ನನ್ನ ಸಮಯ ಅಮೂಲ್ಯ - ಗ್ರಂಥ : ಬದುಕಲು ಕಲಿಯಿರಿ PART 31

 ಗ್ರಂಥ : ಬದುಕಲು ಕಲಿಯಿರಿ 

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

ಭಾಗ :  31 


 ನನ್ನ ಸಮಯ ಅಮೂಲ್ಯ 


 ಪ್ರಸಿದ್ಧ ಜನನಾಯಕರೂ, ಉದ್ಯಮಿಗಳೂ ಆದ ಹಿರಿಯರೊಬ್ಬರನ್ನು ನಾನು ಅವರ ಆಫೀಸಿನಲ್ಲಿ ಭೇಟಿಯಾದೆ. ಅವರ ಕೋಣೆಯಲ್ಲಿದ್ದ ಮೇಜಿನ ತುದಿಗೆ 'ನನ್ನ ಸಮಯ ಅಮೂಲ್ಯವಾಗಿದೆ' ಎಂಬ ಪುಟ್ಟ ಬೋರ್ಡನ್ನು ತೂಗಹಾಕಿದ್ದರು. ಏನಿದು? ಇವರ ಸಮಯ ಅಮೂಲ್ಯ, ನನ್ನ ಸಮಯ ಅಮೂಲ್ಯವಲ್ಲವೇ? ಎಂದು ಯೋಚಿಸುತ್ತ ತಿರುಗಿ ಅದೇ ವಾಕ್ಯವನ್ನು ಓದಿದೆ. ಯಾರು ಅಲ್ಲ ಎಂದವರು? ತನ್ನ ಸಮಯ ಅಮೂಲ್ಯವಾಗಿದೆ ಎಂಬುದನ್ನು ತಿಳಿಯದ ಹಲವರು ಇತರರ ಸಮಯವನ್ನು ಹಾಳು ಮಾಡಲೂ ಹಿಂಜರಿಯುವುದಿಲ್ಲ. ಅಂಥವರಿಗೆ ಎಚ್ಚರಿಕೆಯಾಗಿ ಅವರು ಅಲ್ಲಿ ಆ ಮಾತನ್ನು ಬರೆದಿದ್ದರು. 


 'ನನ್ನ ಸಮಯ ಅಮೂಲ್ಯವಾಗಿದೆ' ಎಂದು ಬರೆದಿರಿಸಿಕೊಂಡ ಅವರು ದಿನದಲ್ಲಿ ಹದಿನಾರು ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ದುಡಿಯಬಲ್ಲರು. ವಿಶಾಲವಾಗಿ ಬೆಳೆದ ಸಂಸ್ಥೆಯ ನೂರಾರು ಸಮಸ್ಯೆಗಳಿಗೆ ಸಮಾಧಾನವನ್ನೂ, ಸೂಕ್ತ ಸಲಹೆಗಳನ್ನೂ ನೀಡಬಲ್ಲರು. ಅಲ್ಲಿ ಬರೆದ ಮಾತಿನ ಅರ್ಥವನ್ನು ಅವರು ಬದುಕಿನಲ್ಲಿ ಆಚರಿಸಿ, ಉಪದೇಶಿಸುವಂತಿತ್ತು. 


ನೀವು ನಿಮ್ಮ ಮನಸ್ಸಿನ ಎದುರು ಆ ಮಾತುಗಳನ್ನು ಬರೆದ ಒಂದು ಬೋರ್ಡನ್ನು ತೂಗು ಹಾಕಿ. ನಿಜವಾಗಿಯೂ ನಿಮ್ಮ ಸಮಯ ಅಮೂಲ್ಯವಾಗಿದೆ.


