ಹಂಬಲದ ಬೆಂಬಲ - ಗ್ರಂಥ : ಬದುಕಲು ಕಲಿಯಿರಿ PART 24

 ಗ್ರಂಥ : ಬದುಕಲು ಕಲಿಯಿರಿ

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

 ಭಾಗ : 24


 ಹಂಬಲದ ಬೆಂಬಲ 


ಜರ್ಮನ್ ದೇಶದ ಫ್ರಾಂಕ್‌ಫರ್ಟ್ ನಗರದ ಒಂದು ಗಲ್ಲಿಯಲ್ಲಿನ ಪುಸ್ತಕಾಲಯ . ಪುಸ್ತಕಗಳಿಂದ ಆವೃತರಾಗಿ ಏಕಾಗ್ರ ಚಿತ್ತ ಸಮಾಧಿಸ್ಥ ಯೋಗಿಯಂತೆ ಒಬ್ಬರು ಅಲ್ಲಿ ಕುಳಿತಿದ್ದಾರೆ. ಅದು ಅವರ ಸ್ವಂತ ಗ್ರಂಥಾಲಯ. ಅಲ್ಲಿ ಸುಮಾರು ಮೂವತ್ತು ಸಾವಿರ ಪುಸ್ತಕಗಳಿವೆ. ಬಹಳಷ್ಟು ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳೇ. ಅವರು ಒಂದಲ್ಲ ಎರಡಲ್ಲ, ಹತ್ತಲ್ಲ, ನೂರಲ್ಲ ಸುಮಾರು ಮುನ್ನೂರು ಭಾಷೆಗಳನ್ನು ಬಲ್ಲರು. ಓದು ಬರಹ ಮಾತ್ರವಲ್ಲ, ಅನುವಾದ ಕಾರ್ಯವನ್ನೂ ಮಾಡಬಲ್ಲರು. ಸರಳವಾಗಿ ಮಾತನಾಡಬಲ್ಲರು. ಇದು ಕಲ್ಪಿತ ಕಥೆಯಲ್ಲ. ವಾಸ್ತವ ವಿಚಾರ. ಅವರ ಹೆಸರು ಡಾ. ಹೆರಾಲ್ಡ್ ಸ್ರುಜ್. ಡಾ. ಸ್ರುಜ್ ಬಹುಭಾಷಾತಜ್ಞರಷ್ಟೇ ಅಲ್ಲ, ಶ್ರೇಷ್ಠ ಕವಿಗಳೂ ಹೌದು.


 ಇಷ್ಟೊಂದು ಭಾಷೆಗಳನ್ನು ಹೇಗೆ ಕಲಿತಿರಿ? ಎಂದು ಅವರನ್ನು ಪ್ರಶ್ನಿಸಿದಾಗ ಅವರು ನಗುತ್ತ ಉತ್ತರಿಸಿದರು : 'ಬಹುಭಾಷಾಜ್ಞಾನ ಪಡೆಯಲು ಮೂರು ಸಂಗತಿಗಳು ಬೇಕೇ ಬೇಕು. ಮೊದಲನೆಯದು ಕಲಿಯಬೇಕು, ತಿಳಿಯಬೇಕು ಎಂಬ ತೀವ್ರ ಹಂಬಲ, ಎರಡನೆಯದು ಅನವರತ ಶ್ರದ್ಧೆಯಿಂದ ಕೂಡಿದ ಪರಿಶ್ರಮ ಮತ್ತು ಮೂರನೆಯದೇ ಅವಕಾಶ . ಬಹುಭಾಷೆಗಳನ್ನು ಕಲಿಯುವ ತೀವ್ರ ಹಂಬಲ ಬಾಲ್ಯದಿಂದಲೇ ನನ್ನಲ್ಲಿ ಬಲವಾಗಿ ಬೇರೂರಿತ್ತು. ಮುಂದೆ ಅವಕಾಶ ದೊರೆತುದರಿಂದ ಶ್ರದ್ಧೆಯಿಂದ ಪ್ರಯತ್ನಿಸಿದೆ ಸಾಧ್ಯವಾಯಿತು' ಎಂದು.


 ಡಾ. ಸ್ರುಜ್ ಮುನ್ನೂರು ಭಾಷೆಗಳನ್ನು ಚೆನ್ನಾಗಿ ಕಲಿಯಬಲ್ಲರು! ನಾವು ಒಂದು ಭಾಷೆಯನ್ನು ಚೆನ್ನಾಗಿ ಕಲಿಯಲಾರೆವು. ಏಕೆ? ನಮಗೆ ಹಂಬಲದ ಬೆಂಬಲವಿಲ್ಲ. ಕಲಿಯಬೇಕೆಂಬ ಆಸೆ ಇಲ್ಲ. ಅಬ್ರಹಾಂ ಲಿಂಕನ್ ಲಾಯರ್ ಆಗಲು ತೀವ್ರವಾಗಿ ಹಂಬಲಿಸಿದ್ದ. ಬ್ಲ್ಯಾಕ್ ಸ್ಟೋನ್ ಅವರ ಗ್ರಂಥಗಳನ್ನು ಪಡೆಯಲು ಒಮ್ಮೆ ನಲ್ವತ್ತು ಮೈಲಿ ದೂರ ನಡೆದು ಹೋಗಿದ್ದನಂತೆ!


