ಮಂಕುತಿಮ್ಮ ॥ ೬೩೩ ॥

 ಸಾಧ್ಯಪಡದಾರಿಗಂ ನರಭಾಲಪಟ್ಟವನು ।

ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ॥

ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ ।

ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ॥ ೬೩೩ ॥


ವಾಚ್ಯಾರ್ಥ

ಸಾಧ್ಯಪಡದಾರಿಗಂ=ಸಾಧ್ಯ+ಪಡದು+ಆರಿಗುಂ, ಪೂರ್ವದೆಲ್ಲವನು=ಪೂರ್ವದ+ಎಲ್ಲವನು.ನರಭಾಲಪಟ್ಟ=ಹಣೆಯ ಬರಹ, ಪಟವ=ಹೊದಿಕೆ, ಸೈರಣೆಯೆ=ತಾಳ್ಮೆ


ಭಾವಾರ್ಥ

ಪೂರ್ವಕರ್ಮವನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಅಳಿಸಿಹಾಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಆ ಪೂರ್ವಕರ್ಮದ ಹೊದಿಕೆಯನ್ನು ಹೊದ್ದೇ, ಎಂದರೆ ಕರ್ಮವನ್ನು ಹೊತ್ತುಕೊಂಡೇ, ಮಾಡುತ್ತಲೇ, ಸವೆಸುತ್ತಲೇ ಜೀವನವನ್ನು ಸಾಗಿಸಬೇಕು. ಆದರೆ ಹಾಗೆ ಬದುಕುವಾಗ ಸೈರಣೆಯಿಂದ, ತಾಳ್ಮೆಬಿಡದೆ, ವಿವೇಕದಿಂದ ಜೀವಿಸಬೇಕು ಎಂದು ಪೂರ್ವಕರ್ಮಾಧಾರಿತ ಬದುಕಿನ ಬವಣೆಯನ್ನು ಎದುರಿಸುವ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.


