ಬೇಗ ಬೇಗನೆ, ಮೆಲ್ಲ ಮೆಲ್ಲನೆ - ಗ್ರಂಥ : ಬದುಕಲು ಕಲಿಯಿರಿ PART 30
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 30
ಬೇಗ ಬೇಗನೆ, ಮೆಲ್ಲ ಮೆಲ್ಲನೆ
ಬೇಗ ಬೇಗನೇ ಮುಂದುವರಿಯಲು ನೀವು ಮೆಲ್ಲ ಮೆಲ್ಲನೇ ನಡೆಯಬೇಕು. ಇದೆಂಥ ವಿರೋಧಾಭಾಸ ಎನ್ನಬಹುದು ನೀವು ಯೋಚಿಸಿ ನೋಡಿ. ಆಂಗ್ಲ ಭಾಷೆಯಲ್ಲಿನ hasten slowly ಎನ್ನುವ ಉಕ್ತಿಯನ್ನು ಕೇಳಿದ್ದೀರಾ?
ಒಂದು ಪತ್ರಿಕಾ ಕಛೇರಿಗೆ ಒಬ್ಬ ಟೈಪಿಸ್ಟ್ ಹೊಸದಾಗಿ ಸೇರಿಕೊಂಡ. ಅವನು ವೇಗವಾಗಿ ತಪ್ಪಿಲ್ಲದೇ ಟೈಪ್ ಮಾಡುತ್ತಿದ್ದ. ಮ್ಯಾನೇಜರ್ ಅವನ ದಕ್ಷತೆಯನ್ನು ಕಂಡು ಸಂತುಷ್ಟರಾಗಿ 'ಉಳಿದವರಿಗೂ ವೇಗದ ರಹಸ್ಯವನ್ನು ತಿಳಿಸಿಕೊಡು' ಎಂದು ಆತನನ್ನು ಕೇಳಿಕೊಂಡರು. 'ವೇಗವಾಗಿ ಟೈಪು ಮಾಡಬೇಕಾದರೆ ಮೆಲ್ಲನೇ ಟೈಪ್ ಮಾಡಬೇಕು' ಎಂದು ಅವನು ರಹಸ್ಯ ಭೇದಿಸಿದಾಗ ಎಲ್ಲರೂ ಚಕಿತರಾದರು. ಅವನ ಅಭಿಪ್ರಾಯ ಇದು: 'ವೇಗವಾಗಿ ಟೈಪ್ ಮಾಡಬೇಕಾದರೆ ಮೊದಲು ಮೆಲ್ಲ ಮೆಲ್ಲನೇ ಟೈಪ್ ಮಾಡಬೇಕು. ಯಾವ ಆತುರ ಉದ್ವೇಗಗಳಿಲ್ಲದೇ ಒದ್ದಾಟ ಮಾಡದೇ, ಕೂಡಲೇ ವೇಗವನ್ನು ವರ್ಧಿಸುವ ಹಂಬಲವಿಲ್ಲದೇ ಟೈಪ್ ಮಾಡಬೇಕು. ಹೀಗೆ ಮಾಡಲು ಸದ್ಯದ ನಮ್ಮ ವೇಗವನ್ನು ಅರ್ಧಕ್ಕಿಳಿಸಬಹುದು. ಹಾಗೆ ವೇಗವನ್ನು ಅರ್ಧಕ್ಕಿಳಿಸಿದಾಗ ನಮ್ಮ ಗಲಿಬಿಲಿ ಗೊಂದಲ, ಎಲ್ಲಿ ತಪ್ಪಾಗುತ್ತದೆಯೋ ಎನ್ನುವ ಭೀತಿ ದೂರವಾಗುತ್ತದೆ. ಶಾಂತ ಚಿತ್ತರಾಗಿ ಆನಂದದಿಂದಲೇ ನಾವು ಟೈಪು ಮಾಡುತ್ತೇವೆ. ಹಾಗೆ ಒಂದು ವಾರ ಟೈಪು ಮಾಡುವಾಗ ನಮಗೆ ಗೊತ್ತಿರದಂತೆ ವೇಗವು ಹೆಚ್ಚಾಗಿರುವುದನ್ನು ಕಾಣುತ್ತೇವೆ.'
