ಗ್ರಂಥ : ಬದುಕಲು ಕಲಿಯಿರಿ part : 47

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು :  ಸ್ವಾಮಿ ಜಗದಾತ್ಮಾನಂದಜಿ

 ಭಾಗ :  47 



 ಡಾ. ಅಂಬೇಡ್ಕ‌ರ್ ವಿದೇಶದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಅಧ್ಯಯನ ಅಭ್ಯಾಸಗಳಲ್ಲಿ ಮುಳುಗಿಹೋಗಿದ್ದರು. ಜ್ಞಾನ ಪಿಪಾಸುವಿಗೆ ನಿದ್ರೆ ಮತ್ತು ಸುಖ ಇಲ್ಲ ಎಂಬ ಸುಭಾಷಿತ ಅವರ ಪಾಲಿಗೆ ಅಕ್ಷರಶಃ ನಿಜವಾಗಿತ್ತು. ವಿದ್ಯಾಭ್ಯಾಸಕ್ಕೆಂದು  ತಾಯ್ನಾಡಿನಿಂದ  ಬಹುದೂರ ಹೋಗಿ ಕಾಲ ಹರಣ ಮಾಡಿದರೆ, ಭೋಗ ವಿಲಾಸ ವೈಭವಗಳ ಬೆನ್ನಟ್ಟಿದರೆ ದೇಶದ್ರೋಹವಾಗುತ್ತದೆಂದು ಅವರು ಯೋಚಿಸಿದರು. ಹಾಗಾಗಿ ಸಿನೆಮಾ ನೋಡುವ ಚಟವಾಗಲಿ, ಊರುಕೇರಿ ಅಲೆಯುವ ಹವ್ಯಾಸವಾಗಲಿ ಅವರ ಮನಸ್ಸನ್ನೆಂದೂ ಸೆಳೆಯಲಿಲ್ಲ. ಅಂಬೇಡ್ಕರ್ ಮಹಾ ಪುಸ್ತಕಪ್ರೇಮಿಗಳು. ಪುಸ್ತಕಗಳನ್ನು ಕಂಡರೆ ಅವರಿಗೆ ದೇಹಾಯಾಸ ಮಾನಸಿಕ ವ್ಯಥೆಗಳೂ ದೂರವಾಗುತ್ತಿದ್ದವು. ಲಂಡನ್ನಿಗೆ ಅವರು ವಿಶೇಷ ಅಧ್ಯಯನಕ್ಕಾಗಿ ಹೋದಾಗಲಂತೂ, ಪುಸ್ತಕಾಲಯದ ಕಾವಲುಗಾರ ಕಿಟಕಿಬಾಗಿಲುಗಳನ್ನು ಮುಚ್ಚಿ ಬಂದು ಅವರನ್ನು ಎಚ್ಚರಿಸುವ ತನಕವೂ ತಮ್ಮ ಆಸನದಲ್ಲೇ ಕುಳಿತು ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಅಲ್ಪಾಹಾರಿಯಾಗಿದ್ದುಕೊಂಡು ಅವರು ತಮ್ಮ ಸಾಹಸದ ಜ್ಞಾನಯಾತ್ರೆಯನ್ನು ತಡೆಯಿಲ್ಲದೇ ನಡೆಸಿದರು. ಅವರ ಜ್ಞಾನದಾಹ ಅಂತಹದಾಗಿತ್ತು.


 'ಮಹತ್ಕಾರ್ಯಗಳು ಹಠಾತ್ ಬಲದಿಂದಲ್ಲ -ನಿರಂತರ ಪರಿಶ್ರಮದಿಂದ ಸಾಧ್ಯವಾಗಿವೆ' ಎಂದು ಡಾ. ಜಾನ್ಸನ್ ಹೇಳಿದ.


