ಚಿತ್ರಗುಪ್ತ 'ನಿದ್ದಾನೆ ! ಎಚ್ಚರಿಕೆ ! ಗ್ರಂಥ : ಬದುಕಲು ಕಲಿಯಿರಿ part : 35
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 35
ಚಿತ್ರಗುಪ್ತ 'ನಿದ್ದಾನೆ ! ಎಚ್ಚರಿಕೆ !
ನಾವು ಯೋಚಿಸುವುದು ಚಿತ್ರದ ಮೂಲಕ. ಶಬ್ದಗಳು ಚಿತ್ರಗಳನ್ನು ನೆನಪಿಗೆ ತರುವ ಸಂಕೇತಗಳು ಅಷ್ಟೇ. 'ಮರ' ಎಂದು ಉಚ್ಚರಿಸಿದಾಗಲೇ ಮರದ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. 'ಆಲದ ಮರ, ಮಾವಿನ ಮರ' ಎಂದಾಗ ಚಿತ್ರಗಳಲ್ಲಿ ವೇಗವಾಗಿ ಉಂಟಾಗುವ ಬದಲಾವಣೆಯನ್ನು ನಾವು ಗ್ರಹಿಸಬಹುದು.
'ನಾನು ಡಾಕ್ಟರ್ ಆಗುತ್ತೇನೆ. ದಿಲ್ಲಿಗೆ ಹೋಗುತ್ತೇನೆ, ಮನೆ ಕಟ್ಟುತ್ತೇನೆ, ವಿಜ್ಞಾನ ವಿಚಾರ ತಿಳಿಯುತ್ತೇನೆ, ಆಫೀಸರ್ ಆಗುತ್ತೇನೆ, ಮದುವೆಯಾಗುತ್ತೇನೆ, ನಟನಾಗುತ್ತೇನೆ, ನಾನಾ ಊರುಗಳನ್ನು ಸಂಚರಿಸುತ್ತೇನೆ, ಶತ್ರುವಿಗೆ ಬುದ್ದಿ ಕಲಿಸುತ್ತೇನೆ' ಎಲ್ಲವೂ ಮಾನಸಿಕ ಚಿತ್ರಗಳೇ! ಮನಸ್ಸು ಇವುಗಳ ಬಗೆಗೆ ಇನ್ನೂ ವಿವರಗಳನ್ನು ಕಲ್ಪಿಸುತ್ತ ಹೋಗುತ್ತದೆ.
ನಾವು ಬಾಲ್ಯದಿಂದಲೇ ಸಂಗ್ರಹಿಸುತ್ತಿರುವ ಅಸಂಖ್ಯ ಚಿತ್ರಗಳು ಅಥವಾ ಯೋಚನೆಗಳು ನಮ್ಮ ಮನಸ್ಸಿನಲ್ಲಿರುತ್ತವೆ. ಅವು ಮನಸ್ಸಿನ ಆಳದಲ್ಲಿ ಹುದುಗಿರುತ್ತವೆ. ಬೇಕಾದಾಗ ಮೇಲಕ್ಕೆ ಬರುತ್ತವೆ.
'ಹಲಸಿನ ಹಣ್ಣು' ಎಂದಾಗ ಹಣ್ಣಿನ ಚಿತ್ರ ಮತ್ತು ಬಣ್ಣದೊಂದಿಗೆ ಹಿಂದೆ ನೀವು ತಿಂದ ಹಣ್ಣಿನ ರುಚಿಯೂ, ಅದರ ಸುವಾಸನೆಯೂ ಮನಸ್ಸಿಗೆ ಬಂದು ಬಾಯಲ್ಲಿ ನೀರೂರುವುದಿಲ್ಲವೇ?
ಎಂದರೆ ಕೇವಲ ಚಿತ್ರ ಮಾತ್ರವಲ್ಲ, ನೀವು ಪಡೆದ ಪ್ರತಿಯೊಂದು ಪ್ರತಿಯೊಂದು ಅನುಭವವೂ ಪ್ರತಿಕ್ರಿಯೆಯೂ ಆ ಚಿತ್ರದೊಂದಿಗೆ ಅಡಗಿಕೊಂಡಿದೆ ಎಂದಾಯಿತು . ಇದನ್ನು ನಮ್ಮ ದೇಶದ ವಿಚಾರವಂತರು 'ಸಂಸ್ಕಾರ' ಎಂದು ಕರೆದರು.
