ಮುನ್ನಡೆಯ ಮೂಲಮಂತ್ರ - ಗ್ರಂಥ : ಬದುಕಲು ಕಲಿಯಿರಿ PART 25
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 25
ಮುನ್ನಡೆಯ ಮೂಲಮಂತ್ರ
ಹಾಗಾದರೆ ಬದುಕಿನಲ್ಲಿ ಸದ್ಯ ನಿಂತ ಸ್ಥಾನದಿಂದ ಉನ್ನತಿಯ ಪಥದಲ್ಲಿ ಮುನ್ನಡೆಯಬೇಕೆನ್ನುವವರಿಗೆ ಯಾವ ಸಾಮಗ್ರಿಗಳು ಬೇಕು?
ಮುನ್ನಡೆಯಬೇಕು, ಮೇಲೇರಬೇಕು, ಸರ್ವತೋಮುಖವಾದ ಪ್ರಗತಿಯಾಗಬೇಕು ಎನ್ನುವ ಪ್ರಬಲ ಆಸೆ ಬೇಕು.
ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕೆಂಬುದನ್ನು ಸ್ಪಷ್ಟವಾಗಿ ನಿರ್ದಿಷ್ಟ ಪಡಿಸಿಕೊಳ್ಳಬೇಕು. ಎಂದರೆ ನಿಮ್ಮ ಗುರಿಯನ್ನು ಕುರಿತು ಸ್ಪಷ್ಟ ಅರಿವು ಬೇಕು.
ನಿಮಗೇನು ಬೇಕು ಎಂಬುದನ್ನು ಸ್ಥಿರಚಿತ್ತರಾಗಿ ಯೋಚಿಸಿ, ಅವು ವಾಸ್ತವವೂ, ಸಾಧ್ಯವೂ ಆಗುವ ಬೇಕುಗಳಾಗಲಿ. ಜಗುಲಿ ಹಾರದೇ ಗಗನ ಹಾರುವ ಕಲ್ಪನೆಯ ಗಾಳಿಗೋಪುರದ ಬೇಕುಗಳಾಗದಿರಲಿ.
ನಿಮ್ಮ ಮುಖ್ಯ 'ಬೇಕು'ವಿಗೆ ಪೂರಕವಾದ ಪುಟ್ಟ 'ಬೇಕು'ಗಳ ಒಂದು ಪಟ್ಟಿಯನ್ನು ಮಾಡಿ.
ಅವುಗಳು ನಿಮಗೇಕೆ ಬೇಕು ಎಂಬುದಕ್ಕೆ ಕಾರಣಕೊಡಿ.
ನೀವು ಒಂಭತ್ತನೇ ತರಗತಿಯಲ್ಲಿ ಓದುತ್ತಿರುವಾಗ ವಿಮಾನ ಚಾಲಕನಾಗಬೇಕೆಂದು ನಿಮ್ಮ ನೆಚ್ಚಿನ ಮುಖ್ಯ 'ಬೇಕು'ವಿನ ಬಗೆಗೆ ನಿರ್ಧರಿಸಿಕೊಂಡಿರಬಹುದು. ಆ ಬೇಕು ಅಸಾಧ್ಯವೇನಲ್ಲ. ಆದರೆ ಆ 'ಮುಖ್ಯ ಬೇಕು' ಪೂರೈಸಬೇಕಾದರೆ ಇತರ 'ಪುಟ್ಟ ಬೇಕುಗಳ' ಪೂರಣವಾಗುವುದು ಉಚಿತ. ದೃಷ್ಟಿಪಾಟವ, ಆರೋಗ್ಯವಂತ ಶರೀರ, ಶಾಂತ ನಿರ್ಭಿತ ಮನಸ್ಸು, ಇವುಗಳ ಜೊತೆಗೆ ವರ್ಷಾಂತ್ಯದ ಪರೀಕ್ಷೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಪಾಸಾಗುವುದು ಇವುಗಳ ಪೂರೈಕೆಯಾಗದೆ ಮುಖ್ಯ 'ಬೇಕು' ದೊರೆಯುವುದೇ?
