ಡಾಕ್ಟರ್ ಸ್ವಾಮೀಜೀಯೊಬ್ಬರ ಅನುಭವ - ಗ್ರಂಥ : ಬದುಕಲು ಕಲಿಯಿರಿ PART 22

 ಗ್ರಂಥ : ಬದುಕಲು ಕಲಿಯಿರಿ

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

ಭಾಗ : 22


 ಡಾಕ್ಟರ್ ಸ್ವಾಮೀಜೀಯೊಬ್ಬರ ಅನುಭವ 


ವೈದ್ಯಕೀಯ ವಿಜ್ಞಾನವನ್ನು ಓದಿ ಎಂ.ಬಿ. ಬಿಎಸ್. ಪಾಸು ಮಾಡಿದ್ದ ನಮ್ಮ ಮಿಷನ್ನಿನ ಸ್ವಾಮಿಗಳೊಬ್ಬರು ತಮ್ಮ ಅನುಭವವನ್ನು ಕುರಿತು ಹೀಗೆಂದರು: 'ಎಂ.ಬಿ.ಬಿ.ಎಸ್. ಕೊನೆಯ ಪರೀಕ್ಷೆ ಯಲ್ಲಿ ಉತ್ತೀರ್ಣನಾದ ಕೂಡಲೆ ಔಷಧೋಪಚಾರ ವಿಭಾಗದಲ್ಲಿ ನನಗೆ ಡೆಮೊನ್‌ಸ್ಟ್ರೇಟ‌ರ್ ಹುದ್ದೆ ದೊರಕಿತ್ತು. ಮೂರನೇ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ರೋಗಿಗಳನ್ನು ಪರೀಕ್ಷಿಸಿ ರೋಗದ ಕಾರಣವನ್ನು ತಿಳಿಯುವ ವಿಧಾನವನ್ನು ಬೋಧಿಸುವ ಕೆಲಸ ನನ್ನದಾಗಿತ್ತು. ಹದಿಮೂರು ಮಂದಿ ವಿದ್ಯಾರ್ಥಿಗಳನ್ನು ಆರು ವಾರಗಳ ಕಾಲ ಮುಂದೆ ಅದು ಹನ್ನೆರಡು ವಾರಗಳ ಅವಧಿಗೆ ವಿಸ್ತರಿಸಿತು -ನಾನು ನೋಡಿಕೊಳ್ಳಬೇಕಾಗಿತ್ತು. ಆಸ್ಪತ್ರೆಯ ವಾರ್ಡಿನಲ್ಲೇ ದಿನವೂ ಎರಡು ಮೂರು ಗಂಟೆಗಳ ಕಾಲ, ಒಂದು ವಾರದಲ್ಲಿ ನಾಲ್ಕು ದಿನಗಳು ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದೆ, ರೋಗದ ಲಕ್ಷಣಗಳನ್ನು ಪರಿಶೀಲಿಸಿ ಅದನ್ನು ಸರಿಯಾಗಿ ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನು ವಿವರಿಸುತ್ತಿದ್ದೆ, ಆಗ ನಾನು ಸ್ವಾಮಿ ವಿವೇಕಾನಂದರ ಬರಹಗಳನ್ನು ಓದಿ ಸ್ಫೂರ್ತಿ ಪಡೆದುಕೊಂಡಿದ್ದೆ. ಪ್ರತಿಯೊಬ್ಬನಲ್ಲೂ ಅಪಾರಶಕ್ತಿ ಅಡಗಿದೆ, ಆ ಶಕ್ತಿಯನ್ನು ಶ್ರದ್ಧೆ ಅತ್ಮವಿಶ್ವಾಸ ಮತ್ತು ಸರಿಯಾದ ಪ್ರಯತ್ನಗಳಿಂದ ಎಚ್ಚರಿಸಿ ಏನನ್ನೂ ಸಾಧಿಸಬಹುದು. ಸಾಮಾನ್ಯನೂ ಸಮರ್ಥನಾಗಬಹುದು ಎಂಬ ಅವರ ಮಾತುಗಳನ್ನು ನಾನು ಮನನ ಮಾಡುತ್ತಿದ್ದೆ, ಅವರ ವಿಚಾರಧಾರೆಯಿಂದ ಆಗ ತುಂಬ ಪ್ರಭಾವಿತನಾಗಿದ್ದೆ. ಆಗ ನನ್ನಲ್ಲಿ ಆತ್ಮವಿಶ್ವಾಸ, ಉತ್ಸಾಹ, ಏನನ್ನೂ ಸಾಧಿಸಬಲ್ಲೆ ಎನ್ನುವ ಛಾತಿ ತುಂಬಿತುಳುಕುತ್ತಿದ್ದವು ಎಂದರೆ ಅತಿಶಯೋಕ್ತಿಯಲ್ಲ.


