ಗುಂಡಣ್ಣ ಕಾಲೇಜಿಗೆ ಹೋದ - ಗ್ರಂಥ : ಬದುಕಲು ಕಲಿಯಿರಿ PART 26

 ಗ್ರಂಥ : ಬದುಕಲು ಕಲಿಯಿರಿ

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

 ಭಾಗ  : 26


 ಗುಂಡಣ್ಣ ಕಾಲೇಜಿಗೆ ಹೋದ 


 ಗುಂಡಣ್ಣ ಹಳ್ಳಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರಿದ. ಸಾಮಾನ್ಯ ಆರ್ಥಿಕ ಶಕ್ತಿಯುಳ್ಳ ಕುಟುಂಬದಿಂದ ಬಂದವನಾತ. ಅವನ ಮನೆಯವರಿಗೆ ಕಾಲೇಜು ಶಿಕ್ಷಣದ ವೆಚ್ಚವನ್ನು ನಿರ್ವಹಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅವನ ಒತ್ತಾಯಕ್ಕೂ ಅಧ್ಯಾಪಕರ ಪ್ರೋತ್ಸಾಹಕ್ಕೂ ಮಣಿದು, ಹುಡುಗನಿಗೆ ಭವ್ಯ ಭವಿಷ್ಯವಿದೆ ಎಂದೆಣಿಸಿ ತಂದೆ ಸಾಲ ಮಾಡಿ ಮಗನನ್ನು ಪದವೀಧರನನ್ನಾಗಿ ಮಾಡಲು ನಿಶ್ಚಯಿಸಿದರು. ತಾನು ಹುಟ್ಟಿ ಬೆಳದು ಓಡಾಡಿದ ಊರನ್ನು ಬಿಟ್ಟು ಪಟ್ಟಣಕ್ಕೆ ಹೊರಟು ನಿಂತಾಗ ಅವನ ತಾಯಿ ಕಂಬನಿದುಂಬಿ ಹೇಳಿದ್ದರು, 'ಮಗೂ, ಚೆನ್ನಾಗಿ ಕಲಿಯಬೇಕು. ನಿನ್ನ ತಂದೆ ಎಷ್ಟು ಕಷ್ಟಪಡುತ್ತಿದ್ದಾರೆಂದು ನೀನು ನೋಡಿದ್ದಿ. ನಿನ್ನ ತಂಗಿ ತಮ್ಮಂದಿರೂ ಕಲಿಯಬೇಕು, ನೆನಪಿರಲಿ. ವೇಳೆ ವ್ಯರ್ಥವಾಗದಂತೆ ನೋಡಿಕೋ.' ಎಷ್ಟು ಕಳಕಳಿಯಿಂದ ಅವರು ಈ ಮಾತು ಹೇಳಿದರೆಂದರೆ ಆತ ಗದ್ಗದಿತನಾಗಿ 'ಆಗಲಮ್ಮ' ಎಂದಷ್ಟೇ ಉತ್ತರಿಸಿದ್ದ. ಹೊರಡುವಾಗ ಊರ ಹೊರಗಿನ ಆಂಜನೇಯಸ್ವಾಮಿಗೆ ನಮಿಸಿ ಪ್ರಾರ್ಥಿಸಿಯೂ ಇದ್ದ.


ಕಾಲೇಜು ಮತ್ತು ಹಾಸ್ಟೆಲುಗಳ ವಾತಾವರಣಕ್ಕೆ ಹೊಂದಿಕೊಳ್ಳಲು ಅವನಿಗೆ ಕೆಲವು ದಿನಗಳೇ ಬೇಕಾದವು. ನೂರಾರು ವಿದ್ಯಾರ್ಥಿಗಳು ತುಂಬಿದ ಕ್ಲಾಸುಗಳಲ್ಲಿ ಅವನೊಬ್ಬ ನಗಣ್ಯ ವ್ಯಕ್ತಿ. ಏನು? ಯಾರು? ಎತ್ತ? ಎಂದು ವಿಚಾರಿಸುವವರಿಲ್ಲ. ಯಾರ ಮಾತನ್ನೋ ಕೇಳಿ ತನಗೆ ಅಷ್ಟೊಂದು ಹಿಡಿಸದ ಅಭಿರುಚಿ ಇರದ ವಿಷಯವನ್ನೇ ಅವನು ಅಧ್ಯಯನಕ್ಕಾಗಿ ಆರಿಸಿಕೊಂಡ.


