ವಿಭೂತಿ ಪೂಜೆ ಗ್ರಂಥ : ಬದುಕಲು ಕಲಿಯಿರಿ part : 40
ಗ್ರಂಥ : ಬದುಕಲು ಕಲಿಯಿರಿ
ಲೇಖಕರು ,: ಸ್ವಾಮಿ ಜಗದಾತ್ಮಾನಂದಜಿ
ಭಾಗ : 40
ವಿಭೂತಿ ಪೂಜೆ
ನೀವು ಯಾರನ್ನು ಹೃತ್ಪೂರ್ವಕವಾಗಿ ಗೌರವಿಸಿ ಪ್ರೀತಿಸುವಿರೊ, ಅವರ ಗುಣಗಳನ್ನೂ ಆದರ್ಶವನ್ನೂ ನಿಮ್ಮದಾಗಿ ಮಾಡಿಕೊಳ್ಳುವಿರಿ. ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಜನಾಂಗವೇ ಪ್ರೀತಿಸಿ ಗೌರವಿಸಿತು. ಎಂಥ ಸ್ವಾರ್ಥತ್ಯಾಗಿ ಮೃತ್ಯುಂಜಯ ಕರ್ಮವೀರರು ಆಗ ಉದಯಿಸಿದರು!
ಅಲೆಕ್ಸಿಸ್ ಕೆರೆಲ್ ಅವರ ಮಾತನ್ನು ಕೇಳಿ: 'ಉದಾತ್ತ ಗುಣಗಳಿಂದ ಶೋಭಿಸುವ ಉನ್ನತ ಮಟ್ಟದ ವ್ಯಕ್ತಿಗಳನ್ನು ಶ್ರದ್ಧಾಭಕ್ತಿಗಳಿಂದ ನೋಡುವ “ವಿಭೂತಿ ಪೂಜೆ" ಮಾನವನ ಆವಶ್ಯಕತೆಗಳಲ್ಲಿ ಒಂದು. ಅದು ಮಾನಸಿಕ ಪ್ರಗತಿಗೆ ಅವಶ್ಯವೂ ಹೌದು. ಪ್ರಜಾಸತ್ತಾತ್ಮಕ ದೇಶಗಳಲ್ಲಿ ಎಳೆಯರಿಗೆ ಮಾದರಿಯಾಗಬಲ್ಲ ವ್ಯಕ್ತಿಗಳೆಲ್ಲ ಸುದೈವದಿಂದ ಸಮಾಜದಲ್ಲಿ ಜೀವಂತರಾಗಿರುವವರಲ್ಲದೆ ಗತಿಸಿದ ವ್ಯಕ್ತಿಗಳೂ ಇದ್ದಾರೆ. ಅವರು ನಮ್ಮ ನಡುವೆ ಜೀವಂತವಾಗಿಯೇ ಇರುತ್ತಾರೆ. ಅವರನ್ನೂ ಅವರ ಜೀವನ ಸಂದೇಶಗಳನ್ನೂ ಕುರಿತು ನಾವು ಯೋಚಿಸಬಹುದು. ಅವರ ದನಿಯನ್ನು ಆಲಿಸಬಹುದು. ಸಿನೆಮಾ ನಟನಟಿಯರನ್ನು ಕುರಿತ ವಿಚಾರಕ್ಕಿಂತ ಕೋಲಾ, ದಾಂತೆ, ಪ್ಯಾಶ್ಚರ್ ಇವರ ಸತ್ಸಂಗ ಒಳಿತಲ್ಲವೇ? ಮಹಾವಿದ್ವಾಂಸರ, ವೀರರ, ಸಂತರ ಜೀವನ ಕಥೆಗಳಲ್ಲಿ ಅವ್ಯಯವಾದ ಆತ್ಮಶಕ್ತಿಯ ಸಂಚಯವಿದೆ. ಅವರು ಬಯಲು ನೆಲದಿಂದ ಎದ್ದು ನಿಂತ ಪರ್ವತ ಶಿಖರಗಳಂತಿದ್ದಾರೆ. ಎಷ್ಟು