ನಿಮಗೆ ನೀವೇ ಗ್ರಂಥ : ಬದುಕಲು ಕಲಿಯಿರಿ part : 32

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು ,: ಸ್ವಾಮಿ ಜಗದಾತ್ಮಾನಂದಜಿ 

 ಭಾಗ : 32 


 ನಿಮಗೆ ನೀವೇ 



 ಸತ್ತಮೇಲೆ ಜೀವಾತ್ಮನ ಅವಸ್ಥೆಯನ್ನು ಕುರಿತು ಪುರಾಣಗಳು ಹೇಳುವ ಕತೆಯನ್ನು ನೀವು ಕೇಳಿದ್ದೀರಾ? ಈ ಲೋಕದಲ್ಲಿ ಆತ ಮಾಡಿದ ತಪ್ಪಿಗಾಗಿ ನರಕದಲ್ಲಿ ಭೀಕರವಾದ ದಂಡನೆಯನ್ನು ಅನುಭವಿಸಬೇಕಾಗುತ್ತದಲ್ಲವೇ? ಅದನ್ನು ನೀವು ನರಕಯಾತನೆ ಎನ್ನುತ್ತೀರಷ್ಟೆ? ಅದಕ್ಕಿಂತಲೂ ಭೀಕರವಾದ ಯಮಯಾತನೆಯನ್ನು ನಾವಿಲ್ಲಿ ಅನುಭವಿಸಬೇಕಾಗುತ್ತದೆಂದು ಜೇಮ್ಸ್ ಹೇಳಿದ. ಕಾರಣ ಗೊತ್ತೇನು? ನಮ್ಮ ದುರಭ್ಯಾಸ ದುರ್ನಡತೆಗಳು.


 'ತಪ್ಪು ದಾರಿಯಲ್ಲಿ ನಡೆಯುವ ಅಭ್ಯಾಸದಿಂದ ಈ ಜಗತ್ತಿನಲ್ಲಿ ನಾವು ನಿರ್ಮಿಸಿಕೊಳ್ಳುವ ನರಕ, ಪುರಾಣಗಳು ಹೇಳುವ ನರಕಕ್ಕಿಂತ ಕನಿಷ್ಠವಾದುದಲ್ಲ ಎಂದು ಆತ ಸಾರಿದ.


ಹೌದು! ಪುರಾಣಗಳು ಹೇಳುವ ನರಕಕ್ಕಿಂತಲೂ ನಮ್ಮ ದುರ್ನಡತೆಗಳಿಂದ ನಾವೇ ನಿರ್ಮಿಸಿಕೊಳ್ಳುವ ನರಕ ಭಯಾನಕವಾದುದು.


ಆಶ್ಚರ್ಯ! ನಮ್ಮ ನರಕವನ್ನು ನಿರ್ಮಿಸಿಕೊಳ್ಳುವವರು ನಾವೇ! ನರಕ ಮಾತ್ರವಲ್ಲ, ಸ್ವರ್ಗವನ್ನು ನಿರ್ಮಿಸಿಕೊಳ್ಳುವವರೂ ಹೌದು.


ತಂದೆ ಮಾಡಿದ ಸಾಲವನ್ನು ಮಗ ತೀರಿಸಬಹುದು. ಅಣ್ಣ ಕಟ್ಟಿಸಲು ಪ್ರಾರಂಭಿಸಿದ ಸೌಧವನ್ನು ತಮ್ಮನು ಪೂರ್ಣಗೊಳಿಸಬಹುದು. ಆದರೆ ನಿಮ್ಮ ಹಸಿವು ನೀರಡಿಕೆಗಳನ್ನು ನೀವೇ ಪರಿಹರಿಸಿಕೊಳ್ಳಬೇಕಲ್ಲವೇ? ನಿಮ್ಮ ಸಮಸ್ಯೆಗಳಿಗೆ ನೀವೇ ಉತ್ತರ ಹುಡುಕಬೇಕು. ಇತರರೇನೋ ನಿಮಗೆ ಮಾರ್ಗದರ್ಶನ ಮಾಡಬಹುದು. ಆದರೆ ಆ ಮಾರ್ಗದಲ್ಲಿ ನಡೆಯಬೇಕಾದವರು ನೀವೇ. ಆಗ ಮಾತ್ರ ನಿಮ್ಮ ಬಾಳಿಗೊಂದು ಸಾರ್ಥಕತೆ ಬಂದೀತು. ವ್ಯವಸ್ಥಿತ ಜೀವನವನ್ನು ನಡೆಯಿಸಿ ನೀವು ಭಾಗ್ಯಶಾಲಿಗಳೂ ಆಗಬಲ್ಲಿರಿ. ಎಲ್ಲವೂ ಕಾಲಾಧೀನವೆನ್ನುತ್ತ ಯಾವ ಕೆಲಸವನ್ನೂ ಆಸ್ಥೆಯಿಂದ ನಿರ್ವಹಿಸದೇ ನಿಮ್ಮ ಬಾಳನ್ನು ಹಾಳುಗೆಡಹಿ ಗೋಳನ್ನು ಆಹ್ವಾನಿಸಲೂ ಬಲ್ಲಿರಿ.





