ನಿಮ್ಮ ಅಭ್ಯಾಸಗಳೇ ನೀವು ಗ್ರಂಥ : ಬದುಕಲು ಕಲಿಯಿರಿ part: 38
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಜಗದಾತ್ಮಾನಂದಜಿ
ಭಾಗ : 38
ನಿಮ್ಮ ಅಭ್ಯಾಸಗಳೇ ನೀವು
ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಒಳಿತು ಕೆಡಕುಗಳ ಮತ್ತು ಚಾರಿತ್ರ್ಯ ನಿರ್ಮಾಣದ ಹಿನ್ನೆಲೆಯಲ್ಲಿ ಯೋಚನೆ, ಭಾವನೆ ಮತ್ತು ಚಟುವಟಿಕೆ ಇವುಗಳಿಗೆ ಸಂಬಂಧಿಸಿದ ಅಭ್ಯಾಸಗಳು ಪ್ರಮುಖ ಪಾತ್ರವಹಿಸುತ್ತವೆ. ಒಳಿತೋ, ಕೆಡುಕೋ ಒಂದೇ ಕೆಲಸವನ್ನು ಪದೇ ಪದೇ ಮಾಡುತ್ತ ಅದು ನಮ್ಮ ಮನಸ್ಸು ಮತ್ತು ನರಮಂಡಲವನ್ನು ಎಷ್ಟು ಬಲವತ್ತರವಾಗಿ ವ್ಯಾಪಿಸಿಬಿಡುತ್ತದೆ ಎಂದರೆ ರೂಢ ಕ್ರಿಯೆಗಳಂತೆ ಸಂದರ್ಭವೊದಗಿದಾಗ ಪ್ರಯತ್ನವಿಲ್ಲದೆ ಸಹಜ ಪ್ರತಿಕ್ರಿಯೆ ನಡೆಯುತ್ತದೆ!
ನಿವೃತ್ತ ಸೈನಿಕನೊಬ್ಬ ಬೀದಿಯಲ್ಲಿ ಆಹಾರ ಸಾಮಗ್ರಿಯ ಹೊರೆಯನ್ನು ಹೊತ್ತುಕೊಂಡು ಹೋಗುತ್ತಿದ್ದ. ತುಂಟ ಹುಡುಗನೊಬ್ಬ ಆ ಸೈನಿಕನು ಆ ಮಾರ್ಗವಾಗಿ ಹೋಗುತ್ತಿರುವುದನ್ನು ಹಲವು ಬಾರಿ ನೋಡಿದ್ದ. ಒಂದು ದಿನ ಚರಂಡಿಯ ಸಮೀಪದಲ್ಲಿ ಸೈನಿಕ ಹೊರೆಯನ್ನು ಹೊತ್ತು ಅನ್ಯಮನಸ್ಕನಾಗಿ ನಡೆದು ಹೋಗುತ್ತಿದ್ದಾಗ ಹುಡುಗ ಗಟ್ಟಿಯಾಗಿ 'ಆಟೆನ್‌ಶನ್' ಎಂದು ಕೂಗಿ ಕೊಂಡ. 'ಆಟೆನ್‌ಶನ್' ಶಬ್ದ ಕಿವಿಯ ಮೇಲೆ ಬೀಳುತ್ತಲೇ ಸೈನಿಕ ತಲೆಯ ಮೇಲಿನ ಹೊರೆಯನ್ನು ಆಧರಿಸಿ ಹಿಡಿದಿದ್ದ ಕೈಗಳನ್ನು ಥಟ್ಟನೆ ಕೆಳಕ್ಕೆ ಬಿಟ್ಟು ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯಲು ಸಿದ್ಧನಾದ. ಹೊತ್ತುಕೊಂಡಿದ್ದ ಹೊರೆ ಕೆಳಗೆ ಚರಂಡಿಯಲ್ಲಿ ಬಿದ್ದು ಸಂಗ್ರಹಿಸಿದ ಸಾಮಾನು ಚೆಲ್ಲಾಪಿಲ್ಲಿಯಾಗಿ ಚೆದುರಿತು. ಹುಡುಗನ ತುಂಟತನ ತಿಳಿಯುವ ಮೊದಲೆ ಕಾರ್ಯ ಮಿಂಚಿ ಹೋಗಿತ್ತು. ದೀರ್ಘಕಾಲ ಕವಾಯತಿನ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದ ಅವನ ಚಿತ್ತ ತತ್‌ಕ್ಷಣವೇ ಕಾರ್ಯವೆಸಗಿದ್ದೆ ಅದಕ್ಕೆ ಕಾರಣ!
