ಪರಿಸರದ ಪ್ರಭಾವ ಗ್ರಂಥ: ಬದುಕಲು ಕಲಿಯಿರಿ part : 39

 ಗ್ರಂಥ: ಬದುಕಲು ಕಲಿಯಿರಿ 

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

ಭಾಗ : 39 


 

ಪರಿಸರದ ಪ್ರಭಾವ 


 ಪರಿಸರದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯೋಗ್ಯ ಮಾರ್ಗದರ್ಶನ ಮತ್ತು ತೀವ್ರ ಹಂಬಲದ ಪ್ರಯತ್ನಗಳಿಲ್ಲದಿದ್ದರೆ ಮನುಷ್ಯನ ಬಾಳು ಹೇಗೆ ರೂಪುಗೊಳ್ಳಬಹುದೆಂಬುದನ್ನು ತಿಳಿಸುವ ಒಂದು ನಿದರ್ಶನವಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಕೊಲೆಗಡುಕನಾಗಿ ಪರಿವರ್ತಿತನಾಗ ಬಹುದಾದ ವಿಧಾನದ ಬಗೆಗೆ ತಜ್ಞ ಸಂಶೋಧಕನ ಅಂಬೋಣ ಅದು.


 'ಪ್ರಥಮ ಬಾರಿ ಕೊಲೆಯನ್ನು ಪ್ರತ್ಯಕ್ಷ ನೋಡಿದವನು ತೀವ್ರವಾಗಿ ಸಂಕಟಪಟ್ಟು ವಿಪರೀತ ಅಸಹ್ಯ ಭಾವನೆಯನ್ನು ಬೆಳೆಸಿಕೊಳ್ಳುವನು. ಕೆಲವು ಕಾಲ ಅಂಥ ಕೃತ್ಯಗಳ ಸಮೀಪದಲ್ಲೇ ಇರುತಿದ್ದರೆ ಮೆಲ್ಲನೆ ಹೊಂದಿಕೊಳ್ಳುತ್ತ ಅದನ್ನು ಸಹಿಸಿಕೊಳ್ಳುವನು. ದೀರ್ಘಕಾಲ ಕೊಲೆಗಡುಕರ ಸನಿಹದಲ್ಲಿದ್ದು ಕೊಲೆ ಹಿಂಸಾಕೃತ್ಯಗಳನ್ನು ಕಾಣುತ್ತ ಅವುಗಳ ಸಂಸ್ಪರ್ಶದಲ್ಲೇ ಇದ್ದವನು ಕ್ರಮೇಣ ಅವುಗಳಿಂದ ಪ್ರಭಾವಿತನಾಗಿ ಯಾವ ಹಿಂಸಾಕೃತ್ಯಕ್ಕಿಳಿಯಲೂ ಹಿಂಜರಿಯನು. '


 ಜೈಲಿನಲ್ಲೇ ಬದುಕಿನ ಹೆಚ್ಚಿನ ದಿನಗಳನ್ನು ಕಳೆದ ಕೈದಿಗಳು ಶಿಕ್ಷಾವಧಿಯ ನಂತರ ಬಿಡುಗಡೆ ಹೊಂದಿ ಹೊರಗೆ ಬಂದರೂ ದಿಕ್ಕುತೋಚದಂತಾಗಿ ಅಧಿಕಾರಿಯನ್ನು ತಿರುಗಿ ಜೈಲಿಗೆ ಸೇರಿಸಿಕೊಳ್ಳಿ' ಎಂದು ಕೇಳಿಕೊಳ್ಳುವುದೂ ಇದಕ್ಕೆ!


 ಹೊಲಸಿನ ಮಧ್ಯೆ ವಾಸಿಸುತ್ತ ಕ್ರಮೇಣ ಮನುಷ್ಯರು ಎಲ್ಲ ಶುಚಿತ್ವದ ನಿಯಮಗಳನ್ನೂ ಮರೆತು ಅಂಥ ಪರಿಸರದಿಂದ ಮೇಲಕ್ಕೇಳಲಾರದೆ ಹೇಗೋ ಹೊಂದಿಕೊಂಡು ಬಿಡುತ್ತಾರೆ. ಪರಿಸರದ ಪ್ರಭಾವ ಅದು.


