ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ ವಿವರಣೆ

 ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ 

__________________



ಆತ ಅಟ್ಲಿ ಅಂತಲೇ ಪ್ರಸಿದ್ಧ. ಪೂರ್ಣ ಹೆಸರು ಅಟ್ಲಿ ಕುಮಾರ್. ಕಪ್ಪು ಮೈ ಬಣ್ಣದವ. ಹೆಸರಾಂತ ತಮಿಳು ಸಿನೆಮಾ ನಿರ್ದೇಶಕ. ಆತನ ಮೈ ಬಣ್ಣ, ಪ್ರೇಮಿಸಿ ಮದುವೆಯಾದ ಆತನ ಪತ್ನಿ ಕೃಷ್ಣಪ್ರಿಯಾಳಿಗೆ ಎಂದೂ ಸಮಸ್ಯೆಯಾಗಲಿಲ್ಲ. ಆದರೆ ನಮ್ಮ ಕೆಲ ಜನರಿಗೆ ಮಾತ್ರ ಅದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡಿತು. ಅಟ್ಲೀ ನಿಜವಾಗಲೂ ಕಡು ಕಪ್ಪು. ನಿರ್ದೇಶಕನಾಗುವ ಮೊದಲು ಸಹ ನಿರ್ದೇಶಕನಾಗಿದ್ದಾಗಲೂ ಚಿತ್ರರಂಗದ ಚಿಳ್ಳೆ ಮಿಳ್ಳೆಗಳೆಲ್ಲ ಆತನನ್ನು ಬಣ್ಣದ ಕಾರಣಕ್ಕೆ ಹೀಯಾಳಿಸಿದ್ದುಂಟು. ಹಾಗಂತ ಅಟ್ಲಿಯೇನೂ ಸಾಮಾನ್ಯನಲ್ಲ. ‘ರೋಬೋಟ್’ ದಂತಹ ಸಿನೇಮಾ ನಿರ್ದೇಶಿಸಿದ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೆ ಸಹ ನಿರ್ದೇಶಕನಾಗಿದ್ದವನು. ಅಟ್ಲೀ ತನ್ನ ಮುಗ್ಧತೆಯಿಂದಲೇ ರಜನೀಕಾಂತ್ ಆಪ್ತವಲಯದಲ್ಲಿರುವವನು. ರಜನಿಕಾಂತ್ ಇಂಥ ಅಟ್ಲಿಯ ಮದುವೆಗೆ ಹಾರೈಸಿ, ಈತನ ಸಿನೀಮಾ ಮುಹೂರ್ತಕ್ಕೂ ಹೋಗಿ ಕ್ಲಾಪ್ ಮಾಡಿದ್ದರು. ಭಾವುಕ ಹಾಗೂ ತೆಳು ನಿರೂಪಣೆಯ ಅಟ್ಲಿ ನಿರ್ದೇಶನದ ಸಿನಿಮಾಗಳ ಬಗ್ಗೆ ನನಗೆ ತಕರಾರಿದೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಅಟ್ಲಿ ನಿರ್ದೇಶಿಸಿದ ‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ ಟಿ ಕುರಿತಾದ ಸಂಭಾಷಣೆ ದೆಹಲಿವರೆಗೂ ಸದ್ದು ಮಾಡಿತ್ತು. ದೊಡ್ಡ ವಿವಾದ ಸೃಷ್ಟಿಸಿತ್ತು. ‘ಮೆರ್ಸಲ್’ ಹೊರತುಪಡಿಸಿ ಆತನ ‘ರಾಜ ರಾಣಿ’, ‘ಥೇರಿ’, ‘ಬಿಗಿಲ್’ ಸಿನಿಮಾಗಳೆಲ್ಲ ಯಶಸ್ಸು ಕಂಡಂಥವೇ. ಇದರಲ್ಲಿ ಮೆರ್ಸಲ್ ಚಿತ್ರ 2017ರಲ್ಲಿ 251 ಕೋಟಿ ಗಳಿಸಿದರೆ, ‘ಬಿಗಿಲ್’ ಸಿನಿಮಾ ಗಳಿಸಿದ್ದು ಬರೋಬ್ಬರಿ 300 ಕೋಟಿಗೂ ಅಧಿಕ. ‘ರಾಜ ರಾಣಿ’ 'ಥೇರಿ' ಗಳಿಕೆಯೇನು ಸಣ್ಣದಲ್ಲ.