ನಿಮ್ಮ 'ಬೇಕು'ಗಳನ್ನು ನಿಶ್ಚಿತವಾಗಿರಿಸಿಕೊಳ್ಳಿ. ಅದನ್ನು ಪಡೆಯಲು ಕೂಡಲೇ ಕಾರ್ಯಮಗ್ನರಾಗಿ. ನೀವು ಆ ದಿಕ್ಕಿನಲ್ಲಿ ನಡೆದು ಜಯ ಗಳಿಸಿದ ಜನರ ಜೀವನವನ್ನು ಅಧ್ಯಯನ ಮಾಡಬೇಕು. ಅವರು ಪಟ್ಟ ಶ್ರಮ, ಎದುರಿಸಿದ ಕಷ್ಟಗಳೆಂಥವು ಎಂಬುದನ್ನು ಮನಸ್ಸಿಗೆ ತಂದುಕೊಳ್ಳಬೇಕು. ಅಂಥ ವ್ಯಕ್ತಿಗಳ ಸಂಪರ್ಕ ಸಾಧ್ಯವಿದ್ದರೆ, ಅವರನ್ನು ಕಂಡು ಮಾತನಾಡಿಸಿ ನಿಮ್ಮ ಸಮಸ್ಯೆಗಳಿಗೆ ಅವರು ಸೂಚಿಸುವ ಪರಿಹಾರವೇನೆಂಬುದನ್ನು ತಿಳಿದುಕೊಳ್ಳಬೇಕು. _ಮೋಸ, ವಂಚನೆ, ಅಡ್ಡದಾರಿಗಳಿಂದ ಯಾವ ಮಹತ್ವದ ಒಳ್ಳೆಯ ಕೆಲಸವೂ ಸಾಧಿತವಾಗುವುದಿಲ್ಲವೆಂಬುದನ್ನು ಎಂದಿಗೂ ಮರೆಯದಿರಬೇಕು._
ಸೋಲಿನಿಂದ ಧೃತಿಗೆಡದೇ, ಸೋಲಿನ ಕಾರಣವನ್ನು ಕಂಡುಹಿಡಿದು ತಾಳ್ಮೆಯಿಂದ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಬೇಕು.
ಗುರಿ ಮತ್ತು ದಾರಿ
ಸ್ವಾಮಿ ವಿವೇಕಾನಂದರೆಂದರು: 'ಗುರಿಯಷ್ಟೇ, ಅದನ್ನು ಹೊಂದುವ ಮಾರ್ಗದ ಕಡೆಗೂ ಗಮನ ಕೊಡಬೇಕೆಂಬುದು ನಾನು ಕಲಿತ ಅತ್ಯಂತ ಮಹತ್ವದ ಪಾಠಗಳಲ್ಲೊಂದು. ನಾನು ಯಾರಿಂದ ಈ ಪಾಠ ಕಲಿತೆನೋ ಆ ಮಹಾತ್ಮನ ಸ್ವಂತ ಜೀವನವೆ ಈ ಒಂದು ಪ್ರಮುಖ ತತ್ವಕ್ಕೆ ಒಂದು ಉದಾಹರಣೆಯಂತಿತ್ತು. ಆ ಒಂದು ತತ್ವದಿಂದಲೇ ನಾನು ಅನೇಕ ಪಾಠಗಳನ್ನು ಕಲಿಯುತ್ತಿದ್ದೇನೆ. ವಿಜಯದ ಎಲ್ಲ ರಹಸ್ಯವೂ ಆ ತತ್ವದಲ್ಲಡಗಿದೆ ಎಂದು ನನಗೆ ಭಾಸವಾಗುತ್ತಿದೆ.