ಎತ್ತರಕ್ಕೆ ನಾವು ಏರಬಹುದು, ಮಾನವ ಪ್ರಜ್ಞೆಯು ಹಂಬಲಿಸುವ ಗುರಿ ಎಷ್ಟು ಉದಾತ್ತವಾಗಿರಬಹುದು ಎಂಬುದನ್ನೂ ಅವರು ನಮಗೆ ತೋರಿಸಿ ಕೊಡುತ್ತಾರೆ. ದೇಶಗಳ ಅವನತಿಯ ಕಾಲದಲ್ಲಿ ಮುಂದಾಳುಗಳು ವೈಶಿಷ್ಟ್ಯರಹಿತರಾಗಿರುತ್ತಾರೆ. ಪೂಜಾರ್ಹರಾದ ವ್ಯಕ್ತಿಗಳಿಲ್ಲದಿದ್ದರೆ ಶ್ರೀಸಾಮಾನ್ಯರಿಗೆ ಕಷ್ಟವೆನಿಸುತ್ತದೆ. 'ಆ ದೃಷ್ಟಿಯಿಂದಲೇ ನೀಗ್ರೋ ಜನಾಂಗವನ್ನು ಮೇಲೆತ್ತಲು ರಚನಾತ್ಮಕ ಯೋಜನೆಗಳಿಂದ ದುಡಿದು ಹೋರಾಡಿದ ನೀಗ್ರೋ ಮಹಾನಾಯಕ ಬೂಕರ್ ಟಿ. ವಾಷಿಂಗ್ಟನ್ ಹೇಳಿದ: 'ಸುಸಂಸ್ಕೃತ ಸಜ್ಜನರ ಒಡನಾಟದಿಂದ ಲಭಿಸುವ ಕಲಿಕೆಗೆ ಸಮನಾದ ವಿದ್ಯೆಯನ್ನು ಯಾವ ಪುಸ್ತಕವೂ, ಬೆಲೆಬಾಳುವ ಉಪಕರಣಗಳೂ ನೀಡಲಾರವು ಎಂಬುದು ವಯಸ್ಸಾದಂತೆಲ್ಲ ನನ್ನ ಮನಸ್ಸಿಗೆ ಸ್ಪಷ್ಟವೂ ದೃಢವೂ ಆಗುತ್ತಲಿದೆ' ಎಂದು. ನಮ್ಮ ದೇಶದ ಸಂತರು, ಮಹಾತ್ಮರು, ಅನುಭವದಿಂದ ಮುಪ್ಪುರಿಗೊಂಡ ಹಿರಿಯರು, ಶಿಕ್ಷಣತಜ್ಞರು ಈ ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ತಳೆದಿಲ್ಲ. ಅದು: ದುರ್ಜನರ ಸಹವಾಸವನ್ನು ಸರ್ವಪ್ರಯತ್ನದಿಂದ ಬಿಡಬೇಕು. ಎಷ್ಟೇ ಕಷ್ಟವಾದರೂ ಸಜ್ಜನರ ಸಹವಾಸವನ್ನು ತೊರೆಯಬಾರದು. ಸಜ್ಜನರನ್ನು ಗೌರವಿಸದ, ಅವರಿಂದ ಮಾರ್ಗದರ್ಶನವನ್ನು ಪಡೆಯದ ಜನಾಂಗ ಮೇಲೇರಲು ಸಾಧ್ಯವಿಲ್ಲ.
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಕೂಡೆ ಒಡನಾಟ ಬಚ್ಚಲಿನ ರೊಚ್ಚಿನಂತಿಹುದು--- ಎಂದು ಸರ್ವಜ್ಞ ಹೇಳಿದ ಮಾತು ಒಂದು ಶಾಶ್ವತ ಸತ್ಯ.