ಎಂಥ ಅದ್ಭುತ ಟೇಪ್ ರೆಕಾರ್ಡರ್ ನಮ್ಮ ಮನಸ್ಸು! ಎಷ್ಟೊಂದು ಸೂಕ್ಷ್ಮ ವಿಷಯಗಳನ್ನೂ ಅದು ಸಂಗ್ರಹಿಸುತ್ತದೆ! ಅದು ಒಳ್ಳೆಯ ಭಾವಚಿತ್ರಗ್ರಾಹಿಯಾದ ಕ್ಯಾಮರಾ ಕೂಡ ಹೌದು! ಕೇವಲ ಧ್ವನಿ ಮತ್ತು ಚಿತ್ರಗಳನ್ನು ಮಾತ್ರ ಅದು ಸಂಗ್ರಹಿಸುವುದಲ್ಲ! ವಿವಿಧ ರುಚಿಯ, ಸ್ಪರ್ಶ ಮತ್ತು ವಾಸನೆಗಳ ಅನುಭವವನ್ನೂ ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿಬಿಡುತ್ತದೆ!
ಬೇರೆ ಬೇರೆ ಸನ್ನಿವೇಶಗಳಲ್ಲಿ ನಾವು ಅನುಭವಿಸಿದ ಸುಖದುಃಖಗಳನ್ನೂ, ಅವುಗಳಿಗೆ ನಾವು ತೋರಿಸಿದ ಪ್ರತಿಕ್ರಿಯೆಗಳನ್ನೂ, ನಮ್ಮ ರಾಗ ದ್ವೇಷಗಳನ್ನೂ ಅದು ದಾಖಲೆ ಮಾಡುತ್ತದೆ. ಮನಸ್ಸೆಂಬ ಈ ಚಿತ್ರಗುಪ್ತನ ಕಣ್ಣು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಇದು ಹಿಂದೆ ಸಂಗ್ರಹವಾದ ಅನುಭವಗಳ ದಾಖಲೆಗಳೊಂದಿಗೆ ನೂತನ ವಿಚಾರಗಳನ್ನೂ, ಅನುಭವಗಳನ್ನೂ ಸಂಗ್ರಹಿಸಿ, ಹಿಂದಿನ ಅನುಭವಗಳ ಸ್ಮೃತಿಯೊಂದಿಗೆ ನಿಯಮಿತ ರೀತಿಯಲ್ಲಿ ಅವುಗಳನ್ನು ಜೋಡಿಸಿಡುತ್ತದೆ!
ನಮ್ಮ ಮುಂದಿನ ಯೋಚನೆಗಳೂ, ನಾವು ಮುಂದೆ ಪಡೆಯಬಹುದಾದ ಅನುಭವಗಳೂ ನಾವು ಆಗಲೇ ಪಡೆದಿರಿಸಿಕೊಂಡ ಯೋಚನೆ, ಅನುಭವಗಳು ಎಂಥವು ಎಂಬುದನ್ನು ಹೊಂದಿಕೊಂಡಿರುತ್ತವೆ.