ಒಂದು ಸಣ್ಣ ಲೆಕ್ಕ ಮಾಡುತ್ತೀರಾ? ಒಂದು ವರ್ಷದಲ್ಲಿ 8760 ಗಂಟೆಗಳಿವೆಯಷ್ಟೆ! ಈ ಸಮಯವನ್ನು ನೀವು ಹೇಗೆ ಕಳೆಯುತ್ತೀರೆಂಬುದನ್ನು ಸ್ವಲ್ಪ ಯೋಚಿಸಿ. ಇಷ್ಟು ಸಮಯ ನಿದ್ರೆಗೆ, ಇಷ್ಟು ಸಮಯ ಕೆಲಸಕ್ಕೆ, ಆಹಾರ ಸೇವನೆಗೆ, ವಿನೋದ ವಿಹಾರಕ್ಕೆ ಇಷ್ಟು ಹೀಗೆಂದು ವಿಂಗಡಿಸಿರಿ. ಒಂದು ಪೆನ್ಸಿಲ್ ತೆಗೆದುಕೊಂಡು ಕಾಗದದ ಮೇಲೆ ಶಾಂತಚಿತ್ತರಾಗಿ ಬರೆಯಿರಿ. ನೀವು ಆಶ್ಚರ್ಯಚಕಿತರಾಗುತ್ತೀರಿ ನಿಮಗೆ ಎಷ್ಟು ಹೊತ್ತು ವಿರಾಮ ಕಾಲವಿದೆಯೆಂದು ಆಗ ಅರ್ಥವಾಗುವುದು. ಇನ್ನೊಂದು ಆಶ್ಚರ್ಯ ನಿಮ್ಮನ್ನು ಕಾದಿರುತ್ತದೆ. ಅಷ್ಟು ವಿರಾಮ ಕಾಲವನ್ನು ನೀವು ಹೇಗೆ ಸಾರ್ಥಕವಾಗಿಯೋ, ನಿರರ್ಥಕವಾಗಿಯೋ ಕಳೆದಿರೆಂಬುದು. ಸಮಯದ ಕಡೆಗೆ ಗಮನ ಕೊಡದೆ ಹಣವನ್ನು ಕೂಡಿ ಹಾಕುವುದು ಮಾತ್ರ ಬುದ್ದಿವಂತಿಕೆ ಎಂದು ತಿಳಿದರೆ ನಿಮ್ಮ ಅರ್ಥ ಶಾಸ್ತ್ರಿಕೆಯನ್ನು ಮೆಚ್ಚುವಂತಿಲ್ಲ. ನೆನಪಿಡಿ: ನಿಮ್ಮ ಸಮಯದ ಸದ್ವಿನಿಯೋಗವೇ ಯಶಸ್ಸಿನ ಗುಟ್ಟು- 


ದಿನದಲ್ಲಿ ನೀವು ಒಂದೆರಡು ಗಂಟೆಗಳ ಕಾಲ ವ್ಯರ್ಥಹರಟೆಯಲ್ಲಿ ಅಥವಾ ಯಾವ ಕೆಲಸವೂ ಇಲ್ಲದೆ ಕಳೆದಿರೆಂದರೆ ಒಂದು ವರ್ಷದ ನಿಮ್ಮ ಅಮೂಲ್ಯ ಸಮಯದಲ್ಲಿ ನೀವು ಸಾಧಿಸಬಹುದಾಗಿದ್ದ ಅದ್ಭುತ ಹೇಗೆ ಮಾಯವಾಗುವುದೆಂಬುದನ್ನು ಯೋಚಿಸಿ. ಮತ್ತೆ ನೋಡೋಣವೆಂದು ನಿಮ್ಮ ಕೆಲಸವನ್ನು ಮುಂದಕ್ಕಿರಿಸಿಕೊಳ್ಳುತ್ತೀರಾ? ಕಳೆದ ಸಮಯ ಹಿಂತಿರುಗಿ ಬರುವುದೇ? ನಮ್ಮ ಜೀವನ ದೀರ್ಘವಾಗಿದೆಯೇ ಅದನ್ನು ಸಿಕ್ಕಾಪಟ್ಟೆ ಉಪಯೋಗಿಸಿ ಮತ್ತೆ ಸರಿಪಡಿಸಿಕೊಳ್ಳುವುದಕ್ಕೆ? ನಿಜವಾದ ಮಿತವ್ಯಯಿಯ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳಿಗೆ ಸ್ಥಾನವಿರದು, ಉದ್ದೇಶ ಹೀನ ಚರ್ಚೆಯಲ್ಲಿ ನಾವೇಕೆ ಮಗ್ನರಾಗಬೇಕು? ನಿಶ್ಚಿತ ಸಮಯವನ್ನು ಗೊತ್ತುಪಡಿಸಿಕೊಂಡು ನೀವು ಕಾರ್ಯಮಗ್ನರಾಗಿ. ಒಸ್ಟರ್ ಹೇಳಿದ ಮಾತನ್ನು ನೀವು ಮರೆಯುತ್ತೀರಾ? ನೀವು ಈಗಿಂದೀಗ ಜಾಗರೂಕರಾಗದಿದ್ದರೆ ಮತ್ತೆ ಪಶ್ಚಾತ್ತಾಪ ಪಡಬೇಕಾಗುವುದು. ಉಮರ್ ಖಯ್ಯಾಮ್ ಹೇಳಿದಂತೆ :


'ನಮ್ಮಾ ಯುಸ್ಸಿನ ಹಕ್ಕಿ ಪಾಶ್ವ, ದೂರವೆ ಕಿರಿದು ಅದು ರೆಕ್ಕೆ ಎತ್ತಿಹುದು ನೋಡು ಮನ ಮಾಡು.'


