ಅರ್ಹತೆಗೆ ಒಲಿದ ಅದೃಷ್ಟ ಗ್ರಂಥ : ಬದುಕಲು ಕಲಿಯಿರಿ part 46
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 46
ಅರ್ಹತೆಗೆ ಒಲಿದ ಅದೃಷ್ಟ
ಇತ್ತೀಚೆಗೆ ಯುವಕನೊಬ್ಬ ಪ್ರಸಿದ್ದ ಕ್ರೀಡಾಪತ್ರಿಕೆ ಏರ್ಪಡಿಸಿದ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಹತ್ತು ಸಾವಿರ ರೂಪಾಯಿಗಳ ಬಹುಮಾನ ಪಡೆದ. ಎಲ್ಲರೂ ಅವನ ಅದೃಷ್ಟವನ್ನು ಕಂಡು ಚಕಿತರಾದರು. ಸಂತೋಷವನ್ನು ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದರು. ಆತ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ, ಅಂಥ ಒಂದು ಬಹುಮಾನ ಸಿಕ್ಕೀತೆಂದು ಕನಸಿನಲ್ಲೂ ಯೋಚಿಸಿರಲಿಲ್ಲ' ಎಂದು ಅವನು ನನಗೆ ಹೇಳಿದ. 'ಅದೃಷ್ಟವಲ್ಲದೆ ಮತ್ತೇನು?' ಎಂದವನ ಮಿತ್ರರು ದನಿ ಗೂಡಿಸಿದರು. ಅವನೂ ನಗುತ್ತ ಹೌದೆಂಬಂತೆ ತಲೆತೂಗಿದ. ಆದರೆ ಅದು ಲಾಟರಿಯ ಸ್ಪರ್ಧೆಯಾಗಿರಲಿಲ್ಲ. ಮಿತ್ರರೆಲ್ಲ ದೂರ ಸರಿದ ಮೇಲೆ ಆತನೊಬ್ಬನೇ ಇದ್ದಾಗ ನಾನೊಂದು ಪ್ರಶ್ನೆ ಕೇಳಿದೆ. "ನೀನು ಎಷ್ಟು ವರ್ಷಗಳಿಂದ ಆ ಕ್ರೀಡಾ ಪತ್ರಿಕೆಯನ್ನು ಓದುತ್ತಿದ್ದಿ?' 'ಆರನೇ ತರಗತಿಯಿಂದ' ಎಂದನಾತ. ಈಗ ಅವನು ಪಿ. ಯು. ಸಿ. ಮುಗಿಸಿದ್ದಾನೆ. ಈ ಆರು ವರ್ಷ ಕಾಲ ಪ್ರಕಟವಾದ ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನೂ ತಪ್ಪದೇ ಓದಿದ್ದ. ಆಟೋಟದ ಸ್ಪರ್ಧೆಗಳಲ್ಲಿ ತತ್ಸಂಬಂಧವಾದ ವಾರ್ತೆಗಳಲ್ಲಿ ಆತನಿಗೆ ಮೊದಲಿನಿಂದಲೂ ಆಸಕ್ತಿ. ಮಕ್ಕಳು ಸಿಹಿ ತಿಂಡಿಗಾಗಿ ಹಾತೊರೆಯುವಂತೆ ಆ ಪತ್ರಿಕೆಗಾಗಿ ಅವನ ಹಂಬಲವಿತ್ತು. ಅದು ಕೈಗೆ ಬಂದೊಡನೆ ಮೊದಲಿನಿಂದ ಕೊನೆಯವರೆಗೆ ಹಲವು ಬಾರಿ ಓದಿದವನು ಆತ. ಈ ಆರು ವರ್ಷಗಳಲ್ಲಿ ಪಂದ್ಯಾಟಕ್ಕೆ ಸಂಬಂಧಿಸಿದ ಎಷ್ಟೊಂದು ವಿಚಾರಗಳನ್ನು ಆತ ಸಂಗ್ರಹಿಸಿರಬಹುದು ಎಂಬುದನ್ನು ಯೋಚಿಸಿ ನೋಡಿ! ಆ ಜ್ಞಾನದ ಹಿನ್ನೆಲೆಯಿಂದ ಲಕ್ಷಾಂತರ ಜನರು ಭಾಗವಹಿಸಿದ ಸ್ಪರ್ಧೆಯಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವ ಸಾಮರ್ಥ್ಯವನ್ನು ಆತ ಗಳಿಸಿದ. ಬಹುಮಾನದ ಬಗೆಗೆ ಅವನು ಎಂದೂ ಯೋಚಿಸಿರಲಿಲ್ಲ. ಅರ್ಹತೆಯನ್ನು ಹುಡುಕಿಕೊಂಡು ಅದೇ ಅವನ ಬಳಿ ಬಂದಿತಲ್ಲವೆ?
ಸಹನೆಯಿಂದ ಸಿದ್ಧಿ
ಪ್ರಭುಶಕ್ತಿಗಿಂತಲೂ, ವಾಕ್‌ಶಕ್ತಿ ಪ್ರಬಲ ಪರಿಣಾಮಕಾರಿ ಎಂಬುದನ್ನು ತೋರಿಸಿಕೊಟ್ಟ ಡಿಮೋಸ್ತನೀಸ್ ಕ್ರಿ. ಪೂ. 384 ರಲ್ಲಿ ಗ್ರೀಸ್ ದೇಶದಲ್ಲಿ ಜನಿಸಿದಾಗ ಜ್ಯೋತಿಷ್ಯರು ಅವನು ಸಾಮಾನ್ಯ ಮನುಷ್ಯನಾಗಿ ಬಾಳುವನೆಂದು ಭವಿಷ್ಯ ನುಡಿದಿದ್ದರು. ಉಗ್ಗು ದನಿಯ ಕುಗ್ಗುನುಡಿಯ ಹುಡುಗನಾದ ಆತ ಅಶಕ್ತ ರೋಗಿಯಾಗಿ ಬೆಳೆದು, ತನ್ನ ಸಹಪಾಠಿ ಸ್ನೇಹಿತರ ಪರಿಹಾಸ್ಯ ಹಾಗೂ ಕನಿಕರಕ್ಕೆ ಪಾತ್ರನಾಗಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಬ್ಬಲಿಯಾದ ಆತನ ಚಿಕ್ಕಪ್ಪ ಈ ಬೆಪ್ಪುತಕ್ಕಡಿಯನ್ನು ಹೇಗೊ ಸೋಲಿಸಬಹುದೆಂದು ಅವನ ಆಸ್ತಿಯನ್ನು ಅಪಹರಿಸಿಬಿಟ್ಟ. ಡಿಮೋಸ್ತನೀಸ್ ತನಗಾದ ಅನ್ಯಾಯವನ್ನು ನ್ಯಾಯಾಲಯದಲ್ಲಿ ದೂರಿಕೊಂಡ. ಆದರೆ ಅವನ ಮಾತಿಗೆ ಬೆಲೆ ಸಿಗಲಿಲ್ಲ. ಅದೇ ವೇಳೆಗೆ, ಆ ಕಾಲದ ಪ್ರಸಿದ್ದ ಗ್ರೀಕ್ ವಾಗ್ಮಿಯೊಬ್ಬನ ಮಾತುಗಾರಿಕೆಯನ್ನು ಕೇಳಿದ ಜನ ಮೋಹಿತರಾಗಿ ಆತನಿಗೆ ತೋರಿಸಿದ ಗೌರವಾದರಗಳು ಡಿಮೋಸ್ತನೀಸ್‌ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ತನ್ನೆಲ್ಲ ಕಷ್ಟನಷ್ಟಗಳ ಮಧ್ಯದಲ್ಲೇ ಮಹತ್ತಾದುದನ್ನು ಸಾಧಿಸುವ ಆಕಾಂಕ್ಷೆಯನ್ನದು ಮೊಳೆಯಿಸಿತು.