 ಇಂಥ ಜನ ಪತನದಿಂದ ಮೇಲೇರಲು ಸಾಧ್ಯವೇ? 


ಪರಂಪರೆ ಮತ್ತು ಪರಿಸರದಿಂದ ಪಡೆದುಕೊಂಡು ಬಂದ ದುರಭ್ಯಾಸಗಳ ಆಳವಾದ ಕಂದಕದಲ್ಲಿ ಸಿಕ್ಕಿ ನಿರ್ನಾಮವಾಗುತ್ತಿದ್ದ ಒಂದು ನರಭಕ್ಷಕ ಜನಾಂಗವನ್ನೇ ಮೇಲಕ್ಕೆತ್ತಲು ಅಪೂರ್ವ ತ್ಯಾಗ, ಶ್ರಮ ಮತ್ತು ಸಮರ್ಪಣೆಯ ಭಾವದಿಂದ ಹೋರಾಡಿದ ತರುಣ ಆಂಗ್ಲ ವ್ಯಾಪಾರಿ ಡಂಕನ್‌ನ ಸಾಹಸಕತೆ ಯಾವುದೇ ಜನಾಂಗಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶನವಾಗುವಂಥ ಸ್ಫೂರ್ತಿಯನ್ನು ನೀಡಬಲ್ಲುದು.


 1857 ರ ಸುಮಾರಿಗೆ ಕೆನಡಾದ ವಾಯವ್ಯದಲ್ಲಿರುವ ಅಲಾಸ್ಕಾದ ಶಾಂತಸಾಗರದಲ್ಲಿನ ಒಂದು ದ್ವೀಪದಲ್ಲಿ ಬ್ರಿಟಿಷ್ ವ್ಯಾಪಾರಿ ಹಡಗೊಂದು ಲಂಗರು ಹಾಕಿತು. ಹಡಗಿನಲ್ಲಿದ್ದ ತರುಣ ವ್ಯಾಪಾರಿ ಸಮುದ್ರ ತೀರದಲ್ಲಿ ಭಯಾನಕ ದೃಶ್ಯವನ್ನು ಕಂಡು ತತ್ತರಿಸಿಹೋದ. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಜನರ ಭಿನ್ನ ಭಿನ್ನವಾದ ಶವಗಳು ಅಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು. ತರುಣ ಡಂಕನ್‌ ಆಶ್ಚರ್ಯ ಉದ್ವೇಗಗಳನ್ನು ಕಂಡ ಹಡಗಿನ ಅಧಿಕಾರಿ ಹೀಗೆಂದ:


 'ಅವರು ಸಿಮಶೀನ್ ಇಂಡಿಯನ್ಸ್. ಈ ಜನ ತಮ್ಮೊಳಗೆ ಯಾವಾಗಲೂ ಪರಸ್ಪರ ಕಾದಾಡುತ್ತಾರೆ. ಜಗಳಾಡುತ್ತಲೇ ಸಾಯುತ್ತಾರೆ. ಅಲ್ಲದೇ ಅವರು ನರಭಕ್ಷಕರು ಕೂಡ ಹೌದು. ಕೊಲೆ ಮಾಡುವುದು ಅವರಿಗೊಂದು ಆಟ. ಕುಡಿತದ ಚಟಕ್ಕೆ ಸಂಪೂರ್ಣ ಬಲಿಯಾದವರು ಅವರು.  ದಿನವಿಡೀ ದುಡಿದು ತಂದ ಫರ್ ಚರ್ಮವನ್ನು ಅಲ್ಪಬೆಲೆಗೆ ಮಾರಿ ಶರಾಬು ಕುಡಿಯುತ್ತಾರೆ. ಶರಾಬಿಗಾಗಿ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳನ್ನೂ ಮಾರಲು ಹೇಸದ ಜನರು ಇವರು....