'ಅವಸರ ಆತುರಗಳಿಗೂ, ನಮ್ಮ ಕೆಲಸದ ವೇಗಕ್ಕೂ ಸಂಬಂಧವಿಲ್ಲ.' ಈ ವಿಚಾರವನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲ ಕೆಲಸಗಳನ್ನೂ ನಾವು ಆಸಕ್ತಿ, ಏಕಾಗ್ರತೆ ಮತ್ತು ಸಂತೋಷದಿಂದ ಮಾಡಬಹುದು.
ಯಕ್ಷಿಣಿ ಆಟಗಾರನೊಬ್ಬ ಒಮ್ಮೆ ಶಾಲೆಗೆ ಬಂದಿದ್ದ. ಆತ ಏಕಕಾಲದಲ್ಲಿ ಆರು ಚೆಂಡುಗಳನ್ನು ಎರಡು ಕೈಗಳಿಂದ ವೇಗವಾಗಿ ಮೇಲಕ್ಕೆಸೆಯುತ್ತಲೂ, ಅವು ಕೆಳಕ್ಕೆ ಬರುತ್ತಿರುವಷ್ಟರಲ್ಲೇ ಸ್ಪರ್ಶ ಮಾತ್ರದಿಂದಲೋ ಎಂಬಂತೆ ತಿರುಗಿ ಮೇಲೇರುವಂತೆ ಮಾಡುತ್ತಲೂ ಇದ್ದ. ಚೆಂಡುಗಳು ಅವನ ಹಸ್ತವನ್ನು ಮುಟ್ಟುತ್ತಲೇ ಪುಟ ನೆಗೆಯುವಂತೆ ತೋರುತ್ತಿದ್ದವು. ಎಷ್ಟು ಎತ್ತರಕ್ಕೆ ಹಾರಿಸಿದರೂ ಅವು ಅವನ ಕೈಯೆಡೆಗೆ ಕಾಣದ ಸೂತ್ರದಿಂದೆಳೆದಂತೆ ಓಡೋಡಿ ಬರುತ್ತಿದ್ದವು. ಅವನು ಹೊರಟು ಹೋದ ಕೂಡಲೇ ಕೆಲವು ಉತ್ಸಾಹಿಗಳು ಕೈಗೆ ಸಿಕ್ಕಿದ ಲಿಂಬೆಹಣ್ಣು, ಮೂಸಂಬಿ, ಚೆಂಡುಗಳನ್ನು ಮೇಲೆಕ್ಕೆಸೆದು ಮುಖ ಮೂತಿಗಳ ಮೇಲೆ ಬೀಳಿಸಿಕೊಂಡರು. ಕೆಲವರು ಒಂದೆರಡು ದಿನ ಯತ್ನಿಸಿ 'ಅಯ್ಯೋ, ಇದು ನಮ್ಮಿಂದಾಗದ ಕೆಲಸ' ಎಂದು ಕೈಬಿಟ್ಟರು. ಹದಿನೈದು ದಿನಗಳ ಬಳಿಕ ಮಕ್ಕಳ ಮನೋರಂಜನಾ ಕಾರ್ಯಕ್ರಮದಲ್ಲಿ ಒಬ್ಬ ವಿದ್ಯಾರ್ಥಿ ನಾಲ್ಕು ಚೆಂಡನ್ನು ಎರಡೂ ಕೈಗಳಿಂದ ಸರಸರನೆ ಹಾರಿಸಿ ಹಿಡಿದು ಎಲ್ಲರನ್ನೂ ಅಚ್ಚರಿಗೊಳಿಸಿದ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆದು ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲ 'ಹೇಗೆ ಕಲಿತೆ', 'ನನಗೂ ಹೇಳಿಕೊಡು' ಎಂದು ಅವನನ್ನು ಮುತ್ತಿ ಕೊಂಡರು. ಅವನು ಥಟ್ಟನೇ ಗುಟ್ಟು ಬಿಟ್ಟುಕೊಡಲಿಲ್ಲ. ಮ್ಯಾಜಿಕ್ ಮಾಡಿದೆ' ಎಂದ. ನಾನು ಅವನನ್ನು ಪ್ರತ್ಯೇಕವಾಗಿ ಹತ್ತಿರ ಕರೆದು ಕೇಳಿದಾಗ..... ಅವನೆಂದ... ಪ್ರತಿನಿತ್ಯ ಯಾರೂ ಇಲ್ಲದ ಜಾಗದಲ್ಲಿ ಮೊದಲು ಒಂದೇ ಚೆಂಡನ್ನು ಮಲ್ಲಮೆಲ್ಲನೇ ಒಂದೇ ಕೈಯಿಂದ ಮೇಲಕ್ಕೆ ಹಾರಿಸಿ ಅದೇ ಕೈಯಿಂದ ಹಿಡಿದೆ. ಸುಮಾರು ನೂರು ಬಾರಿ ಹಾಗೆ ಮಾಡಿದ ಮೇಲೆ ಎರಡು ಚೆಂಡುಗಳನ್ನು ಒಂದೇ ಕೈಯಿಂದ ಒಂದಾದ ಮೇಲೊಂದರಂತೆ ಹಾರಿಸಿ ಹಿಡಿದೆ. ಧೈರ್ಯ ಬಂತು. ನನಗೂ ಸಾಧ್ಯ ಎಂದು ತೋರಿತು. ಹತ್ತು ದಿನಗಳ ನಂತರ ಒಂದು ತಪ್ಪು ಇಲ್ಲದೆ ವೇಗವಾಗಿ ಹಾರಿಸಿ ಹಿಡಿಯಲು ಸಾಧ್ಯವಾಯಿತು."
ಬೇಗಬೇಗನೇ ಎನ್ನುವುದು ಮೆಲ್ಲಮೆಲ್ಲನೆಯಿಂದಲೇ ಸಾಧ್ಯ ಎಂಬುದನ್ನು ಆತ ಕಂಡು ಹಿಡಿದಿದ್ದ.
ನಮ್ಮ ಸುಪ್ತಮನಸ್ಸು ನಾವು ಪಡೆಯುವ ಎಲ್ಲ ಅನುಭವಗಳನ್ನೂ ಸಂಗ್ರಹಿಸಿರುತ್ತದೆ. ಅಭ್ಯಾಸಗಳ ನಿರ್ಮಾಣ ಮತ್ತು ನಿಯಂತ್ರಣ ಸುಪ್ತ ಮನಸ್ಸಿನ ಒಂದು ಮುಖ್ಯ ಕಾರ್ಯ. ಅದನ್ನು ನಾವು ಹೇಗೆ ನಡೆಯಿಸಿಕೊಳ್ಳುತ್ತೇವೋ ಅದು ಹಾಗೇ ನಡೆಯುತ್ತದೆ. ನಮ್ಮ ಉದ್ದೇಶದ ಸಾಫಲ್ಯಕ್ಕೆ ಸಹಾಯಕವಾಗುವಂತೆಯೂ, ವಿರೋಧವಾಗುವಂತೆಯೂ ಅದನ್ನು ದುಡಿಸಿಕೊಳ್ಳಬಹುದು. ಆತುರ, ಆಸಹನೆ, ಗಲಿಬಿಲಿ, ಗೊಂದಲಗಳನ್ನು ಅದಕ್ಕಿತ್ತರೆ ಅದನ್ನೇ ಅದು ವೃದ್ಧಿಸುತ್ತದೆ. ಕ್ರಮ, ನಿಯಮ, ಶಾಂತತೆ, ಏಕಾಗ್ರತೆಯ ಕೆಲಸವನ್ನೇ ಕೊಟ್ಟರೆ ಅದನ್ನು ವೃದ್ಧಿಸಲೂ ತನ್ನ ಸಹಾಯ ಮಾಡುತ್ತದೆ.