ವಾಗ್ಮಿಯಾಗಲು ಡಿಮೋಸ್ತನೀಸ್ ದೃಢನಿಶ್ಚಯ ಮಾಡಿದ್ದ. ಆದರೆ ಅವನು ಹಲವು ತೊಡಕುಗಳನ್ನು ಎದುರಿಸಬೇಕಿತ್ತು. ಮಾತನಾಡಲು ಪ್ರಾರಂಭಿಸಿದೊಡನೆ ಉಗ್ಗು ಅವನನ್ನು ಬಾಧಿಸುತಿತ್ತು. ದೀರ್ಘವಾದ ವಾಕ್ಯವನ್ನು ಒಮ್ಮಲೇ ಹೇಳುವ ಸಾಮರ್ಥ್ಯ ಅವನಿಗಿರಲಿಲ್ಲ. ನಿರಂತರ ಪ್ರಯತ್ನದಿಂದ ಅವನು ಈ ದೌರ್ಬಲ್ಯಗಳನ್ನು ಗೆದ್ದು ಬಿಟ್ಟ. ಒಬ್ಬ ವೈದ್ಯನ ಹೇಳಿಕೆಯಂತೆ ನಾಲಗೆಯ ಮೇಲೆ ಬೆಣಚು ಕಲ್ಲುಗಳನ್ನಿಟ್ಟು ಸ್ಪಷ್ಟವಾಗಿ ಗಟ್ಟಿಯಾಗಿ ಶಬ್ದಗಳನ್ನು ಉಚ್ಚರಿಸ ತೊಡಗಿದ. ಎತ್ತರವಾದ ಬೆಟ್ಟಗಳನ್ನು ಏರಿ ಇಳಿಯುತ್ತ ದೀರ್ಘವಾಗಿ ಉಸಿರೆಳೆಯುವ ಅಭ್ಯಾಸವನ್ನು ಮಾಡಿ, ಅತ್ಯಂತ ಉದ್ದವಾದ ವಾಕ್ಯಗಳನ್ನೂ ತಡೆಯಿಲ್ಲದೇ ಉಚ್ಚರಿಸತೊಡಗಿದ. ದಿನವೂ ಸಮುದ್ರದ ಬಳಿ ನಿಂತು ಸಮುದ್ರ ಘೋಷವನ್ನು ಮೀರಿಸುವ ದನಿಯಿಂದ ಮಾತುಗಾರಿಕೆಯನ್ನು ಅಭ್ಯಸಿಸಿದ. ಕಾಯಿದೆ ಕಾನೂನು ಗ್ರಂಥಗಳನ್ನೂ, ಗ್ರೀಕ್ ಮಹಾಕಾವ್ಯಗಳನ್ನೂ ದಿನದಲ್ಲಿ ಹದಿನಾರು ಗಂಟೆಗಳಿಗೂ ಮಿಕ್ಕಿ ಅಧ್ಯಯನ ನಡೆಯಿಸಿದ. ತನ್ನ ಅಧ್ಯಯನ ಕಾಲದಲ್ಲಿ ಆತ ಜನರೊಂದಿಗೆ ಬೆರೆಯುತ್ತಿರಲಿಲ್ಲ. ಜನರೊಡನೆ ಯಾವತ್ತೂ ವ್ಯವಹಾರದಿಂದ ತನ್ನ ಅಭ್ಯಾಸಕ್ಕೆ ವಿಘ್ನ ಬರಕೂಡದೆಂದು ತಲೆಯನ್ನು ಅರ್ಧ ಬೋಳಿಸಿ ವಿಕಾರಮಾಡಿಕೊಂಡು ನೆಲಮಾಳಿಗೆಯಲ್ಲಿ ಕುಳಿತಿರುತ್ತಿದ್ದ. ಪ್ರಭಾವೀ ಹಾವಭಾವ ಮತ್ತು ಅಂಗಾಭಿನಯಕ್ಕಾಗಿ ದೊಡ್ಡ ನಿಲುಗನ್ನಡಿಯ ಎದುರು ದಿನವೂ ನಾಟಕ ನಡೆಸುತ್ತಿದ್ದ. ಮೂರು ವರ್ಷಗಳ ಅಜ್ಞಾತವಾಸದಿಂದ ಆತ ಹೊರ ಬಿದ್ದಾಗ ಜ್ಞಾನನಿಧಿಯಾಗಿದ್ದ. ಗ್ರೀಕ್ ದೊರೆ ಫಿಲಿಪ್ ಹೇಳಿದ: 'ಇಡೀ ಜಗತ್ತನ್ನೇ ಜಯಿಸಬಹುದು: ಆದರೆ ಡಿಮೋಸ್ತನೀಸ್‌ನ ನಾಲಗೆಯನ್ನು ಜಯಿಸುವುದು ಅಸಾಧ್ಯ.' ವಾಗ್ದೇವಿ ಅವನ ನಾಲಿಗೆಯಲ್ಲಿ 'ನಲಿದೊಲಿದು ನರ್ತಿಸುತ್ತಿದ್ದಳು.'
ಡಿಮೋಸ್ತನೀಸ್‌ನ ತಾಳ್ಮೆ ಮತ್ತು ಸಾಹಸ ಅದ್ವಿತೀಯವಾಗಿತ್ತು. ತತ್ಪರಿಣಾಮವಾಗಿ ಆತನು ಪಡೆದ ಫಲವೂ ಅದ್ವಿತೀಯವಾಗಿತ್ತು.
ಮುಂದುವರಿಯುವುದು..
Comments