 ನಿತ್ಯ ನಿಯಮಿತ ರೀತಿಯಲ್ಲಿ ಚೆನ್ನಾಗಿ ಅಧ್ಯಯನ ಮಾಡಬೇಕೆಂದು ಖಂಡಿತವಾಗಿಯೂ ಅವನು ಸಂಕಲ್ಪಿಸಿದ್ದ. ಆದರೆ ಓದು ಅಷ್ಟೊಂದು ಚೆನ್ನಾಗಿ ಸಾಗಲಿಲ್ಲ. ಮುಂದೆ ಕ್ಲಾಸಿನ ಪಾಠಗಳು ಅರ್ಥವಾಗದೇ ಬೋರ್ ಹೊಡೆಯಲು ಪ್ರಾರಂಭವಾಯಿತು. ಮೆಲ್ಲಮೆಲ್ಲನೇ ಅವನ ಆತ್ಮ ವಿಶ್ವಾಸ ದುರ್ಬಲವಾಗುತ್ತಿತ್ತು. ಒಂದು ತೆರನಾದ ಅವ್ಯಕ್ತ ಭಯ ಅವನನ್ನು ಆವರಿಸುತ್ತಿತ್ತು. ತಾನೇನು ಮಾಡುತ್ತಿದ್ದೇನೆ ಎಂದು ತನಗೆ ತಾನೇ ಕೇಳಿಕೊಳ್ಳುತ್ತಿದ್ದ. ಅಧ್ಯಾಪಕರ ಮುಖ ಪರಿಚಯವಿದ್ದರೂ ಆತ್ಮೀಯತೆಯಿಂದ ತನ್ನ ಮನದಳಲನ್ನು ಹೇಳಿಕೊಳ್ಳುವಂತಿರಲಿಲ್ಲ. ಸ್ನೇಹಿತರೇ ಅವನ ಸಹಾಯಕ್ಕೆ ಬಂದರು. 'ಏನೂ ಹೆದರಬೇಡ ಮಗು. ಪರೀಕ್ಷೆಗೆ ಮೊದಲು ಒಂದರೆಡು ತಿಂಗಳು ಪಟ್ಟಾಗಿ ಕುಳಿತರಾಯಿತು ಫಸ್ಟ್ ಕ್ಲಾಸ್' ಎಂದು ಧೈರ್ಯ ಕೊಟ್ಟರು. ಆತ ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ. ನಾಟಕ ಸಿನೆಮಾ ಎಂದು ಅಲೆದ. ಆಧುನಿಕ ಸಮಾಜದ ಕಣ್ಣು ಕೋರೈಸುವ ವಿಲಾಸ ಮತ್ತು ಆಡಂಬರದ ಜೀವನ, ನಗರದ ನಾನಾ ಆಕರ್ಷಣೆಗಳು ಅವನ ಮನಸ್ಸನ್ನು ಮುಗ್ಧಗೊಳಿಸುತ್ತಿದ್ದವು. ಅವನು ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಿದ್ದ. ಸಮಯ ಸಿಕ್ಕಿದಾಗ ಇಸ್ಪೀಟ್ ಆಟಗಾರರ ಗುಂಪಿನಲ್ಲಿ ತನ್ನ ಪ್ರತಿಭೆಯನ್ನು ಮೆರೆಸಲು ಮರೆಯಲಿಲ್ಲ. ದಿನಗಳು ಕಳೆದವು. ಪರೀಕ್ಷೆ ಸಮೀಪಿಸಿತು. ಆತ ಈಗ ಎಚ್ಚರಗೊಂಡ. ಗುಳಿಗೆ ಸೇವಿಸಿ ನಿದ್ರೆ, ಆಹಾರಗಳ ಕಡೆಗೆ ಗಮನವೀಯದೆ ಓದತೊಡಗಿದ. ಸ್ಪೂರ್ತಿಗಾಗಿ ಸಿಗರೇಟಿನ ಹೊಗೆಯನ್ನು ಹಾರಿಸಿದ. ಪರೀಕ್ಷೆ ಸಮೀಪಿಸಿದಂತೆಲ್ಲ ಅವನ ಉದ್ವೇಗಕ್ಕೆ ತುದಿ ಮೊದಲಿಲ್ಲ. ಪುಸ್ತಕಗಳು ಯಮಭಾರವಾಗಿ ಕಾಣತೊಡಗಿದವು. ಈ ಬಾರಿ ಪರೀಕ್ಷೆಗೆ ಕುಳಿತುಕೊಳ್ಳದೇ, ಇನ್ನೊಮ್ಮೆ ಚೆನ್ನಾಗಿ ಅಧ್ಯಯನ ಮಾಡಿ ಸೆಪ್ಟೆಂಬರದಲ್ಲಿ ಕುಳಿತುಕೊಳ್ಳೋಣವೆಂದು ಹಲವು ಬಾರಿ ಅವನಿಗೆ ಈ ಮಧ್ಯೆ ಅನ್ನಿಸಿದ್ದುಂಟು. ಕೊನೆಗೂ ಆರೋಗ್ಯ ಕೆಡಿಸಿಕೊಂಡು ಚಿಂತೆ ಹಚ್ಚಿ ಕೊಂಡು ಪರೀಕ್ಷೆಯಲ್ಲಿ ಏನೋ ಬರೆದು ಬಂದ. ಮನೆಯವರು ಅವನ ಕಳೆಗುಂದಿದ ಮುಖವನ್ನು ಕಂಡು ಬಹಳ ಕಷ್ಟಪಟ್ಟು ಓದಿ ಸುಸ್ತಾಗಿರಬೇಕೆಂದು ಆರೈಕೆ ಮಾಡಿದರು. ಪರೀಕ್ಷೆಯ ಫಲಿತಾಂಶ ಹೊರಬಿತ್ತು. ಅವನು ಪಾಸಾಗಿರಲಿಲ್ಲ. ಆಗ ವಿಧಿಯನ್ನು ಶಪಿಸತೊಡಗಿದ. ಗ್ರಹಚಾರ ಎಂದ. ಕಾಲೇಜಿನ ಅಧ್ಯಾಪಕರ ಹೊಣೆಗೇಡಿತನವೇ ತನ್ನ ಈ ಸ್ಥಿತಿಗೆ ಕಾರಣವೆಂದ .


