ಯೋಚನೆಯೇ ರೂವಾರಿ ಗ್ರಂಥ : ಬದುಕಲು ಕಲಿಯಿರಿ part : 36
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 36
ಯೋಚನೆಯೇ ರೂವಾರಿ
ಮನುಷ್ಯ ಜೀವನದ ಮೇಲೆ ಪ್ರಭಾವ ಬೀರುವ ಅತ್ಯಂತ ಪ್ರಮುಖವಾದ ಸಂಗತಿಗಳು ಯೋಚನೆಗಳು ಮತ್ತು ಭಾವನೆಗಳು ಎಂಬುದು ಬೆಳಕಿನಷ್ಟು ಸ್ಪಷ್ಟ.
ಪ್ರಗತಿ ಪಥದಲ್ಲಿ ನಡೆಯಬೇಕೆನ್ನುವ ಯಾವ ವ್ಯಕ್ತಿಯೇ ಆಗಲಿ ಯೋಚನೆಯ ಈ ಮಹಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು.
ಪ್ರತಿಯೊಂದು ಯೋಚನೆ ಭಯ, ಸಂಶಯಗಳಿಂದ ಕೂಡಿಕೊಂಡು ಹೊರಮುಖವಾಗಿ ಹರಿದು ಕಾರ್ಯರೂಪಕ್ಕೆ ಬಂದಾಗ ಅದು ನಿಷೇಧಾತ್ಮಕವಾಗಿ ಕೊನೆಗೊಳ್ಳುವುದು.
ಪ್ರತಿಯೊಂದು ಯೋಚನೆ ಆತ್ಮವಿಶ್ವಾಸ ಮತ್ತು ಆಶಾಭಾವನೆಯಿಂದ ಕೂಡಿ ಹೊರಮುಖವಾಗಿ ಹರಿದು ಕಾರ್ಯರೂಪಕ್ಕೆ ಬಂದಾಗ ಅದು ರಚನಾತ್ಮಕವಾಗಿ ಪರ್ಯವಸಾನವಾಗುವುದು.
ಮನಸ್ಸಿನ ಶಕ್ತಿಯನ್ನು ಕುರಿತು ನಿಸ್ಸಂದಿಗ್ಧವಾದ ಒಂದು ನಿಯಮ ಹೀಗಿದೆ : 'ಸದೃಶವಾದ ಯೋಚನೆಗಳು ತತ್‌ಸದೃಶ ಯೋಚನೆಗಳೆಡೆಗೆ ಎಳೆಯುತ್ತವೆ'.
ಇದನ್ನು ಸರಳವಾದ ಮಾತಿನಲ್ಲಿ ಹೇಳುವುದಾದರೆ ಒಳ್ಳೆಯ ಯೋಚನೆಗಳನ್ನು ಮಾಡುತ್ತಾ ಹೋದರ ಅವು ಒಳ್ಳೆಯ ವ್ಯಕ್ತಿಗಳೆಡೆಗೆ, ವಸ್ತುಗಳೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ.
ಕೆಟ್ಟ ಯೋಚನೆಗಳನ್ನು ಮಾಡುತ್ತ ಹೋದರೆ ಅವು ಕೆಟ್ಟ ವ್ಯಕ್ತಿಗಳೆಡೆಗೆ, ಕೆಟ್ಟ ವಸ್ತುಗಳೆಡೆಗೆ ನಮ್ಮನ್ನು ಸೆಳೆಯುತ್ತವೆ.