'ಗುರಿಯ ಕಡೆಗೇ ನಮಗೆ ಹೆಚ್ಚು ಸೆಳೆತ. ಇದೇ ನಮ್ಮ ಜೀವನದ ಅತಿ ದೊಡ್ಡ ದೋಷ. ಗುರಿಯು ನಮಗೆ ಎಷ್ಟು ಹೆಚ್ಚು ಆಕರ್ಷಕವೂ, ಮೋಹಕವೂ, ಮನಸ್ಸಿನ ಪರಿಧಿಯಲ್ಲಿ ಬೃಹದಾಕಾರವಾಗಿಯೂ ಆಗುವುದೆಂದರೆ, ಸಣ್ಣ ಪುಟ್ಟ ವಿಷಯಗಳನ್ನು ಕುರಿತು ನಾವು ಸಂಪೂರ್ಣ ಅಲಕ್ಷ್ಯರಾಗುತ್ತೇವೆ.
ಸೋಲು ಬಂದಾಗ ನಾವು ಅದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದರೆ ನೂರರಲ್ಲಿ ತೊಂಬತ್ತು ಬಾರಿಯೂ ನಾವು ಗುರಿಯನ್ನು ಹೊಂದುವ ಮಾರ್ಗದ ಕಡೆಗೆ ಗಮನವಿತ್ತಿಲ್ಲ ಎಂಬುದನ್ನು ಕಾಣುವೆವು. ಈ ಮಾರ್ಗವನ್ನು ಬಲಗೊಳಿಸುವ, ಪೂರ್ಣಗೊಳಿಸುವುದರ ಕಡೆಗೆ ನಮ್ಮ ಗಮನವಿರಬೇಕಾದುದು ಆವಶ್ಯಕ. ದಾರಿಯು ಸಮರ್ಪಕವಾಯಿತೆಂದರೆ ಗುರಿಯು ದೊರೆಯಲೇಬೇಕು. ಯಾವುದೇ ಪರಿಣಾಮ ತನ್ನಿಂದ ತಾನೇ ಉಂಟಾಗದು. ಕಾರಣವು ಸುಸ್ಪಷ್ಟವೂ, ನಿಶ್ಚಿತವೂ, ಬಲಯುತವೂ ಆಗಿದ್ದರೆ ಮಾತ್ರ ಅದರಿಂದ ಪರಿಣಾಮ ಉಂಟಾಗುವುದು. ಒಮ್ಮೆ ಆದರ್ಶ ಅಥವಾ ಗುರಿಯನ್ನು ಹುಡುಕಿ ಅದು ಎಟಕುವ ಮಾರ್ಗವನ್ನು ದೃಢಪಡಿಸಿಕೊಂಡೆವೆಂದರೆ, ನಂತರ ಆ ಮಾರ್ಗದಲ್ಲಿ ತದೇಕ ನಿಷ್ಠೆಯಿಂದ ನಿಶ್ಚಿಂತರಾಗಿ ಮುನ್ನಡೆಯುವುದಷ್ಟೇ ನಮ್ಮ ಕರ್ತವ್ಯವಾಗಬೇಕು. ನಿಧಾನವಾದರೂ ಸರಿ, ಸಮರ್ಪಕ ದಾರಿಯಲ್ಲಿಯೇ ಹೆಜ್ಜೆಯಿಟ್ಟು ಮುನ್ನಡೆಯುವುದರಿಂದ ಗುರಿ ಸೇರುವುದಂತೂ ಖಂಡಿತ.