 'ಹಿಡಿದ ಕೆಲಸವನ್ನು ಪರಿಪೂರ್ಣಗೊಳಿಸುವ ದೃಢನಿರ್ಧಾರವೇ ಬಲಿಷ್ಠನಿಗೂ, ದುರ್ಬಲನಿಗೂ ಇರುವ ಅಂತರವನ್ನು ಸೂಚಿಸುತ್ತದೆ' ಎಂದು ಕಾರ್ಲೈಲ್ ಹೇಳಿದ.


' ನಿರಂತರ ಸಾಧನೆ ಎಲ್ಲ ಕಷ್ಟಗಳನ್ನೂ ದೂರ ಮಾಡುವುದು' ಎಂದು ಒಂದು ಲ್ಯಾಟಿನ್ ಗಾದೆ ಹೇಳುತ್ತದೆ.


 'ಸರಿಯಾದ ಮತ್ತು ಉತ್ಸಾಹಪೂರಿತ ಪ್ರಯತ್ನದಿಂದ ಪಡೆಯಲು ಸಾಧ್ಯವಾಗದ ವಸ್ತು ಯಾವುದೂ ಈ ಪ್ರಪಂಚದಲ್ಲಿಲ್ಲ' ಎಂಬುದು 'ಯೋಗವಾಸಿಷ್ಠ'ದ ಮತ.


 ಯಾರೂ ಕಂಡರಿಯದ ಕಡೆಗೆ ತನ್ನ ಹಡಗನ್ನು ತಿರುಗಿಸಿ ಹೊಸ ಜಗತ್ತನ್ನು ಕಂಡುಹಿಡಿದ ಕೊಲಂಬಸನ ಧೈರ್ಯವೆಂಥದು! ಪೂರ್ವನಿಶ್ಚಿತ ಯೋಜನೆಯಂತೆ ಅವನಿಗೆ ತನ್ನ ಗುರಿಯನ್ನು ಸೇರಲು ಅಸಾಧ್ಯವಾದಾಗ, ಅವನ ಸಂಗಡಿಗರು ಬೇಸತ್ತು ಆತನನ್ನು ವಿರೋಧಿಸುತ್ತ ಸಮುದ್ರಕ್ಕೆಸೆದು ಬಿಡುತ್ತೇವೆಂದು ಬೆದರಿಕೆ ಹಾಕಿದರು. ಕಷ್ಟ ಪರಂಪರೆಗಳ ಮಧ್ಯದಲ್ಲಿ ದಿಕ್ಕುಕಾಣದ ಆ ಜಲರಾಶಿಯ ನಡುವೆ, ತನ್ನವರ ಪ್ರಬಲ ವಿರೋಧವನ್ನೂ ಲೆಕ್ಕಿಸದೆ ಏಕಾಂಗಿಯಾಗಿ ಅಮಿತ ಸಾಹಸ ಹಾಗೂ ಆತ್ಮವಿಶ್ವಾಸದಿಂದ ಮುಂದುವರಿಯುತ್ತ ಆತ ವಿಜಯಿಯಾದ.


 ಜಾರ್ಜ್ ಸ್ಟೀವನ್‌ಸನ್ ತನ್ನ ಯಂತ್ರವನ್ನು ಪರಿಷ್ಕರಿಸಲು ಹದಿನೈದು ವರ್ಷಗಳ ಕಾಲ ದುಡಿದ. ಜೇಮ್ಸ್ ವಾಟ್ ಮೂವತ್ತು ವರ್ಷಗಳ ಕಾಲ ನಿರಂತರ ಶ್ರಮದಿಂದ ತಾನು ರಚಿಸಲು ತೊಡಗಿದ ಯಂತ್ರವನ್ನು ಪೂರ್ಣಗೊಳಿಸಿದ. ಪಿಚ್ ಬ್ಲೆಂಡ್ ಅದಿರಿನಿಂದ ರೇಡಿಯಮ್ ಅನ್ನು ಬೇರ್ಪಡಿಸಲು ಕ್ಯೂರಿ ದಂಪತಿಗಳು ಎಡೆಬಿಡದೆ ನಾಲ್ಕು ವರ್ಷಗಳ ಕಾಲ ಆ ಅದಿರನ್ನು ಕುಲುಮೆಯಲ್ಲಿ ಕಾಯಿಸಿದರು. ಸಾಧನೆಯ ಶಿಖರದಲ್ಲಿ ಕಂಗೊಳಿಸುವವರೆಲ್ಲರ ಯಶಸ್ಸಿನ ಗುಟ್ಟು -ತಾಳ್ಮೆಯಿಂದ ನಿರಂತರ ಪ್ರಯತ್ನಶೀಲರಾದುದೇ ಆಗಿದೆ.


