ಯೋಗ್ಯತೆಯ ಅಳತೆಗೋಲು - ಗ್ರಂಥ : ಬದುಕಲು ಕಲಿಯಿರಿ PART 28
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 28
ಯೋಗ್ಯತೆಯ ಅಳತೆಗೋಲು
ಪ್ರಸಿದ್ಧ ಶಿಲ್ಪಕಲಾವಿದ ಮೈಕೇಲ್ ಎಂಜೆಲೋ ಅವನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಆ ಸಂದರ್ಶಕನೇ ಹಿಂದೊಮ್ಮೆ ಬಂದಿದ್ದ. ಅವನು ಬಂದು ಹೋದಂದಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ಹೇಳಿದ: 'ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವಂತೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ ಕೆತ್ತನೆಯ ಕೆಲಸ ಅಲ್ಪಸ್ವಲ್ಪ ನಡೆಯಿತು' ಎಂದ. ಸಂದರ್ಶಕ ಇನ್ನೂ ಕೆಲಸ ಮುಗಿಯಲಿಲ್ಲವೆನ್ನುವ ಭಾವನೆಯಿಂದಿರಬೇಕು, 'ಓಹ್, ಇಷ್ಟು ದಿನವೂ ಅತಿ ಸಾಮಾನ್ಯವಾದ ಸಣ್ಣಪುಟ್ಟ ಕೆಲಸಗಳನ್ನೇ ಮಾಡಿದುದೇ?' ಎಂದು ಉದ್ಗರಿಸಿದ. ಮೈಕೇಲ್ ಅರ್ಥಪೂರ್ಣ ವಾಗಿ ನಕ್ಕು ಹೇಳಿದ: 'ನೆನಪಿರಲಿ; ಸಾಮಾನ್ಯವೆನಿಸುವ ಈ ಸಣ್ಣ ಪುಟ್ಟ ಕೆಲಸಗಳಿಂದ 'ಪರಿಪೂರ್ಣತೆ' ಉಂಟಾಗುತ್ತದೆ. ಆದರೆ ಪರಿಪೂರ್ಣತೆ ಎನ್ನುವುದು ಸಾಮಾನ್ಯವಲ್ಲ.'*
ಇಂತಿದೆ ಸಣ್ಣ ಕೆಲಸದ ಮಹತ್ವ ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಸಂದೇಶ.
ಬರಹಗಾರನು ತನ್ನ ಮಸಿಕುಡಿಕೆ ಮತ್ತು ಲೇಖನಿಯನ್ನು ಇರಿಸಿಕೊಂಡ ಬಗೆಯಿಂದಲೇ ಅವನ ಯೋಗ್ಯತೆಯನ್ನು ಗುರುತಿಸಬಹುದು ಎನ್ನುವ ಮಾತನ್ನು ನೀವು ಕೇಳಿರಬಹುದು. ಅತಿ ಪುಟ್ಟ ಕೆಲಸವೊಂದನ್ನು ಮಾಡುವ ರೀತಿಯನ್ನು ಕಂಡೇ ವ್ಯಕ್ತಿಯೊಬ್ಬನ ಕಾರ್ಯಸಾಮರ್ಥ್ಯವನ್ನೂ, ಅವನ ನಡತೆಯನ್ನೂ ತಿಳಿದುಕೊಳ್ಳಬಹುದು.
ಬಾಲಕನೊಬ್ಬನನ್ನು ಕರೆದು ಕಿಟಕಿಯಲ್ಲಿ ಸಂಗ್ರಹವಾದ ಧೂಳನ್ನು ಝಾಡಿಸಿ ಶುಚಿಗೊಳಿಸಲು ಹೇಳಿ, ಅವನ ಕೆಲಸವನ್ನು ಪರಿಶೀಲಿಸಿ. ಕಿಟಕಿಯ ಮಧ್ಯಭಾಗವನ್ನು ಮಾತ್ರ ಗುಡಿಸಿ ಸಂದು ಗೊಂದುಗಳಲ್ಲಿರುವ ಧೂಳನ್ನು ಗುಡಿಸದೇ ಹಾಗೆಯೇ ಬಿಟ್ಟರೆ ಅವನ ಕಾರ್ಯಸಾಮರ್ಥ್ಯವನ್ನು ಹೊಗಳುವ ಹಾಗಿಲ್ಲ.
ಹುಡುಗಿಯೊಬ್ಬಳು ಕೋಣೆಯನ್ನು ಶುಚಿಗೊಳಿಸುವ ವಿಧಾನವನ್ನು ಪರಿಶೀಲಿಸಿ. ಸುಮ್ಮ ಸುಮ್ಮನೇ ಕೆಲಸ ಮಾಡುವಂತೆ ನಟಿಸುತ್ತಾ ಕಸಕೊಳೆಯನ್ನು ಮೂಲೆಯಲ್ಲೇ ಸೇರಿಸುವವಳು ಒಳ್ಳೆಯ ಮನೆಯೊಡತಿಯಾಗುವುದು ಕಷ್ಟ.
ಮೋಟರ್ ಷೆಡ್ಡಿನಲ್ಲಿ ಕಾರನ್ನು ತೊಳೆಯುತ್ತಿರುವ ಆಳನ್ನು ಸ್ವಲ್ಪ ಹೊತ್ತು ದಿಟ್ಟಿಸಿ. ಆತನ ಕೆಲಸವನ್ನು ನೋಡುತ್ತಲೇ ನೀವು ಹೇಳಬಹುದು ಅವನಿಗೆ ಉದ್ಯೋಗದಲ್ಲಿ ಪ್ರಗತಿ ಸಾಧ್ಯವೇ, ಇಲ್ಲವೇ, ಎಂದು.
ಪ್ರತಿಯೊಬ್ಬ ಮನುಷ್ಯನ ಕೆಲಸ ಅವನ ವ್ಯಕ್ತಿತ್ವದ ಸಾಕ್ಷಿಚಿತ್ರ. ಸೋಮಾರಿಯೂ, ಅವ್ಯವಸ್ಥಿತ ಚಿತ್ತನೂ ಆದ ವ್ಯಕ್ತಿ ಅತ್ಯಂತ ಸುಲಭ ಹಾಗೂ ಸರಳವಾದ ಕೆಲಸವನ್ನು ಕೆಟ್ಟ ರೀತಿಯಲ್ಲಿ ಮಾಡುತ್ತಾನೆ. ಮಹತ್ವದ ಫಲಗಳು ಒಮ್ಮೆಗೇ ದೊರೆಯುತ್ತವೆಯೇ? ಅದಕ್ಕಾಗಿ ನಾವು ನಡೆಯುವಾಗ ಹೆಜ್ಜೆಯಿಡುತ್ತ ಮುಂದೆ ಸಾಗುವಂತೆ ಕ್ರಮವಾಗಿ ಸಾಧಿಸುತ್ತಾ ಮುಂದುವರಿಯಬೇಕು. ನೆನಪಿಡಿ:
ಸಣ್ಣ ಕೆಲಸವನ್ನು ಅಲಕ್ಷಿಸಬೇಡಿ ನಿಷ್ಠೆಯಿಂದ ನಿರ್ವಹಿಸಿ.
ತಾಳ್ಮೆಗೆಡದೆ ಮೆಟ್ಟಲು ಮೆಟ್ಟಲಾಗಿ ಮೇಲೇರಿ.
ದಾರಿಯು ಸರಿಯಾಗಿದ್ದರೆ ಗುರಿಯು ದೊರೆತೇ ದೊರೆಯುತ್ತದೆ .
ಮುಂದುವರಿಯುವುದು..
Comments