ವಿದ್ಯಾರ್ಥಿಯೊಬ್ಬ ಏಳೆಂಟು ದಿನಗಳಿಂದ ಒಂದು ಸಿನೆಮಾ ನೋಡುತ್ತ ಬಂದ. ಸಿನೆಮಾ ಕತೆಯಲ್ಲಿ ಬರುವ ದರೋಡೆಕಾರನು ಬೀದಿಹೋಕರನ್ನು ಹೊಡೆದು ಹಿಂಸಿಸಿ ಸುಲಿಗೆ ಮಾಡುವ ಚಿತ್ರವನ್ನು ಏಕಾಗ್ರತೆಯಿಂದ ಮನಸ್ಸು ಕೊಟ್ಟು ನೋಡಿದ. ಕತೆಗೆ ಸಂಬಂಧಿಸಿದ ಮೂಲ ಲೇಖಕನ ಪುಸ್ತಕವನ್ನೂ ಮತ್ತೆ ಮತ್ತೆ ಓದಿದ. ಮನನ ಮಾಡಿದ. ಸಂದರ್ಭ ಸಿಕ್ಕಿದರೆ ತಾನೂ ಅಂಥ ಒಂದು ಸಾಹಸವನ್ನು ಏಕೆ ಕೈಗೊಳ್ಳಬಾರದು ಎಂಬ ಯೋಚನೆ ಬರತೊಡಗಿತು! ಮನಸ್ಸಿನಲ್ಲೇ 'ಹೇಗೆ, ಏನು, ಎತ್ತ?' ಎಂದು ಚಿತ್ರಿಸಿದ. ಕಾರ್ಯರೂಪಕ್ಕೂ ತಂದ. ಆದರೆ ಚಿತ್ರದಲ್ಲಿ ದರೋಡೆಕಾರನು ತಪ್ಪಿಸಿಕೊಂಡಂತೆ ಇವನು ತಪ್ಪಿಸಿಕೊಳ್ಳಲಾರದೇ ಪೋಲೀಸರ ಕೈಗೆ ಸಿಕ್ಕಿ, ಅವರ ಬೂಟ್ಟಿನ ಒದೆತ ತಿಂದು ತೆಪ್ಪಗಾದ.
ನಿಮ್ಮ ಭವಿಷ್ಯ ಜೀವನ ರೂಪಿತವಾಗುವುದು ನೀವು ಸೃಷ್ಟಿಸುವ ಚಿತ್ರಗಳಿಂದ. ಕೆಟ್ಟಚಿತ್ರಗಳನ್ನು ಚಿತ್ರಿಸುತ್ತ ಒಳ್ಳೆಯ ಬದುಕನ್ನು ರೂಪಿಸಲು ಸಾಧ್ಯವೇ? ನೀವೆಂಥ ಚಿತ್ರಗಳನ್ನು ರೂಪಿಸುತಿದ್ದೀರಿ ಎಂಬುದನ್ನು ಯೋಚಿಸಿದ್ದೀರಾ?
ಋಷಿಗಳು 'ಹೇ ದೇವತೆಗಳಿರಾ, ನಮ್ಮ ಕಣ್ಣುಗಳು ಮಂಗಳಕರವಾದ ಚಿತ್ರಗಳನ್ನು ನೋಡುವಂತಾಗಲಿ, ನಮ್ಮ ಕಿವಿಗಳು ಒಳ್ಳೆಯ, ಶುಭಕರವಾದ ಶಬ್ದಗಳನ್ನು ಕೇಳುವಂತಾಗಲಿ' ಎಂದು ಪ್ರಾರ್ಥಿಸಿದರು . ಈ ಪ್ರಾರ್ಥನೆ ಎಷ್ಟೊಂದು ಅರ್ಥಪೂರ್ಣವಾಗಿದೆ ಎಂದು ನಿಮಗನ್ನಿಸದಿರದು.
