ಆತ್ಮ ವಿಮರ್ಶೆಯ ಅಭ್ಯಾಸ - ಗ್ರಂಥ: ಬದುಕಲು ಕಲಿಯಿರಿ. part 44;
ಗ್ರಂಥ: ಬದುಕಲು ಕಲಿಯಿರಿ.
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ 44;
ಆತ್ಮ ವಿಮರ್ಶೆಯ ಅಭ್ಯಾಸ
ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಂಬಲ ನಮಗಿದ್ದರೆ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದಿದ್ದರೆ, ಸಿಂಹಾವಲೋಕನದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂಬುದು ಅನುಭವಿಗಳ ಆದೇಶ, ಅರಣ್ಯದಲ್ಲಿ ಸಂಚರಿಸುವ ಸಿಂಹ ಒಮ್ಮೊಮ್ಮೆ ತನ್ನ ಮುಖ ತಿರುಗಿಸಿ ನಡೆದು ಬಂದ ದಾರಿಯನ್ನು ಅವಲೋಕಿಸುತ್ತದೆ ಎನ್ನುತ್ತಾರೆ. ಇದನ್ನು ಸಿಂಹಾವಲೋಕನ ಎನ್ನುತ್ತಾರಷ್ಟೆ. ದಿನದ ಚಟುವಟಿಕೆಗಳನ್ನೂ ಸಿಂಹಾವಲೋಕನ ಕ್ರಮದಿಂದ ಪರಿಶೀಲಿಸಬೇಕು. 'ಮನವ ಶೋಧಿಸಬೇಕು ನಿಚ್ಚ, ಅನುದಿನ ಮಾಡುವ ಪಾಪಪುಣ್ಯದ ವೆಚ್ಚ' ಎನ್ನುವ ದಾಸವಾಣಿಯಲ್ಲೂ ಆ ಅಭ್ಯಾಸದ ಆವಶ್ಯಕತೆ ಸೂಚಿತವಾಗಿದೆ. ದಿನದ ಕೊನೆಯ ಭಾಗದಲ್ಲಿ ನಿದ್ರಿಸುವ ಮೊದಲು 'ನನ್ನ ಪಾಲಿಗೆ ಬಂದ ಆಯುಸ್ಸಿನಲ್ಲಿ ಈ ಒಂದು ದಿನವನ್ನು ಹೇಗೆ ಕಳೆದೆ? ನನಗೆ ಸಿಕ್ಕಿದ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಂಡೆ? ಎಲ್ಲಿ ತಪ್ಪುಗಳಾದವು? ಕಾರಣಗಳೇನು ? ನಾಳಿನ ಅಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬಹುದು? ಈ ಹೊತ್ತು ಮಾಡಬೇಕಾಗಿದ್ದ ಕೆಲಸಗಳನ್ನು ಹೊರಗಿನ ಒತ್ತಾಯ ಒತ್ತಡಗಳಿಂದ ಗೊಣಗುತ್ತ ಮಾಡಿದೆನೆ? ಸ್ವಂತ ಯೋಚನೆ ಯೋಜನೆಗಳನ್ನನುಸರಿಸುತ್ತ ಉತ್ಸಾಹದಿಂದ ಮಾಡಿದೆನೆ? ಇನ್ನೂ ಚೆನ್ನಾಗಿ ಮಾಡಬಹುದಿತ್ತೇ? ಸ್ನೇಹಿತರೊಡನೆ ಬಂಧುಬಾಂಧವರೊಡನೆ ಮತ್ತು ನೆರೆಹೊರೆಯವರೊಂದಿಗೆ ಹೇಗೆ ವರ್ತಿಸಿದೆ?'- ಇವೇ ಮೊದಲಾದ ಪ್ರಶ್ನೆಗಳನ್ನು ಕೇಳುತ್ತ ಪರದೆಯ ಮೇಲಣ ಚಿತ್ರವನ್ನು ವೀಕ್ಷಿಸುವಂತೆ ನಿರ್ಲಿಪ್ತರಾಗಿ ನಡೆದ ಘಟನೆಗಳನ್ನು ನೋಡಿ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಕನ್ನಡಿಯಲ್ಲಿ ನಮ್ಮ ಮುಖವನ್ನು ಕಂಡು ಸರಿಪಡಿಸಿಕೊಂಡಂತೆ ಈ ಆತ್ಮವಿಮರ್ಶೆಯ ವಿಧಾನದಿಂದ ನಮಗೂ, ಇತರರಿಗೂ ಸಹ್ಯವಲ್ಲದ ಗುಣಗಳನ್ನು ಬಿಟ್ಟುಬಿಡಲು ಸಾಧ್ಯ, ಉತ್ತಮ ಗುಣಗಳನ್ನು ಆರ್ಜಿಸಲು ಸಾಧ್ಯ ಎಂಬುದನ್ನು ಬೆಂಜಮಿನ್ ಫ್ರಾಂಕ್ಲಿನ್ ಸ್ವಾನುಭವದಿಂದ ಸಾರಿದ್ದಾನೆ.
