ಅಭ್ಯಾಸದ ಅದ್ಭುತಗಳು ಗ್ರಂಥ : ಬದುಕಲು ಕಲಿಯಿರಿ part : 37

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

 ಭಾಗ : 37 



 ಅಭ್ಯಾಸದ ಅದ್ಭುತಗಳು 


 ಸ್ಯಾಮ್ಯುಯೆಲ್    ಸ್ಮಾಲ್ಸ್ ತಮ್ಮ 'ಸ್ವಸಹಾಯ' ಎನ್ನುವ ಪುಸ್ತಕದಲ್ಲಿ ರಾಬರ್ಟ್ ಪೀಲ್ ಅವರನ್ನು ಕುರಿತ ಒಂದು ಸುಂದರ ಉದಾಹರಣೆ ನೀಡಿದ್ದಾರೆ. ಬಾಲ್ಯದಿಂದಲೇ ಪೀಲ್ ಅವರಿಗೆ ಭಾಷಣ ಕಲೆಯನ್ನು ಕಲಿಸಲು ಅವರ ತಂದೆ ಅವರನ್ನು ಒಂದು ವೇದಿಕೆಯ ಮೇಲೆ ನಿಲ್ಲಿಸಿ ಮಾತನಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಚರ್ಚಿನಲ್ಲಿ ಕೇಳಿದ್ದ ಭಾನುವಾರದ ಉಪನ್ಯಾಸವನ್ನು ಪೀಲ್ ಪುನರುಚ್ಚರಿಸಬೇಕಾಗಿತ್ತು. ಮೊದಮೊದಲು ಅಂಥ ಯಾವ ಪ್ರಗತಿಯೂ ಕಾಣಿಸಲಿಲ್ಲ. ಕ್ರಮೇಣ ನಿಯಮಿತ ನಿರಂತರ ಪ್ರಯತ್ನದಿಂದ ಅಸಾಧಾರಣ ಅವಧಾನ ಏಕಾಗ್ರತೆಗಳನ್ನು ಅವರು ಗಳಿಸಿದರು. ದೀರ್ಘಕಾಲ ಮಾಡಿದ ಉಪನ್ಯಾಸಗಳನ್ನೂ ಯಾವ ಟಿಪ್ಪಣಿಯ ಸಹಾಯವಿಲ್ಲದೇ ಚಾಚೂ ತಪ್ಪದೇ ಒಂದೇ ಒಂದು ಶಬ್ದವನ್ನೂ ಬಿಡದೆ ಪುನರುಚ್ಚರಿಸುವ ಸಾಮರ್ಥ್ಯವನ್ನು ಪಡೆದರು. ಮುಂದೆ ಪಾರ್ಲಿಮೆಂಟಿನಲ್ಲಿ ವಿರೋಧಿಗಳ ಹಲವಾರು ಪ್ರಶ್ನೆಗಳನ್ನು ಕ್ರಮವಾಗಿ ಉತ್ತರಿಸುವ ಅವರ ಅದ್ಭುತ ಸ್ಮೃತಿಶಕ್ತಿಯು ಎಲ್ಲರನ್ನೂ ಅಚ್ಚರಿಗೊಳಿಸಿತು. 


ಆ ಶಕ್ತಿಯ ಬೆಳವಣಿಗೆಗೆ ಬಾಲ್ಯದಲ್ಲೇ ತಂದೆಯ ಪ್ರೇರಣೆಯಂತೆ ಅವರು ರೂಢಿಸಿಕೊಂಡಿದ್ದ ಅಭ್ಯಾಸದ ವಿಚಾರ ಎಲ್ಲರಿಗೂ ತಿಳಿದಿರಲಿಲ್ಲ.


 ಓದು ಬರಹದ ಆವಿಷ್ಕಾರಕ್ಕೆ ಮೊದಲೇ, ನಿಯಮಿತ ಅಭ್ಯಾಸದಿಂದ ವೇದೋಪನಿಷತ್ತುಗಳನ್ನೂ ಸಹಸ್ರಾರು ಶ್ಲೋಕಗಳನ್ನೂ ಕಂಠಸ್ಥವಾಗಿಸಿಕೊಂಡು, ತಲೆ ತಲಾಂತರದಿಂದ ಬಂದ ವಾಗ್ಮಯ  ಸಂಪತ್ತನ್ನು ಒಂದಕ್ಷರ ತಪ್ಪಿಲ್ಲದೇ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವ ಒಂದು ಸಿದ್ಧಿಯನ್ನು ನಮ್ಮ ಜನ ಸಾಧಿಸಿದ್ದರು. ಸ್ಮೃತಿಶಕ್ತಿಯ ಈ ಸಾಹಸದಲ್ಲಿ ಯಾಂತ್ರಿಕತೆ ಕಂಡುಬಂದರೂ, ಅಭ್ಯಾಸದಿಂದ ಪಡೆಯಬಹುದಾದ ಅದ್ಭುತ ಸಾಮರ್ಥ್ಯಕ್ಕೊಂದು ಜೀವಂತ ನಿದರ್ಶನ ಇದು!