ವ್ಯಾಖ್ಯಾನ

ಒಂದು ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಲು ಬೇಕಾದ ಎಲ್ಲಾ ಗುಣಗಳನ್ನೂ ತನ್ನಲ್ಲೇ ಅಡಕವಾಗಿ ಇಟ್ಟುಕೊಂಡಂತೆ, ಪ್ರತೀ ಆತ್ಮನೂ ಒಂದು ದೇಹವನ್ನು ಬಿಡುವಾಗ ಆ ದೇಹದಲ್ಲಿ ಆದಂತ ಅನುಭವಗಳ ಗುಣ ಶೇಷವನ್ನು ತನ್ನ ಸೂಕ್ಷ್ಮ ಶರೀರದೊಳಗಿಟ್ಟುಕೊಂಡು ಬರುತ್ತದೆ ಮತ್ತು ಸೂಕ್ತ ಪಾತ್ರ ಅಂದರೆ ಮತ್ತೊಂದು ದೇಹ ಸಿಕ್ಕರೆ ಆ ಗುಣಗಳನ್ನು ಪ್ರಕಟಗೊಳಿಸಿ, ಮತ್ತಷ್ಟನ್ನು ಗಳಿಸಿ ಕೆಲವನ್ನು ಕಳೆದುಕೊಂಡು ಕಡೆಗೆ ಒಂದಿಷ್ಟು ಶೇಷವನ್ನು ಉಳಿಸಿಕೊಂಡು ಮುಂದಿನ ಪ್ರಯಾಣವನ್ನು ಮಾಡುತ್ತದೆ ಎನ್ನುತ್ತದೆ ನಮ್ಮ ‘ಸನಾತನ ಧರ್ಮ’. ಇದೊಂದು ನಿರಂತರ ಉರುಳುವ ಚಕ್ರ. ಎಲ್ಲಿಯ ತನಕ "ಗುಣಶೇಷ" ವಿದೆಯೋ ಅಲ್ಲಿಯ ತನಕ ಉರುಳುತ್ತಲೇ ಇರುವ ಚಕ್ರ. ಈ ಗುಣ ಶೇಷವನ್ನೇ ಹಣೆಯ ಬರಹ ಎನ್ನುವುದು. ಇದನ್ನು ಒಂದೇ ಬಾರಿಗೆ ಅಳಿಸಿಹಾಕಲು ಸಾಧ್ಯವಿಲ್ಲ.ಆ ಪರಮಾತ್ಮ ಮನುಷ್ಯನಿಗೆ ಮಾತ್ರ ಕರುಣಿಸಿರುವ ‘ ವಿವೇಕ’ವನ್ನು ಉಪಯೋಗಿಸಿ ಸತ್ವವನ್ನು ಒಳಗಿಳಿಸಿಕೊಂಡರೆ ಜಗತ್ತಿನ ಬಾಳಿಗೆ ಪೂರಕವಾಗಿರುವ ಎಲ್ಲಾ ಗುಣಗಳನ್ನು ಕ್ರಮೇಣ ಕಳೆದುಕೊಳ್ಳಬಹುದು. ತಂದದ್ದನ್ನು ಕಡಿಮೆಯಾಗಿಸುತ್ತಾ, ಮತ್ತಷ್ಟನ್ನು ಗಳಿಸಿಕೊಳ್ಳದೆ, ಪ್ರತೀ ಜನ್ಮದ ಅಂತ್ಯದಲ್ಲಿ ಶೇಷವನ್ನು ಕಡಿಮೆಮಾಡಿಕೊಳ್ಳುತ್ತಾ ಹೋದರೆ, ಎಂದಾದರೂ ಒಂದು ದಿನ ಅದು ನಿಶ್ಯೇಷವಾಗಬಹುದು. ಆದರೆ ಕರ್ಮ ಶೇಷವೆಲ್ಲಿಯ ತನಕ ಇರುತ್ತದೆಯೋ ಅಲ್ಲಿಯ ತನಕ ಅದನ್ನು ಅನುಭವಿಸಲೇ ಬೇಕು. ಅದನ್ನು ಅನುಭವಿಸಿಯೇ ತೀರಿಸಿಕೊಳ್ಳಬೇಕು. ಅನ್ಯಥಾ ದಾರಿಯೇ ಇಲ್ಲ. ಆದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಮಾನ್ಯ ಗುಂಡಪ್ಪನವರು’ ಬುದ್ಧಿ ನುಡಿ ಸೈರಣೆಯೆ’ ಎಂದು ಹೇಳಿದಂತೆ ವಿವೇಕದ ಮಾತನ್ನು ಕೇಳಿ ಅದು ಸೂಚಿಸುವ ಹಾದಿಯಲ್ಲಿ ತಾಳ್ಮೆಯಿಂದ ನಡೆಯಬೇಕು.ಆದರೆ ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಈ ಜಗತ್ತಿಗೆ ಮತ್ತಷ್ಟು ಗಾಢವಾಗಿ ಅಂಟಿಕೊಳ್ಳಲು ಪ್ರತಿ ನಿತ್ಯ ಹೊಸ ಹೊಸ ಸಾಧನಗಳು ಮತ್ತು ಪ್ರಲೋಭನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಮನುಷ್ಯ ಮುಕ್ತಿಯ ಮಾರ್ಗಗಳನ್ನೆಲ್ಲಾ ಒಂದೊಂದಾಗಿ ಮುಚ್ಚಿಕೊಳ್ಳುತ್ತಿದ್ದಾನೆ. ‘ ಅಲ್ಲಿಯದೇನೋ ನಾನರಿಯೆ. ಇಲ್ಲಿರುವಾಗ ಈ ಜಗತ್ತನ್ನು ಅನುಭವಿಸಿ ಬಿಡುತ್ತೇನೆ ‘ ಎನ್ನುವ ಅಜ್ಞಾನದ ಹಾದಿಯಲ್ಲೇ ನಡೆಯುವ ನಮಗೆ ನಮ್ಮ ಹಣೆಯ ಬರಹವನ್ನು ಅಳಿಸಿಕೊಳ್ಳಲು ಸಾಧ್ಯವೆ. ಪ್ರತಿಯೊಬ್ಬರೂ ಆಲೋಚನೆ ಮಾಡಬೇಕಾದ ವಿಷಯ. "ಉದ್ಧರೇತ್ ಆತ್ಮನಾತ್ಮಾನಂ" ಎನ್ನುವಂತೆ ಪ್ರತಿಯೊಬ್ಬರೂ ಅವರವರ ಉದ್ಧಾರವನ್ನು ಅವರವರೆ ಮಾಡಿಕೊಳ್ಳಬೇಕು. ಪ್ರಯತ್ನ ಪಟ್ಟರೆ ಖಂಡಿತ ಸಾಧಿಸಬಹುದು.

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software