ಮಂಕುತಿಮ್ಮ ॥ ೬೩೩ ॥
ಸಾಧ್ಯಪಡದಾರಿಗಂ ನರಭಾಲಪಟ್ಟವನು । ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ॥ ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ । ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ॥ ೬೩೩ ॥ ವಾಚ್ಯಾರ್ಥ ಸಾಧ್ಯಪಡದಾರಿಗಂ=ಸಾಧ್ಯ+ಪಡದು+ಆರಿಗುಂ, ಪೂರ್ವದೆಲ್ಲವನು=ಪೂರ್ವದ+ಎಲ್ಲವನು.ನರಭಾಲಪಟ್ಟ=ಹಣೆಯ ಬರಹ, ಪಟವ=ಹೊದಿಕೆ, ಸೈರಣೆಯೆ=ತಾಳ್ಮೆ ಭಾವಾರ್ಥ ಪೂರ್ವಕರ್ಮವನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಅಳಿಸಿಹಾಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಆ ಪೂರ್ವಕರ್ಮದ ಹೊದಿಕೆಯನ್ನು ಹೊದ್ದೇ, ಎಂದರೆ ಕರ್ಮವನ್ನು ಹೊತ್ತುಕೊಂಡೇ, ಮಾಡುತ್ತಲೇ, ಸವೆಸುತ್ತಲೇ ಜೀವನವನ್ನು ಸಾಗಿಸಬೇಕು. ಆದರೆ ಹಾಗೆ ಬದುಕುವಾಗ ಸೈರಣೆಯಿಂದ, ತಾಳ್ಮೆಬಿಡದೆ, ವಿವೇಕದಿಂದ ಜೀವಿಸಬೇಕು ಎಂದು ಪೂರ್ವಕರ್ಮಾಧಾರಿತ ಬದುಕಿನ ಬವಣೆಯನ್ನು ಎದುರಿಸುವ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ. ವ್ಯಾಖ್ಯಾನ ಒಂದು ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಲು ಬೇಕಾದ ಎಲ್ಲಾ ಗುಣಗಳನ್ನೂ ತನ್ನಲ್ಲೇ ಅಡಕವಾಗಿ ಇಟ್ಟುಕೊಂಡಂತೆ, ಪ್ರತೀ ಆತ್ಮನೂ ಒಂದು ದೇಹವನ್ನು ಬಿಡುವಾಗ ಆ ದೇಹದಲ್ಲಿ ಆದಂತ ಅನುಭವಗಳ ಗುಣ ಶೇಷವನ್ನು ತನ್ನ ಸೂಕ್ಷ್ಮ ಶರೀರದೊಳಗಿಟ್ಟುಕೊಂಡು ಬರುತ್ತದೆ ಮತ್ತು ಸೂಕ್ತ ಪಾತ್ರ ಅಂದರೆ ಮತ್ತೊಂದು ದೇಹ ಸಿಕ್ಕರೆ ಆ ಗುಣಗಳನ್ನು ಪ್ರಕಟಗೊಳಿಸಿ, ಮತ್ತಷ್ಟನ್ನು ಗಳಿಸಿ ಕೆಲವನ್ನು ಕಳೆದುಕೊಂಡು ಕಡೆಗೆ ಒಂದಿಷ್ಟು ಶೇಷವನ್ನು ಉಳಿಸಿಕೊಂಡ...