 ವಿದ್ಯುದ್ದೀಪದ ಆವಿಷ್ಕಾರವನ್ನು ಮಾಡಿ ಎಡಿಸನ್ ತನ್ನ ಪ್ರಯೋಗಗಳಲ್ಲಿ ಒಂಬೈನೂರು ಬಾರಿ ವಿಫಲನಾದ. ಆದರೂ ತಾಳ್ಮೆಯಿಂದ ಹೋರಾಟ ನಡೆಯಿಸಿ ಯಶಸ್ವಿಯಾದ. 'ಇಷ್ಟೊಂದು ಸೋಲುಗಳಿಂದ ನಿಮಗೆ ಆಶಾಭಂಗವಾಗುವುದಿಲ್ಲವೇ? ಈ ಸಂಶೋಧನಾ ಕಾರ್ಯದಲ್ಲೇ ಬೇಸರ ಬರುವುದಿಲ್ಲವೇ?' ಎಂದು ಎಡಿಸನ್‌ನನ್ನು ಪ್ರಶ್ನಿಸಿದಾಗ 'ಇಲ್ಲ, ನನಗೆ ಬೇಸರವಿಲ್ಲ: ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಯುವ ಯತ್ನದಲ್ಲಿ ಒಂಬೈನೂರು ತಪ್ಪುಗಳನ್ನು ಬಿಟ್ಟು ಸರಿಯಾದುದನ್ನು ಹಿಡಿದಿದ್ದೇನೆ ಎನ್ನುವ ತೃಪ್ತಿ ಇದೆ' ಎಂದನಂತೆ! 


 ಐಸಾಕ್ ನ್ಯೂಟನ್ ವರ್ಷಗಟ್ಟಲೆ ದುಡಿದು ಸಂಶೋಧಿಸಿದ ತನ್ನ ಬರಹವನ್ನು ತನ್ನ ಅಭ್ಯಾಸದ ಕೋಣೆಯ ಮೇಜಿನ ಮೇಲಿರಿಸಿದ್ದ. ಅವನ ಸಾಕುನಾಯಿ ಉರಿಯುತ್ತಿದ್ದ ಮೇಣದ ಬತ್ತಿಯನ್ನು ಆ ಹಾಳೆಗಳ ಮೇಲೆ ಕೆಡವಿತು. ಬರಹ ಪೂರ್ಣವಾಗಿ ಸುಟ್ಟುಹೋದ ಬಳಿಕ ನ್ಯೂಟನ್ ಅದನ್ನು ಕಂಡು ಬಹಳಷ್ಟು ನೊಂದುಕೊಂಡ. ಆದರೆ ಧೃತಿಗೆಡಲಿಲ್ಲ. ತಿರುಗಿ ಆ ಕೆಲಸವನ್ನು ಮಾಡುವೆನೆಂದು ದೃಢಸಂಕಲ್ಪ ಮಾಡಿದ. ತಾಳ್ಮೆಯಿಂದ ದುಡಿದು ಮುಗಿಸಿಯೂ ಬಿಟ್ಟ.