ಅಭ್ಯಾಸಗಳ ಅದ್ಭುತ ನಿಯಂತ್ರಣ ಶಕ್ತಿಯನ್ನು ಹಲವರು ಯೋಚಿಸುತ್ತಿಲ್ಲ. ನಾವು ಸಿಲುಕಿಕೊಂಡಿರುವ ಅತ್ಯಂತ ಕ್ಷೇಶಕರವಾದ ಹೇವರಿಕೆಯನ್ನುಂಟುಮಾಡುವಂಥ ಸನ್ನಿವೇಶ ಅಥವಾ ಪರಿಸರಗಳಿಂದ ಬಿಡಿಸಿಕೊಳ್ಳಲೂ ತಡೆಯಾಗಿ ನಿಲ್ಲುವವು ಈ ಅಭ್ಯಾಸಗಳೆ . ದಿನದಿನವೂ ನಿಂತ ಜಾಗ ಮತ್ತು ಪರಿಸರಕ್ಕೆ ಅಂಟಿಕೊಳ್ಳುವಂತೆ, ಹೊಂದಿಕೊಳ್ಳುವಂತೆ ಅಜ್ಞಾತವಾಗಿ ನಾವು ಅಭ್ಯಾಸ ಮಾಡುತ್ತಿರುತ್ತೇವೆ. ಬೆಳಗಿನ ಉಪಾಹಾರ ಮತ್ತು ಕಾಫಿ ಸೇವನೆಯ ನಂತರ ಸಿಗರೇಟು ಸೇದುವ ಅಭ್ಯಾಸವಿರುವವರನ್ನು ವೀಕ್ಷಿಸಿ. ಉಪಾಹಾರದ ನಂತರ ಜೇಬಿನಲ್ಲಿ ಸಿಗರೇಟು ಮುಗಿದಿದ್ದರೆ ಅಂಗಡಿ ಎರಡು ಮೈಲಿ ದೂರವಿದ್ದರೂ ಅಲ್ಲಿಗೆ ನಡೆದುಕೊಂಡಾದರೂ ಹೋಗಿ ಹೊಗೆ ಬತ್ತಿಯನ್ನು ಕೊಂಡು ತಂದು ಧೂಮಪಾನ ಮಾಡದಿರಲು ಅವರಿಂದ ಸಾಧ್ಯವೇ? ಅಭ್ಯಾಸವೆಂದರೆ ದುರಭ್ಯಾಸಗಳೆಂದು ಅರ್ಥವಲ್ಲ. ಎಲ್ಲ ಅಭ್ಯಾಸಗಳೂ ತಮ್ಮ ಪರಿಣಾಮಗಳ ಮೂಲಕ ವ್ಯಕ್ತಿಯನ್ನು ನಿಯಂತ್ರಿಸುತ್ತವೆ, ರೂಪಿಸುತ್ತವೆ. ನಮ್ಮ ಸಾಧನೆ ಸಿದ್ಧಿಗಳು, ವಿಚಾರ ವೈದುಷ್ಯಗಳು, ಅಭಿರುಚಿ ಕಲಿಕೆಗಳು, ರಾಗ ದ್ವೇಷಗಳು, ಕೋಪ ತಾಪಗಳು, ಮರೆ ಮೋಸಗಳು, ಅಹಂಕಾರ ಅಭಿಮಾನಗಳು, ಒಲವು ಅನಿಸಿಕೆಗಳು, ಕುಹಕ ಕೊಂಕುಗಳು ಇವು ಪರಿಸರದಿಂದ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾವು ಸಂಗ್ರಹಿಸಿ ರೂಢಿಸಿಕೊಳ್ಳುವ ಅಭ್ಯಾಸಗಳೇ . ರೂಢ ಮೂಲವಾದ ಈ ಅಭ್ಯಾಸಗಳಿಂದ ಪಾರಾಗುವುದು ಕಷ್ಟ ಎನ್ನುವುದನ್ನು ಸೂಚಿಸುವ ಚಮತ್ಕಾರದ ನುಡಿಯೊಂದು ಆಂಗ್ಲ ಭಾಷೆಯಲ್ಲಿದೆ. Habit ಎನ್ನುವ ಪದದಿಂದ ನೀವು Hಅನ್ನು ತೆಗೆದರೆ a bit ಉಳಿಯುತ್ತದೆ. a ಅನ್ನು ತೆಗೆದರೆ bit ಉಳಿದುಕೊಳ್ಳುತ್ತದೆ. b ಅನ್ನೂ ತೆಗೆದರೆ it ಉಳಿದು ಕೊಳ್ಳುತ್ತದೆ.(t ಕೊನೆಗೆ ಉಳಿದುಕೊಳ್ಳುತ್ತದೆ) ನೋಡಿದಿರಾ ಅಭ್ಯಾಸಗಳ ಆಳವಾದ ಪ್ರಭಾವವನ್ನು!
