ಏಕಿಷ್ಟು ಅವಸರ ? - ಗ್ರಂಥ : ಬದುಕಲು ಕಲಿಯಿರಿ PART 29
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 29
ಏಕಿಷ್ಟು ಅವಸರ ?*
ಕೆಲವರ ಅವಸರ ಹೇಳತೀರದು. ಅವರು ಆಫೀಸಿನಿಂದ ಮನೆಗೆ ಓಡೋಡಿ ಬರುತ್ತಾರೆ, ಬೇಗ ಬೇಗನೇ ಊಟ ಮಾಡುತ್ತಾರೆ, ಎಲ್ಲ ಕೆಲಸಗಳಲ್ಲೂ ತಲೆ ಹಾಕುತ್ತಾರೆ. ಯಾವುದನ್ನೂ ಪೂರ್ಣ ಮಾಡುವುದಿಲ್ಲ. 'ಬೇಗ ಬೇಗನೇ' ಎನ್ನುವ ಪಲ್ಲವಿಯನ್ನು ಹಾಡುತ್ತಿರುತ್ತಾರೆ. ಐದು ವರ್ಷ ದಾಟಿರದಿದ್ದರೂ ಮಗುವನ್ನು ನೇರವಾಗಿ ಶಾಲೆಯಲ್ಲಿ ಮೂರನೇ ಕ್ಲಾಸಿಗೆ ಸೇರಿಸುವ ಹುಮ್ಮಸ್ಸು ಅವರದ್ದು. ಸ್ಟೇಷನ್‌ನಿಂದ ಟ್ರೈನ್ ಹೊರಟ ಮೇಲೇ ತರಲು ಮರೆತಿದ್ದ ಅತಿ ಮುಖ್ಯವಾದ ಕಾಗದಪತ್ರಗಳನ್ನು ನೆನಪಿಸಿಕೊಂಡು ಅವರು ಚಡಪಡಿಸುವರು. ಆಫೀಸಿನಿಂದ ಕಂಗಾಲಾಗಿ ಮನೆಗೆ ಬರುವುದನ್ನು ಕಂಡು ಅವರ ಹೆಂಡತಿ ಯಾವ ಹೊತ್ತಿಗೆ ಏನು ಗಂಡಾಂತರ ಕಾದಿದೆಯೋ ಎಂದು ನಡುಗುತ್ತಾಳೆ. ಅಲ್ಲೇ ಇರುವ ರೇಡಿಯೊ ಕೊಂಚ ತಿರುಗಿಸಿ ಸಂಗೀತ ಕೇಳಲು ಹೊರಡುತ್ತಾರೆ. ಒಂದೆರಡು ನಿಮಿಷ ಕೇಳಿದಂತೆ ಮಾಡಿ ಅಲ್ಲಿಗೇ ನಿಲ್ಲಿಸಿ, ಹತ್ತು ದಿನಗಳ ಹಿಂದೆ ಪುಸ್ತಕಾಲಯದಿಂದ ತಂದ ಗ್ರಂಥ ಬಿಡಿಸುತ್ತಾರೆ. ಅದನ್ನು ಹಿಂದಿರುಗಿಸಬೇಕು, ಪೂರ್ಣ ಓದಿ ಆಗಲಿಲ್ಲ ಎಂಬ ತವಕ. ಸ್ವಲ್ಪ ಹೊತ್ತು ಓದುವ ಶಾಸ್ತ್ರ ಮಾಡಿ ಅದನ್ನು ಅಲ್ಲೇ ಎಸೆಯುತ್ತಾರೆ. 'ಛೇ ಬೋರ್', 'ಬೇಸರ', 'ಆಯಾಸ' ಮೊದಲಾದ ಶಬ್ದಗಳನ್ನು ಅವರು ಜಪಿಸುತ್ತಾರೆ. ತಿಂಡಿ ಮುಗಿಸಿ ಆಟಕ್ಕೆ ಹೊರಟ ಮಗನನ್ನು ಕರೆದು 'ನೋಡೋ, ಅಲ್ಲಿ ಹೋಗಿ ಸಾಮಾನನ್ನು ಇಟ್ಟು ಬಾ' ಎಂದು ಆಜ್ಞಾಪಿಸುತ್ತಾರೆ. 'ಎಲ್ಲಿಗೆ? ಯಾವ ಸಾಮಾನು?' ಎಂದವನು ಚಕಿತನಾದರೆ, 'ಅಯ್ಯೋ, ಯಾರಪ್ಪಾ ಇವನ ಹತ್ತಿರ ಬಡಿದುಕೊಳ್ಳುವುದು!' ಎಂದು ಕಿರುಚುತ್ತಾರೆ. ಸಾಮಾನಿನ ಹೆಸರು, ಅದನ್ನು ಇಡಬೇಕಾದ ಜಾಗವನ್ನು ಆಮೇಲೆ ನಿರ್ದೇಶಿಸುತ್ತಾರೆ. ಏಕಕಾಲದಲ್ಲಿ ನಾಲ್ಕು ದಿಕ್ಕುಗಳ ಕಡೆ ಓಡುವಂತಿದೆ ಅವರ ಅವಸ್ಥೆ.