ಪುರಾಣಗಳಲ್ಲಿ ಮೃತ್ಯುದೇವತೆಯಾದ ಯಮನ ವರ್ಣನೆ ಬರುತ್ತದಷ್ಟೆ, ಯಮನ ಇನ್ನೊಂದು ಹೆಸರು 'ಕಾಲ' ಎಂದು. ಕಾಲನು ಸೂರ್ಯನ ಮಗ. ಕಾಲದ ಪ್ರಜ್ಞೆಸೂರ್ಯೋದಯ ಸೂರ್ಯಾಸ್ತಮಾನಗಳಿಂದ. ಕಾಲನ ಆಸರೆಯಲ್ಲೇ ಬದುಕಿ ಬಾಳಿ ಕಣ್ಮರೆಯಾಗುವವರು ನಾವು ನಾವೆಲ್ಲರೂ ಕಾಲನ ಅಧೀನರು ಎಂದರೆ ತಪ್ಪಿಲ್ಲ. ನಮ್ಮ ಬದುಕಿನ ಎಲ್ಲ ಘಟನೆಗಳ ಮತ್ತು ಅನುಭವಗಳ ಚಿತ್ರಗಳನ್ನು ದಾಖಲೆ ಮಾಡುವವನು ಕಾಲನ ಕರಣಿಕ. ಅವನೇ ಚಿತ್ರಗುಪ್ತ. ನಾವು ಕಂಡ ದೃಶ್ಯಗಳನ್ನೆಲ್ಲ, ಪಡೆದ ಅನುಭವಗಳನ್ನೆಲ್ಲ, ಮಾಡಿದ ಸತ್ಕರ್ಮ, ದುಷ್ಕರ್ಮಗಳ ವಿಧಾನಗಳನ್ನೆಲ್ಲ, ಸುಪ್ತಮನಸ್ಸಿನಲ್ಲಿ ಗುಪ್ತರೂಪವಾಗಿಡುವವನು ಅವನು. ಯಮನ ಕರಣಿಕ ನಮ್ಮ ಕಣ್ಣಿಗೆ ಕಾಣಿಸುವಂಥವನಲ್ಲ. ಆದರೆ ನಮ್ಮ 'ಮನಸ್ಸು' ಎಂಬ ಚಿತ್ರಗುಪ್ತನ ಪರಿಚಯವನ್ನು ಎಲ್ಲರೂ ಕೊಂಚ ಯೋಚಿಸಿದರೆ ಪಡೆಯಬಹುದು. ಇಂದು ಮನೋವಿಜ್ಞಾನಿಗಳು ಇವನ ಬಗೆಗೆ ಹೆಚ್ಚು ತಿಳಿವು ನೀಡುತ್ತಿದ್ದಾರೆ.
ವ್ಯಕ್ತಿಯೊಬ್ಬನನ್ನು ಸುಪ್ತನಿದ್ರೆಗೊಳಪಡಿಸಿದರೆ ಅವನ ಬದುಕಿನಲ್ಲಿ ನಡೆದ ಪ್ರತಿಯೊಂದು ಅನುಭವದ ಸ್ಮೃತಿಯನ್ನೂ ಕೆದಕಿ ಜೀವಂತವಾಗಿಸಬಹುದೆಂಬುದನ್ನು ಮನೋವಿಜ್ಞಾನಿಗಳು ಪ್ರಯೋಗದ ಮೂಲಕ ಕಂಡುಕೊಂಡಿದ್ದಾರೆ. ಎಚ್ಚರದ ಈಗಿನ ಸ್ಥಿತಿಯಲ್ಲಿ ಹಳೆಯ ಸ್ಮೃತಿಗಳನ್ನು ನೆನಪಿಸಲು ಎಷ್ಟು ಯತ್ನಿಸಿದರೂ ಅವನ ಮನಸ್ಸಿಗೆ ಅವು ಬಾರದಿರಬಹುದು. ಆದರೆ ಸುಪ್ತಾವಸ್ಥೆಯಲ್ಲಿ ಅವನನ್ನು ಶೈಶವದ ದಿನಗಳ ಅನುಭವಗಳನ್ನು ವರ್ಣಿಸಲು ಕೇಳಿಕೊಂಡರೆ, ಸಾಮಾನ್ಯ ಎಚ್ಚರದ ಸ್ಥಿತಿಯಲ್ಲಿ ಅಸಾಧ್ಯವಾದ ಎಲ್ಲ ವಿವರಗಳನ್ನೂ ಆತ ಅತ್ಯಂತ ಸ್ಪಷ್ಟವಾಗಿ ನೀಡಬಲ್ಲ, ಜೀವಂತ ಅನುಭವಿಸುತ್ತಿರುವವನಂತೆ ವರ್ಣಿಸಬಲ್ಲ.
