ಗ್ರಂಥ : ಬದುಕಲು ಕಲಿಯಿರಿ part : 33
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 33
ನಮ್ಮನ್ನು ದುರ್ಬಲಗೊಳಿಸುವ ನೂರಾರು ಕತೆಗಳು, ಘಟನೆಗಳು, ಚಿತ್ರಗಳು, ಧಾರ್ಮಿಕ ಮತ್ತು ರಾಜಕೀಯದ ರಾಗದ್ವೇಷಗಳು ನಿತ್ಯವೂ ಪ್ರಸಾರವಾಗುತ್ತಿರಬಹುದು. ಅವು ಯುವಕರ ಮನಸ್ಸನ್ನು ತಲ್ಲಣಗೊಳಿಸಲೂಬಹುದು. ಆದರೆ ಬದುಕು ಎಷ್ಟೇ ನಿರಾಶಾದಾಯಕವಾದರೂ ಅದನ್ನು ದಾಟಿ ಮೇಲೇರಲು ಬೇಕಾದ ಶಕ್ತಿ ನಮ್ಮಲ್ಲೇ ಇದೆ, ನಮ್ಮ ಸಮೀಪದಲ್ಲೇ ಇದೆ, ನಮ್ಮ ಅಂತರ್ಯದ ಆಳದಲ್ಲೇ ಇದೆ. ಜಾತಿ ಮತ ಕುಲ ಗೋತ್ರ ಭೇದವಿಲ್ಲದೇ ಪ್ರತಿಯೊಬ್ಬ ಮನುಷ್ಯನ ಮನಸ್ಸಿನ ಆಳದಲ್ಲಿ ಸಾವಿಲ್ಲದ, ನೋವಿಲ್ಲದ ದೈವೀಶಕ್ತಿ ಇದೆ. ಮನೋವಿಜ್ಞಾನಿ ಇಂದು ಈ ಮಾತನ್ನು ಹೇಳುವ ಸ್ಥಿತಿಯಲ್ಲಿದ್ದಾನೆ. ಒಟ್ಟಿನಲ್ಲಿ ನಮಗೆ ಬೇಕಾದ ಮಾರ್ಗದರ್ಶನ ಶಕ್ತಿ, ಸಹಾಯ, ಸ್ಫೂರ್ತಿ, ಶಾಂತಿ ಇವೇ ಮೊದಲಾದ ಬದುಕನ್ನು ಬೆಳಗುವ ಅಂಶಗಳು ನಮ್ಮಲ್ಲಿವೆ. ಇಂಥ ಅಪಾರ ಶಕ್ತಿಯನ್ನು ಒಳಗಡೆ ಇರಿಸಿಕೊಂಡು ಗುಲಾಮರಂತೆ ವರ್ತಿಸಲು ಕಾರಣವೇನು? ಒಂದು: ಅಜ್ಞಾನ. ಇನ್ನೊಂದು : ಬಾಲ್ಯದಿಂದ ಬೆಳೆಸಿಕೊಂಡು ಬಂದ ನಿಷೇಧಾತ್ಮಕ ಭಾವನೆ. ಪ್ರತಿಯೊಂದು ನಿಷೇಧಾತ್ಮಕ ಭಾವನೆ ಅಥವಾ ಯೋಚನೆ, ಒಳಗಿನ ಆ ಅಪಾರವಾದ ಶಕ್ತಿಯನ್ನು ಪರಿಮಿತಗೊಳಿಸಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಪ್ರತಿಯೊಂದು ಆತ್ಮವಿಶ್ವಾಸದ ಮತ್ತು ರಚನಾತ್ಮಕ ಯೋಚನೆಯು ನಮ್ಮ ಅಭ್ಯುದಯ ಅಭಿವೃದ್ಧಿಗೆ ನೆರವಾಗುತ್ತದೆ.
