ಪ್ರಯತ್ನವೇ ಪರಮ ಪೂಜೆ ಗ್ರಂಥ : ಬದುಕಲು ಕಲಿಯಿರಿ part :45

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

ಭಾಗ : 45


 ಪ್ರಯತ್ನವೇ ಪರಮ ಪೂಜೆ 


ನಮ್ಮ ದೇಶದ ಸುಪ್ರಸಿದ್ಧ ತಾತ್ವಿಕ  ಗ್ರಂಥವಾದ 'ಯೋಗವಾಸಿಷ್ಠ'ದಲ್ಲಿ ಸ್ವಪ್ರಯತ್ನವನ್ನು ಕುರಿತು ಹೇಳಿದ ಮಾತುಗಳನ್ನು ಕೇಳಿದ್ದೀರಾ?


 'ಸರಿಯಾದ ಮತ್ತು ಉತ್ಸಾಹಪೂರಿತ ಪ್ರಯತ್ನದಿಂದ ಪಡೆಯಲು ಸಾಧ್ಯವಾಗದ ವಸ್ತು ಯಾವುದೂ ಈ ಪ್ರಪಂಚದಲ್ಲಿಲ್ಲ. ಯಾರಾದರೂ ಯಾವುದೇ ವಸ್ತುವನ್ನು ಪಡೆಯಲು ಆಶಿಸಿ, ಅದನ್ನು ಹೊಂದಲು ಯತ್ನಿಸಿದುದೇ ಆದರೆ ಅವರು ಖಂಡಿತವಾಗಿಯೂ ಸಫಲರಾಗಬಲ್ಲರು. ಆದರೆ ಹಿಡಿದ ದಾರಿಯಲ್ಲಿ ಹಿಂದೇಟು ಹಾಕದೆ ಮುಂದುವರಿಯುತ್ತಲೇ ಸಾಗಬೇಕು.


'ಈ ಪ್ರಪಂಚದಲ್ಲಿ ಹಲವು ಮಂದಿ ಅತ್ಯಂತ ನಿಮ್ನ ಪರಿಸ್ಥಿತಿಗಳಿಂದ, ದುಃಖ ದಾರಿದ್ರಗಳಿಂದ ಪಾರಾಗಿ ಪರಮಭಾಗ್ಯಶಾಲಿಗಳಾದರು. ಬುದ್ಧಿಶಾಲಿಗಳಾದವರು ಪ್ರಯತ್ನ ಮಾತ್ರದಿಂದಲೆ ಅತ್ಯಂತ ಅಪಾಯಕರ ಸನ್ನಿವೇಶಗಳನ್ನು ದಾಟಿ ಜಯಶಾಲಿಗಳಾದರಲ್ಲದೆ ಅದೃಷ್ಟದಲ್ಲಿ ಅರ್ಥಹೀನ ನಂಬಿಕೆಯನ್ನಿಟ್ಟಿಲ್ಲ. ಯಾರು ಯಾವುದಕ್ಕಾಗಿ ಹಾತೊರೆದಿದ್ದನೋ, ಯಾವುದನ್ನು ಪಡೆಯುವುದಕ್ಕಾಗಿ ಹೋರಾಡಿದ್ದನೋ ಅದನ್ನು ಪಡೆದೇ ಪಡೆಯುತ್ತಾನೆ- ಸೋಮಾರಿಯಾಗಿ ಕುಳಿತು ಯಾರು ಏನನ್ನೂ ಸಾಧಿಸಿಲ್ಲ. ಪ್ರತಿಯೊಬ್ಬನೂ ತನಗೆ ತಾನೇ ಶತ್ರು ಅಥವಾ ತನಗೆ ತಾನೇ ಮಿತ್ರ ಎಂಬುದನ್ನು ತಿಳಿಯಬೇಕು. ಯಾರು ತನ್ನನ್ನು ತಾನು ರಕ್ಷಿಸಿಕೊಳ್ಳಲಾರನೋ ಅವನನ್ನು ರಕ್ಷಿಸಲು ಯಾರೂ ಇರಲಾರರು. ಖಂಡಿತವಾಗಿಯೂ ಒಬ್ಬನು ತನ್ನ ಸ್ವಪ್ರಯತ್ನದಿಂದಲೇ ದುಃಖದಾಯಕ ಸನ್ನಿವೇಶಗಳಿಂದ ಪಾರಾಗಬಲ್ಲನು. ಆದುದರಿಂದ ಪ್ರತಿಯೊಬ್ಬನೂ ಸರಿಯಾದ ಮಾರ್ಗದಲ್ಲಿ ನಿಷ್ಠೆಯಿಂದ ಮುಂದುವರಿಯಬೇಕು. ಧೈರ್ಯಶಾಲಿಗಳು, ಸಾಹಸಿಗಳು, ಜ್ಞಾನಿಗಳು ಆದ ಮಹಾತ್ಮರಾರೂ ವಿಧಿಯನ್ನು ಕಾದು ಕುಳಿತಿರಲಿಲ್ಲ.