 ವಯಸ್ಸಿಗೂ, ಯಶಸ್ಸಿಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಬದುಕಿನ ಪ್ರಾರಂಭದ ಹಂತಗಳಲ್ಲಿ ಯಶಸ್ಸನ್ನು ಗಳಿಸಿದರೆ ಇನ್ನು ಕೆಲವರು ಮಧ್ಯ ವಯಸ್ಸಿನಲ್ಲಿ, ಇತರರು ಅಪರ ವಯಸ್ಸಿನಲ್ಲಿ. ಇಂಗ್ಲೆಂಡಿನಲ್ಲಿ ಪಿಟ್ ಎಂಬಾತ ಇಪ್ಪತ್ತನಾಲ್ಕನೇ ವಯಸ್ಸಿಗೆ ಪ್ರಧಾನಿಯಾಗಿದ್ದರೆ ಗ್ಲಾಡ್‌ಸ್ಟೋನ್ ಪ್ರಧಾನಿಯಾದದ್ದು ತನ್ನ ಎಂಭತ್ತಮೂರನೇ ವಯಸ್ಸಿನಲ್ಲಿ. ಗಯಟೆ ಹತ್ತನೇ ವಯಸ್ಸಿನಲ್ಲಿ ತನ್ನ ಬರವಣಿಗೆಯ ಕೆಲಸ ಪ್ರಾರಂಭಿಸಿದ್ದ. ಆದರೆ ಆತನ ಅಮೂಲ್ಯ ಕೃತಿ Faust (ಫೌಸ್ಟ್) ಬೆಳಕು ಕಂಡದ್ದು ಎಂಭತ್ತನೇ ವಯಸ್ಸಿನಲ್ಲಿ. ಕೋಲ್‌ರಿಜ್‌ ತನ್ನ ಪ್ರಸಿದ್ಧ Ancient Mariner (ಏನ್ಶಿಯಂಟ್ ಮ್ಯಾರಿನರ್) ಬರೆದದ್ದು ಇಪ್ಪತ್ತೈದನೆ ವಯಸ್ಸಿ ನಲ್ಲಿ. ಲಿಯೋನಾರ್ಡೊ ಡಾ ವಿಂಚಿಯ Last Supper (ಲಾಸ್ಟ್ ಸಪ್ಪರ್) ಎನ್ನುವ ಪ್ರಸಿದ್ಧ ಕಲಾಕೃತಿ ಹೊರಹೊಮ್ಮಿದುದು ಎಪ್ಪತ್ತೇಳರ ಅಪರ ವಯಸ್ಸಿನಲ್ಲಿ. ಕೆಲ್‌ವಿನ್ ತನ್ನ ಪ್ರಥಮ ವೈಜ್ಞಾನಿಕ ಸಂಶೋಧನೆ ಮಾಡಿದ್ದು ಹದಿನೆಂಟನೇ ವಯಸ್ಸಿನಲ್ಲಾದರೆ, ನಾವಿಕರ ದಿಕ್ಸೂಚಿಗೆ ಸುಧಾರಿತ ರೂಪ ನೀಡಿದ್ದು ಎಂಭತ್ತ ಮೂರರಲ್ಲಿ. ದೇಹಾರೋಗ್ಯ ಮತ್ತು ಸ್ವಸ್ಥ ಶರೀರವೇ ಯಶಸ್ಸಿಗೆ ಕಾರಣವೆನ್ನಲು ಸಾಧ್ಯವೇ? ಮಿಲ್ಟನ್ ಕುರುಡ, ನೆಪೋಲಿಯನ್ ಚರ್ಮ ವ್ಯಾಧಿ ಪೀಡಿತ. ಜೂಲಿಯಸ್ ಸೀಸರ್ ಮೂರ್ಛ ರೋಗಗ್ರಸ್ತ, ಬಿಥೋವನ್ ಕಿವುಡ, ಬೈರನ್ ಕೂಡ ಕಿವುಡ, ಮಹಾವಾಗ್ಮಿ ಡಿಮೋಸ್ತನೀಸ್ ಮೊದಲು ಉಗ್ಗುತ್ತಿದ್ದ !


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software