 ತೀವ್ರ ಹಂಬಲ, ತೀವ್ರ ಅಭೀಪ್ಸೆಗಳೇ ಗುರಿ ಸಾಧಿಸಲು ಯೋಗ್ಯವಾದ ವಾತಾವರಣದೆಡೆಗೆ ನಿಮ್ಮನ್ನು ಸೆಳೆಯುವುವು! ಆಧ್ಯಾತ್ಮಿಕ ಜಗತ್ತಿನಲ್ಲೂ ತೀವ್ರ ಹಂಬಲ, ತೀವ್ರ ವ್ಯಾಕುಲತೆ ಇತ್ತು ಎಂದಾದರೆ ದೇವರನ್ನು ಪಡೆಯಬಹುದು. 'ತೀವ್ರ ವ್ಯಾಕುಲತೆ ಇತ್ತು ಎಂದರೆ ಅರುಣೋದಯವಾದ ಹಾಗೆ. ಇನ್ನು ಸೂರ್ಯೋದಯಕ್ಕೆ ತಡವಿಲ್ಲ ' ಎಂದು ಭಗವಾನ್ ಶ್ರೀರಾಮಕೃಷ್ಣರು ಹೇಳಿದರು. ನೋಡಿದಿರಾ ಈ ಹಂಬಲದ ಮಹಿಮೆ!


'ಯಾವುದಾದರೊಂದು ವಸ್ತುವನ್ನು ಕುರಿತು ಅರಿತುಕೊಳ್ಳಬೇಕೆಂಬ ತೀವ್ರ ಹಂಬಲ ಮಾನವನ ಹೃದಯದಲ್ಲಿ ಪ್ರಬಲವಾಗಿ ಉದಯಿಸದಿದ್ದರೆ, ವ್ಯಾಕುಲತೆ ಉಂಟಾಗದಿದ್ದರೆ ಅವನ ಕಣ್ಣುಗಳ ಎದುರಿಗೆ ಅಂಧಕಾರವೇ ಇರುವುದು. ಆ ವಸ್ತು ಅವನಿಗೆ ಗೋಚರಿಸುವುದೇ ಇಲ್ಲ !'


 'ಸತ್ಯದ ಮಹಾ ಸಾಗರದಲ್ಲಿ ಮನುಷ್ಯನು ಏನನ್ನು ಬಯಸುತ್ತಾನೋ ಅದನ್ನು ಪಡೆಯುತ್ತಾನೆ. ದೇವರಿಗಾಗಿ ಕಾತರಿಸಿದ ಅಸ್ಸಿಸಿಯ ಸಂತ ಫ್ರಾನ್ಸಿಸ್ ದೈವ ಸಾಕ್ಷಾತ್ಕಾರ ಪಡೆದ. ಸೃಷ್ಟಿಯ ಹಿನ್ನೆಲೆಯ ನಿಯಮಗಳನ್ನು ಹುಡುಕಾಡಿದ ಐನ್‌ಸ್ಟೀನ್ ವಿಶ್ವವ್ಯಾಪಕ ನಿಯಮಗಳನ್ನು ಕಂಡು ಹಿಡಿದ. ರುಯ್ಸ್ ಬ್ರೋಕ್ ಮಹಾನುಭಾವನೆನ್ನುವಂತೆ ದೇಶಕಾಲಾತೀತನಾಗಿ ಪ್ರಜ್ಞೆಯ ಅನಿರ್ವಚನೀಯ ರಾಜ್ಯದಲ್ಲಿ ವಿಜೃಂಭಿಸುವ ಆ ದೇವರೂ, ಪ್ರೀತಿಯ ವ್ಯಾಕುಲ ಮೊರೆಗೆ ಮಾತ್ರ ಲಭ್ಯನು' ಎಂಬುದು ನೊಬೆಲ್ ಪಾರಿತೋಷಕ ವಿಜೇತ ವಿಜ್ಞಾನಿ ಡಾ. ಅಲೆಕ್ಸಿಸ್ ಕೆರೆಲ್ ಹೇಳಿದ ಮಾತು!*


ಅಂದರೆ ಪ್ರಯತ್ನದಿಂದ ಪರಮಾರ್ಥ ಸಾಧ್ಯ ಎಂದಾಯಿತಲ್ಲವೇ?