'ಅದೃಷ್ಟದ ಕಲ್ಪನೆ ಅನಗತ್ಯವಾದುದು-- ಕಾರಣ ನಾವು ಎತ್ತ ನೋಡಿದರೂ ಪ್ರಯತ್ನಶೀಲತೆ ಹಾಗೂ ಪರಿಶ್ರಮ ಫಲದಾಯಕವಾದುದನ್ನು ಕಾಣುತ್ತೇವೆಯೇ ಹೊರತು ಕರ್ಮಹೀನತೆಯಲ್ಲ. ಕರ್ಮಶೀಲತೆ ಸಂಪೂರ್ಣವಾಗಿ ಮಾಯವಾದ ಶವದಲ್ಲಿ ಅದೃಷ್ಟದಿಂದ ಏನಾದರೂ ಸಂಭವಿಸಿದುದನ್ನು ನಾವು ಎಂದೂ ಕೇಳಿಲ್ಲ. ಅದೃಷ್ಟ ಏನನ್ನೂ ಮಾಡುವುದಿಲ್ಲ. ನಮ್ಮ ಕಲ್ಪನೆಯಲ್ಲಿ ಮಾತ್ರ ಅದೃಷ್ಟಕ್ಕೆ ಅಸ್ತಿತ್ವ--ಅದೃಷ್ಟಕ್ಕೆ ತನ್ನದೇ ಆದ ಅಸ್ತಿತ್ವವಿಲ್ಲ.


 'ಅದೃಷ್ಟವೆಂದರೆ ನಾವು ಆಗಲೇ ಮಾಡಿದ ಕಾರ್ಯಗಳ ಒಳ್ಳೆಯ ಅಥವಾ ಕೆಟ್ಟ ಫಲಗಳಲ್ಲದೇ ಬೇರೇನೂ ಅಲ್ಲ. ಒಬ್ಬನ ಸ್ವಪ್ರಯತ್ನದ ಫಲವಾಗಿ ಯಾವುದು ಸಂಭವನೀಯವೋ ಅದನ್ನು ನಾವು ಅದೃಷ್ಟವನ್ನುತ್ತೇವೆ. ಒಬ್ಬ ವ್ಯಕ್ತಿಯ ಪ್ರಯತ್ನವನ್ನೇ ಹೊಂದಿಕೊಂಡಿದೆ ಆತನ ಯಶಸ್ಸು.





 ವಿಧಿಯೋ, ಪೌರುಷವೋ 


 ನಮ್ಮ ದೇಶದಲ್ಲಿ 'ತೇನ ವಿನಾ ತೃಣಮಪಿ ನ ಚಲತಿ' ಎನ್ನುತ್ತ ಒಂದು ಹುಲ್ಲು ಕಡ್ಡಿಯೂ ಭಗವಂತನ ಕೃಪೆಯಿಲ್ಲದೆ ಅಲುಗಾಡದು ಎನ್ನುವ ವಿಧಿವಾದಿಗಳಿದ್ದಾರೆ. ಸ್ವಪ್ರಯತ್ನದಿಂದ ಸರ್ವವೂ ಸಾಧ್ಯ ಎನ್ನುವ ಪೌರುಷವಾದಿಗಳಿದ್ದಾರೆ. ಮನುಷ್ಯನು ಪರಿಸ್ಥಿತಿಯ ದಾಸ ಎನ್ನುವುದು ಕೆಲವರ ಮತ. ತನ್ನ ವ್ಯಕ್ತಿತ್ವದ ಪ್ರಭಾವದಿಂದ ಪರಿಸ್ಥಿತಿಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಮಾನವನಿಗೆ ಇದೆ ಎಂಬುದು ಇತರರ ವಾದ. ಸ್ವಪ್ರಯತ್ನ ಮತ್ತು ವಿಧಿ ರಥದ ಎರಡು ಚಕ್ರಗಳಿದ್ದಂತೆ, ಕತ್ತರಿಯ ಎರಡು ಅಲಗುಗಳಂತೆ ಎಂದು ಹೇಳುವುದುಂಟು. 'ಹಣೆಯ ಬರಹ', 'ಗ್ರಹಗತಿ', 'ಕರ್ಮಫಲ', ಇವು ನಾವು ಯಾವುದೇ ಕಾರ್ಯದಲ್ಲಿ ಸೋತಾಗ ಹೇಳುವ ಮಾತುಗಳು. ತಾತ್ವಿಕ ದೃಷ್ಟಿಯಿಂದ ಅವುಗಳಿಗೆ ಏನೇ ಅರ್ಥವಿರಲಿ, ನಮ್ಮ ಬದುಕನ್ನು ಉನ್ನತವಾಗಿಸಲು ನಾವು ಹೋರಾಡಲೇಬೇಕು. ಸಾಹಸದಿಂದ ಮುನ್ನುಗ್ಗಲೇಬೇಕು. ಸ್ವಪ್ರಯತ್ನದಲ್ಲಿ ವಿಶ್ವಾಸ ವಿಟ್ಟು ಶ್ರದ್ಧೆಯಿಂದ ದುಡಿಯಲೇಬೇಕು. 'ಆರರವರೆಗೆ ಮನುಷ್ಯನ ಪ್ರಯತ್ನ, ಏಳನೆಯದು ದೈವಕೃಪೆ' ಎನ್ನುವ ಮಾತಿದೆ. ಸಾಧನೆಯಿಲ್ಲದೆ, ಉತ್ಸಾಹವಿಲ್ಲದೆ, ನಿರಂತರ ಪರಿಶ್ರಮವಿಲ್ಲದೆ ಯಾರಾದರೂ ಪ್ರಪಂಚದಲ್ಲಿ ಉನ್ನತಿ ಹೊಂದಿದ್ದಾರೆಯೇ? 


ವಿಧಿ ಅಥವಾ ಅದೃಷ್ಟವನ್ನೇ ಕಾಯುತ್ತ ಸೋಮಾರಿಯಾಗಿ ಕಾಲ ಕಳೆದರೆ ಯಾವುದನ್ನಾದರೂ ಯಶಸ್ವಿಯಾಗಿ ನೆರವೇರಿಸಲು ಆಗುವುದೇ? ಯಾವ ಕೆಲಸವೂ ಸಾಧ್ಯವಿಲ್ಲ. ಅಂಥ ಮನೋಭಾವನೆ ಮನುಷ್ಯನನ್ನು ಹೇಡಿಯನ್ನಾಗಿ ಮಾಡುವುದು, ತಾಮಸ ಪ್ರವೃತ್ತಿಯ ದಾಸನನ್ನಾಗಿ ಮಾಡುವುದು. ಜನರು ತಮ್ಮ ದುರ್ಬಲತೆಯಿಂದ ಅನೇಕ ತಪ್ಪುಗಳನ್ನೆಸಗುವರು. ಆದರೆ ದೋಷವನ್ನು ವಿಧಿಯ ಮೇಲೆ, ಅದೃಷ್ಟದ ಮೇಲೆ, ಗ್ರಹ ನಕ್ಷತ್ರಗಳ ಮೇಲೆ ಆರೋಪಿಸುತ್ತಾರೆ. ಅಂಥವನೊಬ್ಬ ಅಜಾಗರೂಕತೆಯಿಂದ ಕಾಲುಜಾರಿ ಬಿದ್ದು ನೆಲವನ್ನು ದೂರಿದನಂತೆ, ವಿಧಿಯನ್ನು ಹಳಿದನಂತೆ!


