ಅಸಾಧ್ಯವೂ ಸಾಧ್ಯ ಗ್ರಂಥ : ಬದುಕಲು ಕಲಿಯಿರಿ part : 42
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 42
ಅಸಾಧ್ಯವೂ ಸಾಧ್ಯ
ಸುಮಾರು ಐವತ್ತು ವರ್ಷಗಳ ಹಿಂದೆ ಆಂಗ್ಲ ಮಾಸಪತ್ರಿಕೆಯೊಂದರಲ್ಲಿ ಜಪಾನ್ ಪ್ರವಾಸದಿಂದ ಹಿಂದಿರುಗಿದ ಭಾರತೀಯರೊಬ್ಬರು 'ಜಪಾನ್ ಮಹಾರಾಷ್ಟ್ರವಾಗಲು ಕಾರಣವೇನು?' ಎಂಬ ಲೇಖನವನ್ನು ಪ್ರಕಟಿಸಿದರು. ಅವರ ಹಲವು ಅನುಭವಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಓದುಗರ ಅವಗಾಹನೆಗೆ ತರುತ್ತಲಿದ್ದೇನೆ. ಅರ್ಧಶತಮಾನದ ಹಿಂದೆಯೇ ಒಂದು ಜನಾಂಗ ಸಾಮಾಜಿಕವಾಗಿ ಶಿಸ್ತು, ಶಾಂತಿ ಸಹಕಾರ ಭಾವನೆಯನ್ನು ಕಾರ್ಯರೂಪಕ್ಕೆ ತಂದ ಒಂದು ಘಟನೆ ಅದು:
'ಜಪಾನಿನ ಒಂದು ಹಳ್ಳಿಯಲ್ಲಿ ಎರಡು ದಿನ ತಂಗಿದ್ದೆ. ಅಲ್ಲೊಂದು ಬಿಸಿ ನೀರಿನ ಊಟೆ (ಬುಗ್ಗೆ) ಇತ್ತು. ಅಲ್ಲಿಗೆ ಒಂದು ಜಪಾನೀ ಪ್ರವಾಸಿಗಳ ಗುಂಪು ಬಂದಿತ್ತು. ಸುಮಾರು ಐನೂರು ಮಂದಿ ವಯಸ್ಕರೂ, ನೂರೈವತ್ತು ಮಂದಿ ಮಕ್ಕಳೂ ಆ ತಂಡದಲ್ಲಿದ್ದರು. ಅಷ್ಟು ಮಂದಿ ಅಲ್ಲಿ ಸೇರಿದ್ದಾರೆಂಬುದನ್ನು ಪ್ರತ್ಯಕ್ಷ ನೋಡದಿದ್ದರೆ ಊಹಿಸುವಂತೆಯೂ ಇರಲಿಲ್ಲ. ಎಲ್ಲರೂ ಅಷ್ಟೊಂದು ಮೌನವಾಗಿದ್ದುಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು! ಅಲ್ಲಿ ಒಂದು ಸಭಾಂಗಣದಲ್ಲಿ ಸಹಸ್ರಾರು ಮಂದಿ ಕಿಕ್ಕಿರಿದು ತುಂಬಿದ್ದರೂ ಪೂರ್ಣ ಮೌನ ನೆಲಸಿರುತ್ತದೆ!'
ನಡತೆಯಲ್ಲಿ ನಯ ಗಾಂಭೀರ್ಯ, ದುಡಿಮೆಯಲ್ಲಿ ಆಸಕ್ತಿ ಮತ್ತು ಏಕಾಗ್ರತೆ, ಪ್ರಾಮಾಣಿಕತೆ, ಸರಳ ಜೀವನವೇ ಮೊದಲಾದ ಗುಣಗಳನ್ನು ಗುಂಪಿನಲ್ಲೂ ಕಾಣಬಹುದೆಂಬುದನ್ನು ಲೇಖಕರು ತಮ್ಮ ಅನುಭವಗಳ ಆಧಾರದಿಂದ ಹೇಳಿದ್ದಾರೆ. ಜಪಾನೀಯರು ಬೆಳೆಸಿಕೊಂಡ ಕೃತಜ್ಞತಾ ಬುದ್ದಿಯನ್ನೇ ಕುರಿತ ಹಲವು ನಿದರ್ಶನಗಳನ್ನು ನೀಡಿದ್ದಾರೆ.
