ಅಭ್ಯಾಸದ ಹಿನ್ನೆಲೆ ಗ್ರಂಥ: ಬದುಕಲು ಕಲಿಯಿರಿ part : 43
ಗ್ರಂಥ: ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 43
ಅಭ್ಯಾಸದ ಹಿನ್ನೆಲೆ
ಒಂದು ಹೊಸ ಅಭ್ಯಾಸವನ್ನು ಕಲಿತು ರೂಢಿಸಿ ದೃಢಪಡಿಸಿಕೊಂಡು ಅದನ್ನು ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಲು ಅತ್ಯಂತ ದೃಢಸಂಕಲ್ಪದಿಂದ ಪ್ರಾರಂಭಿಸಬೇಕು. ಚಂಚಲತೆ, ಅನಿಶ್ಚಿತತೆ ಇವು ಯಾವ ಶಿಸ್ತಿಗೂ ಒಳಪಡದ ದುರ್ಬಲ ಮನಸ್ಸಿನ ಸ್ಥಿತಿ. ಈ ತೆರನಾದ ಮನಸ್ಸಿನ ಶಕ್ತಿ ಏಕಕಾಲದಲ್ಲಿ ಹಲವು ಕಡೆ ಹರಿದು ವ್ಯರ್ಥವಾಗಿ ವ್ಯಯವಾಗುತ್ತದೆ. ಇಂಥ ವ್ಯಕ್ತಿಗಳಿಂದ ಯಾವ ಉತ್ತಮ ಕಾರ್ಯವೂ ಸಾಧ್ಯವಾಗದು. ಸಣ್ಣ ಕೆಲಸವನ್ನಾದರೂ ನಿಯಮ ಪೂರ್ವಕವಾಗಿ ಮನಗೊಟ್ಟು ಮಾಡುವುದರಿಂದ ಕೆಲಸ ಮಾಡುವ ಶಕ್ತಿ ಸಂಚಯವಾಗುವುದು.
ಪರಿಣತ ಸೈಕಲ್ ಸವಾರನನ್ನು ಪರಿಶೀಲಿಸಿ. ಸೈಕಲ್ ಸವಾರಿ ಮಾಡುತ್ತಿರುವಾಗಲೇ ಸ್ನೇಹಿತನ
ಹತ್ತಿರ ಮಾತನಾಡುತ್ತ ಸುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತ, ರಸ್ತೆಯಲ್ಲಿ ಎದುರುಗಡೆ ಬರುತ್ತಿರುವ ವಾಹನ ಮತ್ತು ಜನರ ಮಧ್ಯೆ, ಭಯ ಉದ್ವೇಗ ಗೊಂದಲಗಳಿಲ್ಲದೆ ದಾರಿ ಮಾಡಿಕೊಂಡು ಮುನ್ನುಗ್ಗುತ್ತಾನೆ. ಎಲ್ಲಿ ಬ್ರೇಕ್ ಹಾಕಬೇಕೋ ಅಲ್ಲಿ ತಾನೇ ತಾನಾಗಿ, ಎಂದರೆ ಗಮನವಿತ್ತು ಯೋಚಿಸದೇ ಸರಿಯಾಗಿ ಬ್ರೇಕ್ ಹಾಕಿಬಿಡುತ್ತಾನೆ. ಒಂದು ಅಭ್ಯಾಸದಿಂದ ಬಹಳಷ್ಟು ಶಕ್ತಿ ಉಳಿತಾಯವಾಗುತ್ತದೆ. ರೂಢಮೂಲವಾದ ಆ ಒಂದು ಅಭ್ಯಾಸದೊಂದಿಗೆ ಇನ್ನೊಂದು ಪುಟ್ಟ ರಚನಾತ್ಮಕ ಅಭ್ಯಾಸವನ್ನು ಪ್ರಾರಂಭಿಸಬಹುದು. ನಿತ್ಯವೂ ಸ್ನಾನ ಮಾಡುತ್ತಿರುವಾಗ ಗಣಿತದ ಒಂದು ಸೂತ್ರವನ್ನೊ, ಕವಿತೆಯ ತುಣಕನ್ನೊ, ಶ್ಲೋಕವನ್ನೂ ಕಂಠಪಾಠ ಮಾಡಬಹುದು. ಸ್ನಾನವು ಯಾವ ತಡೆ ಇಲ್ಲದೇ ನಡೆದಿರುತ್ತದೆ. ಜೊತೆಗೆ ಉತ್ತಮ ವಿಷಯ ಸಂಗ್ರಹವೂ ಆಗುತ್ತಿರುತ್ತದೆ.