ಆಧುನಿಕ ಪ್ರಯೋಗ ಪರೀಕ್ಷಣಗಳಿಂದ ಸತ್ಯವೆಂದು ಸಾರಲ್ಪಡುವ ಈ ವಿಚಾರವನ್ನು ಎರಡೂವರೆ ಸಹಸ್ರವರ್ಷಗಳ ಹಿಂದೆ ಗೌತಮ ಬುದ್ಧನು ನೀಡಿದ ಉಪದೇಶಗಳೊಂದಿಗೆ ಹೋಲಿಸಿ ನೋಡಿ--
'ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಗಳ ಫಲವೇ. ಯೋಚನೆಗಳೇ ಸದ್ಯದ ಸ್ಥಿತಿಗೆ ತಳಹದಿ. ನಮ್ಮ ಯೋಚನೆಗಳಿಂದಲೇ ಅದು ರಚಿತವಾಗಿದೆ. ಒಬ್ಬಾತ ಶುಭಯೋಚನೆಯಿಂದೊಡಗೂಡಿ ಮಾತನಾಡಿದರೆ, ಅದಕ್ಕನುಗುಣವಾಗಿ ನಡೆದುಕೊಂಡರೆ, ಮನುಷ್ಯರನ್ನು ನೆರಳು ಹಿಂಬಾಲಿಸುವಂತೆ ಸುಖವು ಎಂದಿಗೂ ಬೆಂಬಿಡದೆ ಅವನನ್ನು ಹಿಂಬಾಲಿಸುವುದು. ಒಬ್ಬಾತ ಕೆಟ್ಟದ್ದನ್ನು ಯೋಚಿಸುತ್ತ ಅದಕ್ಕನುಗುಣವಾಗಿ ಮಾತನಾಡಿದರೆ, ನಡೆದುಕೊಂಡರೆ ಬಂಡಿಯನ್ನೆಳೆಯುವ ಎತ್ತಿನ ಕಾಲುಗಳನ್ನು ಚಕ್ರಗಳು ಹಿಂಬಾಲಿಸುವಂತೆ ದುಃಖ ಅವನನ್ನು ಹಿಂಬಾಲಿಸುವುದು.'
ಶಾಶ್ವತಸತ್ಯವನ್ನು ತಿಳಿಸಿಕೊಡುವ ಮಹಾತ್ಮನ ಈ ಮಹಾವಾಕ್ಯಗಳು ಯೋಚನೆಯ ಮಹಿಮೆಗೆ ಹಿಡಿದ ಕೈಗನ್ನಡಿ ಅಲ್ಲವೇ?
ಇಲ್ಲಿಯವರೆಗೂ ಅಸಂಖ್ಯ ದೀನ, ಹೀನ ಯೋಚನೆಗಳಲ್ಲಿ ನಾವು ಮುಳುಗಿದ್ದಿರಬಹುದು. ವಿಕಾಸದ ಪಥದಲ್ಲಿ ಮುನ್ನಡೆಯಬೇಕಾದರೆ ಇಂದಿನಿಂದಲೇ ಒಂದೊಂದೇ ಒಳ್ಳೆಯ ಯೋಚನೆಗಳನ್ನು ನಮ್ಮದಾಗಿಸಿಕೊಂಡು ನಮ್ಮ ಬದುಕನ್ನು ಖಂಡಿತವಾಗಿಯೂ ತಿದ್ದಿಕೊಳ್ಳಬಹುದು. ಮೈಗೆ ಕೊಳೆ ಅಂಟಿಕೊಂಡಿದ್ದರೆ 'ಕೊಳೆ, ಕೊಳೆ' ಎಂದು ಕೂಗಿಕೊಂಡರೆ ಅದು ಹೋಗದು. ಕೊಳೆಯನ್ನು ಕೊಳೆಯಿಂದ ತೆಗೆದೆಸೆಯಲು ಸಾಧ್ಯವಿಲ್ಲ. ಶುದ್ಧ ನೀರಿನಿಂದ ತೊಳೆಯಬೇಕು. ಅಂತೆಯೇ ಒಳ್ಳೆಯ ಯೋಚನೆಗಳನ್ನು ಬೆಳೆಸಿಕೊಳ್ಳಬೇಕು, ಉಳಿಸಿಕೊಳ್ಳಬೇಕು . ಆಗ ಮೆಲ್ಲ ಮೆಲ್ಲನೇ ದುಷ್ಟ ಯೋಚನೆಗಳು ದೂರವಾಗುವುವು. ಸತ್ಯಾನ್ವೇಷಿಗಳ ಮತ್ತು ವೈಯಕ್ತಿಕ ಅಹಂ ಭಾವನೆಯಿಂದ ಮುಕ್ತರಾದ ಮಹಾತ್ಮರ ಜೀವನ ಸಂದೇಶಗಳ ಮನನ ಈ ದಾರಿಯಲ್ಲಿ ನಮಗೆ ಬಹಳಷ್ಟು ಸಹಾಯಕ.
