ಗ್ರಂಥ: ಕೊಲಂಬೊ ಇಂದ ಆಲ್ಮೋರಕೆ.
ಸ್ವಾಮಿ ವಿವೇಕಾನಂದ.
ಭಾಗ 1.
ಮುನ್ನುಡಿ
ಆಕಸ್ಮಿಕ ಎಂಬುದು ಅಪೂರ್ಣ ಜ್ಞಾನ; ತನ್ನನ್ನು ತಾನು ಮರೆಮಾಡಿಕೊಳ್ಳಲೆಳಸುವ ಒಂದು ವಿಧಾನಕ್ಕೆ ನಾವು ಇಡುವ ಹೆಸರು. ನಾವು ಯಾವುದನ್ನು ಆಕಸ್ಮಿಕ ಎಂದು ಕರೆಯುತ್ತೇವೆಯೋ ಅದು ನಿಜವಾಗಿಯೂ ಆಕಸ್ಮಿಕವಾದುದಲ್ಲ, ಪೂರ್ವಾಪರವನ್ನು ಅಖಂಡವಾಗಿಯೂ ಏಕವಾಗಿಯೂ ಒಳಗೊಳ್ಳುವ ತ್ರಿಕಾಲದರ್ಶಿಯಾದ ಪೂರ್ಣದೃಷ್ಟಿಗೆ ಆಕಸ್ಮಿಕ ಎಂಬುದಿಲ್ಲ. ನಮ್ಮ ಅಲ್ಪಜ್ಞಾನ ತನಗೆ ಅನಿರೀಕ್ಷಿತವಾದುದ್ದನ್ನು ಹಾಗೆ ಕರೆದ ಮಾತ್ರಕ್ಕೆ ಭೂಮಜ್ಞಾನವೂ ಅದನ್ನು ಹಾಗೆ ಗ್ರಹಿಸಬೇಕಾಗಿಲ್ಲ, ಸರ್ವಜ್ಞವಾದ ಸರ್ವೇಚ್ಛಾಶಕ್ತಿ ಸುರುಳಿಬಿಚ್ಚುವ ತನ್ನ ಲೋಕಲೀಲೆಯಲ್ಲಿ ಯಾವುದನ್ನೂ ಅನಿಶ್ಚಯಕ್ಕೆ ಬಿಡುವುದಿಲ್ಲ ಎಂಬ ಪೂರ್ಣದೃಷ್ಟಿಯ ಶ್ರದ್ದೆಯಿಂದ ಸಮನ್ವಿತವಾದ ಪ್ರಜ್ಞೆ ಸಾಮಾನ್ಯ ಬುದ್ಧಿಗೆ ಆಕಸ್ಮಿಕ ಎಂದು ತೋರುವುದರಲ್ಲಿಯೂ ಅರ್ಥ, ಉದ್ದೇಶ, ವ್ಯೂಹಗಳನ್ನು ಸಂದರ್ಶಿಸುತ್ತದೆ.
ಜನವರಿ ಇಪ್ಪತ್ತಾರನೆ ತೇದಿ ಭಾರತೀಯರಾದ ನಮಗೆ ಈಗ ಒಂದು ಮಹಾ ಸಂಕೇತದ ದಿನವಾಗಿ ಪರಿಣಮಿಸಿದೆ. ಸ್ವತಂತ್ರ ಭಾರತರಾಷ್ಟ್ರ ತಾನು ರಿಪಬ್ಲಿಕ್ ಎಂದು ಘೋಷಿಸಿಕೊಂಡ ಮಹಾ ಸುದಿನವದು. ಅದೊಂದು ಉತ್ಥಾನದ ಮತ್ತು ಉಜ್ಜೀವನದ ಪ್ರಾರಂಭೋತ್ಸವದ ದಿನ; ನವೋತ್ಸಾಹದ ದಿನ; ನವೀನತಾ ಜೀವನದ ದೀಕ್ಷಾದಿನ. ನವಭಾರತದ ಉದ್ಧಾರೋನ್ಮುಖವೂ ವಿಕಾಸಶೀಲವೂ ಆಗಿರುವ ಸಂಕಲ್ಪಕುಂಡಲಿನಿ ಮತ್ತೆ ಮತ್ತೆ ಪೊರೆಗಳಚಿ ಪುನಃ ಪುನಃ ಊರ್ಧ್ವಗಾಮಿಯಾಗಲು ತನ್ನ ಸಾವಿರಾರು ಹೆಡೆಗಳನ್ನೂ ಎತ್ತಿ, ವರುಷ ವರುಷವೂ ಹೊಸ ಕಂಕಣ ಕಟ್ಟುವ ಪವಿತ್ರ ದಿನ. ಸರ್ವೋದಯ ರಾಜ್ಯದ ಸುಪೂಜ್ಯ ದಿನ.