ಲಿಸ್ಲಿ ಲೇಕ್ರೋನ್ ಬರೆದ 'ಪ್ರಾಯೋಗಿಕ ಸುಪ್ತಿ ಶಾಸ್ತ್ರ' ನೀಡುವ ಅಸಂಖ್ಯ ಉದಾಹರಣೆಗಳಲ್ಲಿ ಒಂದನ್ನು ಗಮನಿಸಿ: ನಲ್ವತ್ತೈದು ವರ್ಷ ವಯಸ್ಸಿನ ವ್ಯಕ್ತಿಯನ್ನು ಸುಪ್ತಾವಸ್ಥೆಗೆ , ಮೆಲ್ಲಮೆಲ್ಲನೇ ಹಿಂದು ಹಿಂದಿನ ಅನುಭವಗಳ ವಿವಿಧ ಸ್ಮೃತಿಯ ಸ್ತರಗಳಿಗೆ ಕೊಂಡೊಯ್ಯಲಾಯಿತು. ಕೊನೆಯಲ್ಲಿ ಮೂರು ವರ್ಷ ವಯಸ್ಸಿನ ಅನುಭವಗಳ ಸ್ಮೃತಿ ಚಿತ್ರದ ಸ್ಥಿತಿಯೊಂದಿಗೆ ತಾದಾತ್ಮವನ್ನು ಉಂಟು ಮಾಡಿದರು. ಆಗ ಆತನ ಉಸಿರಾಟದಲ್ಲಿ ವಿಚಿತ್ರ ಬದಲಾವಣೆ ಕಾಣಿಸತೊಡಗಿತು. ಗೂರಲು ಕಾಣಿಸಿತು. ಕೆಮ್ಮು ತೀವ್ರವಾಯಿತು. ಉಸಿರಾಡುವಾಗ 'ಸೊಂಯ್, ಸೊಂಯ್' ಸದ್ದು ಪ್ರಾರಂಭವಾಯಿತು. ನಾಡಿಯ ಬಡಿತದ ವೇಗವು ತೀವ್ರವಾಗಿತ್ತು. ಆಸ್ತಮಾ ರೋಗದ ಎಲ್ಲ ಲಕ್ಷಣಗಳೂ ಅವನಲ್ಲಿ ಕಂಡವು. ಎಚ್ಚರದ ಸ್ಥಿತಿಯಲ್ಲಿ ಅವನಿಗೆ ಆ ರೋಗದಿಂದ ನರಳಿದ ನೆನಪೇ ಇರಲಿಲ್ಲ. ತಜ್ಞರು ಅವನ ತಾಯಿಯನ್ನು ಕಂಡು ಮಾತನಾಡಿದಾಗ ಅವನ ಮೂರನೆಯ ವಯಸ್ಸಿನಲ್ಲಿ ಅವನಿಗೆ ಆ ರೋಗ ಬಂದಿತ್ತೆಂದು ಅವಳಾಗಿಯೇ ಹೇಳಿದಳು.
ಏನಾಶ್ಚರ್ಯ! ಅನುಭವಿಸಿದ ಸುಖದುಃಖಗಳೆಲ್ಲವುಗಳ ಸ್ಮೃತಿಚಿತ್ರ ಸುಪ್ತ ಮನಸ್ಸಿನಲ್ಲಿ ಗುಪ್ತರೂಪದಿಂದ ಅಡಗಿದೆ ಎಂದಾಯಿತು.