ಯೋಚನೆಗಳ ನೈಜಸ್ವರೂಪ ಸ್ವಭಾವವನ್ನು ಕುರಿತು ಕೆಲ ವಿಚಾರಗಳು ಇಂತಿವೆ: 'ಒಮ್ಮೆ ಒಂದು ಯೋಚನೆಯನ್ನು ಮಾಡಿದಿರಾದರೆ ಅದೇ ಯೋಚನೆ ಪುನಃ ಮನಸ್ಸಿನಲ್ಲಿ ಮೂಡುವ ಸಂಭವವಿದೆ. ಒಂದು ಯೋಚನೆಯನ್ನು ಐದು, ಹತ್ತು ಅಥವಾ ಇಪ್ಪತ್ತು ಬಾರಿ ಆವರ್ತನೆ ಮಾಡಿದರೆ ಅದು ನಮ್ಮ ಮನಸ್ಸಿನ ಒಂದು ಭಾಗವಾಗಿ ಬಿಡುವುದು. ನಾವು ಪ್ರಯತ್ನಪೂರ್ವಕವಾಗಿ ಅದನ್ನು ಯೋಚಿಸದಿದ್ದರೂ ಅದು ಮನಸ್ಸಿನ ಆಳದಲ್ಲಿ ಮನೆ ಮಾಡಿಕೊಂಡಿರುತ್ತದೆ. ಅವಕಾಶ ಬಂದಾಗ ಮೇಲೇಳುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಒಂದು ಪ್ರಬಲ ಯೋಚನೆ ನಿಮ್ಮ ಮೇಲೆ ಮಾತ್ರವಲ್ಲ, ಸಮೀಪದಲ್ಲಿರುವ ಇತರರ ಮೇಲೂ ತನ್ನ ಪ್ರಭಾವ ಬೀರುತ್ತದೆ. ಯೋಚನೆಯ ಶಕ್ತಿ ಎಷ್ಟೆಂದರೆ, ಒಬ್ಬ ವ್ಯಕ್ತಿಯ ಕೆಡುಕನ್ನು ನೀವು ಚಿಂತಿಸುತ್ತಿದ್ದರೆ ಆ ವ್ಯಕ್ತಿಯೂ ನಿಮ್ಮ ಕೆಡುಕನ್ನು ಅಜ್ಞಾತವಾಗಿ ಚಿಂತಿಸುವ ಸಂಭವವಿದೆ. ಇತರರ ಹಿತಚಿಂತನೆ ನೀವು ನಡೆಸಿದ್ದರೆ, ಅವರೂ ನಿಮ್ಮಡೆಗೆ ಶುಭಚಿಂತನೆಯನ್ನೇ ನೀಡುವರು.'
'ಯೋಚನೆಗಳು ಅಲೆಯಂತೆ ಚಲಿಸುತ್ತವೆ. ತಮಗೆ ವ್ಯಕ್ತವಾಗಲು ಅನುಕೂಲವಾದ ಮನಸನ್ನು ಹುಡುಕುತ್ತವೆ' ಎಂದು ಶ್ರೀ ಅರವಿಂದರು ಹೇಳಿದ್ದರು. 'ಸ್ಪಷ್ಟವಾಗಿ ಕಾಣುವ ಹಾಗೆ ಯೋಚನೆಗಳು ಹೊರಗಡೆಯಿಂದ ಮನಸ್ಸನ್ನು ಪ್ರವೇಶಿಸುತ್ತವೆ ಎಂಬುದನ್ನು ಶ್ರೀ ಲೇಲೆ ಅವರು ಹೇಳುವವರೆಗೆ ನಾನು ತಿಳಿದಿರಲಿಲ್ಲ. ಅವರ ಆದೇಶದಂತೆ ಮನಸ್ಸನ್ನು ಸ್ತಬ್ದಗೊಳಿಸಿದೆ. ಪರ್ವತಾಗ್ರದಲ್ಲಿನ ನಿರ್ವಾತ ಪ್ರದೇಶದಂತೆ ಮನಸ್ಸು ಶಾಂತವಾಗಿತ್ತು. ಆಗ ಒಂದಾದ ಮೇಲೊಂದು ಯೋಚನೆ ಮೂರ್ತರೂಪವಾಗಿ ನನ್ನ ಸಮೀಪ ಬರುವುದನ್ನು ಕಂಡೆ. ಅವುಗಳನ್ನು ಹೊರಕ್ಕೆ ತಳ್ಳಿ ನನ್ನ ಮನಸ್ಸನ್ನು ಸಂಪೂರ್ಣವಾಗಿ ನಿಸ್ತರಂಗಗೊಳಿಸಿದೆ' ಎಂದೂ ಅವರು ಹೇಳಿದ್ದರು.