ಪಶ್ಚಿಮದ ಪ್ರಸಿದ್ಧ ಸಂಗೀತಗಾರ ಬಿಥೋವನ್ ಒಮ್ಮೆ ಗಾನಗೋಷ್ಠಿಯನ್ನು ಮುಗಿಸಿ ಮೇಲೆದ್ದಾಗ ಅವನ ಅದ್ಭುತ ಕಲಾನೈಪುಣ್ಯವನ್ನು ಕಂಡು ಕೇಳಿ ಚಕಿತರಾದ ಜನರೂ, ಸ್ನೇಹಿತರೂ, ಅಭಿಮಾನಿಗಳೂ ಅವನನ್ನು ಸುತ್ತುವರಿದರು. ಅವರೆಲ್ಲರೂ ಮೂಕವಿಸ್ಮಿತರಾಗಿ ಅವನನ್ನೇ ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ಪ್ರಶಂಸೆಯ ಮಾತುಗಳನ್ನು ಹೇಳಲಾರದಷ್ಟು ಭಾವ ತನ್ಮಯರಾಗಿದ್ದರು ಅವರೆಲ್ಲ. ತನ್ನ ನಾದಮಾಧುರ್ಯದಿಂದ ಅಷ್ಟೊಂದು ಜನರ ಹೃನ್ಮನ ಪ್ರಯತ್ನದಿಂದ ಪರಮಾರ್ಥಗಳನ್ನು ಸೆಳೆದಿದ್ದನಾತ. ಆ ಗಂಭೀರ ಮೌನವನ್ನು ಉತ್ಸಾಹಿ ಮಹಿಳೆಯೊಬ್ಬಳು ತನ್ನ ಮಾತಿನಿಂದ ಭೇದಿಸಿದಳು : 'ಮಹಾಶಯ, ದೇವರು ನನಗೆ ಈ ಅಸಾಧಾರಣ ಪ್ರತಿಭೆಯ ಕೊಡುಗೆಯನ್ನು ಕೊಟ್ಟಿದ್ದರೆ...' ಎಂದವಳು ಉದ್ಧರಿಸಿದಳು.
ಬಿಫೋವನ್ ಹೀಗಂದ 'ನನ್ನಲ್ಲಿರುವುದೆಂದು ನೀನಂದುಕೊಂಡಿರುವ ಈ ಅಸಾಧಾರಣ ಪ್ರತಿಭೆ ದೇವರ ಕೊಡುಗೆ ಅನ್ನುತ್ತೀಯಾ? ನೀನೂ ಈ ಕೊಡುಗೆಯನ್ನು ಪಡೆಯಬಹುದು. ಏನು ಮಾಡಬೇಕು ಗೊತ್ತೆ? ದಿನವೂ ಎಂಟು ಗಂಟೆಗಳ ಕಾಲ ನಲ್ವತ್ತು ವರ್ಷಗಳವರೆಗೆ ಬಿಡದೇ ಪಿಯಾನೊ ಅಭ್ಯಾಸ ಮಾಡು. ಅಷ್ಟೇ ಸಾಕು, ನೀನೂ ನನ್ನಂತೆಯೇ ಅದ್ಭುತ ಕೊಡುಗೆಯನ್ನು ಪಡೆಯುತ್ತಿ.'
ಈ ಅನುಭವದ ಮಾತಿನ ಹಿನ್ನೆಲೆಯಲ್ಲಿ ದಾರಿಯು ಸರಿಯಾಯಿತೆಂದರೆ ಗುರಿಯು ದೊರೆತೇ ದೊರೆಯುತ್ತದೆನ್ನುವ ಅಮರತತ್ವ ಅಡಗಿದೆಯಲ್ಲವೇ?
ವಾಗ್ಗೇಯಕಾರ ಶ್ರೀ ವಾಸುದೇವಾಚಾರ್ಯರು ತಮ್ಮ 'ನೆನಪುಗಳು' ಎನ್ನುವ ಪುಸ್ತಕದಲ್ಲಿ ಪಿಟೀಲು ವಾದನದಲ್ಲಿ ಅದ್ವಿತೀಯರೆನಿಸಿಕೊಂಡ ಒಬ್ಬ ವಿದ್ವಾಂಸರನ್ನು ಸ್ಮರಿಸುತ್ತಾರೆ. ಅವರ ಹೆಸರು ಕೃಷ್ಣಯ್ಯರ್. ವಾದ್ಯ ಬಾರಿಸುವುದರಲ್ಲಿ ಅವರಿಗೆ ಎಂಥ ಸ್ವಾಮಿತ್ವವಿತ್ತೆನ್ನುವುದಕ್ಕೆ ಆಚಾರ್ಯರು ತಾವು ಕಂಡ ಒಂದು ನಿದರ್ಶನವನ್ನಿತ್ತಿದ್ದಾರೆ. ಒಂದು ಕಛೇರಿಯಲ್ಲಿ ಕೃಷ್ಣಯ್ಯರ್ ಪಕ್ಕವಾದ್ಯ ನುಡಿಸುತ್ತಿದ್ದಾಗ ಅಕಸ್ಮಾತ್ತಾಗಿ ಪಿಟೀಲಿನ ತಂತಿ ಕಿತ್ತು ಹೋಯಿತು. ತಾನು ಹಾಡಿದ ಸಂಗೀತವನ್ನು ನುಡಿಸಲು ಸಾಧ್ಯವಾಗದೇ ಬೇಕೆಂತಲೇ ತಂತಿಯನ್ನು ಕಿತ್ತು ಆಟ ಹೂಡಿದ್ದಾರೆ ಎಂಬರ್ಥದ ವ್ಯಂಗ್ಯ ನಗುವನ್ನು ಬೀರಿದ ಗಾಯಕ. ಕೃಷ್ಣಯ್ಯರ್ ಕೋಪದಿಂದ 'ನಿಮ್ಮ ಸಂಗೀತಕ್ಕೆ ಪಕ್ಕವಾದ್ಯ ನುಡಿಸಲು ನಾಲ್ಕು ತಂತಿಗಳು ಬೇಕೆ? ಇದೊ ಇನ್ನೂ ಎರಡು ತಂತಿಯನ್ನು ಕಿತ್ತೆಸೆಯುತ್ತೇನೆ' ಎಂದು ಒಂದೇ ತಂತಿಯಲ್ಲಿ ಕಛೇರಿಯನ್ನು ನಿರ್ವಹಿಸಿದರಂತೆ!
ಆ ಅದ್ಭುತ ಕಾರ್ಯದ ಹಿನ್ನೆಲೆಯಲ್ಲಿ ಎಷ್ಟೊಂದು ದೀರ್ಘಕಾಲದ, ನಿಷ್ಠೆಯಿಂದ ಕೂಡಿದ ನಿರಂತರ ಪರಿಶ್ರಮದ ಅಭ್ಯಾಸವಿದೆ ಎಂಬುದನ್ನು ಯಾರೂ ಊಹಿಸಿಕೊಳ್ಳಬಹುದು.
ದೊಡ್ಡವರು ಬದುಕನ್ನು ಪ್ರಾರಂಭಿಸುವಾಗಲೇ ದೊಡ್ಡವರಾಗಿರಲಿಲ್ಲ ಅಥವಾ ಮಹಾ ಮೇಧಾವಿಗಳಾಗಿರಲಿಲ್ಲ. ಆದರೆ ಕಲಿಯುತ್ತ, ಕಲಿಯುತ್ತ, ಕಲಿಯುತ್ತಲೇ ತಮ್ಮ ಮೇಲ್ಮೈಯನ್ನು ಸಾಧಿಸಿದರು . ದಾರಿಯು ಸರಿಯಾಯಿತೆಂದರೆ ಗುರಿಯು ದೊರೆಯುವುದು ಎನ್ನುವುದಕ್ಕೆ ಅವರ ಸಿದ್ದಿ ಸಾಕ್ಷಿ ನೀಡುತ್ತದೆ. ಆದರೆ ನಾವು ಮಾಡುವುದೇನು? ಗುರಿಯನ್ನೇ ಮೆಲಕು ಹಾಕುತ್ತಾ, ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಮುನ್ನಡೆದು ಇರುವ ಶಕ್ತಿಯನ್ನೆಲ್ಲ ವ್ಯಯಿಸಿಕೊಂಡು, ಕೊನೆಗೆ ದಾರಿ ಕಾಣದಾಗಿ, ಅಳುಮೋರೆ ಹಾಕಿಕೊಂಡು ಕೈಗೆಟುಕದ ದ್ರಾಕ್ಷಿ ಹಣ್ಣು ಹುಳಿ ಎಂದ ನರಿಯ ತಂತ್ರದಿಂದ, ಆ ಗುರಿಯನ್ನೇ ಹಳಿದು ಹಂಗಿಸುವುದು. ಇನ್ನಾದರೂ ನಾವು ಸರಿದಾರಿ ತುಳಿಯಲು ಯತ್ನಿಸೋಣ.
ಮುಂದುವರಿಯುವುದು..
Comments