ತಂದೆ ತನ್ನ ಅಳುತ್ತಿರುವ ಹುಡುಗಿಯರನ್ನು ಒತ್ತಾಯ ಮತ್ತು ಬಲಾತ್ಕಾರದಿಂದ ಹಣಕ್ಕಾಗಿ ಸಿಪಾಯಿಗಳಿಗೊಪ್ಪಿಸುವ ದಾರುಣ ದೃಶ್ಯವನ್ನು ಪ್ರತ್ಯಕ್ಷವಾಗಿ ಕಂಡ ಡಂಕನ್ ಹೌಹಾರಿದ. ಸಂತಪ್ತನಾದ. 'ಇವರಿಗೊಬ್ಬ ಮಾರ್ಗದರ್ಶಕ ಬೇಕು, ಇವರಿಗೊಬ್ಬ ಸುಧಾರಕ ಬೇಕು' ಎಂಬ ಮಾತು ಅವನ ಮನಸ್ಸಿನಲ್ಲಿ ಮಾರ್ದನಿಗೊಂಡಿತು. ಆಗ ಮಾನವ ಪ್ರೇಮಿಯಾದ ಆತ ಒಂದು ಭೀಷ್ಮ ಪ್ರತಿಜ್ಞೆಯನ್ನೇ ಮಾಡಿದ. ಅದುವರೆಗೂ ಬಿಳಿಜಾತಿಯ ಯಾವ ವ್ಯಕ್ತಿಯೂ ಮಾಡಿರದಂಥ ಮಹಾಕಾರ್ಯವನ್ನು ತಾನೆಸಗಬೇಕೆಂದು ದೃಢ ನಿರ್ಧಾರ ಮಾಡಿ ಸೇವಾಕ್ಷೇತ್ರವನ್ನು ಪ್ರವೇಶಿಸಿಯೇ ಬಿಟ್ಟ.  ತನ್ನ ಬದುಕನ್ನೇ ಗಂಡಾಂತರಕ್ಕೊಡ್ಡಿ ಆ ಅನಾಗರಿಕ ಜನರ ಮಧ್ಯೆ ನೆಲೆಸಿದ. ಅವರ ಭಾಷೆಯನ್ನು ಕಲಿತುಕೊಂಡ. ಹೃತ್ಪೂರ್ವಕ ಪ್ರೀತಿಯ ವ್ಯವಹಾರದಿಂದ ಅವರ ವಿಶ್ವಾಸವನ್ನು ಗಳಿಸಿಕೊಳ್ಳಲು ಯತ್ನಿಸಿದ. ಮನೆಮನೆಗೂ ಹೋಗಿ ಜನಸಂಪರ್ಕ ಬೆಳೆಸಿ ಶುಚಿತ್ವದ ನಿಯಮಗಳನ್ನು ಬೋಧಿಸಿದ. ಯುವಕರನ್ನು ಒಂದೆಡೆ ಕೂಡಿಸಿ ತರಬೇತಿ ನೀಡಿ, ಶ್ರದ್ಧಾವಂತ ಕೆಲಸಗಾರರ ತಂಡವನ್ನು ನಿರ್ಮಿಸಿದ. ಜನರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೊಂಡ. ಅವರಿಗೆ ವಿವಿಧ ಉದ್ಯೋಗಗಳು ದೊರೆಯುವಂತೆ ಮಾಡಿ, ದುಡಿಮೆಯ ಮಹಿಮೆ ಮತ್ತು ಉತ್ಪತ್ತಿಯ ವಿಧಾನವನ್ನು ತಿಳಿಸಿಕೊಟ್ಟ. ತಾನೇ ಚರ್ಚುಗಳನ್ನು ಸ್ಥಾಪಿಸಿ ಧಾರ್ಮಿಕ ಭಾವನೆಗಳನ್ನು ಬಿತ್ತರಿಸಿದ. ಅವರಲ್ಲಿ ಬಲವಾಗಿ ಬೇರುಬಿಟ್ಟಿದ್ದ ದುಷ್ಟ ಚಟಗಳನ್ನು ದೂರ ಮಾಡಲು ಅಪೂರ್ವ ಸಹನೆ ಮತ್ತು ದೃಢತೆಯಿಂದ ಹಲವು ವರ್ಷಗಳ ಕಾಲ ದಣಿವಿಲ್ಲದ ಹೋರಾಟ ನಡೆಯಿಸಿದ. ಈ ಎಲ್ಲ ಕೆಲಸಗಳನ್ನು ನಿರ್ವಹಿಸುವುದು ಸುಲಭವಾಗಿರಲಿಲ್ಲ. 'ಒಳ್ಳೆಯ ಕೆಲಸ ಮಾಡಹೊರಟವರಿಗೆ ಬಹುವಿಘ್ನಗಳು' ಎನ್ನುವ ಮಾತು ಅವನ ಪಾಲಿಗೆ ದಿನ ದಿನದ ಅನುಭವವಾಯಿತು. ಯಾರನ್ನು ಸೇವಿಸಹೊರಟನೋ ಆ ಜನರಿಂದಲೇ ವಿರೋಧ, ಆ ಜನಾಂಗದ ಮುಖಂಡರುಗಳಿಂದ ವಿರೋಧ, ಆ ದುರ್ದೈವೀ ಜನರನ್ನು ಶೋಷಿಸಿ ಲಾಭ ಪಡೆಯುವ ಅಭ್ಯಾಸವನ್ನು ರೂಢಿಸಿಕೊಂಡ ವ್ಯಾಪಾರೀ ವರ್ಗದಿಂದ ವಿರೋಧ, ಕ್ರೈಸ್ತಧರ್ಮಾಧಿಕಾರಿಗಳಿಂದ ವಿರೋಧ, ಈ ಎಲ್ಲ ತಡೆಗಳನ್ನು ಏಕಾಂಗಿಯಾಗಿ ಅಮಿತ ಸಾಹಸ, ಉತ್ಸಾಹ, ಆತ್ಮವಿಶ್ವಾಸ, ನಿರಂತರ ಹೋರಾಟ ಇವುಗಳ ಬಲದಿಂದ ಎದುರಿಸಿ ಯಶಸ್ವಿಯಾಗಿ ಬೆಳಗಿದ. 