ಹಾರ್ಮೋನಿಯಮ್, ಪಿಟೀಲು ವಾದನಪಟುಗಳ ಬೆರಳುಗಳು ವಾದ್ಯದ ಮೂಲಕ ಹೊರಡಿಸುವ ಮಧುರ ಧ್ವನಿಯನ್ನು ನೀವು ಕೇಳಿದ್ದೀರಿ. ಗಾಯಕನು ಹಾಡುವ ರಾಗದ ಏರಿಳಿತಗಳನ್ನು ಕ್ಷಣಾರ್ಧದಲ್ಲಿ ಅವರು ಹಿಂಬಾಲಿಸುತ್ತಾರಷ್ಟೆ, ಹಾಗೆ ಬಾರಿಸುವಾಗ ಗಾಯಕನಿಗೆ ಮುಖ ಕೊಟ್ಟು, ನಗುತ್ತ, ತಮ್ಮ ಕೈಚಳಕದಿಂದ ಆತನ ಸವಾಲನ್ನು ಎದುರಿಸುತ್ತ, ತಾಳಲಯದ ಕಡೆಗೂ ಗಮನ ಹರಿಯಿಸುತ್ತ, ತಮ್ಮ ಚಾತುರ್ಯಕ್ಕೆ ಸಬಿಕರು ತೋರಿಸುವ ಆನಂದ ಅಭಿನಂದನೆಗಳನ್ನು ಆಂತರಿಕ ಆತ್ಮತೃಪ್ತಿಯ ನಗುವಿನಿಂದ ಸ್ವೀಕರಿಸುತ್ತಿರುತ್ತಾರೆ. ಗಂಟೆಗಟ್ಟಲೆ ವಾದ್ಯ ಬಾರಿಸಿದರೂ ಅವನ ಆನಂದ ಸ್ಫೂರ್ತಿಗಳಿಗೆ ಕೊರತೆಯಿಲ್ಲ. ಅಂತರಿಕ ಆತ್ಮ ತೃಪ್ತಿಯ ನಗುವಿನಿಂದ ಸ್ವೀಕರಿಸುತ್ತಿರುತ್ತಾರೆ. ಗಂಟೆಗಟ್ಟಲೆ ವಾದ್ಯ ಬಾರಿಸಿದರೂ ಅವನ ಆನಂದ ಸ್ಫೂರ್ತಿಗಳಿಗೆ ಕೊರತೆಯಿಲ್ಲ.
ಕಛೇರಿ ನಡೆಯುವ ವೇಳೆ ವಾದ್ಯ ಬಾರಿಸುವವರು ಎಲ್ಲೆಲ್ಲಿ ಹೇಗೆ ಬೆರಳಿಡಬೇಕು ಎಂಬುದಕ್ಕೆ ಸ್ವಲ್ಪವಾದರೂ ಗಮನ ಕೊಡುವರೇ? ಇಲ್ಲ. ಹಾಗೆ ಗಮನವಿತ್ತರೆ ಅವರಿಂದ ಸರಿಯಾಗಿ ಬಾರಿಸಲು ಸಾಧ್ಯವಾಗುವುದೇ? ಖಂಡಿತ ಸಾಧ್ಯವಿಲ್ಲ. ಅವರ ಹೊರಮನಸ್ಸು, ಹಲವು ಕಡೆ ಗಮನ ವಿತ್ತರೂ ಒಳಮನಸ್ಸು ಅವರ ಬೆರಳುಗಳನ್ನು ಹೇಗೆ ಬೇಕೋ ಹಾಗೆ ನಡೆಸುತ್ತದಲ್ಲವೇ? ಇದರ ರಹಸ್ಯವೇನು?