_ಅಭ್ಯಾಸ ನಿರ್ಮಾಣದಲ್ಲಿ ಮೊದಲು ಜಗಲಿ ಹಾರಿ ಆಮೇಲೆ ಗಗನ ಹಾರಲು ಯತ್ನಿಸಬೇಕು ._ ಪ್ರಥಮದಲ್ಲೇ ಹೊರಲಾರದ ಹೊರೆಯನ್ನು ಹೊತ್ತವನ ಪಾಡಾದರೆ ಮುಂದಿನ ಪ್ರಯತ್ನದಲ್ಲಿ ಉತ್ಸಾಹಹೀನನಾಗುವ ಸಂಭವವಿದೆ. ಪ್ರಥಮ ಯತ್ನದಲ್ಲಿ ಉಂಟಾದ ಯಶಸ್ಸು ಮುಂದಿನ ಪ್ರಯತ್ನದ ಪ್ರೇರಕಶಕ್ತಿಯಾಗುತ್ತದೆ. ಆದುದರಿಂದ ಮೊದಮೊದಲು ಸುಲಭವಾದ, ಅಲ್ಪ ಈ ಸಮಯ ಬೇಕಾಗುವ ಸ್ವಲ್ಪ ಶ್ರಮದಿಂದ ಸಾಧ್ಯವಾಗುವ ಅಭ್ಯಾಸಗಳನ್ನು ನಿಷ್ಠೆಯಿಂದ ಸಾಧಿಸಬೇಕು.
'ಯಾರ ಬದುಕಿನಲ್ಲಿ ಯಾವ ನಿರ್ದಿಷ್ಟ ಅಭ್ಯಾಸಗಳೂ ಇಲ್ಲದೇ ಎಲ್ಲವೂ ಅನಿಶ್ಚಿತ ಹಾಗೂ ಅಸ್ತವ್ಯಸ್ತವೊ, ಬೆಳಿಗ್ಗೆ ಹಾಸಿಗೆ ಬಿಟ್ಟೇಳುವುದು, ರಾತ್ರಿ ವಿಶ್ರಾಂತಿ ಪಡೆಯುವುದು, ಆಹಾರ ಸೇವನೆ, ಒಂದು ಸಿಗರೇಟು ಹೊತ್ತಿಸುವುದು, ಒಂದು ಲೋಟ ನೀರು ಕುಡಿಯುವುದೇ ಮೊದಲಾದ ಅತಿ ಸಣ್ಣ ಪುಟ್ಟ ಕೆಲಸಗಳನ್ನು ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ನಡೆಯಿಸಿ ಮಾಡಬೇಕಾಗುವುದೊ, ಅವನಂಥ ದುಃಖಿ ಮತ್ತೊಬ್ಬನಿಲ್ಲ. ಅವನ ಅರ್ಧಸಮಯ ಏನು ಮಾಡ ಬಹುದೆಂದು ನಿರ್ಣಯಿಸುವುದರಲ್ಲಿ, ಇಲ್ಲವಾದರೆ ಸುಮ್ಮನೆ ಕಾಲಹರಣವಾಯಿತೆಂದು ಪರಿತಪಿಸುವುದರಲ್ಲಿ ವ್ಯಯವಾಗುತ್ತದೆ. ಅವನ ಜಾಗ್ರತ ಪ್ರಜ್ಞೆಯಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳ ಬಗೆಗೆ ಮಾಡಬೇಕೆ, ಬೇಡವೇ? ಎಂಬಂಥ ಸಂದೇಹಗಳೆ ಬರಬಾರದು. ಅವನಿಗರಿವಿಲ್ಲದೆಯೇ ಹುಟ್ಟು ಗುಣಗಳ ಪ್ರಕ್ರಿಯೆಗಳಂತೆ ದಿನದ ಕರ್ತವ್ಯಗಳನ್ನು ಸಹಜವಾಗಿ, ಒದ್ದಾಟವಿಲ್ಲದೆ ಮಾಡುವಂತಾಗಬೇಕು. ಹೀಗೆ ದಿನದ ಕರ್ತವ್ಯ ನಿರ್ವಹಣೆ ಸಹಜಗುಣವಾಗದವರು ಇಂದಿಂದೇ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಲಿ' ಎಂದು ಮನೋವಿಜ್ಞಾನಿ ಕರೆಕೊಡುತ್ತಾನೆ.
ಮುಂದುವರಿಯುವುದು
Comments