ಪ್ರತಿಯೊಬ್ಬ ವಿದ್ಯಾರ್ಥಿಯ ಆಂತರ್ಯದಲ್ಲಿ ಅಪಾರ ಶಕ್ತಿ ಅಡಗಿದೆ. ಅವರೆಲ್ಲರೂ ತಮ್ಮ ಅಧ್ಯಯನ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಸಾಧಿಸಬಲ್ಲರೆಂದು ನಾನು ಬೋಧಿಸಹೊರಡದಿದ್ದರೂ ಅಂಥ ಸಾಧ್ಯತೆಯ ಬಗ್ಗೆ ನನ್ನಲ್ಲಿ ಅಪಾರ ವಿಶ್ವಾಸವಿತ್ತು, ಹಿಂದಿನ ಪರೀಕ್ಷೆಯಲ್ಲಿ ಫೇಲಾದ ಹದಿಮೂರು ಮಂದಿ ವಿದ್ಯಾರ್ಥಿಗಳ ಈ ಗುಂಪು ಒಂದು ಸೆಮಿಸ್ಟರ್ ಕಳೆದುಕೊಂಡವರಾಗಿದ್ದರು. 


ಪ್ರತಿಭಾಶಾಲಿಗಳಲ್ಲದ ವಿದ್ಯಾರ್ಥಿಗಳ ಗುಂಪಿಗೆ ಸೇರಿದ ಇವರು ತಮಗೆ ನಿರ್ವಹಿಸಲು ಹೇಳಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರಲಿಲ್ಲ. ರೋಗಿಗಳ ಬಗ್ಗೆ ಸ್ಪಷ್ಟ ಚಿತ್ರಣ, ವಿವರಣೆ ಸರಿಯಾಗಿ ಬರೆಯುತ್ತಿರಲಿಲ್ಲ. ಕ್ಲಾಸಿಗೆ ಸಮಯಕ್ಕೆ ಸರಿಯಾಗಿ ಬರಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ, ಆದರೆ ನಾನು ಅತ್ಯಂತ ಪ್ರಾಮಾಣಿಕನಾಗಿ ಅವರೊಂದಿಗೆ ಅವರ ಪ್ರಗತಿ ಸಾಧ್ಯ -ಖಂಡಿತ ಸಾಧ್ಯ ಎನ್ನುವ ದೃಢಶ್ರದ್ಧೆಯಿಂದ ದುಡಿಯತೊಡಗಿದೆ. ಅವರಲ್ಲೇ ಒಬ್ಬನಾಗಿ ಸ್ನೇಹಿತನಂತೆ ಕೆಲವೊಮ್ಮೆ ಪ್ರೋತ್ಸಾಹದ ಮಾತುಗಳನ್ನಾಡುತ್ತ ಪಾಠಪ್ರವಚನಗಳನ್ನು ನಡೆಯಿಸಿದೆ. ವಿದ್ಯಾರ್ಥಿಯೊಬ್ಬ ಕ್ಲಾಸಿಗೆ ಗೈರುಹಾಜರಾಗಿದ್ದರೆ ಆದಷ್ಟು ಬೇಗನೇ ಅವನ ಕಡೆ ವಿಶೇಷ ಗಮನವಿತ್ತು ಹಿಂದಿನ ಕ್ಲಾಸುಗಳಲ್ಲಿ ತಿಳಿದಿರದಿದ್ದ ಅನೇಕ ಸಂಗತಿಗಳನ್ನು ವಿವರಿಸುತ್ತಿದ್ದೆ. ಮುಂದಿನ ಕ್ಲಾಸುಗಳಲ್ಲಿ ಅಧ್ಯಯನ ಮುಂದುವರಿಸಲು ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗೆಗೂ ವಿಶೇಷ ಗಮನವೀಯುತ್ತ ಆತನ ತೊಂದರೆಗಳೇನೆಂದು ತಿಳಿದು ಪರಿಹಾರ ಸೂಚಿಸುತ್ತಿದ್ದೆ. ಇದೆಲ್ಲದರ ಪರಿಣಾಮವಾಗಿ ಮುಂದಿನ ಪರೀಕ್ಷೆಯಲ್ಲಿ ಎಲ್ಲರೂ ಪಾಸಾದರು ಮಾತ್ರವಲ್ಲ ನನ್ನ ಸಹಾಯವಿಲ್ಲದೇ ಇತರ ಅನೇಕ ಪರೀಕ್ಷೆಗಳಲ್ಲಿ ಪಾಸಾಗುತ್ತ ಮುನ್ನಡೆದರು. ಅವರಲ್ಲೊಬ್ಬ ಪ್ರಥಮ ದರ್ಜೆಯಲ್ಲಿ ಪಾಸಾದ. ಸ್ವಾಮಿ ವಿವೇಕಾನಂದರ ದಿವ್ಯವಾಣಿ ನೀಡಿದ ಆತ್ಮವಿಶ್ವಾಸದ ಅಪರಿಮಿತಶಕ್ತಿಯನ್ನು ಕುರಿತ ಸ್ಪೂರ್ತಿಯೇ ನನ್ನ ಈ ವಿಜಯಕ್ಕೆ ಕಾರಣವಾಯಿತು.' ಓದುಗರು ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. ಅಧ್ಯಾಪಕರಿಗೆ ತಮ್ಮಲ್ಲಿ ಮಾತ್ರ ಅಪಾರ ವಿಶ್ವಾಸವಿದ್ದುದಷ್ಟೇ ಅಲ್ಲ. ಹಿಂದುಳಿದ ವಿದ್ಯಾರ್ಥಿಗಳೂ ಖಂಡಿತವಾಗಿ ಮೇಲೇರಬಲ್ಲರು, ಅವರಲ್ಲಿ ಆ ಶಕ್ತಿ ಅಡಗಿದೆ, ಅದನ್ನು ಎಚ್ಚರಿಸಲು ಸಾಧ್ಯ ಎನ್ನುವ ಸಂಗತಿಯಲ್ಲೂ, ಅಪಾರ ವಿಶ್ವಾಸವಿತ್ತು. ಎಷ್ಟೋ ಮಂದಿ ಮೇಧಾವಿಗಳೂ ಅತ್ಯುತ್ತಮ ಮಟ್ಟದ ಅಧ್ಯಾಪಕರೂ ಇದ್ದಾರೆ ನಿಜ. ಆದರೆ ವಿದ್ಯಾರ್ಥಿಗಳು ವಿದ್ಯುದ್ವೇಗದಿಂದ ವಿಷಯಗಳನ್ನು ಗ್ರಹಿಸದಿದ್ದರೆ ಅವರನ್ನು ಸ್ವಲ್ಪ ನಿಕೃಷ್ಟವಾಗಿ 'ಅಪ್ರಯೋಜಕ', 'ಅಧ್ಯಯನಕ್ಕೆ ಯೋಗ್ಯತೆ ಇಲ್ಲ', 'ಮೂರ್ಖ' ಎಂದು ಬಾಯ್ದಿಟ್ಟು ಹೇಳದಿದ್ದರೂ ಆ ದೃಷ್ಟಿಯಿಂದ ನೋಡಿದರೂ ಅದರ ದುಷ್ಪರಿಣಾಮ ವಿದ್ಯಾರ್ಥಿಗಳ ಮೇಲಾಗುವುದು! 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box