ಹೌದು, ಅವರದು ವ್ಯವಸ್ಥಿತ ಜೀವನವಲ್ಲ. ಅವರ ಹೊಲಗಳಲ್ಲಿ ಉತ್ಪತ್ತಿ ಚೆನ್ನಾಗಿದೆ. ಹಣಕ್ಕೆ ಕೊರತೆ ಇಲ್ಲ. ಅವರೇನು ದುಂದುಗಾರರಲ್ಲ. ಆದರೂ ಒಂದಲ್ಲ ಒಂದು ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಅವರಿಗೆ ತಮ್ಮ ಕೆಲಸವನ್ನು ವ್ಯವಸ್ಥಿತ ರೀತಿಯಲ್ಲಿ ಹೇಗೆ ನಿರ್ವಹಿಸಬೇಕೆಂಬುದು ತಿಳಿಯದು.
ಕೆಲವು ವರ್ಷಗಳ ಹಿಂದೆ ಕನ್ನಡದ ಒಂದು ಮಾಸಪತ್ರಿಕೆಯಲ್ಲಿ ತಾವು ಕಲ್ಕತ್ತದಲ್ಲಿ ಕಂಡ ಒಂದು ಘಟನೆಯನ್ನು ಒಬ್ಬರು ಬರೆದಿದ್ದರು. ಅವಸರ ಗೊಂದಲಗಳ ಮಾನಸಿಕ ಸ್ಥಿತಿಯ ಒಂದು ಚಿತ್ರ ಅದು..
ಬಂಗಾಳದ ವಿಧಾನಸಭೆಯ ಸದಸ್ಯರೊಬ್ಬರು ಅಂಚೆ ಕಛೇರಿಗೆ ಬಂದು ಅಲ್ಲಿದ್ದ ಯುವಕನ ಹತ್ತಿರ 'ಯಾವುದೋ ಕಂಪನಿಯ ಜನರಲ್ ಮ್ಯಾನೇಜರನೊಡನೆ ಮಾತನಾಡಬೇಕಾಗಿದೆ. ಫೋನ್ ಮಾಡುತ್ತೇವೆ' ಎಂದರಂತೆ 'ಇನ್ನೂ ಗಂಟೆ ಒಂಬತ್ತು, ಹತ್ತೂವರೆ ಹೊತ್ತಿಗೆ ಅವರು ತಮ್ಮ ಅಫೀಸಿಗೆ ಹೋಗಬಹುದು. ಆಗ ನೀವು ಫೋನು ಮಾಡಿರಿ' ಎಂದ ಯುವಕ. ತಮ್ಮ ಹಿರಿತನದ ಗಾಂಭೀರ್ಯದಿಂದ ಅವನ ಮಾತನ್ನು ಕೇಳಿಸಿಕೊಂಡರೂ ಕೇಳಿಸದವರಂತೆ ಸ್ವಲ್ಪಹೊತ್ತು ಸುಮ್ಮನಿದ್ದು, ಬಳಿಕ ರಿಸೀವರ್ ತೆಗೆದುಕೊಂಡು ಡಯಲ್ ಮಾಡಿ ಯಾರು ಮಾತನಾಡುತ್ತಿರುವುದು?' ಎಂದು ವಿಚಾರಿಸಿದರು. ' ಚಪರಾಸಿ ' ಎಂದು ಉತ್ತರ ದೊರೆಯಿತು. ಸದಸ್ಯ ಮಹಾಶಯರು ಬಿರುಸಾಗಿ ಫೋನನ್ನು ಕೆಳಗೆ ಕುಕ್ಕಿದರು. ಮತ್ತರ್ಧ ಗಂಟೆಯ ನಂತರ ತಿರುಗಿ ಫೋನ್ ಮಾಡಿದಾಗ ಇದೇ ಉತ್ತರ ಬಂದಿರಬೇಕು. 'ದುರ್' ಎಂದು ಮುಖ ಕೆಂಪಗೆ ಮಾಡಿಕೊಂಡರು. ಕನ್ನಡದಲ್ಲಿ 'ಭೂ, ಭೀ' ಎನ್ನುವುದಕ್ಕೆ ಬಂಗಾಲಿಯಲ್ಲಿ 'ದುರ್' ಎನ್ನುತ್ತಾರೆ. ಸುಮಾರು ಹತ್ತೂವರೆಗೆ ತಿರುಗಿ ಫೋನ್ ಮಾಡಿ 'ಯಾರು ಚಪರಾಸಿನಾ ಮಾತಾಡೋದು?' ಎಂದು ಕೇಳಿದರು. ಆದರೆ ಆಗ ರಿಸೀವರ್ ತೆಗೆದುಕೊಂಡವರು ಜನರಲ್ ಮ್ಯಾನೇಜರ್ ಆಗಿದ್ದರು. ಇವರ ಮಾತನ್ನು ಕೇಳಿದಾಕ್ಷಣ ಅವರು ಏನೂ ಉತ್ತರ ಕೊಡದೇ ರಿಸೀವರ್ ಕೆಳಗೆ ಇಟ್ಟಿರಬೇಕು. ಸದಸ್ಯರು ಆಫೀಸಿನಲ್ಲಿದ್ದ ಯುವಕನನ್ನು ಮಾತನಾಡಿಸದೇ ಜೋಲುಮೋರೆ ಹಾಕಿಕೊಂಡು ಅಲ್ಲಿಂದ ಹೊರಬಿದ್ದರಂತೆ.