ಗೆಣಸನ್ನು ಮೊದಲು ಒಂದು ಹಳ್ಳಿಗೆ ತಂದು ಜನರಿಗೆ ಪರಿಚಯ ಮಾಡಿಕೊಟ್ಟ ಓರ್ವ ಜಪಾನ್ ಪ್ರಜೆಯ ಸವಿನೆನಪಿಗಾಗಿ ಒಂದು ಸ್ಮೃತಿ ಸ್ತಂಭವನ್ನು ನಿಲ್ಲಿಸಿದ್ದಾರೆ. ಒಂದು ಒಳ್ಳೆಯ ಮರವನ್ನು ನೆಟ್ಟ ವ್ಯಕ್ತಿಗೆ, ಸಹಕಾರ ಸಂಘವನ್ನು ಸ್ಥಾಪಿಸಿ ಜನರಿಗೆ ಉಪಕಾರ ಮಾಡಿದವನೊಬ್ಬನಿಗೆ, ರಷ್ಯಾ ಚೈನಾ ಯುದ್ಧಗಳಲ್ಲಿ ಮಡಿದ ಸೈನಿಕರಿಗೆ , ಕುಸ್ತಿಯ ಪಂದ್ಯದಲ್ಲಿ ಗೆದ್ದ ಯುವಕನಿಗೆ ಅವರವರ ಗ್ರಾಮಗಳಲ್ಲಿ ಒಂದೊಂದು ಸ್ಮೃತಿ ಸಂಕೇತಗಳಿವೆ. ಆ ಸ್ಮೃತಿಸಂಕೇತಗಳು ಸರಳವಾಗಿದ್ದರೂ, ಸಮಾಜದ ಅಭ್ಯುದಯ ಅಭಿವೃದ್ಧಿಗೆ ಅತಿ ಪುಟ್ಟ ಉಪಕಾರ ಮಾಡಿದವರನ್ನು ನೆನೆಯುವ ಜನರ ಸೌಜನ್ಯವನ್ನು ಸೂಚಿಸುವ ಸಾಕ್ಷಿಗಳಾಗಿವೆ. ಎಳೆಯರು ಒಳ್ಳೆಯದನ್ನು ಕಂಡು ಗುರುತಿಸಿ ಕೃತಜ್ಞತೆಯಿಂದ ಅದನ್ನು ಸ್ಮರಿಸಿ ಗೌರವಿಸುವ ಸಂಸ್ಕಾರವನ್ನು ರೂಢಿಸಿಕೊಳ್ಳಲು ಪ್ರೇರಕವಾಗುವ ಆದರ್ಶ ಅದು.'