ಯಾವುದೇ ಕಲೆ ಅಥವಾ ಕೆಲಸದಲ್ಲಿ ನಮಗೆ ಪೂರ್ಣ ದಕ್ಷತೆ ಬರಬೇಕಾದರೆ ಅದರ ಕಾರ್ಯ ವಿಧಾನ ನಮ್ಮ ಸುಪ್ತಮನಸ್ಸಿನಲ್ಲಿ ಸರಿಯಾಗಿ ನೆಲೆನಿಲ್ಲಬೇಕು. ಅದನ್ನು ಮಾಡುವಾಗ ಲಕ್ಷ್ಮ ಕೊಡದೆ ಸರಾಗವಾಗಿ ಮಾಡುವಂತಾಗಬೇಕು. ತನ್ಮೂಲಕ ಸಂತೋಷವೂ ಉಂಟಾಗಬೇಕು. ಕೆಲಸವನ್ನೋ, ಕಲೆಯನ್ನೋ ಅವಸರ ಆತುರದ ಭಾರ ಹೊರಿಸದೇ ಮೆಲ್ಲಮೆಲ್ಲನೇ ಕಲಿಯಲು ಯತ್ನಿಸಿದರೆ ಅದನ್ನು ಸರಿಯಾಗಿ, ಪೂರ್ಣವಾಗಿ ಕಲಿಯಬಲ್ಲೆವು. ಮಾತ್ರವಲ್ಲ, ಯಾವ ಕಷ್ಟವನ್ನೂ ಪಡದೆ ಅಥವಾ ಭಯವಿಲ್ಲದೇ ಮುಂದೆ ಅವಕಾಶ ಬಂದಾಗ ಪುನಃ ಅದನ್ನು ಮಾಡಬಲ್ಲೆವು
ನೀವು ಇತ್ತೀಚೆಗೆ ಸೈಕಲ್ ಸವಾರಿ ಮಾಡದೇ ಸುಮಾರು ಹತ್ತು ವರ್ಷಗಳೇ ಆಗಿರಬಹುದು. ಆದರೆ ಒಮ್ಮೆ ತಿರುಗಿ ಸವಾರಿ ಮಾಡಲು ಯತ್ನಿಸಿ. ನಿಮ್ಮ ಸುಪ್ತ ಮನಸ್ಸು ಖಂಡಿತವಾಗಿ ನಿಮಗೆ ಸಹಾಯಗೈಯುವುದು. ನೀವು ಭಯ ಸಂಶಯವಿಲ್ಲದೇ ಸಂತೋಷದಿಂದ ಸವಾರಿ ಮಾಡುವಿರಿ.
ಸಣ್ಣ ಕೆಲಸವಾದರೂ ಮನಸ್ಸು ಕೊಟ್ಟು ಚೆನ್ನಾಗಿ ಮಾಡಬೇಕು. ಏಕೆ ಎಂಬುದು ನಿಮಗೀಗ ಗೊತ್ತಾಗಿರಬಹುದಲ್ಲವೇ?
ಕಲಿಕೆಯಲ್ಲಿ ಈ ತತ್ವದ ರಹಸ್ಯ ಹಲವು ವಿದ್ಯಾರ್ಥಿಗಳಿಗೆ ಅಪಾರ ಸ್ಫೂರ್ತಿಯನ್ನು ನೀಡಬಲ್ಲದು. ಅವರ ಅಧ್ಯಯನದ ಅಲ್ಲ ಬದುಕಿನ ದಿಕ್ಕನ್ನೇ ಬದಲಿಸಬಲ್ಲುದು.
ಮುಂದುವರಿಯುವುದು..
Comments