ಅಟ್ಲಿಯ ಮೈ ಬಣ್ಣದ ಕಾರಣಕ್ಕೆ ಆತನ ಯಶಸ್ಸನ್ನು ನೋಡದೆ, ಜನ ಆತನನ್ನು ಕಾಡಿಸಿದ್ದು ಅಷ್ಟಿಷ್ಟಲ್ಲ. ಕೊನೆಗೂ ಆತನ ಮದುವೆಯ ಫೋಟೊ ಸಹ ದೊಡ್ಡ ಮಟ್ಟದ ಟ್ರೋಲಿಗೆ ತುತ್ತಾಯಿತು. ಅದೊಂದು ದಂಪತಿಗಳ ಫೋಟೊ. ಅದರಲ್ಲಿ ಕಪ್ಪು ಮೈ ಬಣ್ಣದ ಅಟ್ಲಿ ಜೊತೆ, ಪಕ್ಕದಲ್ಲಿ ಆತನನ್ನು ಪ್ರೇಮಿಸಿ ಮದುವೆಯಾದ ಕೃಷ್ಣಪ್ರಿಯಾ ಇದ್ದಳು. ಅವರಿಬ್ಬರ ಬಣ್ಣದಲ್ಲಿದ್ದ ವ್ಯತ್ಯಾಸವೇ ನಮ್ಮ ಜನರಿಗೆ ದೊಡ್ಡದಾಯಿತು. ಎಷ್ಟೋ ವರ್ಷ ಅಟ್ಲಿಯನ್ನು ನಿಷ್ಕಾರಣವಾಗಿ ಪ್ರೀತಿಸಿದ ಕೃಷ್ಣಕುಮಾರಿಯ ಪ್ರೀತಿಯೂ ಟ್ರೋಲ್ ಮಾಡುವವರಿಗೆ ಕಾಣದಾಯಿತು. ‘ಸರಕಾರಿ ನೌಕರಿ ಇದ್ದರೆ ಸಿಗುವ ಹೆಂಡತಿ’ ಅಂತ ಆ ಫೋಟೊ ಮೇಲೆ ಕೆಳಗೆ ಬರೆದು ಹರಿ ಬಿಡಲಾಯಿತು. ಅಟ್ಲಿ ಇದರಿಂದ ಕುದ್ದರೂ, ನೊಂದರೂ ಅಸಹಾಯಕನಾಗುವುದು ಅನಿವಾರ್ಯವಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ನಿರೂಪಕಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಆತ ಹೀಗಂದಿದ್ದ ‘ನೋವಾಗಿದೆ. ಆಗುತ್ತದೆ. ಆಗ್ತಲೇ ಇರ್ತದೆ. ನಾನು ಮಾಡುವ ಸಿನಿಮಾಗಿಂತ ಜನರಿಗೆ ನನ್ನ ಬಣ್ಣ ಮುಖ್ಯ ಎನಿಸಿದರೆ ನಾನೇನು ಮಾಡಲಿ? ನಾನು ಸವೆಸಿದ ಹಾದಿ, ತುಳಿದ ಮುಳ್ಳುಗಳ ಗಾಯ, ಒಂದು ಯಶಸ್ಸು ಬೇಡಿದ ಹಲವು ವರ್ಷಗಳ ಶ್ರಮ. ಇವೆಲ್ಲಕ್ಕಿಂತ ಮೈ ಬಣ್ಣವನ್ನು ಮುಖ್ಯ ಮಾಡಿದ್ರಲ್ಲ?' ಎಂದು ದೀರ್ಘ ಉಸಿರೆಳೆದುಕೊಂಡು ಸುಮ್ಮನಾಗಿದ್ದ. ಇದೇ ಅಟ್ಲಿಯ 'ಮೆರ್ಸಲ್' ಚಿತ್ರದ ವಿವಾದಾತ್ಮಕ ಸಂಭಾಷಣೆ ಭಾಗವನ್ನು ಹಂಚಿಕೊಂಡು ಖುಷಿಪಟ್ಟಿದ್ದ ಎಷ್ಟೋ ಜನರು, ಅದಕ್ಕೂ ಮೊದಲು ಆತನ ಟ್ರೋಲ್ ಪಟವನ್ನು ವಾಟ್ಸಾಪಿನ ತುಂಬ ಪಸರಿಸಿದ್ದರು. ಫೇಸ್ಬುಕ್ಕಿನಲ್ಲೂ ಹಂಚಿಕೊಂಡು ನಕ್ಕಿದ್ದರು.


