ಛಲದಿಂದ ಬಲ - ಗ್ರಂಥ: ಬದುಕಲು ಕಲಿಯಿರಿ PART 27

 ಗ್ರಂಥ: ಬದುಕಲು ಕಲಿಯಿರಿ.

ಲೇಖಕರು : ಸ್ವಾಮಿ ಜಗದಾತ್ಮಾನಂದಜಿ

ಭಾಗ 27;



 ಛಲದಿಂದ ಬಲ 


 ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿದ ಮಿತ್ರರೊಬ್ಬರು ಒಂದು ಸಂಸ್ಥೆಯಲ್ಲಿ ದುಡಿಯುತ್ತಿದ್ದರು . ದಿನದ ಎಂಟು ಗಂಟೆಗಳ ಕೆಲಸದೊಂದಿಗೆ ಸಂಸಾರ ನಿರ್ವಹಣೆಯ ಭಾರವು ಅವರ ಮೇಲಿತ್ತು. ಖಾಸಗಿಯಾಗಿಯೇ ಎಂ. ಎ. ಪರೀಕ್ಷೆಯಲ್ಲಿ ಪಾಸಾದರು. 'ಖಾಸಗಿಯವರೆಂದು ಪ್ರಥಮ ದರ್ಜೆ ಕೊಡಲಿಲ್ಲ. ಐವತ್ತೊಂಬತ್ತು ಪರ್ಸೆಂಟ್ ಬಂದಿದೆ' ಎಂದರು. ಅವರೇನೂ ಹುಟ್ಟಿನಿಂದಲೇ ಮಹಾ ಮೇಧಾವಿಯಾಗಿರಲಿಲ್ಲ. ' ಈ ನಾನಾ ಕಾರ್ಯಗಳ ಮಧ್ಯೆ ಅಷ್ಟೊಂದು ಅಧ್ಯಯನ ಹೇಗೆ ನಡೆಯಿಸಿದಿರಿ?' ಎಂದು ಕೇಳಿದೆ. ಅವರ ಉತ್ತರ ಕುತೂಹಲಕಾರಿಯಾಗಿತ್ತು: 'ಒಂದೊಂದೇ ಮೆಟ್ಟಲು ಮೇಲೇರುತ್ತ ಹೋದೆ. ಕಷ್ಟವಾಗಲಿಲ್ಲ' ಎಂದರು. ದಿನವೂ ಎರಡು ಗಂಟೆಗಳ ಕಾಲ ನಿತ್ಯ ನಿಯಮಿತ ರೀತಿಯಿಂದ ಅಧ್ಯಯನ ಮಾಡಿದೆ ಎಂಬುದನ್ನು ಅವರು ಮೇಲಿನ ಉದಾಹರಣೆಯಿಂದ ತಿಳಿಸಿದರು.


 ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸಿದ್ಧಿಯನ್ನು ಪಡೆದವರನ್ನು ಕಂಡಾಗ ಅವರು ಒಳ್ಳೆಯ ಆಟಗಾರರಿರಲಿ, ಸಂಗೀತತಜ್ಞರಿರಲಿ, ವಾಗ್ಮಿಗಳಿರಲಿ ಅವರಂತೆ ನಾವಾಗಲು ಸಾಧ್ಯವೇ ಇಲ್ಲ ಅದೊಂದು ದೈವದತ್ತವಾದ ವರ ಎಂದು ನಾವು ತಿಳಿಯುವುದುಂಟು. ಅವರು ಆ ಮಟ್ಟವನ್ನು ಮುಟ್ಟುವುದಕ್ಕೆ ಮೊದಲು ವರ್ಷಗಳ ಕಾಲ ಅಭ್ಯಾಸ ಮಾಡಿದ್ದಾರೆ ಎಂಬುದನ್ನು ನಾವು ಮರೆಯುತ್ತೇವೆ. ನಾವು ಸದ್ಯ ಮಾಡಲಸಾಧ್ಯವಾದುದನ್ನು ಅಷ್ಟು ವರ್ಷಗಳ ಪ್ರಯತ್ನದ ಬಲದಿಂದ ಅವರು ಸುಲಭವಾಗಿ ಮಾಡುವುದು ಸ್ವಾಭಾವಿಕವಲ್ಲವೇ? ಬಿಡದ ಛಲವೇ ಸಾಧನೆಯ ಚಾಲನ ಶಕ್ತಿ. 


