ಬೆಳಕನ್ನು ತನ್ನಿ - ಗ್ರಂಥ : ಬದುಕಲು ಕಲಿಯಿರಿ PART 19
ಗ್ರಂಥ : ಬದುಕಲು ಕಲಿಯಿರಿ
ಲೇಖಕರು : ಸ್ವಾಮಿ ಜಗದಾತ್ಮಾನಂದಜಿ
ಭಾಗ : 19
ಬೆಳಕನ್ನು ತನ್ನಿ
'ಮನುಷ್ಯರಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ. ಮನುಷ್ಯರಿಗೆ ಅವರಲ್ಲಿ ಆಗಲೇ ಅಡಗಿರುವ ಶಕ್ತಿಯನ್ನು ಕುರಿತು ಬೋಧಿಸಿ. ಮನುಷ್ಯರನ್ನು ಪಾಪಿಗಳು, ನೀಚರು ಎಂದು ಹೇಳುವುದಕ್ಕೆ ಬದಲಾಗಿ ವೇದಾಂತವು 'ನೀನು ಆಗಲೇ ಪರಿಶುದ್ಧ ಪರಿಪೂರ್ಣ, ಯಾವುದನ್ನು ಪಾಪ ದೋಷ ದೌರ್ಬಲ್ಯವೆಂದು ಕರೆಯುವಿಯೋ ಅದು ನಿನಗೆ ನಿಜವಾಗಿ ಸೇರಿದ್ದಲ್ಲ' ಎಂದು ಸಾರುತ್ತದೆ. ಇತರರಿಗಾಗಲೀ, ನಿಮಗೆ ನೀವೇ ಆಗಲಿ 'ದರಿದ್ರ, ದುರ್ಬಲ' ಎಂದು ಹೇಳಬೇಡಿ' ಎಂದರು ಸ್ವಾಮಿ ವಿವೇಕಾನಂದರು.
"ಶತಮಾನಗಳಿಂದ ಕೋಣೆಯೊಂದರಲ್ಲಿ ಕತ್ತಲೆ ಕವಿದುಕೊಂಡಿದೆ. ನೀವು ಅಲ್ಲಿಗೆ ಹೋಗಿ 'ಅಯ್ಯೋ! ಕತ್ತಲೆ ಕತ್ತಲೆ' ಎಂದು ಅಳಲು ಪ್ರಾರಂಭಿಸಿದರೇನು ಪ್ರಯೋಜನ? ಅಥವಾ ಕತ್ತಲೆಯನ್ನು ತೀವ್ರವಾಗಿ ಬೈದು ಭಂಗಿಸಿದರೆ ಏನು ಮಾಡಿದ ಹಾಗಾಯಿತು? ಬೆಳಕನ್ನು ತನ್ನಿ. ಕತ್ತಲೆ ಕೂಡಲೇ ಮಾಯವಾಗುವುದು." ಮನುಷ್ಯರನ್ನು ಉನ್ನತ ಮಟ್ಟಕ್ಕೆಳೆಯುವ ಅಥವಾ ಪರಿವರ್ತಿಸುವ ಉಪಾಯ ಇದು. ಜನರಿಗೆ ಉನ್ನತವಾದುದು ಯಾವುದೆಂಬುದನ್ನು ಸೂಚಿಸಿ. ಮೊದಲು ಮನುಷ್ಯರಲ್ಲಿ ವಿಶ್ವಾಸವಿಡಿ. ಮನುಷ್ಯ ನೀಚತೆಯ ಆಳಕ್ಕೆ ಮುಳುಗಿದವನು ಎಂಬ ನಂಬಿಕೆಯಿಂದೇಕೆ ಸುಧಾರಣಾಕಾರ್ಯವನ್ನು ಪ್ರಾರಂಭಿಸಬೇಕು? "ಅತಿ ದುಷ್ಟತನ ವ್ಯಕ್ತಗೊಳಿಸುವವನಲ್ಲೂ ನಾನು ನನ್ನ ನಂಬಿಕೆಯನ್ನು ಕಳೆದುಕೊಂಡವನಲ್ಲ. ಮೊದಲು ನನ್ನ ನಂಬಿಕೆಯು ಆಶಾಜನಕವಾಗಿರದಿದ್ದರೂ ಕೊನೆಯಲ್ಲಿ ನಂಬಿಕೆಗೆ ಅನುಗುಣವಾಗಿಯೇ ಯಶಸ್ಸು ದೊರಕಿರುವುದನ್ನು ಕಂಡಿದ್ದೇನೆ'' ಎಂದು ಸ್ವಾಮೀಜಿ ಹೇಳಿದರು. "ಮಾನವನ ಸಾಮರ್ಥ್ಯದಲ್ಲಿ ವಿಶ್ವಾಸವಿಡಿ. ಪ್ರಾಜ್ಞನಲ್ಲೂ, ಅಜ್ಞನಲ್ಲೂ ಒಬ್ಬನು ದೇವತೆಯಾಗಿ ಕಂಡರೂ, ಇನ್ನೊಬ್ಬನು ದೆವ್ವವಾಗಿ ಕಂಡರೂ, ಅವನ ಆಂತರ್ಯದಲ್ಲಿ ಅದಾಗಲೇ ಅಡಗಿರುವ ಪರಿಪೂರ್ಣತೆಯಲ್ಲಿ ನಂಬಿಕೆಯನ್ನಿಡಿ. ಮೊದಲು ಆತನಲ್ಲಿ ವಿಶ್ವಾಸವಿಡಿ. ಆ ಬಳಿಕ ಅವನಲ್ಲಿ ದೋಷ ಕಂಡುಬಂದರೆ, ಅವನು ತಪ್ಪು ದಾರಿಯನ್ನು ಹಿಡಿದರೆ, ಅವನು ಅಸಾಧುವೂ, ನೀಚವೂ ಆದ ಸಿದ್ಧಾಂತಗಳನ್ನು ಅನುಸರಿಸಿದರೆ ಅವೆಲ್ಲಕ್ಕೂ ಕಾರಣ ಅವನ ನೈಜಸ್ವಭಾವ ಅಲ್ಲವೆಂದೂ, ಉತ್ತಮ ಆದರ್ಶ ಅವನ ಮುಂದಿಲ್ಲದಿರುವುದೇ ಆಗಿದೆ ಎಂದೂ ತಿಳಿಯಿರಿ. ಹೌದು, ಸನ್ಮಾರ್ಗವನ್ನು ಕಾಣಲಾರದ್ದರಿಂದಲ್ಲವೇ ಅವನು ದುರ್ಮಾರ್ಗವನ್ನು ಅವಲಂಬಿಸಿದ್ದು? ತಪ್ಪನ್ನು ತಿದ್ದುವ ರೀತಿ ಇದೊಂದೇ: ದುರ್ಮಾರ್ಗದಲ್ಲಿ ನಡೆಯುತ್ತಿರುವವನಿಗೆ ಸನ್ಮಾರ್ಗವನ್ನು ತೋರಿಸಿ. ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು. ಅವನು ಎರಡು ಮಾರ್ಗಗಳನ್ನು ಹೋಲಿಸಿ ನೋಡಲಿ. ತನ್ನಲ್ಲಿ ಮೊದಲು ಇದ್ದ ಅಸತ್ಯವನ್ನೂ, ನೀವು ನೀಡಿದ ಸತ್ಯವನ್ನೂ ಸರಿದೂಗಲಿ. ಆಗ ನೀವು ಅವನಿಗೆ ತಿಳಿಸಿರುವುದು ಸತ್ಯವಾಗಿದ್ದರೆ ಅಸತ್ಯವು ಮಾಯವಾಗಲೇಬೇಕು. ಬೆಳಕು ಕತ್ತಲನ್ನು ಓಡಿಸಲೇಬೇಕು. ಸತ್ಯವು ಶ್ರೇಯಸ್ಸನ್ನೂ, ಬಲವನ್ನೂ, ವಿಜಯವನ್ನೂ ಎಂದಾದರೂ ವ್ಯಕ್ತಪಡಿಸಲೇಬೇಕು" ಎಂದು ಅವರು ಹೇಳಿದರು.
ಮುಂದುವರಿಯುವುದು...
Comments