 ಗುರಿಯನ್ನು ಸೇರುವುದಕ್ಕೆ ತಡೆಗಳನ್ನೊಡ್ಡುವ ವಿಧಿ ಎಂಬುದು ಇದ್ದರೆ ಅದನ್ನು ನಮ್ಮ ಸ್ವಂತ ಪರಿಶ್ರಮದ ಮೂಲಕ, ಪ್ರತಿಯೊಬ್ಬನಲ್ಲಿಯೂ ಹುದುಗಿರುವ ಅಂತಶ್ಯಕ್ತಿಯನ್ನು ಜಾಗೃತಗೊಳಿಸುವುದರಿಂದ ಜಯಿಸಬಹುದು. ವಿಧಿಯೇ ಸರ್ವಶಕ್ತಿಯುಳ್ಳದ್ದಾಗಿದ್ದರೆ ನ್ಯಾಯಾನ್ಯಾಯಗಳು, ಸುಗುಣ ದುರ್ಗುಣಗಳು, ಆತ್ಮಶಕ್ತಿ -ಇವುಗಳ ಮಾತೇ ಇರುತ್ತಿರಲಿಲ್ಲ. ಮನುಷ್ಯರು ಕಲ್ಲು ಕೊರಡುಗಳಲ್ಲ. 'ನಾನು ಆ ರೀತಿ ಮಾಡುತ್ತಿರುವುದಕ್ಕೆ ವಿಧಿಯೇ ಕಾರಣ, ನನ್ನ ಕೆಲಸಗಳಿಗೆ ನಾನು ಜವಾಬ್ದಾರನಲ್ಲ, ನಾನು ಅಸಹಾಯಕನಾಗಿ ಅದೃಷ್ಟದಿಂದ ಮುಂದೂಡಲ್ಪಡುತ್ತಿದ್ದೇನೆ' ಎನ್ನುವ ಭಾವನೆಯಿಂದ ಯಾವ ಮನುಷ್ಯನಿಗೂ ಏಳಿಗೆ ಸಾಧ್ಯವಿಲ್ಲ. ತಾನು ದುರ್ಬಲನೆಂದೂ, ಅಗೋಚರವಾದ ಅದೃಷ್ಟದ ಕರುಣೆಯಲ್ಲಿ ತಾನಿರುವೆನೆಂದೂ ತಿಳಿಯುವುದು ಮನುಷ್ಯನ ಅಜ್ಞಾನ ಮತ್ತು ಅಧೋಗತಿಯಲ್ಲದೆ ಬೇರಲ್ಲ.


 ಯಾರು ದೇವರಲ್ಲಿ ಶರಣಾಗಿ ಪೂರ್ಣ ಮನಸ್ಸಿನಿಂದ ಬೇಡಿ ಬಾಳಲು ಶಕ್ತನೋ, ಅಂಥವನು ಮಾತ್ರ 'ನಾನು ಯಂತ್ರ, ದೇವರು ಈ ಯಂತ್ರದ ಚಾಲಕ' ಎಂದು ಹೇಳಬಲ್ಲ. ಅವನು ಕನಸು ಮನಸಿನಲ್ಲಿಯೂ ತಪ್ಪು ಹೆಜ್ಜೆ ಇಡಲಾರ. ಯಾರಿಗೂ ಕೆಡಕು ಮಾಡಲಾರ. ಸದಾ ಸರ್ವರ ಶುಭಾಕಾಂಕ್ಷಿ ಆತ. ನಿಸ್ವಾರ್ಥತೆಯ ತವರಾಗಿ, ಪರರ ಒಳಿತಿಗಾಗಿ ಪ್ರಾರ್ಥಿಸುವ ಮಹಿಮ ಆತ. 


 ಮುಂದುವರಿಯುವುದು...

Comments

Popular posts from this blog

Why is the Mona Lisa So Famous?

top 10 free computer automation software