 'ಈ ದಿನ ಎಂದಿಗೂ ಹಿಂದಿರುಗಿ ಬರಲಾರದೆಂಬುದನ್ನು ಯೋಚಿಸು' ಎಂದು ದಾಂತೆ ಸಾರಿದ. ನಂಬಲಸಾಧ್ಯವಾದ ವೇಗದಿಂದ ನಮ್ಮ ಜೀವನ ಜಾರಿ ಹೋಗುತ್ತಿದೆ. ಸೆಕೆಂಡಿಗೆ 19 ಮೈಲುಗಳ ವೇಗದಲ್ಲಿ ನಮ್ಮ ಯಾನ ಸಾಗಿದೆ, ಅಂತರಿಕ್ಷದಲ್ಲಿ, ಈ ದಿನ, ಈ ಕ್ಷಣ ಮಾತ್ರ ನಮ್ಮ ಅಮೂಲ್ಯ ಸೊತ್ತು. ಹೌದು, ಅದು ನಮ್ಮ ಏಕಮಾತ್ರ ನಿಧಿ. ಭೂತಭವಿಷ್ಯಗಳ ಚಿಂತೆಯನ್ನು ಮರೆತು ಸರ್ವ ಪ್ರಯತ್ನಗಳಿಂದಲೂ ಈ ಕ್ಷಣದಲ್ಲಿ ಯಶಸ್ವಿಯಾಗಿ ಬದುಕಲು ದಿನದಿನವೂ ಯತ್ನಿಸೋಣ. ಆಗ ಮಾತ್ರ ನಮ್ಮ ಬಾಳಿಗೆ ಹುರುಪು ಹೊಸತನ, ಬೆಳಕು ಇವು ಬಂದೇ ಬರುತ್ತವೆ. ಒಂದೊಂದೇ ದಿನಗಳು ಸೇರಿ ವರ್ಷಗಳಾಗುತ್ತವೆ. ಜೊತೆಗೆ ದಿನ ದಿನವೂ ಮಾಡಿದ ಒಳ್ಳೆಯ ಕೆಲಸಗಳ ಫಲವೂ ಸಂಸ್ಕಾರಗಳೂ ಕಲೆತು ವೃದ್ಧಿಯಾಗುತ್ತವೆ.


 'ನೀವು ಗಡ್ಡವನ್ನು ಏಕೆ ಕ್ಷೌರ ಮಾಡಿಕೊಳ್ಳುತ್ತಿಲ್ಲ' ಎಂದು ಯಾರೋ ಜಾರ್ಜ್ ಬರ್ನಾರ್ಡ್ ಷಾ ಅವರನ್ನು ಕೇಳಿದರು. ಆ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು: 'ಗಡ್ಡ ಮಾಡಿಕೊಂಡರೆ ಸಮಯ ವ್ಯರ್ಥವಾಗುತ್ತದೆ. ನಾನು ದಿನಕ್ಕೆ ನಾಲ್ಕು ಮಿನಿಟುಗಳಂತೆ ಜೀವನದಲ್ಲಿ ಹತ್ತು ತಿಂಗಳುಗಳನ್ನು ಗಳಿಸಿದ್ದೇನೆ.' 


ಗಡ್ಡಧಾರಿಗಳೆಲ್ಲ ಸಮಯದ ಸದುಪಯೋಗ ಮಾಡುತ್ತಾರೆಂದಲ್ಲ. ಸಮಯದ ಬೆಲೆಯನ್ನು ಅರಿತ, ಅತ್ಯಂತ ಎಚ್ಚರಿಕೆಯಿಂದ ತನ್ನ ಪಾಲಿಗೆ ದೊರೆತ ಸಮಯವನ್ನು ಸ್ವಲ್ಪವೂ ವ್ಯರ್ಥವಾಗದಂತೆ ನೋಡಿಕೊಂಡ ಹಿರಿಯ ಅನುಭವಿಯೊಬ್ಬರ ಮಾತು ಅದು.


ಹೌದು, ಜೀವನ ಬಹಳ ದೀರ್ಘವಾಗಿಲ್ಲ. ಸಮಯ ಅಮೂಲ್ಯ. ಈ ಕ್ಷಣವೇ ಮುಂದಾಗಿ. 


 ಮುಂದುವರಿಯುವುದು..

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box