ಅಮೇರಿಕದ ಬಿಳಿ ಪೊಲೀಸನ ದೌರ್ಜನ್ಯಕ್ಕೆ ತೀರಿಕೊಂಡ ಅಲ್ಲಿಯ ಕಪ್ಪು ವರ್ಣದ ಪ್ರಜೆ ಫ್ಲಾಯ್ಡ್ ನ ಅಸಹಾಯಕ ದನಿ ಆ ವಿಡಿಯೋ ನೋಡಿದಾಗಿಂದ ಕಾಡುತ್ತಲೇ ಇದೆ. ಆ ಸಾವು ಖಂಡಿಸಿ ಅಮೇರಿಕದ 75ಕ್ಕೂ ಹೆಚ್ಚು ನಗರಗಳು ಹೊತ್ತಿ ಉರಿಯುತ್ತಿವೆ. ಕರಿಯ ಅಮೇರಿಕನ್ನರಿಗೆ ಎಷ್ಟೋ ಬಿಳಿ ಅಮೇರಿಕನ್ನರು ಬೆಂಬಲ ಸೂಚಿಸಿ ಬೀದಿಗಿಳಿದಿದ್ದಾರೆ. ವೈಟ್ ಹೌಸ್ ತನ್ನ ಅಂಗಳದಲ್ಲಿ ಎಂದೂ ಕಾಣದ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಕೊರೊನಾದಿಂದ ಅಮೇರಿಕದಲ್ಲಿ ಲಕ್ಷಕ್ಕಿಂತ ಹೆಚ್ಚು ಜನ ಸತ್ತರೂ ಜನ ನಿರ್ಭೀತರಾಗಿ, ಜನಾಂಗೀಯ ವರ್ಣಭೇದದ ವಿರುದ್ಧ ಲಕ್ಷಾಂತರ ಲೆಕ್ಕದಲ್ಲಿ ಬೀದಿಗಿಳಿದ್ದಾರೆ. ಕಪ್ಪು ವರ್ಣೀಯರಿಗೆ ಸವರ್ಣೀಯರು ಬೆಂಬಲದ ಜೊತೆಗೆ ಬಲವನ್ನು ಕೊಟ್ಟಿದ್ದಾರೆ. ಒಬ್ಬ ಪೊಲೀಸನ ವಿಷಗುಣಕ್ಕೆ ಅಲ್ಲಿನ ನೂರಾರು ಪೊಲೀಸರು ಪ್ರತಿಭಟನಾಕಾರರ ಎದುರು ಮಂಡಿಯೂರಿ ಕೂತು ನೈತಿಕ ಹೊಣೆ ಹೊತ್ತುಕೊಂಡದ್ದಾಗಿದೆ.