ವಿಜ್ಞಾನಿಗಳಿಗೆ ಸವಾಲಾದ ಇಂತಹ ಇನ್ನೊಂದು ಘಟನೆ 'ಸೂಪರ್ ಸೈಕ್' ಎನ್ನುವ ಗ್ರಂಥದಲ್ಲಿ ಪ್ರಕಟವಾಗಿದೆ-
ಅಮೇರಿಕಾದ ವೈದ್ಯರೊಬ್ಬರನ್ನು ಸುಪ್ತಾವಸ್ಥೆಯಲ್ಲಿ ಅವರ ಜನನದ ಸಮಯದ ದೃಶ್ಯವನ್ನು ವಿವರಿಸುವಂತೆ ಕೇಳಿದಾಗ ಅವರ ತಾಯಿ ಆಸ್ಪತ್ರೆಯಲ್ಲಿ ಮಲಗಿದ್ದುದನ್ನೂ, ವೈದ್ಯರು ಆಕೆಯ ಬಲಪಾರ್ಶ್ವದಲ್ಲಿ ನಿಂತುದನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಮಾತ್ರವಲ್ಲ, 'ಹೆಚ್ಚು ಕಾಲ ವ್ಯಯ ಮಾಡುವುದು ಸರಿಯಲ್ಲ, ಮಗು ಉಳಿಯುತ್ತದೆಂಬ ಭರವಸೆ ನನಗಿಲ್ಲ' ಎಂಬುದಾಗಿ ವೈದ್ಯರು ಹೇಳಿದ ನುಡಿಗಳನ್ನೂ ಪುನರುಚ್ಚರಿಸಿದರು.
ನಿಜವಾಗಿಯೂ ಅವರು ಗರ್ಭದಲ್ಲಿ ಪೂರ್ಣ ಬೆಳವಣಿಗೆಯಾಗುವುದಕ್ಕೆ ಆರು ವಾರಗಳ ಮೊದಲೇ 1.6 ಕೆ. ಜಿ. ತೂಕವನ್ನಷ್ಟೇ ಪಡೆದು ಜನಿಸಿದ್ದರು.
ಸುಪ್ತಮನಸ್ಸಿನಲ್ಲಿ ಹುದುಗಿದ ಗುಪ್ತವಿಚಾರಗಳನ್ನು ಕುರಿತು ಇಂಥ ನೂರಾರು ಉದಾಹರಣೆಗಳಿವೆ. ಅವುಗಳನ್ನೆಲ್ಲಾ ಉಲ್ಲೇಖಿಸಲು ಅಸಾಧ್ಯವಾದರೂ ಮನಸ್ಸು ಚಿತ್ರಗುಪ್ತ ಎನ್ನುವ ಬಗೆಗೆ ನಿಮಗೆ ಖಾತ್ರಿಯಾಗಿರಬೇಕು. ಒಟ್ಟಿನಲ್ಲಿ..........
ಮನುಷ್ಯನು ಯೋಚಿಸುವುದು ಮಾನಸಿಕ ಚಿತ್ರದ ಮೂಲಕ. ನಮ್ಮ ಜೀವನದಲ್ಲಿ ಪಡೆದ ಅನುಭವಗಳ ಪ್ರತಿಯೊಂದು ಮಾನಸಿಕ ಚಿತ್ರದ ಜೊತೆಗೆ ತತ್ಕಾಲದ ಒಂದು ಭಾವನೆಯೂ ನಮ್ಮ ಪ್ರಜ್ಞೆಯಲ್ಲಿ, ಮನಸ್ಸಿನ ಆಳದಲ್ಲಿ ದಾಖಲಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಇಂದು ಏನಾಗಿರುವನೋ ಅದು ಅವನಿಗೊದಗಿ ಬಂದ ಅನುಭವಗಳಿಗೆ ಅವನು ತೋರಿಸಿದ ವಿಭಿನ್ನ ಬೌದ್ಧಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳ ಮೊತ್ತವೇ.
ಒಬ್ಬನು ಎಂಥ ವ್ಯಕ್ತಿ, ಏನನ್ನು ಪ್ರತಿನಿಧಿಸುತ್ತಾನೆ, ಎಂಬುದು ಅವನು ಸದ್ಯ ತನ್ನ ಬಗ್ಗೆ ಏನೆಂದು ಕಲ್ಪಿಸಿಕೊಂಡಿರುತ್ತಾನೆ, ಜೀವನವನ್ನೂ, ಇತರರನ್ನೂ ಯಾವ ದೃಷ್ಟಿಯಿಂದ ನೋಡುತ್ತಾನೆ, ಎಂಬುದನ್ನು ಹೊಂದಿಕೊಂಡಿದೆ.
ಮುಂದುವರಿಯುವುದು..
Comments