ಚಾರಿತ್ರ್ಯ ನಿರ್ಮಾಣದ ಸೂತ್ರಧಾರ
ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ಸರೋವರದ ಮೇಲ್ಬಾಗದಲ್ಲಿ ಸ್ಪಂದಿಸುವ ಅಲೆಯಂತೆ. ಸರೋವರದಲ್ಲಿ ಸ್ಪಂದಿಸುವ ಅಲೆಯಾದರೋ ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತದೆ. ಆದರೆ ಮನಸ್ಸಿನಲ್ಲಿ ಮೂಡುವ ಯೋಚನೆ ಭಾವನೆಗಳಾಗಲಿ, ನಾವು ಮಾಡುವ ಚಟುವಟಿಕೆಯಾಗಲಿ ಮಾಯವಾದಂತೆ ಕಂಡರೂ ಮನಸ್ಸಿನ ಆಳದ ಪದರುಗಳಲ್ಲಿ ಸಂಸ್ಕಾರ ರೂಪದಲ್ಲಿ ಉಳಿದಿರುತ್ತವೆ. ಇಂಥ ಅನೇಕಾನೇಕ ಸಂಸ್ಕಾರಗಳೇ ಕಲೆತು ನಮ್ಮ ನಡತೆ ಅಥವಾ ಚಾರಿತ್ರ್ಯ ನಿರ್ಮಾಣವಾಗುವುದು. ಅಭ್ಯಾಸವು ಮನುಷ್ಯನ ಎರಡನೇ ಸ್ವಭಾವ ಎನ್ನುವ ಆಂಗ್ಲ ಗಾದೆ ಇದೆ. ಯೋಚಿಸಿ ನೋಡಿದರೆ ಅಭ್ಯಾಸ ಮನುಷ್ಯನ ಸರ್ವ ಸ್ವಭಾವವೆಂದು ತಿಳಿಯುವುದು.
'ನಡತೆ ಅಥವಾ ಚಾರಿತ್ರ್ಯ ಎಂದರೆ ಸಂಪೂರ್ಣವಾಗಿ ರೂಪುಗೊಂಡ ಇಚ್ಛಾಶಕ್ತಿ' ಎಂಬುದು ಜಾನ್ ಸ್ಪೂಯರ್ಟ್ ಮಿಲ್ ಮಹಾಶಯ ನೀಡಿದ ನಿರೂಪಣೆ. ಇಚ್ಛಾಶಕ್ತಿ ಎಂದರೆ ಕಾರ್ಯ ಪ್ರೇರಕವಾದ ಅನಿಸಿಕೆಗಳ ಒಟ್ಟು ಮೊತ್ತ. ಅವು ನಿಶ್ಚಿತ, ನಿಯಮಿತ, ರಚನಾತ್ಮಕ ರೀತಿಯಲ್ಲಿ ವ್ಯಕ್ತವಾದರೆ ಅಂಥ ವ್ಯಕ್ತಿಯ ಚಾರಿತ್ರ ದೃಢವಾಗಿದೆ ಎಂದರ್ಥ. 'ಯಾರನ್ನೂ ಅಪ್ರಯೋಜಕ ವ್ಯಕ್ತಿ ಎನ್ನಬೇಡಿ. ಏಕೆಂದರೆ ಆತನೊಂದು ಚಾರಿತ್ರ್ಯವನ್ನು ಪ್ರತಿನಿಧಿಸುತ್ತಾನೆ: ಎಂದರೆ ತಾನು ಒಂದು ತೆರನಾದ ಅಭ್ಯಾಸಗಳ ಮೂಟೆ ಎಂಬುದನ್ನು ಸೂಚಿಸುತ್ತಾನೆ. ಹಳೆಯ ಅಭ್ಯಾಸಗಳನ್ನು - ನೂತನ ಉಪಯುಕ್ತ ಅಭ್ಯಾಸಗಳಿಂದ ಗೆಲ್ಲಬಹುದು. ನಡತೆ ಎಂದರೆ ಪುನರಾವರ್ತಿತ ಅಭ್ಯಾಸಗಳ ಮೊತ್ತ. ಪುನರಾವರ್ತಿತ ಕ್ರಿಯೆಗಳ ಮೂಲಕವೆ ನಡತೆಯಲ್ಲಿ ಸುಧಾರಣೆಗಳಾಗಬೇಕು' ಎಂದರು ಸ್ವಾಮಿ ವಿವೇಕಾನಂದರು.
ಆದರೆ ಇದು ಸಾಧ್ಯವಾಗಬೇಕಾದರೆ ನಿಷ್ಠೆಯಿಂದ ಕೂಡಿದ ನಿಯಮಿತವಾದ ನಿರಂತರ ಪ್ರಯತ್ನ ಬೇಕು.
ಮುಂದುವರಿಯುವುದು..
Comments