ದೌರ್ಜನ್ಯಕ್ಕೆ ಈಡಾಗಿ ಸತ್ತ ಆ ಕಪ್ಪು ಪ್ರಜೆ ಜಾರ್ಜ್ ಫ್ಲಾಯ್ಡ್ ‘ನನಗೆ ಉಸಿರಾಡಲಾಗುತ್ತಿಲ್ಲ. ಪ್ಲೀಸ್ ಆಫೀಸರ್’ ಎಂದರೂ ಆ ಬಿಳಿ ಪೊಲೀಸನ ಮಂಡಿ ಆತನ ಕುತ್ತಿಗೆ ಮೇಲಿನಿಂದ ಸರಿಯುವುದೇ ಇಲ್ಲ. ಇಂಥವನ್ನೆಲ್ಲ ನೋಡುವಾಗ ಅರಗಿಸಿಕೊಳ್ಳುವುದು ಕಷ್ಟ. ಪ್ರಭುತ್ವದ ದುಷ್ಟತನ ಪೊಲೀಸರ ಮೂಲಕ ಬಿಂಬಿತವಾಗುತ್ತದೆ ಎಂಬ ಪಿ.ಲಂಕೇಶ್ ಮೇಷ್ಟ್ರ ಮಾತು ಮತ್ತೊಮ್ಮೆ ನಿಜವಾಗಿದೆ. ಫ್ಲಾಯ್ಡ್ ಸಾವಿಗೆ ಇಂದು ಇಡೀ ಅಮೇರಿಕದಲ್ಲಿ ಮಿಡಿದವರು‌ ಲಕ್ಷಾಂತರ ಜನ. ಫ್ಲಾಯ್ಡ್ ವಿಚಾರದಲ್ಲಿ ಆ ಬಿಳಿ ಪೊಲೀಸ್ ನಡೆದುಕೊಂಡಿದ್ದು ಘೋರ. ಅಧಿಕಾರದ ಮದದಲ್ಲಿ ಹುಚ್ಚನಂತಾಡುತ್ತಿದ್ದ ಟ್ರಂಪ್ ಗೂ ಸಹ ಈ ಘಟನೆ ಬಿಸಿ ತಾಕಿಸಿದೆ‌. ಫ್ಲಾಯ್ಡ್ ಸಾವನ್ನು ಬಹುತೇಕರು ಖಂಡಿಸುತ್ತಿದ್ದಾರೆ. ಅದು ಸ್ವಾಗತಾರ್ಹ. ಈ ಮೊದಲು ಇದೇ ಅಟ್ಲಿ ಕುಮಾರ್ ಮೈ ಬಣ್ಣದ ಬಗೆಗಿದ್ದ ಕೆಟ್ಟ ಟ್ರೋಲ್ ಗಳನ್ನು ಕಾಮೇಡಿಗಾಗಿ ಹಂಚಿಕೊಂಡಿದ್ದ ಅನೇಕರು ಈಗ ಫ್ಲಾಯ್ಡ್ ಸಾವಿನ ಬಗ್ಗೆ ಕುದಿಯುತ್ತಿದ್ದಾರೆ. ಮನುಷ್ಯ ಎಂಥವನೇ ಆಗಲಿ, ಆತನ ಮೈ ಬಣ್ಣದ ಕಾರಣಕ್ಕೆ 'ಕರಿ ಇಡ್ಲಿ' ಎಂದು ನಮ್ಮ ನಡುವೆಯೇ ಕುಹಕವಾಡಿಕೊಂಡು ಓಡಾಡುವ ಜನ ಸಹ ಇಂದು ದೂರದ ಅಮೇರಿಕದ ವಿದ್ಯಮಾನದ ಕುರಿತು ಆಕ್ರೋಶಭರಿತರಾಗಿದ್ದಾರೆ. ಮೈ ಬಣ್ಣದ ಕುರಿತ ಕೆಟ್ಟ ಟ್ರೋಲ್ ಮಾಡಿ ನಗುವವರು, ಮತ್ತೊಬ್ಬನನ್ನು 'ಕರಿ ಇಡ್ಲಿ' ಎಂದು ಕರೆದು ಹೀಯಾಳಿಸುವವರು ಹಾಗೂ ಫ್ಲಾಯ್ಡ್ ನನ್ನು ಕೊಂದ ಆ ಪೊಲೀಸನ ಮನಸ್ಥಿತಿ ಬೇರೆ ಬೇರೆಯಂತೂ ಅಲ್ಲವೇ ಅಲ್ಲ. ಫ್ಲಾಯ್ಡ್ ಸಾವು, ಸಾವಿನ ಹಿನ್ನೆಲೆ ಭುಗಿಲೆದ್ದ ಆಕ್ರೋಶ ಖಂಡಿತ ಕೆಲ ಯುರೋಪ್ ರಾಷ್ಟ್ರಗಳಿಗೆ ಪಾಠ‌. ನಮಗೂ ಸಹ.

~ಮೂಲ ಬರಹ ~:-ಸಿದ್ದು ಸತ್ಯಣ್ಣನವರು..

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software