ಮಕ್ಕಳ ಮೇಲ್ಮೆಗೆ ಗ್ರಂಥ : ಬದುಕಲು ಕಲಿಯಿರಿ part : 41
ಗ್ರಂಥ : ಬದುಕಲು ಕಲಿಯಿರಿ
ಲೇಖಕರು: ಸ್ವಾಮಿ ಜಗದಾತ್ಮಾನಂದಜಿ
ಭಾಗ : 41
ಮಕ್ಕಳ ಮೇಲ್ಮೆಗೆ
ಈಗಿನ ದಿನಗಳಲ್ಲಿ ಎಷ್ಟೋ ಮಂದಿ ತಂದೆತಾಯಂದಿರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ವೆಚ್ಚ ಮಾಡಲು ಹಿಂಜರಿಯುವುದಿಲ್ಲ. ಮಕ್ಕಳ ಭವಿಷ್ಯ ಭವ್ಯವಾಗಬೇಕೆಂಬ ಅವರ ಕನಸು ಸಹಜವಾದುದೇ. ಆದರೆ ತಮ್ಮ ಮಕ್ಕಳು ಕಲಿಕೆಯ ಸಮಯದಲ್ಲಿ ಎಂಥ ಯೋಚನೆ ಭಾವನೆಗಳನ್ನು ಸಂಗ್ರಹಿಸುತ್ತಿದ್ದಾರೆ, ಎಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕುರಿತು ಅವರು ಜಾಗರೂಕರಾಗಿದ್ದಾರೆಯೇ? ಓದು ಬರಹ ಕಲಿತ ಮಕ್ಕಳು ಜೀವನ ಸಂಗ್ರಾಮವನ್ನು ಎದುರಿಸಲು ಸಹಾಯಕವಾಗುವ ವಿಚಾರಗಳಿಗಿಂತಲೂ ಮನುಷ್ಯರ ದೌರ್ಬಲ್ಯಗಳನ್ನು ರಂಜಕವಾಗಿ ತೋರಿಸುವ, ವರ್ಣಿಸುವ ಅಸಂಖ್ಯ ಚಲನಚಿತ್ರ ಮತ್ತು ಬರಹಗಳಿಂದ ಸಾಕಷ್ಟು ಪ್ರಭಾವಿತರಾಗುತ್ತಾರೆ. ಸಂಶೋಧಕ ವಿಜ್ಞಾನಿಗಳ, ಸಾಹಸೀ ಉದ್ಯಮಶೀಲ ವ್ಯಕ್ತಿಗಳ, ಸ್ವಾರ್ಥ ತ್ಯಾಗಿಗಳ, ಕರ್ಮವೀರರ, ದೇಶಪ್ರೇಮಿ ಸಮಾಜಸೇವಕರ, ದೈವವನ್ನು ನೆಚ್ಚಿ ಬದುಕಿದ ಸಾಧು ಸಂತರ ಜೀವನ ಸಂದೇಶಗಳನ್ನು ಅವರು ಓದುವುದೇ ಇಲ್ಲವೆಂದರೂ ಸಲ್ಲುವುದು. ಮನುಷ್ಯರ ಶೀಲ ಸಂವರ್ಧನೆಗೆ ಬೇಕಾಗುವ ಸಾಮಗ್ರಿಗಳನ್ನು ಬೆಳವಣಿಗೆಯ ಅತ್ಯುತ್ತಮ ಸಮಯದಲ್ಲಿ ಮಕ್ಕಳಿಗೆ ನೀಡಲಾಗದಿರುವುದು ಒಂದು ದೊಡ್ಡ ದೌರ್ಭಾಗ್ಯ ಮಾತ್ರವಲ್ಲ, ನಮ್ಮ ಶಿಕ್ಷಣತಜ್ಞರೆನ್ನಿಸಿಕೊಂಡವರ, ಹೆತ್ತವರ ಅಸಹಾಯಕತೆ ಅಥವಾ ದೂರದರ್ಶಿತ್ವದ ಅಭಾವಕ್ಕೆ ಹಿಡಿದ ಕನ್ನಡಿಯೂ ಹೌದು. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದಲ್ಲಿ ಯೋಚನೆ ಮತ್ತು ಒಳ್ಳೆಯ ಸಂಸ್ಕಾರಗಳನ್ನು ನಿರ್ಮಿಸುವ ಅಭ್ಯಾಸಗಳ ಪಾತ್ರದ ಮೌಲ್ಯ ಮಾಹಾತ್ಮಗಳನ್ನು ತಿಳಿದವರಿಗೆ ಮಾತ್ರ ಈ ಮಾತು ಅರ್ಥವಾದೀತು.
ಅಭ್ಯಾಸಗಳು ಮೊದಲಿಗೆ ಜೇಡನ ಬಲೆಯ ನೂಲಿನಂತೆ. ಆದರೆ ಬರಬರುತ್ತ ಕಬ್ಬಿಣದ ತಂತಿಗಳಂತೆ ನಮ್ಮನ್ನು ಬಲವಾಗಿ ಹಿಡಿದುಕೊಳ್ಳುತ್ತವೆ ಎನ್ನುವ ಗಾದೆ ಬಾಲ್ಯದಿಂದಲೇ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಆವಶ್ಯಕತೆಯನ್ನು ಸಾರುತ್ತದೆ. ಎಲ್ಲ ಅಭ್ಯಾಸಗಳಿಗಿಂತಲೂ ಅತ್ಯಂತ ಪ್ರಮುಖವಾದ ಅಭ್ಯಾಸ ಯಾವುದು? 'ಒಂದು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಲು ನಾವು ಬೆಳೆಸಿಕೊಳ್ಳಬೇಕಾದ ಎಚ್ಚರ ಅಥವಾ ಜಾಗರೂಕತೆಯ ಅಭ್ಯಾಸ'. ಒಳ್ಳೆಯತನದಲ್ಲಿ ವಿಶ್ವಾಸ, ಒಳ್ಳೆಯವನಾಗಬೇಕೆಂಬ ಸಂಕಲ್ಪಗಳೇ ನಮ್ಮನ್ನು ದೋಷಮುಕ್ತರನ್ನಾಗಿ ಮಾಡುವ ಶಕ್ತಿಯನ್ನು ನೀಡುವುದಿಲ್ಲ. ನಾವು ರೂಢಿಸಿಕೊಂಡ ಬೇಡದ ಅಭ್ಯಾಸಗಳನ್ನು ಮುರಿಯಬೇಕು. ಹೊಸ ಅಭ್ಯಾಸಗಳನ್ನು ನಮ್ಮದಾಗಿ ಮಾಡಿಕೊಳ್ಳಬೇಕು. ವ್ಯಕ್ತಿಯೊಬ್ಬ ಇಪ್ಪತ್ತರಿಂದ ಮೂವತ್ತು ವರ್ಷ ವಯಸ್ಸಿನೊಳಗೆ ಬುದ್ಧಿಶಕ್ತಿಯ ಬೆಳವಣಿಗೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಅಭ್ಯಾಸಗಳನ್ನು ಸಂಗ್ರಹ ಮಾಡಿರುತ್ತಾನೆ. ವೈಯಕ್ತಿಕ ಶುಚಿತ್ವದ ನಿಯಮ, ಮಾತು ಮತ್ತು ಉಚ್ಚಾರಣೆಯ ವಿಧಾನ, ಹಾವಭಾವ, ಅಂಗಚೇಷ್ಟೆ ನಡೆ -ಇವುಗಳನ್ನು ಇಪ್ಪತ್ತರೊಳಗೇ ಕಲಿತು ಬಿಡುತ್ತಾನೆ ಎನ್ನುತ್ತಾರೆ.
'ಕೆಲವೆ ದಿನಗಳಲ್ಲಿ ನಡೆದಾಡುವ ಅಭ್ಯಾಸದ ಮೂಟೆಗಳು ನಾವಾಗುತ್ತೇವೆ' ಎಂಬುದನ್ನು ಬದುಕಿಗೆ ರೂಪ ನೀಡಲು ಸಾಧ್ಯವಾಗುವ ಬಾಲ್ಯಕಾಲದಲ್ಲೇ ಚಿಕ್ಕವರು ತಿಳಿದುಕೊಂಡರೆ ಅವರು ತಮ್ಮ ನಡತೆಯ ಕಡೆಗೆ ಹೆಚ್ಚು ಗಮನವೀಯಬಲ್ಲರು. 'ಎಂದೆಂದೂ ಬದಲಿಸಲಾಗದ ಅದೃಷ್ಟವನ್ನು ನಾವು ನಿತ್ಯವೂ ಹೆಣೆಯುತ್ತಿರುತ್ತೇವೆ' ಎಂದು ಮನೋವಿಜ್ಞಾನಿ ಹೇಳುತ್ತಾನೆ. ಆದುದರಿಂದ ಅಕ್ಷರ ವಿದ್ಯೆಯ ಜೊತೆಗೆ ಬದುಕನ್ನು ಹಸನಾಗಿಸುವ ವಿವಿಧ ಸಂಸ್ಕಾರಗಳ ನಿರ್ಮಾಣದ ಕಡೆಗೂ ಹೆತ್ತವರೂ, ಶಿಕ್ಷಕರೂ ಎಷ್ಟೊಂದು ಗಮನವೀಯಬೇಕು!
ಆವಾಸಿಕ ( ರೆಸಿಡೆನ್ಸಿಯಲ್ ) ಶಿಕ್ಷಣ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯರೊಬ್ಬರು ತಮ್ಮ ಅನುಭವವನ್ನು ಹೀಗೆಂದು ಹೇಳಿದ್ದರು.....
ನಮ್ಮ ಆವಾಸಿಕ ಶಿಕ್ಷಣ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲವಿದ್ದು ಚೆನ್ನಾಗಿ ಓದಿ ಪಾಸು ಮಾಡಿ ಇದೀಗ ಒಳ್ಳೆಯ ಉದ್ಯೋಗ, ಸ್ಥಾನಮಾನ ಗಳಿಸಿದ ಹಳೆಯ ವಿದ್ಯಾರ್ಥಿಯನ್ನು ಪ್ರಶ್ನಿಸಿದೆ: 'ನೀನು ಬೇರೆ ಕಡೆ ಕಲಿಯಲು ಅನುಕೂಲವಿರದೆ ಇಲ್ಲಿ ಕಲಿಯಲು ಸಾಧ್ಯವಾದ ಒಂದು ವಿಶಿಷ್ಟ ಅಭ್ಯಾಸ ಅಥವಾ ನಡವಳಿಕೆ ಯಾವುದು?'
ಆತ ಉತ್ತರಿಸಿದ: 'ಸರ್, ನಿಮ್ಮ ಹತ್ತಿರ ಸತ್ಯ ಹೇಳುತ್ತೇನೆ. ನಾನು ಮೊದಲು ಮೂರು ನಾಲ್ಕು ದಿನಗಳಿಗೊಮ್ಮೆ ಸ್ನಾನಮಾಡುತ್ತಿದ್ದೆ. ಐದು ವರ್ಷಗಳು ಇಲ್ಲಿದ್ದು ದಿನನಿತ್ಯ ಸ್ನಾನದ ಅಭ್ಯಾಸವಾಗಿಬಿಟ್ಟಿದೆ. ಈಗ ಒಂದು ದಿನವೂ ಸ್ನಾನ ಬಿಡಲಾರೆ.'
ಸ್ನಾನ ಮಾಡುವುದು ಒಳಿತು ಎಂದು ತಿಳಿದ ಮಾತ್ರಕ್ಕೆ ದಿನನಿತ್ಯ ಸ್ನಾನ ಮಾಡುವ ಅಭ್ಯಾಸವಾಗಿ ಬಿಡುವುದಿಲ್ಲ. ದೀರ್ಘಕಾಲ ತಪ್ಪದೇ ನಿತ್ಯವೂ ಸ್ನಾನ ಮಾಡಿದಾಗ ಅದು ಅಭ್ಯಾಸವಶವಾಗುತ್ತದೆ. ಬಾಲ್ಯದಿಂದಲೇ ಹಿರಿಯರು ದಿನವೂ ಮಾಡಿಸಿದರೆ ಅದು ಸಾಧ್ಯವಾಗುತ್ತದೆ.