ಈ ವಿವೇಕವಾಣಿಯನ್ನು ಮತ್ತೆ ಮತ್ತೆ ಮನನ ಮಾಡಿ:
'ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವವರು ನೀವೇ ಎಂಬುದನ್ನು ಮರೆಯಬೇಡಿ. ಎಲ್ಲ ಹೊಣೆಯನ್ನು ಹೊರಲು ಸಿದ್ಧರಾಗಿ, ಮಿಂಚಿಹೋದ ಕಾರ್ಯವನ್ನು ಕುರಿತು ಚಿಂತಿಸುತ್ತ ವ್ಯರ್ಥ ಕಾಲಹರಣ ಬೇಡ. ಅನಂತ ಭವಿಷ್ಯ ನಿಮ್ಮ ಮುಂದೆ ಇದೆ. ನೀವು ಈ ಸಂಗತಿಯನ್ನು ಸದಾ ನೆನಪಿನಲ್ಲಿಡಬೇಕು. ನಿಮ್ಮ ಪ್ರತಿಯೊಂದು ಯೋಚನೆ, ಮಾತು ಮತ್ತು ಕೆಲಸ-ಇವೇ ನಿಮ್ಮ ಭವಿಷ್ಯತ್ತಿನ ಬೆಳಸಿನ ಬುತ್ತಿಯಾಗಿ ಪರಿಣಮಿಸುವುವು. ಕೆಟ್ಟ ಯೋಚನೆ, ಕೆಟ್ಟ ಕೆಲಸಗಳು ಕ್ರೂರ ಹುಲಿಯಂತೆ ನಿಮ್ಮ ಮೇಲೆ ನೆಗೆಯಲು ಸಿದ್ಧವಾಗಿದ್ದರೆ, ಒಳ್ಳೆಯ ಯೋಚನೆ ಮತ್ತು ಒಳ್ಳೆಯ ಕಾರ್ಯಗಳು ನೂರಾರು, ಸಾವಿರಾರು ದೇವತೆಗಳ ಸಾತ್ವಿಕ ಶಕ್ತಿಯಿಂದ ನಿಮ್ಮನ್ನು ಸದಾ ರಕ್ಷಿಸಲು ಸಿದ್ಧವಾಗಿರುತ್ತವೆ ಎಂಬ ದೃಢವಿಶ್ವಾಸವು ನಿಮ್ಮ ಪಾಲಿಗೆ ಸತ್ಕಾರ್ಯದ ಮಹಾ ಪ್ರೇರಕ ಶಕ್ತಿಯಾಗುತ್ತವೆ.'
ಈ ಮಾತುಗಳು ಶಕ್ತಿ ಸಂಜೀವಿನಿಯ ಕಿಡಿಗಳಲ್ಲವೆ? ಸತ್ಕರ್ಮಕ್ಕೆ ಪ್ರೇರಣೆ ನೀಡುವ ಸ್ಫೂರ್ತಿಯ ನಿಧಿಯಲ್ಲವೇ? ಇವುಗಳನ್ನು ಗಾಳಿಗೆ ತೂರಿ ನಾವು ಅಭ್ಯುದಯ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬಲ್ಲೆವೇ?
ನಿಮಗೆ ಈ ವಿಚಾರ ತಿಳಿದಿದೆಯೇ?
'ಪ್ರತಿಯೊಂದು ದೈಹಿಕ ಸಂವೇದನೆ ಹಾಗೂ ಬಾಹ್ಯ ಪ್ರೇರಣೆಗೆ ನಿಮ್ಮ ಪ್ರತಿಕ್ರಿಯೆ ಇವು ನಿಮ್ಮ ಮಿದುಳಿನ ಹತ್ತು ಸಾವಿರ ಮಿಲಿಯ ಕಣಗಳ ಮೇಲೆ ತಮ್ಮ ಮುದ್ರೆಯನ್ನು ಒತ್ತುತ್ತವೆ. ಈ ಪ್ರಭಾವ ಶಾಶ್ವತವಾಗಿದ್ದು ದಿನೇ ದಿನೇ ಬೆಳೆಯುತ್ತ ಹೋಗುತ್ತದೆ. ಅವುಗಳ ಒಟ್ಟು ಮೊತ್ತವೇ ನಿಮ್ಮ ವ್ಯಕ್ತಿತ್ವ ಹಾಗೂ ನಡತೆ.'
'ನಮ್ಮ ತಪ್ಪುಗಳನ್ನು ದೇವರು ಕ್ಷಮಿಸಿಯಾನು! ಆದರೆ ನಮ್ಮ ನರಮಂಡಲ ಕ್ಷಮಿಸಲಾರದು' ಎಂದು ಮನೋವಿಜ್ಞಾನಿ ಹೇಳುತ್ತಾನೆ.
ಒಳಿತೋ ಕೆಡುಕೋ, ನಿಮ್ಮ ಅದೃಷ್ಟವನ್ನು ನೀವೇ ರೂಪಿಸಿಕೊಳ್ಳುತ್ತೀರಿ. ಆದುದರಿಂದ ಸ್ಯಾಮ್ಯುಯೆಲ್ ಸ್ಮಾಲ್ಸ್ ಹೇಳುವಂತೆ 'ಒಂದು ಒಳ್ಳೆಯ ಯೋಚನೆ ಮಾಡಿ ಅದು ನಿಮ್ಮನ್ನು ಒಂದು ಒಳ್ಳೆಯ ಕೆಲಸಕ್ಕೆ ಪ್ರೇರೇಪಿಸೀತು. ಒಂದು ಒಳ್ಳೆಯ ಕಾರ್ಯವನ್ನು ಕೈಗೊಳ್ಳಿರಿ ಅದು ನಿಮ್ಮನ್ನು ಒಂದು ಒಳ್ಳೆಯ ಅಭ್ಯಾಸಕ್ಕೆಳೆಸೀತು. ಒಂದು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ ಅದು ನಿಮ್ಮ ನಡತೆಗೆ ಪುಟಗೊಟ್ಟಿತು. ಒಳ್ಳೆಯ ನಡತೆಯಿಂದ ನಿಮ್ಮ ಅದೃಷ್ಟ ಕುದುರಲೇ ಬೇಕು.' ಅಭ್ಯಾಸದ ಹಿರಿಮೆಗರಿಮೆಯೇ ಇಲ್ಲಿ ಧ್ವನಿತವಾಗಿದೆ!