ಥಟ್ಟನೆ ಎಲ್ಲರನ್ನೂ ಚಕಿತಗೊಳಿಸುವಂಥ ಅದ್ಭುತವನ್ನು ಸಾಧಿಸುವ ಆತುರ ನಮ್ಮನ್ನು ಎಷ್ಟೋ ವೇಳೆ ಕಂಗೆಡಿಸುತ್ತದೆ, ಹತಾಶರನ್ನಾಗಿ ಮಾಡುತ್ತದೆ. ಸಾವಿರ ಮೈಲಿನ ಯಾತ್ರೆ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಸಾವಿರಾರು ಪುಟಗಳ ಗ್ರಂಥ ಒಂದು ಅಕ್ಷರದಿಂದ ಪ್ರಾರಂಭವಾಗುತ್ತದೆ. ಎಲ್ಲ ದೊಡ್ಡ ಕೆಲಸಗಳೂ ಸಣ್ಣ ಕೆಲಸಗಳ ಮೊತ್ತ. ಸಣ್ಣ ಕೆಲಸವನ್ನು ಪೂರ್ಣ ಮನಸ್ಸು ಕೊಟ್ಟು ಚೆನ್ನಾಗಿ ಮಾಡಲು ಸಮರ್ಥನಾದರೆ ದೊಡ್ಡ ಕೆಲಸವೂ ಚೆನ್ನಾಗಿಯೇ ಯಶಸ್ವಿಯಾಗುವುದು. 


ಸ್ವಾಮಿ ವಿವೇಕಾನಂದರು ಒಮ್ಮೆ 'ನನಗೆ ವಯಸ್ಸಾಗುತ್ತ ಬಂದಂತೆಲ್ಲ ನಾನು ಸಂಧಿಸುವ ಹಿರಿಯರು, ಮಹಾತ್ಮರು ಮೊದಲಾದವರು ಸಣ್ಣ ಕೆಲಸವನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಗಮನಿಸುತ್ತೇನೆ ಎಂದರು.


'ನೀವು ವ್ಯಕ್ತಿಯೊಬ್ಬನ ಚಾರಿತ್ರ್ಯದ ಬಗೆಗೆ ತಿಳಿದುಕೊಂಡು “ಇವನು ಇಂಥವನು” ಎನ್ನುವ ತೀರ್ಮಾನಕ್ಕೆ ಬರಬೇಕಾದರೆ ಅವನು ಮಾಡಿದ ಯಾವುದೇ ದೊಡ್ಡ ಕಾರ್ಯವನ್ನು ಮಾತ್ರ ಪರಿಶೀಲಿಸಿದರೆ ಸಾಲದು. ಎಂಥ ಸಾಮಾನ್ಯನೂ ಒಂದಲ್ಲ ಒಂದು ಅವಕಾಶ ದೊರೆತಾಗ ಮಹಾ ವೀರನಂತೆ ವರ್ತಿಸಬಹುದು. ಮನುಷ್ಯರು ದಿನದಿನವೂ ಮಾಡುವ ಸಾಮಾನ್ಯವೆಂದು ತೋರುವ ಕೆಲಸಗಳನ್ನು ಪರಿಶೀಲಿಸಿ. ಅವು ನಿಜವಾದ ಉನ್ನತ ಚಾರಿತ್ರ್ಯವನ್ನು ಕುರಿತು ಸ್ಪಷ್ಟ ಚಿತ್ರವನ್ನು ನೀಡಬಲ್ಲವು. ದೊಡ್ಡದೊಂದು ಅವಕಾಶ ಅಲ್ಪನನ್ನು ದೊಡ್ಡವನನ್ನಾಗಿಸಬಹುದು, ಆದರೆ ನಿಜವಾದ ಮಹಾತ್ಮನು ಎಲ್ಲಾ ಸಂದರ್ಭಗಳಲ್ಲೂ ಜನರು ಅವನನ್ನು ಪರಿಶೀಲಿಸಲಿ ಬಿಡಲಿ, ಒಂದೇ ತೆರನಾಗಿರುವನು' ಎಂದು ಅವರು ಹೇಳಿದ್ದರು.