ಆವಾಸಿಕ ಶಿಕ್ಷಣ ಸಂಸ್ಥೆಯಲ್ಲಿದ್ದ ನನಗೆ ಬೇರೆ ಬೇರೆ ಪರಿಸರಗಳಿಂದ ಬಂದ ವಿದ್ಯಾರ್ಥಿಗಳನ್ನೂ, ಅವರ ಸಂಸ್ಕಾರ ಸಾಮರ್ಥ್ಯ ಅಭಿರುಚಿಗಳನ್ನೂ ಪರಿಶೀಲಿಸುವ ಅವಕಾಶವಿತ್ತು. ಒಂದು ಪ್ರಾತಃಕಾಲ ನೂತನ ವಿದ್ಯಾರ್ಥಿಗಳು ಮುಖಮಾರ್ಜನ ಮಾಡುವ ವಿಧಾನವನ್ನು ಕಂಡು ಆಶ್ಚರ್ಯವಾಯಿತು. ಕಲ್ಲಿಗೆ ಅಂಟಿಕೊಂಡ ಪಾಚಿಯನ್ನು ಮರಳು ಹಾಕಿ ಬಲವಾಗಿ ಉಜ್ಜುವಂತೆ
ಪೇಸ್ಟನ್ನು ಸವರಿ ಬ್ರಶ್ ನಿಂದ ಜೋರಾಗಿ ಸದ್ದು ಬರುವಂತೆ ಹಲ್ಲುಜ್ಜುತ್ತಿದ್ದರು. ವಸಡಿನಿಂದ ರಕ್ತ ಬರುವಷ್ಟು, ಜೋರಾಗಿ ಹಲ್ಲುಜ್ಜುವ ಅಭ್ಯಾಸ ಕೆಲವರದು! ಎಲ್ಲ ಹಲ್ಲುಗಳೂ ಸ್ಪಷ್ಟವಾಗಿ ಕಾಣಿಸುವ ತಲೆಬುರುಡೆಯನ್ನು ತೋರಿಸಿ, ಆಹಾರದ ತುಣುಕುಗಳು ಹಲ್ಲಿನ ಸಂದುಗಳಲ್ಲಿ ಹೇಗೆ ಸಿಕ್ಕಿಕೊಳ್ಳುತ್ತವೆ, ಅವು ಹಲ್ಲನ್ನು ಹೇಗೆ ಹಾಳುಮಾಡುತ್ತವೆ, ವಸಡಿಗೆ ಆಘಾತವಾಗದಂತೆ ಬ್ರಶ್ ನ್ನು ವಿವಿಧ ರೀತಿಯಲ್ಲಿ ಹಲ್ಲುಗಳ ಒಳಭಾಗ ಮತ್ತು ಹೊರಗೆ ಹೇಗೆ ತಿರುಗಿಸಬೇಕು ಎಂಬುದನ್ನು ವಿವರಿಸಿ ತೋರಿಸಿದೆ. ಹೇಳಿಕೊಟ್ಟ ನೂತನ ವಿಧಾನವನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನೂ ಎರಡು ಮೂರು ದಿನಗಳ ಕಾಲ ಪರಿಶೀಲಿಸಿದೆ. ಹಲವರು ಹಳೆಯ ಅಭ್ಯಾಸಕ್ಕೆ ಅಂಟಿಕೊಂಡಿದ್ದರು.
'ಹಲ್ಲನ್ನು ಉಜ್ಜಿ ಶುಚಿಯಾಗಿಟ್ಟುಕೊಳ್ಳಿ'... ಎಂಬ ಬೋಧನೆ ಮಾತ್ರದಿಂದ ವಿದ್ಯಾರ್ಥಿಗಳು ಆ ಅಭ್ಯಾಸವನ್ನು ರೂಢಿಸಿಕೊಳ್ಳುವರೇ?
ನಾವು ಸ್ವತಃ ಮಾಡಿ ತೋರಿಸಿ, ಕೆಲವೊಮ್ಮೆ ಪ್ರೀತಿಯಿಂದ, ಕೆಲವೊಮ್ಮೆ ಕೆಲವರನ್ನು ಗದರಿಸಿ, ಹೇಳಿ ತಿದ್ದಿ ತೀಡಿ ಆ ಅಭ್ಯಾಸ ದೃಢವಾಗುವಂತೆ ಮಾಡಬೇಕಲ್ಲವೇ?
“ತಟ್ಟೆ, ಲೋಟ, ಚಮಚಗಳನ್ನು ನಾವೇ ತೊಳೆದುಕೊಳ್ಳೋಣ. ಅದಕ್ಕಾಗಿ ಬೇರೆಯೇ ಕೆಲಸಗಾರರು ಬೇಡ. ಸ್ವಲ್ಪ ಉಳಿತಾಯ ಸಾಧ್ಯವಾಗುತ್ತದೆ ಎಂದು ಸೂಚಿಸಿದೆ. ಆದರೆ ಎಲ್ಲರೂ ನಾನೊಬ್ಬ ವ್ಯವಹಾರಜ್ಞಾನವಿಲ್ಲದ ಪ್ರಾಣಿ ಎನ್ನುವಂತೆ ಗೇಲಿ ಮಾಡಿದರು'--------- ತಾಂತ್ರಿಕ ಶಿಕ್ಷಣಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಒಂದು ಅನುಭವವನ್ನು ಹಾಗೆಂದು ಹೇಳಿಕೊಂಡ. ಹಾಸ್ಟೆಲಿನ ಮೀಟಿಂಗಿನಲ್ಲಿ ವಿದ್ಯಾರ್ಥಿ ಕಾರ್ಯನಿರ್ವಾಹಕರು ಕೆಲಸಗಾರರ ಸಮಸ್ಯೆಯನ್ನು ಚರ್ಚಿಸುತ್ತಿದ್ದಾಗ ಆತ ಕೊಟ್ಟ ಸೂಚನೆಗೆ ಅವನ ಮಿತ್ರರು ತೋರಿಸಿದ ಪ್ರತಿಕ್ರಿಯೆ ಅದು.