ಮನುಷ್ಯರು ಪ್ರಜ್ಞಾಪೂರ್ವಕವಾಗಿ ಕಲಿಯುವಂತೆ, ಸ್ವಾಭಾವಿಕವಾಗಿ ತನಗೆ ಅರಿವಿಲ್ಲದೆ ಅನುಕರಣೆಯಿಂದ ಕಲಿಯುವ ರೀತಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಈ ವಿಚಾರವನ್ನು ತಿಳಿದವರಿಗೆ ಜ್ಞಾನಿಗಳ ಈ ಎಚ್ಚರಿಕೆಯ ಮಾತುಗಳು ಅರ್ಥಪೂರ್ಣವಾಗುತ್ತವೆ.
ಮೂರು ವರ್ಷದ ಬುದ್ಧಿ
ತಾಯಿಯೊಬ್ಬಳು ಶಿಕ್ಷಣತಜ್ಞರನ್ನು ಕಂಡು ತನ್ನ ಮಗುವಿಗೆ ಎಂದಿನಿಂದ ಶಿಕ್ಷಣ ಪ್ರಾರಂಭಿಸಬೇಕೆಂದು ಕೇಳಿದಳಂತೆ. ತಜ್ಞರು 'ಮಗುವಿನ ವಯಸ್ಸು ಎಷ್ಟು?' ಎಂದು ಕೇಳಿದಾಗ 'ಇನ್ನೂ ಮೂರು ವರ್ಷವಷ್ಟೇ' ಎಂದಳವಳು, 'ಅಯ್ಯೋ ಮೂರು ವರ್ಷವೇ? ಇನ್ನೂ ಶಿಕ್ಷಣ ಆರಂಭಿಸಿಲ್ಲವೇ? ಬೇಗನೇ ಮನೆಗೆ ಹೋಗಿ ಆರಂಭಿಸಿ. ಆಗಲೇ ಮೂರು ವರ್ಷಗಳು ಸಂದುಹೋದವು' ಎಂದರಂತೆ.
ಮಗುವು ಈ ಜಗತ್ತಿನ ಬೆಳಕನ್ನು ಕಂಡ ದಿನದಿಂದಲೇ ಅದರ ಶಿಕ್ಷಣ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ನಮ್ಮ ದೇಶದ ಹಿರಿಯರು ಶಿಶುವು ಮಾತೆಯ ಗರ್ಭದಲ್ಲಿರುವಾಗಲೇ ಕಲಿಯಲು ಆರಂಭಿಸುತ್ತದೆ ಎನ್ನುತ್ತಾರೆ. ಎಂದರೆ ತಾಯಿಯ ನೋವು ನಲಿವುಗಳಿಗೆ, ಅಭಿರುಚಿ ಅನಿಸಿಕೆಗಳಿಗೆ ಅನುಗುಣವಾಗಿ ಅದು ಸ್ಪಂದಿಸುತ್ತದೆ, ಅದಕ್ಕನುಗುಣವಾಗಿ ಅದರ ವ್ಯಕ್ತಿತ್ವ ಚಾರಿತ್ರ್ಯ ರೂಪಿತವಾಗುತ್ತಿರುತ್ತದೆ ಎನ್ನುವುದು ಅವರ ಅಂಬೋಣ. ತಾಯಿಯ ಪ್ರೀತಿ ಮತ್ತು ಸುರಕ್ಷೆಯನ್ನು ಕಂಡರಿಯದ ಶಿಶು ತನ್ನ ವಯಸ್ಕ ಜೀವನದಲ್ಲಿ ವ್ಯಕ್ತಿತ್ವದ ಪೂರ್ಣ ಬೆಳವಣಿಗೆಗೆ ಬೇಕಾದ ಮುಖ್ಯಾಂಶವನ್ನು ಕಳೆದುಕೊಂಡಿರುತ್ತದೆ. ಆದುದರಿಂದಲೇ 'ಮಕ್ಕಳಿ ಸ್ಕೂಲ್ ಮನೇಲಲ್ವೆ', 'ಹಿರಿಯರ ವರ್ತನೆ ಕಿರಿಯರ ಕಾಪಿಪುಸ್ತಕ', 'ಹಿರಿಯಕ್ಕನ ಚಾಳಿ ಮನೆ ಮಂದಿಗೆ', 'ಮೂರು ವರ್ಷದ ಬುದ್ದಿ ನೂರು ವರ್ಷದ ತನಕ' ಎನ್ನುವ ಅನುಭವದ ಮಾತುಗಳು ಮಗುವಿನ ಮನಸ್ಸನ್ನು ರೂಪಿಸುವಲ್ಲಿ ಮನೆಯ ವಾತಾವರಣ ಹಾಗೂ ತಂದೆತಾಯಂದಿರ ಹೊಣೆಗಾರಿಕೆಯ ಮಹತ್ವವನ್ನು ಸೂಚಿಸುತ್ತವೆ.