ಆಂಗ್ಲ ಭಾಷೆಯಲ್ಲಿ ' ಹ್ಯಾಬಿಟ್ ' ಎನ್ನುವ ಶಬ್ದದ ಸಮಾನಾರ್ಥಕ ನಾವು ಉಪಯೋಗಿಸುವ ಕನ್ನಡ ಶಬ್ದ ಅಭ್ಯಾಸ. ದುರಭ್ಯಾಸವನ್ನು ಚಟ ಎನ್ನುವುದುಂಟು. ' ಪ್ರಾಕ್ಟಿಸ್ ' ಎನ್ನುವ ಶಬ್ದವನ್ನೂ ' ಅಭ್ಯಾಸ ' ಎಂದೇ ಭಾಷಾಂತರಿಸುವ ಪರಿಪಾಠ ಬಂದು ಬಿಟ್ಟಿದೆ. ಆದರೆ ಸಾಧನೆ ಅಥವಾ ಅನುಷ್ಠಾನ ಎಂಬವು ಸೂಕ್ತ ಪದಗಳು. ಪುನಃ ಪುನಃ ಮಾಡುವ ಪ್ರಯತ್ನ ಅಥವಾ ಸಾಧನೆಯಿಂದ ಅಭ್ಯಾಸ ಸಿದ್ಧಿಸುವುದು. 


 ಸರ್ಕಸ್ಸಿನಲ್ಲಿ ತರಬೇತಿ ಪಡೆದ ಆಟಗಾರರು ಮಾಡಿ ತೋರಿಸುವ ಸಾಹಸಗಳು ಅಭ್ಯಾಸದಿಂದ ಪಡೆಯಬಹುದಾದ ಅದ್ಭುತ ಶಕ್ತಿ ಮತ್ತು ಸಿದ್ದಿಗಳಿಗೆ ಮನಸೆಳೆಯುವ ನಿದರ್ಶನಗಳು. “ಅಮೇರಿಕದಲ್ಲಿ ಗೊರೂರು' ಎಂಬ ಪುಸ್ತಕದಲ್ಲಿ ಅಲ್ಲಿ ಕಂಡ ಸರ್ಕಸ್ಸಿನಲ್ಲಿ ರಷ್ಯಾ ದೇಶದ ಸರ್ಕಸ್ ಪಟುಗಳು ತೋರಿಸಿದ ಬೆರಗುಗೊಳಿಸುವ ಅಸಾಮಾನ್ಯ ಚಟುವಟಿಕೆಗಳನ್ನು ಗ್ರಂಥಕರ್ತರು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಆರೋಗ್ಯವಂತ ವ್ಯಕ್ತಿಯೊಬ್ಬ ಆಸ್ಪತ್ರೆಯನ್ನು ಪ್ರವೇಶಿಸಿದಾಗ ನರಳುತ್ತಿರುವ ರೋಗಿಗಳ ಶೋಕ ದುಃಖ ಆಕ್ರಂದನಗಳ ಕ್ಷಣಿಕ ದರ್ಶನದಿಂದ ಸಂತಾಪವನ್ನು ಹೊಂದಿ ಚಿಂತನಶೀಲನಾಗುತ್ತಾನೆ. ಅಂತೆಯೆ ಸರ್ಕಸ್ಸನ್ನು ನೋಡಿಬಂದಾಗ ಸಾಹಸ ಮತ್ತು ಅಭ್ಯಾಸಗಳ ಮಹಿಮೆಯ ಕ್ಷಣಿಕ ಅರಿವು ನಮ್ಮಲ್ಲೂ ಉತ್ಸಾಹದ ತರಂಗವೊಂದನ್ನು ಎಬ್ಬಿಸಬಹುದು. ಆದರೆ ಕೇವಲ ಸಂಕಲ್ಪದಿಂದ ನೂತನ ಅಭ್ಯಾಸ ಕೈಗೂಡದು. ಅದಕ್ಕೆ ಸಾಧನೆಯ ನೀರೆರೆದು ಪೋಷಿಸಿ ಪಾಲಿಸಬೇಕು. 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box