ನೀವು ಎಂಥ ಯೋಚನೆಗಳನ್ನು ಸ್ವಾಗತಿಸಿ ಸ್ವೀಕರಿಸುತ್ತಿದ್ದೀರಿ? ಎಂಥ ಯೋಚನೆಗಳನ್ನು ಹೊರಗೆ ಕಳುಹಿಸುತ್ತಿದ್ದೀರಿ? ಒಮ್ಮೆ ಸಿಂಹಾವಲೋಕನ ಮಾಡುವುದೊಳಿತಲ್ಲವೇ? ರಾತ್ರಿ ನಿದ್ರಿಸುವುದಕ್ಕೆ ಮೊದಲು ಎಂಥ ಯೋಚನೆಗಳು ನಮ್ಮನ್ನು ಆಳುತ್ತಿವೆ ಎನ್ನುವುದರ ಬಗೆಗೆ ನಾವು ಜಾಗರೂಕರಾಗಿರಬೇಕು. ಆಗ ನಮ್ಮ ಜಾಗ್ರತ ಮನಸ್ಸು ವಿಶ್ರಾಂತಿ ಪಡೆಯಲು ಸಿದ್ಧತೆ ನಡೆಸಿರುತ್ತದೆ. ಸುಪ್ತಮನಸ್ಸು ಒಳಿತು ಕೆಡಕುಗಳ ವಿಚಾರ ಮಾಡಲು ಹೋಗುವುದಿಲ್ಲ. ಕೊಟ್ಟದ್ದನ್ನು ಸ್ವೀಕರಿಸಿ ತನ್ನದನ್ನೂ ಸೇರಿಸಿ ಸಕಾಲದಲ್ಲಿ ಜಾಗ್ರತ ಮನಸ್ಸಿಗೆ ಹಿಂದಿರುಗಿಸುತ್ತದೆ. ಕಂಪ್ಯೂಟರಿಗೆ ನೀವು ತಪ್ಪು ಮಾಹಿತಿಗಳನ್ನು ಒದಗಿಸಿದಂತೆ ಕೋಪ ಮತ್ತು ದ್ವೇಷಮೂಲವಾದ ಯೋಚನೆಗಳನ್ನೂ, ಇತರ ವಿಷಮಯ ಭಾವನೆಗಳನ್ನೂ ಅದು ಮೆಲುಕಾಡುತ್ತಿದ್ದರೆ ನಿಮ್ಮ ನಿದ್ರೆಗೆ ಖಂಡಿತವಾಗಿಯೂ ಭಂಗತರುತ್ತದೆ, ಮಾತ್ರವಲ್ಲ, ಎಚ್ಚೆತ್ತ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಬಿರುಕುಗೊಳಿಸುವ ನಿಷೇಧಾತ್ಮಕ ಕಾರ್ಯಕ್ಕೆ ಪ್ರೇರಿಸುತ್ತದೆ.
ಅದಕ್ಕೆಂದೇ ಪ್ರಸಿದ್ದ ಬರಹಗಾರ ವಿಕ್ಟರ್ ಹ್ಯೂಗೊ ಹೇಳಿದ:
'ನಿದ್ರಿಸುವುದಕ್ಕೆ ಮೊದಲು ಶುಭನಿರೀಕ್ಷೆ, ಪ್ರೀತಿ, ಕ್ಷಮೆ -ಇವುಗಳನ್ನು ನಿಮ್ಮ ತಲೆದಿಂಬಾಗಿ ಇರಿಸಿಕೊಳ್ಳಿ. ಆಗ ಆನಂದದಿಂದ ಗುಣಗುಣಿಸುತ್ತ ಬೆಳಗ್ಗೆ ಏಳುವಿರಿ ನೀವು!'
'ಚಿತ್ರಗುಪ್ತ 'ನಿದ್ದಾನೆ! ನೆನಪಿರಲಿ.
ಮುಂದುವರಿಯುವುದು...
Comments