Posts

Showing posts from October, 2024
 ಗ್ರಂಥ: ಕೊಲಂಬೊ ಇಂದ ಆಲ್ಮೋರಕೆ.  ಸ್ವಾಮಿ ವಿವೇಕಾನಂದ.  ಭಾಗ 1.  ಮುನ್ನುಡಿ  ಆಕಸ್ಮಿಕ ಎಂಬುದು ಅಪೂರ್ಣ ಜ್ಞಾನ; ತನ್ನನ್ನು ತಾನು ಮರೆಮಾಡಿಕೊಳ್ಳಲೆಳಸುವ ಒಂದು ವಿಧಾನಕ್ಕೆ ನಾವು ಇಡುವ ಹೆಸರು. ನಾವು ಯಾವುದನ್ನು ಆಕಸ್ಮಿಕ ಎಂದು ಕರೆಯುತ್ತೇವೆಯೋ ಅದು ನಿಜವಾಗಿಯೂ ಆಕಸ್ಮಿಕವಾದುದಲ್ಲ, ಪೂರ್ವಾಪರವನ್ನು ಅಖಂಡವಾಗಿಯೂ ಏಕವಾಗಿಯೂ ಒಳಗೊಳ್ಳುವ ತ್ರಿಕಾಲದರ್ಶಿಯಾದ ಪೂರ್ಣದೃಷ್ಟಿಗೆ ಆಕಸ್ಮಿಕ ಎಂಬುದಿಲ್ಲ. ನಮ್ಮ ಅಲ್ಪಜ್ಞಾನ ತನಗೆ ಅನಿರೀಕ್ಷಿತವಾದುದ್ದನ್ನು ಹಾಗೆ ಕರೆದ ಮಾತ್ರಕ್ಕೆ ಭೂಮಜ್ಞಾನವೂ ಅದನ್ನು ಹಾಗೆ ಗ್ರಹಿಸಬೇಕಾಗಿಲ್ಲ, ಸರ್ವಜ್ಞವಾದ ಸರ್ವೇಚ್ಛಾಶಕ್ತಿ ಸುರುಳಿಬಿಚ್ಚುವ ತನ್ನ ಲೋಕಲೀಲೆಯಲ್ಲಿ ಯಾವುದನ್ನೂ ಅನಿಶ್ಚಯಕ್ಕೆ ಬಿಡುವುದಿಲ್ಲ ಎಂಬ ಪೂರ್ಣದೃಷ್ಟಿಯ ಶ್ರದ್ದೆಯಿಂದ ಸಮನ್ವಿತವಾದ ಪ್ರಜ್ಞೆ ಸಾಮಾನ್ಯ ಬುದ್ಧಿಗೆ ಆಕಸ್ಮಿಕ ಎಂದು ತೋರುವುದರಲ್ಲಿಯೂ ಅರ್ಥ, ಉದ್ದೇಶ, ವ್ಯೂಹಗಳನ್ನು ಸಂದರ್ಶಿಸುತ್ತದೆ.  ಜನವರಿ ಇಪ್ಪತ್ತಾರನೆ ತೇದಿ ಭಾರತೀಯರಾದ ನಮಗೆ ಈಗ ಒಂದು ಮಹಾ ಸಂಕೇತದ ದಿನವಾಗಿ ಪರಿಣಮಿಸಿದೆ. ಸ್ವತಂತ್ರ ಭಾರತರಾಷ್ಟ್ರ ತಾನು ರಿಪಬ್ಲಿಕ್ ಎಂದು ಘೋಷಿಸಿಕೊಂಡ ಮಹಾ ಸುದಿನವದು. ಅದೊಂದು ಉತ್ಥಾನದ ಮತ್ತು ಉಜ್ಜೀವನದ ಪ್ರಾರಂಭೋತ್ಸವದ ದಿನ; ನವೋತ್ಸಾಹದ ದಿನ; ನವೀನತಾ ಜೀವನದ ದೀಕ್ಷಾದಿನ. ನವಭಾರತದ ಉದ್ಧಾರೋನ್ಮುಖವೂ ವಿಕಾಸಶೀಲವೂ ಆಗಿರುವ ಸಂಕಲ್ಪಕುಂಡಲಿನಿ ಮತ್ತೆ ಮತ್ತೆ ಪೊರೆಗಳಚಿ ಪುನಃ ಪುನಃ ಊರ್ಧ್ವಗಾಮಿಯಾಗಲು ತನ್ನ ಸಾವಿ