ಶಿಕ್ಷಣವೆಂದರೆ ಓದು ಬರಹ ಮಾತ್ರವೆಂದು ನಾವು ತಿಳಿದಂತಿದೆ. ಮಗು ಶಾಲೆಗೆ ಹೋಗುವ ಮೊದಲು ಭಾಷೆಯನ್ನು ಕಲಿಯುವುದೆಂತು ಎಂದು ಪರಿಶೀಲಿಸಿದರೆ ಸಾಕು ಅದರ ಕಲಿಕೆಯ ರಹಸ್ಯ ನಮಗೆ ಮನವರಿಕೆಯಾಗುವುದು. ಮಗು ಅನುಕರಣೆಯಿಂದಲೇ ಎಲ್ಲವನ್ನೂ ಕಲಿಯುತ್ತದೆ. ತಾಯಿತಂದೆಗಳ, ಸೋದರ ಸೋದರಿಯರ ಮಾತುಗಳನ್ನು ಕೇಳುತ್ತ ಮೆಲ್ಲಮೆಲ್ಲನೆ ಶಬ್ದಗಳನ್ನು ಉಚ್ಚರಿಸುತ್ತ ಸ್ವಾಭಾವಿಕವಾಗಿ ಭಾಷೆಯನ್ನು ಕಲಿತುಬಿಡುತ್ತದೆ. ಭಾಷೆ ಮಾತ್ರವಲ್ಲ, ಹಿರಿಯರ ಪ್ರತಿಯೊಂದು ವರ್ತನೆಯ ವಿಧಾನವನ್ನೂ ಅನುಸರಿಸುತ್ತದೆ. ಹಿರಿಯರ ಆಸೆ ಆಸಕ್ತಿಗಳನ್ನೂ, ರಾಗದ್ವೇಷಗಳನ್ನೂ, ರಚನಾತ್ಮಕವೊ ನಿಷೇಧಾತ್ಮಕವೊ ಆದ ಭಾವನೆಗಳನ್ನೂ, ಮತಾಂಧತೆ ಮತಿಹೀನತೆಯ ವರ್ತನೆಗಳನ್ನೂ ತನ್ನದಾಗಿ ಮಾಡಿಕೊಳ್ಳುತ್ತದೆ. ಮಗುವಿನ ಭವಿಷ್ಯವನ್ನು ರೂಪಿಸುವುದರಲ್ಲಿ ಹಿರಿಯರ ಹೊಣೆಗಾರಿಕೆ ಎಷ್ಟೊಂದು ಮಹತ್ವದ್ದು ಎಂಬುದನ್ನು ಹೆಚ್ಚಿನವರು ಗಮನಿಸುತ್ತಿಲ್ಲ.
ಮುಂದುವರಿಯುವುದು..
Comments