ಮಹಾತ್ಮಾ ಗಾಂಧೀಜಿಯವರ ಗುಣವೈಭವವನ್ನು ಮಕ್ಕಳಿಗಾಗಿ ಸರಳ ಸುಂದರ ರೀತಿಯಲ್ಲಿ ಅನು ಬಂದೋಪಾಧ್ಯಾಯರು ಬರೆದು ವಿವರಿಸಿದ್ದಾರೆ. ಪುಸ್ತಕದ ಹೆಸರು 'ಬಹುರೂಪಿ ಗಾಂಧಿ.” 


ಆಂಗ್ಲ ಭಾಷೆಯಲ್ಲಿರುವ ಆ ಪುಸ್ತಕವನ್ನು ಓದಿ ನಾನು ಮುಗ್ಧನಾದೆ. ಅದನ್ನೇಕೆ ಮಕ್ಕಳಿಗೆ ಉಪಪಠ್ಯವನ್ನಾಗಿಯಾದರೂ ಇಡಬಾರದು ಎಂದು ನನಗನ್ನಿಸಿತು. ಬೆಳೆಯುತ್ತಿರುವ ತರುಣ ಪೀಳಿಗೆಗೆ, ಕೆಲವರಿಗಾದರೂ ಅದು ದುಡಿಮೆಯ ವಿಧಾನ ಮತ್ತು ಮಹಿಮೆಯನ್ನು ತಿಳಿಸುವ ಸ್ಫೂರ್ತಿಯ ನಿಧಿಯಾಗಬಲ್ಲುದು. ಗಾಂಧೀಜಿ ಅವರ ದಿನದಿನದ, ಕ್ಷಣಕ್ಷಣದ ಪ್ರತಿಯೊಂದು ಕೆಲಸದಲ್ಲೂ ದೊಡ್ಡತನ ಹೇಗೆ ಪ್ರಕಟವಾಗುತ್ತಿತ್ತು ಎಂಬುದು ಆ ಗ್ರಂಥವನ್ನು ಓದುವವರ ಪಾಲಿಗೆ ಸ್ಪಷ್ಟವಾಗಿ ತಿಳಿಯುತ್ತದೆ.


 ಕೆಲವರಿಗೆ ಸಣ್ಣ ಪುಟ್ಟ ಕೆಲಸಗಳೆಂದರೆ ಬೇಸರ, ಕಿರಿಕಿರಿ. ಅಂಥ ಕೆಲಸಗಳನ್ನವರು ಚಿಲ್ಲರೆ ವಿಷಯಗಳೆಂದು ತಿಳಿಯುತ್ತಾರೆ. ಅವನ್ನು ಮಾಡುವುದು ತಮಗೆ ಅಗೌರವವೆಂದೇ ತಿಳಿಯುತ್ತಾರೆ. ದೊಡ್ಡ ಮನುಷ್ಯನು ಚಿಲ್ಲರೆ ವಿಷಯಗಳಲ್ಲೂ ದೊಡ್ಡ ತನದಿಂದ ನಡೆದುಕೊಳ್ಳುತ್ತಾನೆಂಬ ಪ್ರಯತ್ನದಿಂದ ಪರಮಾರ್ಥ

ಮಾತನ್ನು ಕೇಳಿದ್ದೀರಾ? ಸಣ್ಣಪುಟ್ಟ ವಿಷಯಗಳನ್ನು ಆತ ಅಲಕ್ಷಿಸುವುದಿಲ್ಲ. ಹೆಜ್ಜೆ ಹೆಜ್ಜೆ ಸರಿಯಾದಲ್ಲಿ ಮಾತ್ರ ದಾರಿ ಸಲೀಸಲ್ಲವೇ? 



 ಮುಂದುವರಿಯುವುದು

Comments

Popular posts from this blog

Why is the Mona Lisa So Famous?

top 10 free computer automation software

androind os that can be used in virtual box