ಓದುಬರಹ ಕಲಿತು ವಿದ್ಯಾವಂತರೆನಿಸಿಕೊಂಡವರಲ್ಲಿ ಹೆಚ್ಚಿನವರು ಯಾವುದೇ ದೈಹಿಕ ಶ್ರಮವನ್ನು ಕೀಳಾಗಿ ಭಾವಿಸುವ ಅಭ್ಯಾಸವನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ ನಮ್ಮ ದೇಶದಲ್ಲಿ!
ಬೇಸಗೆಯ ರಜೆ ಮುಗಿಸಿ ಶಾಲೆಗೆ ಹಿಂದಿರುಗಿದ ವಿದ್ಯಾರ್ಥಿಯೊಬ್ಬ ಹಿರಿಯರೊಡನೆ ನಿಷ್ಕಪಟ ಭಾವದಿಂದ ಹೀಗೆಂದ: 'ಸಾರ್, ಈ ಬಾರಿ ಮನೆಗೆ ಹೋದಾಗ ಶೌಚಕ್ಕೆ ಮೊದಲು ಮತ್ತು ಆಮೇಲೆ ಕಮೋಡಿಗೆ ನೀರು ಹಾಕಲು ಮರೆಯಲಿಲ್ಲ.'
ಶುಚಿತ್ವದ ಪ್ರಾಥಮಿಕ ನಿಯಮಗಳನ್ನು ಕಾರ್ಯರೂಪಕ್ಕೆ ತರುವಂಥ ಸಂಸ್ಕಾರ ನಿರ್ಮಾಣದಲ್ಲಿ ಅವನೊಂದು ಹೆಜ್ಜೆ ಇಟ್ಟಂತಾಯಿತಲ್ಲವೇ?
ವೈಯಕ್ತಿಕ ಮತ್ತು ಸಾಮಾಜಿಕ ಶುಚಿತ್ವದ ಅಭ್ಯಾಸಗಳು, ವಿಧೇಯತೆ, ಕ್ರಮಬದ್ಧತೆ, ಸಮಯ ಪ್ರಜ್ಞೆ, ಪರಸ್ಪರ ಸಹಕಾರ ಭಾವದಿಂದ ಒಂದು ಕೆಲಸದಲ್ಲಿ ಭಾಗಿಯಾಗುವುದು, ಗುರು ಹಿರಿಯರಲ್ಲಿ ಗೌರವ, ಅನುಕಂಪೆಯ ಮನೋಭಾವ, ನಡವಳಿಕೆಯಲ್ಲಿ ವಿನಯ, ಅತಿಥಿ ಅಭ್ಯಾಗತರನ್ನು ಸತ್ಕರಿಸುವ ವಿಧಾನ, ಒಳ್ಳೆಯದನ್ನು ಕಂಡು ಮುಕ್ತಕಂಠದಿಂದ ಪ್ರಶಂಸಿಸುವುದು ಈ ಎಲ್ಲ ಗುಣಗಳನ್ನು ಆರ್ಜಿಸಲು ಯೋಗ್ಯ ಮಾರ್ಗದರ್ಶಕರ ನೇತೃತ್ವದಲ್ಲಿ ತರಬೇತಿ ಅಗತ್ಯ. ವ್ಯಕ್ತಿಯಾಗಿ ತಾನು ಸುಖಿಯಾಗುವುದಕ್ಕೂ, ಸಾಮಾಜಿಕವಾಗಿ ಸಮಾಜಕ್ಕೆ ಸುಖವಾಗುವಂತೆ ನಡೆದುಕೊಳ್ಳುವುದಕ್ಕೂ ಅವಶ್ಯವೆನಿಸುವ ಸಂಸ್ಕಾರಗಳ ನಿರ್ಮಾಣವಾಗದಿದ್ದರೆ ಶಿಕ್ಷಣ ಅಪೂರ್ಣ ಮಾತ್ರವಲ್ಲ, ಅಪಾಯಕಾರಿಯೂ ಹೌದು.
ಮುಂದುವರಿಯುವುದು...
Comments