ಅಲ್ಲಿ ಅವರು ಸುಮಾರು ಒಂದೂವರೆ ಘಂಟೆಗಳಷ್ಟು ಕಾಲ ವ್ಯರ್ಥವಾಗಿ ಕಳೆದಂತಾಯಿತಲ್ಲ! ಅದಕ್ಕೇನು ಕಾರಣ ಬಲ್ಲಿರಾ?
ಕಾರಣ ಇಲ್ಲಿದೆ: ಅವಸರ, ಉದ್ವೇಗ, ಗೊಂದಲ, ಅನ್ಯಮನಸ್ಕತೆ. ಇವು ಅವರ ವಿವೇಕವನ್ನು ದೂರಕ್ಕೋಡಿಸಿದ್ದವು.
ಮಾತುಕತೆ, ಸಂಚಾರ, ಆಟ ಊಟ, ಇತರ ಎಲ್ಲ ವ್ಯವಹಾರಗಳಲ್ಲೂ ಈ ಆತುರತೆಯಿಂದ ಆಗುವ ಅನಾಹುತಗಳು ಹಲವು
ಈ ಆತುರ, ಅವಸರ, ಗೊಂದಲಗಳಿಗೇನು ಕಾರಣ?
' ಯಾವುದೇ ಕೆಲಸ ಕೈಗೊಳ್ಳುವುದಕ್ಕೆ ಮೊದಲು ಶಾಂತಚಿತ್ತರಾಗಿ ಸರಿಯಾಗಿ ಯೋಚಿಸದೇ ಇರುವುದು.'
'ಹಲವು ಕೆಲಸಗಳನ್ನು ಬೇಗನೇ ಮಾಡಿ ಮುಗಿಸುವ ಚಪಲ.'
' ವರ್ಷಗಟ್ಟಲೆ ಬೇಕಾಗುವ ಕೆಲಸವನ್ನು ಕೆಲವೇ ದಿನಗಳಲ್ಲಿ ಮಾಡುವ ಹುಚ್ಚು ಉತ್ಸಾಹ. ' 'ಮಾಡಲೇಬೇಕಾದ ಕೆಲಸವನ್ನು ಆದಷ್ಟು ಮುಂದೆ ಹಾಕುತ್ತ ಕಾಲ ಕಳೆದು, ಕೊನೆಯ ಗಳಿಗೆ ಯಲ್ಲಿ ಅನಿವಾರ್ಯ ಪರಿಸ್ಥಿತಿ ಎಂದಾದಮೇಲೆ ಅತ್ಯಾತುರದಿಂದ ಮಾಡಹೊರಡುವುದು.'
'ತಪ್ಪಿನಿಂದ ಪಾಠ ಕಲಿಯದೆ ಅದು ತನ್ನ ವೈಶಿಷ್ಟ್ಯವೆಂದೇ ತಿಳಿದುಕೊಂಡು ಆ ಅವ್ಯವಸ್ಥೆಯ ಅಭ್ಯಾಸವನ್ನು ಬಲಪಡಿಸುತ್ತ ಹೋಗುವುದು.'
ಅವಸರ, ಆತುರ, ಉದ್ವೇಗ, ಗೊಂದಲ ಗಲಿಬಿಲಿಗಳು ಮನಸ್ಸನ್ನು ಬಳಲಿಸಿ ದೇಹವನ್ನು ದಣಿಯುವಂತೆ ಮಾಡುತ್ತವೆ. ನೀವು ರಕ್ತದ ಏರೊತ್ತಡ ಮತ್ತು ನರಮಂಡಲದ ದೌರ್ಬಲ್ಯಗಳಿಂದ ನರಳುವ ಪ್ರಸಂಗವನ್ನವು ತಂದೊಡ್ಡುತ್ತವೆ. ಅವುಗಳಿಂದ ಪಾರಾಗುವ ಬಗೆ ಹೇಗೆ?
ಮುಂದುವರಿಯುವುದು...
Comments