ಅಭ್ಯಾಸ ಸಿದ್ಧಿಗಾಗಿ ನಿಷ್ಠೆಯಿಂದ ನಿರಂತರ ಸಾಧನೆ ಮಾಡಲು ಪ್ರೇರಕವಾಗುವ ಪ್ರತಿಯೊಂದು ಅವಕಾಶವನ್ನೂ ಎಚ್ಚರಿಕೆಯಿಂದ ಗಮನಿಸಿ ಉಪಯೋಗಿಸಿಕೊಳ್ಳಬೇಕು. ಹಳೆಯ ಜಾಡಿನಲ್ಲಿ ನಿಮ್ಮನ್ನು ತಿರುಗಿ ಎಳೆಯುವಂಥ ಅವಕಾಶಗಳಿಗೆ ವಿರೋಧವಾದ ದೇಶಕಾಲ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಕು. ಒಟ್ಟಿನಲ್ಲಿ ನಿಮ್ಮ ಪ್ರತಿಜ್ಞೆ ಅಥವಾ ಸಂಕಲ್ಪವನ್ನು ಕಾಯ್ದುಕೊಳ್ಳಲು ಪ್ರತಿಯೊಂದು ಸಂದರ್ಭವನ್ನೂ ಉಪಯೋಗಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ಪ್ರತಿಜ್ಞಾ ಭಂಗ ಮಾಡುವ ಚಂಚಲತೆ, ಚಪಲತೆಗಳಿಂದ ಪಾರಾಗಬಹುದು.
ಹೊಸ ಅಭ್ಯಾಸವು ಮನಸ್ಸು ನರವ್ಯೂಹಗಳಲ್ಲಿ ಆಳವಾಗಿ ಬೇರು ಬಿಡುವವರೆಗೂ ಯೋಜಿಸಿಕೊಂಡ ಸಾಧನೆಯನ್ನು ಒಂದೇ ಒಂದು ದಿನದ ಮಟ್ಟಿಗೂ ಬಿಡಬಾರದು. ಒಂದು ದಿನ ಕಾರಣಾಂತರಗಳಿಂದ ಅಭ್ಯಾಸ ತಪ್ಪಿದರೆ, ಮರುದಿನ ಹೇಗಾದರೂ ನಿಯಮಗಳಿಂದ ಜಾರಿ ಕೊಳ್ಳಲು ಮನಸ್ಸು ಕಾರಣ ಹುಡುಕುವುದು.
ವಿಖ್ಯಾತ ಬ್ಯಾಡ್‌ಮಿಂಟನ್ ಆಟಗಾರ ಶ್ರೀ ಪ್ರಕಾಶ್ ಪಡುಕೋಣೆ ಅವರ ನಿಷ್ಠಾಯುಕ್ತ ಅಭ್ಯಾಸದ ಅದ್ಭುತ ಸಾಹಸವನ್ನು ಅವರು ಗಳಿಸಿದ ಪ್ರಶಸ್ತಿ ಯಶಸ್ಸುಗಳ ಕತೆಯನ್ನು ಕೇಳಿ, ನಗರದ ಹಲವು ಭಾಗಗಳಲ್ಲಿ ಯುವಕರು ಬ್ಯಾಡ್‌ಮಿಂಟನ್ ಕ್ಲಬ್ಬನ್ನು ಸ್ಥಾಪಿಸಿದರು. ನಿತ್ಯವೂ ನಿಷ್ಠೆಯಿಂದ ಅಭ್ಯಾಸ ಮಾಡಲು ಅವರು ಸಂಕಲ್ಪಿಸಿದರು. ಉತ್ಸಾಹದಿಂದಲೇ ದಿನವೂ ಕ್ಲಬ್ಬಿಗೆ ಹೋಗುತ್ತಿದ್ದರು. ಏಳೆಂಟು ದಿನಗಳ ಅಭ್ಯಾಸದ ಬಳಿಕ ನಾನಾ ಕಾರಣಗಳಿಂದ ಒಬ್ಬೊಬ್ಬರೇ ಗೈರುಹಾಜರಾಗಲು ತೊಡಗಿದರು. ಒಂದು ತಿಂಗಳೊಳಗೆ ಅವರ ಉತ್ಸಾಹದೊಂದಿಗೆ ಕ್ಲಬ್ಬು ಮಾಯವಾಯಿತು! ಶ್ರೀ ಪಡುಕೋಣೆ ಎಡೆಬಿಡದೆ ಹದಿನೇಳು ವರ್ಷಗಳ ಕಾಲ ನಿತ್ಯ ನಿರಂತರ ನಿಷ್ಠೆಯಿಂದ ಅಭ್ಯಾಸ ನಡೆಸಿದ್ದರೆ, ಆರಂಭಶೂರರಾದ ಈ ಯುವಕರು ಹದಿನೇಳು ದಿನಗಳ ಕಾಲವಾದರೂ ಅಭ್ಯಾಸವನ್ನು ಮುಂದುವರಿಸಲಾರದಾದರು .
ಬರಿಯ ಸತ್ ಸಂಕಲ್ಪ ಕ್ಷಣಿಕ ಭಾವೋದ್ವೇಗ ಉತ್ಸಾಹಗಳೇ ಕಾರ್ಯ ಸಿದ್ಧಿಗೆ ಸಾಕಾಗವು. ನಿಯಮಪಾಲನೆಯಿಂದ ತಪ್ಪಿಸಿಕೊಳ್ಳಲು ಮನಸ್ಸು ಸದಾ ಒಂದಲ್ಲ ಒಂದು ಉಪಾಯವನ್ನು ಹುಡುಕುವುದು, ನಿಯಮಕ್ಕೆ ಬಗ್ಗುವಂತೆ, ಒಗ್ಗುವಂತೆ ದಿನವು ತಪ್ಪದೇ ತಾಳ್ಮೆಯಿಂದ ಯತ್ನಿಸಬೇಕಲ್ಲವೇ?
ಬೇಕಲ್ಲವೆ?
ಮುಂದುವರಿಯುವುದು..
Comments