ಕೆಲವು ವರುಷಗಳ ಹಿಂದೆ ಕನ್ನಡದಲ್ಲಿ ಒಂದು ಪುಸ್ತಕ ಪ್ರಕಟವಾಯಿತು. ಅದರ ಹೆಸರು 'ಎಕ್ಸ್‌ಪೊ 70'. ಪ್ರಕಟಿಸಿದವರು ಬೆಂಗಳೂರಿನ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರದವರು. ಅದರಲ್ಲಿ ಯುವಜನ ನಿಯೋಗದ ಸದಸ್ಯರ ಪ್ರವಾಸಾನುಭವವನ್ನು ವಿವರಿಸುವ ಇಪ್ಪತ್ತು ಪ್ರಬಂಧಗಳಿವೆ. ಪ್ರತಿಯೊಬ್ಬರೂ ತಾವು ಜಪಾನಿನಲ್ಲಿ ಕಂಡ ಜನಜೀವನ, ಆ ಜನಾಂಗದ ಸಾಧನೆ, ಸಿದ್ದಿಗಳನ್ನು ಹೃದಯಂಗಮವಾಗಿ ತಿಳಿಸಿದ್ದಾರೆ. ನಮ್ಮ ನಾಡಿನ ತರುಣರೆಲ್ಲರೂ ಓದ ಬೇಕಾದ ಪುಸ್ತಕ ಅದು . ಅಲ್ಲಿ ಕಾಣಸಿಗುವ ಒಂದು ಘಟನೆಯ ವಿವರಣೆಯನ್ನು ಓದಿ:
'ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಮೂವತ್ತೇಳು ಲಕ್ಷ ಪುಸ್ತಕಗಳಿವೆ. ಅನೇಕ ವರ್ಷ ಗಳಿಂದ ಅಲ್ಲಿ ಪುಸ್ತಕ ಕಳುವಾಗಿಲ್ಲ. ಪುಸ್ತಕವನ್ನು ದುರುಪಯೋಗ ಮಾಡುವ ವಿದ್ಯಾರ್ಥಿಗೆ ಶಿಕ್ಷೆ ಏನು ಎಂದು ಗ್ರಂಥಪಾಲರನ್ನು ಕೇಳಿದಾಗ ಆತ ತನಗೆ ತಿಳಿಯದು ಎಂದು ಹೇಳಿ ನಿಬಂಧನೆಗಳನ್ನು ನೋಡ ಹೋದ. ಅಂತಹ ಪ್ರಸಂಗವೇ ಆತನ ಅನುಭವದಲ್ಲಿ ಬಂದಿಲ್ಲ. ಆತನಿಗೆ ಹೇಗೆ ತಿಳಿದಿರಬೇಕು!'
ಒಂದು ಜನಾಂಗ ತನ್ನ ತರುಣ ಪೀಳಿಗೆಯಲ್ಲಿ ಎಂಥ ಉನ್ನತಮಟ್ಟದ ಸಂಸ್ಕಾರಗಳನ್ನು ನಿರ್ಮಿಸಬಲ್ಲದು! ಬಾಲ್ಯದಿಂದಲೇ ತರಬೇತನ್ನು ನೀಡಿ ಎಂಥ ಸುಯೋಗ್ಯ ಪ್ರಜೆಗಳನ್ನಾಗಿಸಬಲ್ಲದು! ಯೋಚಿಸಿ ನೋಡಿ.
'ಅಮೇರಿಕದ ಮಾಯಾಲೋಕವೆಂದು ಪ್ರಸಿದ್ಧವಾದ ಡಿಸ್ನಿ ಲ್ಯಾಂಡಿಗೆ ದಿನವೂ ಸುಮಾರು ನಲ್ವತ್ತು ಐವತ್ತು ಸಹಸ್ರ ಜನ ಸಂದರ್ಶಕರು ಬರುತ್ತಾರೆ. ರಜಾ ದಿನಗಳಲ್ಲಿ ಆ ಸಂಖ್ಯೆ ಒಂದು ಲಕ್ಷದವರೆಗೂ ಏರುತ್ತದೆ. ಆದರೆ ಅಲ್ಲೆಲ್ಲೂ ನೂಕು ನುಗ್ಗಲು ಇಲ್ಲ. ವ್ಯವಸ್ಥೆ ಎಷ್ಟು ಅಚ್ಚು ಕಟ್ಟಾಗಿರುವುದೆಂದರೆ ಕೆಲವು ಕಡೆ ಒಂದು ಫರ್ಲಾಂಗು ಕ್ಯೂನಲ್ಲಿ ನಿಂತಿದ್ದರೂ ತುಂಬ ಕಾಯುತಿದ್ದೇವೆ ಎಂಬ ಭಾವನೆ ಬರುತ್ತಿರಲಿಲ್ಲ. ಬಹುಬೇಗನೆ ತಮ್ಮ ಸರದಿ ಬರುತ್ತಿದೆ ಎನ್ನಿಸುತ್ತಿತ್ತು.' ಇತ್ತೀಚೆಗೆ ಅಮೇರಿಕದಿಂದ ಹಿಂದಿರುಗಿದ ಮಿತ್ರರು ಹೇಳಿದ ಮಾತಿದು.
ಮುಂದುವರಿಯುವುದು..
Comments