 ಶಕ್ತಿಯೇ ಜೀವನ 


ಜಗತ್ತು ಪೂಜಿಸುವುದು ಶಕ್ತಿಯನ್ನು; ದುರ್ಬಲತೆಯನ್ನಲ್ಲ ಎಂಬುದನ್ನು ಯುವಕರು ಸರಿಯಾಗಿ ತಿಳಿದಿರಬೇಕು. ಕ್ರಿಕೆಟ್ ಮೈದಾನದಲ್ಲಿ ದಾಂಡಿಗ ನಾಲ್ಕು ಸಿಕ್ಸರ್ ಬಾರಿಸಿದರೆ ಸಹಸ್ರಾರು ಯುವಕರು ಚಪ್ಪಾಳೆ ತಟ್ಟಿ, ಹುಚ್ಚೆದ್ದು ಕುಣಿದು ಅವನನ್ನು ಹೆಗಲಮೇಲೇರಿಸಿಕೊಂಡು ರಥೋತ್ಸವ ಮಾಡುವುದಿಲ್ಲವೇ? ಅದು ಅವನ ಶಕ್ತಿ ಸಾಮರ್ಥ್ಯ ದಕ್ಷತೆಗಳಿಗೆ ಸಲ್ಲಿಸಿದ ಗೌರವವಲ್ಲವೇ? ಶಕ್ತಿಯನ್ನು ಎಲ್ಲರೂ ಭಕ್ತಿ ಗೌರವಗಳಿಂದ ನೋಡುತ್ತಾರೆ. 'ಶಕ್ತನಾದರೆ ನೆಂಟರೆಲ್ಲ ಹಿತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು' ಎಂದು ಪುರಂದರದಾಸರು ಹೇಳಿದ ಮಾತು ಎಷ್ಟು ಸತ್ಯ! ತಂದೆತಾಯಂದಿರು ಪ್ರೀತಿಯಿಂದ ಸಾಕಿ ಸಲಹಿದ ಮಗುವು ಬೆಳೆದು ದುರ್ಬಲನೂ, ರೋಗಿಷ್ಠನೂ, ದಡ್ಡನೂ, ಮೂರ್ಖನೂ ಆದರೆ ಏನೆನ್ನುವರು ಬಲ್ಲಿರಾ? 'ಯಾಕಾಗಿ ಹುಟ್ಟಿದನಿವನು, ಕುಲಕ್ಕೆ ಕಳಂಕ' ಎನ್ನುವರಲ್ಲವೇ? ಹೌದು, ಶಕ್ತನಿಗೆ ಎಲ್ಲರೂ ಆಪ್ತರು. ಅಶಕ್ತನನ್ನು ಎಲ್ಲರೂ ತಿರಸ್ಕರಿಸುವರು, ಮೂಲೆಗೆ ತಳ್ಳುವರು. ದೇಹ ಮನಸ್ಸು ಸರಿಯಾಗಿರುವ ನಾವು ನಮಗೆ ಕೊಡ ಮಾಡಿದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ನಮ್ಮ ಶಕ್ತಿಯನ್ನು ಸರ್ವತೋಮುಖವಾಗಿ ಹೆಚ್ಚಿಸಿಕೊಳ್ಳಬೇಕಲ್ಲವೇ? ದೈಹಿಕ, ಮಾನಸಿಕ, ಬೌದ್ಧಿಕ, ನೈತಿಕ ಬಲಗಳ ಜೊತೆಗೆ ನಾವು ಆತ್ಮಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. 'ಶಕ್ತಿಯೇ ಜೀವನ, ದುರ್ಬಲತೆಯೇ ಮರಣ.' ಇದೊಂದು ದೊಡ್ಡ ಸತ್ಯ. 'ಶಕ್ತಿ ಸೌಭಾಗ್ಯ, ಚಿರಜೀವನದ ಒಳಗುಟ್ಟು, ದುರ್ಬಲತೆ -ಚಿಂತೆ, ದುಃಖಗಳ ಮೂಲ' ಎಂದ ಸ್ವಾಮಿ ವಿವೇಕಾನಂದರು 'ಬಲಿಷ್ಠರಾಗಿ, ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಛಾಶಕ್ತಿಯ ಬಲ -ಇವುಗಳನ್ನು ಬೆಳೆಸಿಕೊಂಡು ನಿಮ್ಮ ಕಾಲ ಮೇಲೆ ನಿಲ್ಲಿ' ಎಂದು ತಿರುತಿರುಗಿ ಸಾರಿದರು. ದುರ್ಬಲನು ತಾನು ನಾಶವಾಗುವುದಲ್ಲದೇ ಇತರರಲ್ಲಿ ಶೋಷಣೆ ಮತ್ತು ಹಿಂಸೆಯ ಪ್ರವೃತ್ತಿಯನ್ನು ಹುಟ್ಟಿಸುತ್ತಾನೆ. ನಮ್ಮ ಪರಂಪರೆ ನೀಡುವ ಮುಖ್ಯ ಬೋಧನೆಯೇ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂಬುದು.  ನಿರ್ವೀರ್ಯನಾಗಬೇಡ   ದುರ್ಬಲನಾಗಬೇಡ ಎಂದು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ. ದೇವತೆಗಳೂ ದುರ್ಬಲರನ್ನೇ ನಾಶ ಮಾಡುತ್ತಾರೆ, ಬಲಿಷ್ಠರನ್ನಲ್ಲ ಎಂಬ ಅರ್ಥಪೂರ್ಣ ಉಕ್ತಿ ಇದೆ. 'ಕುದುರೆಯನ್ನು ಬಲಿ ಕೊಡುವುದಿಲ್ಲ, ಆನೆಯನ್ನು ಬಲಿಕೊಡುವುದಿಲ್ಲ. ಹುಲಿಯನ್ನಂತೂ ಇಲ್ಲವೇ ಇಲ್ಲ. ಆದರೆ ಮೇಕೆಯನ್ನು ಹಿಡಿದು ಬಲಿಕೊಡುತ್ತಾರೆ. ಅಯ್ಯೋ! ವಿಧಿಯು ದುರ್ಬಲರನ್ನು ನಾಶಗೊಳಿಸುತ್ತದೆ!'


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box