ಕೆಲವೊಮ್ಮೆ ಅವನ ಮನಸ್ಸಿಗೆ ಎಷ್ಟು ದುಃಖವಾಗಿತ್ತೆಂದರೆ ರೈಲಿನ ಕಂಬಿಗೆ ತಲೆಕೊಟ್ಟು ಇಹ ಲೋಕದ ಯಾತ್ರೆಗೆ ಮುಕ್ತಾಯ ಹೇಳೋಣ ಎಂದು ಅನ್ನಿಸಿದ್ದುಂಟು.


 ಗುಂಡಣ್ಣ ಗುರಿಯನ್ನೇನೋ ಇಟ್ಟುಕೊಂಡಿದ್ದ. ಶುಭ ಸಂಕಲ್ಪದಿಂದಲೇ ಅವನು ಕಾಲೇಜು ಸೇರಿದ್ದ. ಆದರೆ ಗುರಿಯನ್ನು ಹೊಂದುವ ಮಾರ್ಗದ ಕಡೆಗೆ ಸಾಕಷ್ಟು ಗಮನವೀಯಲಿಲ್ಲ. ತನ್ನ ಅಭಿರುಚಿಯ ವಿಷಯಗಳನ್ನು ಅಧ್ಯಯನ ಮಾಡಲು ಆರಿಸಿಕೊಳ್ಳಲಿಲ್ಲ. ಯೋಗ್ಯ ಮಿತ್ರರ ಸಹಕಾರ ಪಡೆಯಲು ಸಮರ್ಥನಾಗಲಿಲ್ಲ. ದಿನದಿನವೂ ಹಠಹಿಡಿದು ಏಕಾಗ್ರತೆಯಿಂದ ಅಧ್ಯಯನ ಮಾಡಲಿಲ್ಲ. ನಿಶ್ಚಿತ ನಿಯಮಗಳನ್ನನುಸರಿಸಿ ಶ್ರಮಪಡಲಿಲ್ಲ. ಆತ ಮಾರ್ಗದ ಕಡೆಗೆ ಗಮನವೇ ಜೀವನದ ಒಂದು ಪರಮ ರಹಸ್ಯ ಎಂಬುದನ್ನು ಮರೆತಿದ್ದ. 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box