ನಮ್ಮ ದೇಶದ ದೇವಾಲಯಗಳಲ್ಲಿ ದೇವರ ವಿಭಿನ್ನ ಮೂರ್ತಿಗಳನ್ನು ನೀವು ನೋಡಿರಬಹುದು. ಆ ಮೂರ್ತಿಗಳು ತೋರಿಸುವ ಮುದ್ರೆಗಳನ್ನು ನೀವು ಎಂದಾದರೂ ಪರಿಶೀಲಿಸಿದ್ದೀರಾ? ಅವು ಬಹಳ ಅರ್ಥಪೂರ್ಣವಾಗಿವೆ. ಆ ದೇವತಾ ಮೂರ್ತಿಗಳು ಅಭಯ, ವರದಮುದ್ರೆಗಳ ಮೂಲಕ ಜೀವಿಗೆ 'ಹೆದರದಿರು, ನಿನ್ನ ಆಸೆ ನೆರವೇರುತ್ತದೆ' ಎಂಬುದನ್ನು ಸದಾ ಸೂಚಿಸುತ್ತವೆ. ಆಸೆ ಇತ್ತು ಎಂದಾದರೆ ಅದು ಎಂದಾದರೊಂದು ದಿನ ನೆರವೇರಲೇಬೇಕು. ಸರ್ವಶಕ್ತನೂ, ಸರ್ವಜ್ಞನೂ ಆದ ದೇವರು ಜಗತ್ತನ್ನು ಏಕೆ ಸೃಷ್ಟಿಸಿದ ಎನ್ನುವ ಪ್ರಶ್ನೆಗೆ ಜೀವಿಗಳ ಆಶೋತ್ತರಗಳನ್ನು ಪೂರೈಸಲು, ಅವರವರ ಕರ್ಮಫಲಗಳನ್ನು ಅನುಭವಿಸಲು ತಕ್ಕುದಾದ ವ್ಯವಸ್ಥೆಗಾಗಿ ಎನ್ನುತ್ತದೆ ಶಾಸ್ತ್ರ. ನಿಮ್ಮ ಆಸೆಯು ಇಂದೋ ನಾಳೆಯೋ, ಮುಂದೆ ಎಂದಾದರೊಂದು ದಿನ ನೆರವೇರಿಯೇ ತೀರುತ್ತದೆ. ಎಲ್ಲ ಆಸೆಗಳಿಂದ ಬಿಡುಗಡೆ ಹೊಂದಿ ದಿವ್ಯಸ್ಥಿತಿಗೇರಲೂ, ಮುಳ್ಳಿನಿಂದ ಮುಳ್ಳನ್ನು ತೆಗೆದಂತೆ ಈ ತೀವ್ರ ತೆರನಾದ ಆಸೆಯೇ ನಮಗೆ ಆಶ್ರಯ. ಹಾಗಾದರೆ ದುರಾಸೆಗಳೂ ನೆರವೇರುತ್ತವೆಯೇ ಎಂದು ಕೇಳಬಹುದು ನೀವು. ಹೌದು, ನೆರವೇರುತ್ತವೆ. ಆದರೆ ಪರಿಣಾಮ ಮಾತ್ರ ಭಯಾನಕ. ರಾವಣ ದುರ್ಯೋಧನರುಗಳ ದುರಾಸೆ ನೆರವೇರಿದಂತೆ ಕಂಡರೂ ಅದು ದುರಂತ ಮತ್ತು ಸರ್ವನಾಶದೆಡೆಗೇ ಅವರನ್ನು ಸೆಳೆಯಿತು.


ನಿಮಗೇನು ಬೇಕೋ ಅದು ದೊರತೇ ದೊರೆಯಬೇಕು. ಆದರೆ ಏನು ಬೇಕೆಂಬುದೇ ತಿಳಿಯದಿದ್ದರೆ ಪರಿಣಾಮ ಶೂನ್ಯಸಂಪಾದನೆಯಾದೀತು. ಇದು ಪ್ರಸಿದ್ದ ಸಂತ ಅಲ್ಲಮಪ್ರಭುವಿನ ಶೂನ್ಯಸಂಪಾದನೆಯಲ್ಲ ಅಲ್ಲಮನದು ಸಿದ್ದಿ ಸಂಪಾದನೆ. ಗೊತ್ತು ಗುರಿ ಇಲ್ಲದ ಬದುಕಿನಿಂದ ನಾವು ಸಂಪಾದಿಸುವುದು ಇಷ್ಟೇ : ನಿರಾಶಾಮನೋಭಾವ, ದೈನ್ಯ, ಕೀಳರಿಮೆ ಮತ್ತು ದುಃಖ, ಒಟ್ಟಿನಲ್ಲಿ ದುರ್ಬಲ ವ್ಯಕ್ತಿತ್ವ, ದುರಂತ ಜೀವನ.


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box