ಇನ್ನಾದರೂ ನೀವು ಸ್ವಲ್ಪ ಜಾಗರೂಕರಾಗುತ್ತೀರಾ? ಅದ್ಭುತಯಂತ್ರವಾದ ನಿಮ್ಮ ದೇಹ ಮನಸ್ಸುಗಳಲ್ಲಿ ಅಡಗಿರುವ ಸುಪ್ತಶಕ್ತಿಯನ್ನು ಎಚ್ಚರಿಸಿ ಅದರಿಂದ ಹೆಚ್ಚಿನ ಪ್ರಯೋಜನ ಪಡೆಯುವಿರಾ? ಹೌದು, ಆಗ ನೀವು ತೀವ್ರ ಬದಲಾವಣೆಯನ್ನು ನಿಮ್ಮ ಬದುಕಿನಲ್ಲಿ ತಂದುಕೊಳ್ಳುವಿರಿ. ಹೇಗೆ ಎನ್ನುವಿರಾ? ಒಂದು ದಾರಿ ಇದೆ.
ಕ್ರಮಬದ್ಧತೆಯ ನಿಯಮವನ್ನು ಅನ್ವಯಿಸುವುದರಿಂದ ನಮ್ಮಲ್ಲಿನ ಸುಪ್ತಶಕ್ತಿಯನ್ನು ಎಚ್ಚರಿಸಬಹುದು. ನಿತ್ಯ ಜೀವನದ ಎಲ್ಲ ಭಾಗಕ್ಕೂ ಕ್ರಮಬದ್ಧತೆಯ ನಿಯಮವನ್ನು ಅನ್ವಯಿಸಬೇಕು. ಗೊತ್ತುಪಡಿಸಿಕೊಂಡ ಸಮಯದಲ್ಲಿ ನಿರ್ದಿಷ್ಟ ಕೆಲಸ ಮಾಡುವ ಕಲೆ ಅದು. ಕೆಲವರಿಗೆ ಈ ನಿಯಮ ಬಾಲ್ಯದಿಂದಲೇ ಸ್ವಭಾವ ಸಿದ್ಧವಾಗಿರಬಹುದು. ಇನ್ನು ಕೆಲವರು ಪ್ರಯತ್ನದಿಂದ ಈ ಕಲೆಯನ್ನು ಕಲಿಯಬೇಕಾಗಬಹುದು.
ಹಾಕಿಕೊಂಡ ನಿಯಮಗಳನ್ನು ನಿತ್ಯನಿಯಮಿತ ರೀತಿಯಲ್ಲಿ ಪಾಲಿಸುವುದೇ ನಿಷ್ಠೆ. ನಿಷ್ಠೆಯಿಲ್ಲದೇ ಯಾವ ಪ್ರಗತಿಯೂ ಇಲ್ಲ. ನಮ್ಮ ಜ್ಞಾನಸಂಗ್ರಹವು ನಿಜವಾದ ಶಕ್ತಿಯಾಗಿ ಪರಿಣಮಿಸಬೇಕಾದರೆ ನಿಯಮಪಾಲನೆಯಲ್ಲಿ ದೃಢನಿಷ್ಠೆ ಇರಬೇಕು. ಅನಿಯಮಿತ ಜೀವನದಿಂದ ಯಾವ ಕಾರ್ಯದಲ್ಲೂ ಯಶಸ್ವಿಯಾಗಲಾರೆವು. ನಿಮ್ಮ ಶಕ್ತಿ ವೃದ್ಧಿಸಬೇಕಾದರೆ ನಿಯಮಪಾಲನೆ ಮಾಡಬೇಕಾದವರು ನೀವೇ.
ಹೌದು, ನಿಮಗೆ ನೀವೇ. ನೀವೇ ನಿಮ್ಮ ಶತ್ರುಗಳಾಗಬಲ್ಲಿರಿ, ನೀವೇ ನಿಮ್ಮ ಮಿತ್ರರೂ ಆಗಬಲ್ಲಿರಿ. ಹೇಗೇನ್ನುವಿರಾ? ಮುಂದೆ ಓದಿ.
ಮುಂದುವರಿಯುವುದು..
Comments