 ಅರವತ್ತು ವರ್ಷಗಳ ಸಂಘರ್ಷ ಹಾಗೂ ವಿರೋಧದ ಬಳಿಕ ಅವನ ಉದ್ದೇಶ ಸಫಲವಾಯಿತು.


 ಭಯಾನಕ, ಅಸಭ್ಯ ಅನಾಗರೀಕತೆಯಿಂದ ಕೆಟ್ಟ ಹೆಸರು ಪಡೆದಿದ್ದ ಸಿಮಶೀನ್ ಜಾತಿಯೇ ಇಂದು ಶಾಂತಿಪ್ರಿಯವೂ, ಉನ್ನತ ಶೀಲವೂ ಸುಸಂಸ್ಕೃತವೂ ಆಗಿದೆ. ಇಂದು ಅಲ್ಲಿ ಬರ್ಬರ ಅಪರಾಧಗಳು ನಡೆಯುವುದಿಲ್ಲ. ಇಂದು ಯಾರೊಬ್ಬರೂ ಅಲ್ಲಿ ಮದ್ಯಸೇವನೆ ಮಾಡುವುದಿಲ್ಲ.


ಹಳೆಯ ಅಭ್ಯಾಸಗಳನ್ನು ನೂತನ ಅಭ್ಯಾಸಗಳಿಂದ ಗೆಲ್ಲಬಹುದು ಎಂಬ ವಿವೇಕವಾಣಿಯನ್ನು ಪ್ರಯೋಗ ಪರೀಕ್ಷಣಗಳಿಂದ ಸತ್ಯವೆಂದು ಸಾರಿದ ಡಂಕನ್! ಆದರೆ ಎಷ್ಟೊಂದು ದೀರ್ಘಕಾಲದ ಶ್ರಮ! ಎಂಥ ಮಹಾತ್ಯಾಗ! ಎಷ್ಟೊಂದು ಹೋರಾಟ!


1918 ನೇ ಇಸವಿಯಲ್ಲಿ, ತನ್ನ ಎಂಬತ್ತಾರನೇ ವಯಸ್ಸಿನಲ್ಲಿ ಡಂಕನ್ ಇಹಲೋಕದಿಂದ ಕಣ್ಮರೆಯಾದ. ಆದರೆ ಸಿಮಶೀನ್ ಜನಾಂಗದ ಕಣ್ಮಣಿಯಾಗಿ ಪ್ರಾತಃಸ್ಮರಣೀಯನಾದ .


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box