊರತಳ್ಳುವ ದಾರಿ ಅದೊಂದೆ. ಇದು ಖಂಡಿತ ಸಾಧ್ಯವಾಗುವ ಕೆಲಸವಾದರೂ ಸ್ವಲ್ಪಮಟ್ಟಿಗೆ ಕಷ್ಟಸಾಧ್ಯವೇ. ಏಕೆಂದರೆ ತರಬೇತಿ ನೀಡುವ ಅಧ್ಯಾಪಕರಲ್ಲಿ ಅಪಾರ ತಾಳ್ಮೆ, ಪ್ರೀತಿ, ದೃಢ ವಿಶ್ವಾಸಬೇಕು. ಇವರು ವಿಶ್ವಾಸಕ್ಕೆ ಅರ್ಹರು, ತನ್ನ ಮೂರ್ಖತೆಯನ್ನು ಕಂಡು ಅಪಹಾಸ್ಯ ಮಾಡರು, ತಾಳ್ಮೆ ಕಳೆದುಕೊಳ್ಳಲಾರರು, ಅನುಕಂಪೆಯಿಂದ ಹೇಳಿಕೊಡುವರು ಎಂದಾದರೆ ಹುಡುಗನಿಗೆ ಧೈರ್ಯಬರುವುದು. ಅವನು ತನ್ನ ಕಾಲಮೇಲೆ ತಾನೇ ನಿಲ್ಲಲು ಆಶಿಸಲಾರನೇ? ಖಂಡಿತ ಆಶಿಸುತ್ತಾನೆ. ಆದರೆ ತನ್ನ ಮನಸ್ಸು ಮತ್ತು ಪರಿಸರದ ಜನ ತನಗೇ ವಿರೋಧವಾಗಿ ಕೆಲಸ ಮಾಡುವುದನ್ನು ಅವನು ಅಸಹಾಯನಾಗಿ ನೋಡುತ್ತ ಬಂದಿದ್ದಾನೆ ಅಷ್ಟೆ. ನಿರಂಜನ ನನಗೊಬ್ಬನಿಗೇ ಸ್ವಲ್ಪ ಲೆಕ್ಕ ಹೇಳಿಕೊಡುತ್ತೀರಾ ಎಂದೇಕೆ ಕೇಳಿದ? ಇನ್ನೊಬ್ಬ ವಿದ್ಯಾರ್ಥಿಯನ್ನು ಹೋಲಿಸಿ ತನ್ನನ್ನು ಎಲ್ಲಿಯಾದರೂ ತೆಗಳಿದರೆ ಎಂಬ ಭೀತಿಯಿಂದಲ್ಲವೇ?
ದಿನದಿನವೂ ಕಲಿಕೆಯಲ್ಲಿ ಮುಂದಿರುವ ಗೆಳೆಯರೊಂದಿಗೆ ತನ್ನನ್ನು ಹೋಲಿಸಿಕೊಳ್ಳುತ್ತ, ನಿಂದೆ ತಿರಸ್ಕಾರದ ನುಡಿಗಳನ್ನು ಕೇಳುತ್ತ ಮಗುವಿನಲ್ಲಿ ನಾನೊಬ್ಬ ಅಪ್ರಯೋಜಕ ವ್ಯಕ್ತಿ ಎಂಬ ಭಾವನೆ ಬೇರುಬಿಟ್ಟರೆ ಅವನ ಬದುಕಿನುದ್ದಕ್ಕೂ ಅದು ಹೇಗೆ ಮಾರಕಪ್ರಾಯವಾಗಿ ಅವನಿಗೆ ಸಂಕಟವನ್ನು ತಂದೀತು ಎಂಬುದನ್ನು ನಮ್ಮಲ್ಲಿ ಎಷ್ಟು ಜನ ಯೋಚಿಸಬಲ್ಲರು? ಮಗುವಿನ ಶುಭವನ್ನು ಹಾರೈಸುವ ತಂದೆ ತಾಯಂದಿರೆ ಮಗುವಿನ ಹಿತಕ್ಕೆ ಸದುದ್ದೇಶದಿಂದಲೇ ಅಜ್ಞಾತವಾಗಿ ಹೇಗೆ ಹಾನಿ ಮಾಡುತ್ತಾರಲ್ಲವೇ? ಇದೊಂದು ಎಂಥ ಆಭಾಸ! ಅಜ್ಞಾನದ ವಿಜೃಂಭಣೆ, ಅಷ್ಟೆ. ಇನ್ನು ಕ್ಲಾಸಿನಲ್ಲಿ ಮಗುವಿನ ಹೆಸರೇ ಗೊತ್ತಿಲ್ಲದ, ಸರಿಯಾಗಿ ಮಕ್ಕಳ ಪರಿಚಯ ಮಾಡಿಕೊಳ್ಳುವುದೇ ಕಷ್ಟ ಎನ್ನುವ ಅಧ್ಯಾಪಕರು ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲರು? ತಾಳ್ಮೆಯಿಂದ ಕೂಡಿದ ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂಬುದು ನೆನಪಿರಲಿ.
ಮುಂದುವರಿಯುವುದು..
Comments