ಆ ದಿನ ಭಾರತದ ಕೋಟಿ ಕೋಟಿ ಹೃದಯಗಳಲ್ಲಿ ಒಂದು ಮಿಂಚು ಸಂಚರಿಸುತ್ತದೆ. ಒಂದು ಶಕ್ತಿ ಸ್ಪಂದಿಸುತ್ತದೆ. ಕುರುಡನಾದರೂ ಚಿಂತೆಯಿಲ್ಲ; ಮೂಗನಾದರೂ ಚಿಂತೆಯಿಲ್ಲ; ಒಮ್ಮೆ ಕಂಬನಿಗರೆದರೂ ಚಿಂತೆಯಿಲ್ಲ; ಒಮ್ಮೆ ಬಿಸುಸುಯ್ದರೂ ಚಿಂತೆಯಿಲ್ಲ; ಯಾವುದೋ ಒಂದು ಹೇರಾಸೆ ಆಬಾಲವೃದ್ಧರ ಪ್ರಾಣ ಕೋಶಗಳಲ್ಲಿ ತುಂಬಿ ತುಳುಕುತ್ತದೆ. ಆ ಚಿನ್ಮಯ ಸ್ಪಂದನದ ಮೂಲವೆಲ್ಲಿ? ಅದು ಎಂದು ಮೊದಲಾಯಿತು? ಯಾರಿಂದ ಮೊದಲಾಯಿತು? ಆ ಶಕ್ತಿಬೀಜವನ್ನು ಭಾರತವರ್ಷದ ಸುಪ್ತಚೇತನದಲ್ಲಿ ಬಿತ್ತಿದವರಾರು? ಅದಕ್ಕೆ ನೀರು ಹೊಯ್ದವರಾರು? ಮೊಳೆಯಿಸಿದವರಾರು? ಆ ಎಳೆ ಸಸಿಯನ್ನು ಆರೈಸಿದವರಾರು?
ಅದನ್ನರಿಯಬೇಕಾದರೆ ನಾವು ಮತ್ತೊಂದು ಜನವರಿ ಇಪ್ಪತ್ತಾರನೆ ತೇದಿಗೆ ಯಾತ್ರೆ ಹೊರಡಬೇಕಾಗುತ್ತದೆ; 1897ನೇ ಇಸವಿಯ ಜನವರಿ ಇಪ್ಪತ್ತಾರನೆಯ ದಿವ್ಯ ದಿನಕ್ಕೆ.
ಏನು ವಿಶೇಷ ಆ ದಿನದ್ದು! ಕಲ್ಕತ್ತೆಯಲ್ಲಿ ಕೇಳು; ಲಾಹೋರಿನಲ್ಲಿ ಕೇಳು; ರಾಮನಾಡಿನಲ್ಲಿ ಕೇಳು; ಆಲ್ಮೋರದಲ್ಲಿ ಕೇಳು; ಸರ್ವಧರ್ಮ ಸಮನ್ವಯಮೂರ್ತಿ ನವಯುಗಾವತಾರ ಶ್ರೀರಾಮಕೃಷ್ಣ ಪರಮಹಂಸರ ಪರಮಶಿಷ್ಯ ಪರಮಪೂಜ್ಯ ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿನ ಸಕಲ ಮತಗಳ ಪ್ರತಿನಿಧಿಗಳನ್ನೂ ವೇದಾಂತ ಡಿಂಡಿಮದಿಂದ ಬೆರಗುಗೊಳಿಸಿ, ದಿಗ್ವಿಜಯಿಯಾಗಿ, ಜಗದ್ವಿಖ್ಯಾತರಾಗಿ ಸ್ವದೇಶಕ್ಕೆ ಹಿಮ್ಮರಳಿ ಭಾರತದ ಭೂಸ್ಪರ್ಶ ಮಾಡಿದ ಪುಣ್ಯ ದಿನವಲ್ಲವೆ ಆ ದಿವ್ಯದಿನ! ಬ್ರಿಟಿಷ್ ಚಕ್ರಾಧಿಪತ್ಯದ ಮತ್ತು ಸಾಮ್ರಾಜ್ಯ ಶಾಹಿಯ ಕಲೊಸಸ್ಸಿನ ಕಾಲಡಿಯಲ್ಲಿ ಕಷ್ಟ ಸಂಕಟಗಳಲ್ಲಿ ನರಳಿ, ಬಿಡುಗಡೆಗಾಗಿ ಹೋರಾಡಿ ಹೊರಳಿ, ದಾರಿಗಾಣದೆ ದಿಕ್ಕು ತೋರದೆ ಎದೆಗೆಟ್ಟು ಕೆರಳಿ, ತಮ್ಮ ದೈನ್ಯವನ್ನೂ, ದಾರಿದ್ರವನ್ನೂ ಕ್ರೈಬ್ಯವನ್ನೂ ಪರಿಹರಿಸಿ ಹೃದಯಕ್ಕೆ ಸಿಂಹಧೈರ್ಯವನ್ನು ತುಂಬುವ ಪಾಂಚಜನ್ಯ ಘೋಷಕ್ಕಾಗಿ ಕಾಯುತ್ತಿದ್ದ ಜಾಗೃತ ಭಾರತದ ಕೋಟ್ಯಂತರ ಚೇತನಗಳಲ್ಲಿ ಅಭೀಃ ಅಭೀಃ ಎಂಬ ಪ್ರಚಂಡವಾದ ವೇದೋಪನಿಷತ್ತಿನ ವಾಕ್ ಮಂತ್ರದಿಂದ ಶಕ್ತಿ ಸಾಗರದ ದುರ್ದಮ್ಯ ತರಂಗಗಳನ್ನು ಎಬ್ಬಿಸಿ ಹುರಿದುಂಬಿಸಿದ ವೇದಾಂತ ಕೇಸರಿಯ ವಿರಾಟ್ ಗರ್ಜನೆ ವಿಂಧ್ಯ ಸಹ್ಯ ಹಿಮಾಲಯಗಳಿಂದ ಪ್ರತಿಧ್ವನಿತವಾದ ಪುಣ್ಯ ದಿನವಲ್ಲವೆ ಆ ದಿವ್ಯ ದಿನ!
ಅಂದಿನಿಂದ ಮೊದಲಾಯಿತು ಭರತವರ್ಷದ ಪುನರುತ್ಥಾನ. ದಕ್ಷಿಣೇಶ್ವರ ದೇವಮಾನವನ ಚಿತ್ ತಪಸ್ ಸ್ವಾಮಿ ವಿವೇಕಾನಂದರ ಸಮುದ್ರಘೋಷಸ್ಪರ್ಧಿ ಯಾದ ವೀರವಾಣಿಯಲ್ಲಿ ವಾಕ್ ಮಂತ್ರವಾಗಿ ಹೊಮ್ಮಿ, ಭಾರತೀಯರ ಧಮನಿ ಧಮನಿಗಳಲ್ಲಿ ದುಮುದುಮುಕಿ ಹರಿದು ಕ್ರೈಬ್ಯವನ್ನು ಕೊಚ್ಚಿತು, ಧೈರ್ಯ ಧ್ವಜವನ್ನೆತ್ತಿತು. ಅಲ್ಪವನ್ನು ಕಿತ್ತು ಭೂಮವನ್ನು ನೆಟ್ಟಿತು. ಸಂಕುಚಿತ ಮನೋಭಾವನೆಯ ಗೋಡೆಗಳನ್ನೊಡೆದು ಮನಸ್ಸನ್ನು ಗಗನ ವಿಶಾಲವಾಗಿ ಮಾಡಿತು. ಕುರಿಗಳಂತಿದ್ದವರನ್ನು ಸಿಂಹಗಳನ್ನಾಗಿ ಪರಿವರ್ತಿಸಿತು. "ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ" ಎಂಬ ಧೀರಮಂತ್ರ ದಶದಿಕ್ಕುಗಳಿಂದಲೂ ಶಕ್ತಿ ಸಂಚಾರಕವಾಗಿ ಮೊಳಗಿದರೆ ಅಧೈರ್ಯ ಅಶಕ್ತಿಗಳಿಗೆ ಹುದುಗಿಕೊಳ್ಳುವುದಕ್ಕಾದರೂ ಜಾಗವಿರುತ್ತದೆಯೆ?
Comments