ನಾವು ಊರು ಬಿಟ್ಟವರು.. kannada story
ನಾವು ಊರು ಬಿಟ್ಟವರು..
ಲಾಕ್ ಡೌನಿನ ಹಿಂದಿನ ದಿನ ಬೆಂಗಳೂರಿನ ಕೊಲೀಗು ಹೇಳುತ್ತಾನೆ: "ನಿನಗೇನು ಬಿಡು ಮಾರಾಯಾ, ನೀನು ಊರಿನವನು!"
ಲಾಕ್ ಡೌನಿನ ದಿನ ಊರಿಗೆ ಬಂದಿಳಿದಾಗ ಅಲ್ಯಾರೋ ಗೊಣಗಿಕೊಳ್ಳುತ್ತಾರೆ: "ಇವನ್ಯಾಕೆ ಈಗ ಬಂದ? ಇವನು ಬೆಂಗಳೂರಿನವನು!"
ಎರೆಡೂ ಊರಿಗೆ ಸ್ವಂತವಾಗದ ನಾವು ಎರೆಡು ಮಾತನ್ನೂ ಮೌನವಾಗಿ ಕೇಳಿಸಿಕೊಂಡು ಸುಮ್ಮನಿರುತ್ತೇವೆ.
ಏಕೆಂದರೆ ನಾವು ಊರು ಬಿಟ್ಟವರು.
ಹಸಿದು ರೂಮಿಗೆ ಬಂದಾಗ ಉಣಬಡಿಸುವ ಅಕ್ಕರೆಯ ಅಮ್ಮನಿಲ್ಲ.
ಜ್ವರವೆಂದು ಮಲಗಿದಾಗ ಮಾತ್ರೆ ತಂದು ಕೊಡಲು ಕಾಳಜಿಯ ಅಪ್ಪನಿಲ್ಲ.
ಇವರಿಬ್ಬರ ನೆನಪನ್ನಷ್ಟೇ ಎದೆಯೊಳಗಿಟ್ಟುಕೊಂಡು ದೂರದ ಶಹರದಲ್ಲಿ ಸಿಕ್ಕಿದ್ದನ್ನು ತಿಂದು ಅರೆಹೊಟ್ಟೆಯಲ್ಲೇ ಮಲಗುತ್ತೇವೆ.
ಏಕೆಂದರೆ ನಾವು ಊರು ಬಿಟ್ಟವರು.
ಅದೊಂದು ಬೆಳ್ಳಂಬೆಳಗ್ಗೆ ಫೋನು ಬರುತ್ತದೆ: "ನಿಮ್ಮ ಅಜ್ಜ ಹೋಗಿಬಿಟ್ಟರು!"
ಎದ್ದು ಬಿದ್ದು ಊರಿಗೆ ಓಡಿ ಬಂದವರನ್ನು ಅಂಗಳದಲ್ಲಿಟ್ಟ ಅಜ್ಜನ ಶವವಷ್ಟೇ ಎದುರುಗೊಳ್ಳುತ್ತದೆ.
ಅಕ್ಕರೆಯ ಜೀವದೊಂದಿಗೆ ಕೊನೆಯ ಮಾತೂ ಆಡಲಾಗದೇಹೋದ ನೋವಿಗೆ ನಾವು ಯಾರನ್ನೂ ಹೊಣೆ ಮಾಡುವಂತಿಲ್ಲ.
ಏಕೆಂದರೆ ನಾವು ಊರು ಬಿಟ್ಟವರು.
ಸಣ್ಣ ಸಂಬಳದಲ್ಲಿ ಉಳಿಸಿದ ದೊಡ್ಡ ಭಾಗದಿಂದ ಊರಿನಲ್ಲೊಂದು ಮನೆ ಕಟ್ಟುತ್ತೇವೆ.
ಕಟ್ಟಿದ ಮನೆಯಲ್ಲಿ ಎರೆಡು ದಿನ ಇರಲೂ ರಜೆ ಸಾಲದೇ ಮರಳಿ ಬೆಂಗಳೂರಿಗೆ ಓಡುತ್ತೇವೆ.
ಅಲ್ಲಿ ವಿಶಾಲವಾದ ಮನೆ ಕಟ್ಟಿದ ಖುಷಿಯಲ್ಲಿ ಇಲ್ಲಿ ಇಕ್ಕಟ್ಟಿನ ರೂಮಿನಲ್ಲಿ ಮಲಗುತ್ತೇವೆ.
ಏಕೆಂದರೆ ನಾವು ಊರು ಬಿಟ್ಟವರು.
ಕುಸಿದು ಆಸ್ಪತ್ರೆ ಸೇರುವವರೆಗೆ ಹುಷಾರಿಲ್ಲದ ವಿಷಯವನ್ನು ಅಮ್ಮ ಹೇಳುವುದೇ ಇಲ್ಲ.
ಅಪ್ಪನಿಗೆ ಬಿಪಿ ಬಂದಿದ್ದು ಯಾರೋ ಹೇಳುವ ತನಕ ಗೊತ್ತಾಗುವುದೇ ಇಲ್ಲ.
ಯಾವಾಗ ಯಾರನ್ನು ಕಳೆದುಕೊಳ್ಳುವೆವೋ ಎಂಬ ಭಯವೊಂದನ್ನು ಸದಾ ಮನದಲ್ಲಿಟ್ಟುಕೊಂಡೇ ಬದುಕುತ್ತೇವೆ.
ಏಕೆಂದರೆ ನಾವು ಊರು ಬಿಟ್ಟವರು.
ಆಫೀಸೇ ನಡೆಯದೆ ಸಂಬಳ ಕೊಡುವುದಿಲ್ಲವೆಂದು ಕಂಪನಿ ಹೊರಹಾಕುತ್ತದೆ.
ಅಂದು ಊರು ಬಿಟ್ಟು ಪೇಟೆ ಸೇರಿದವರು ಮತ್ತೇಕೆ ಬಂದಿರೆಂದು ಊರು ಆಡಿಕೊಳ್ಳುತ್ತದೆ.
ಬಿಟ್ಟಿದ್ದು ನಮ್ಮವರಿಗಾಗಿಯೇ ಎಂಬುದು ಗೊತ್ತಿದ್ದರೂ ನಾವು ಯಾರನ್ನೂ ದೂರುವುದಿಲ್ಲ.
ಏಕೆಂದರೆ ನಾವು ಊರು ಬಿಟ್ಟವರು.
ಲೆಕ್ಕದೊಳಗೊಂದು ಲೆಕ್ಕಹಾಕಿ, ಜತನದಲ್ಲಿ ಉಳಿಸಿದ ಹಣದಲ್ಲಿ ಅಂದು ನಾವು ಪ್ಯಾಂಟು, ಶರ್ಟು, ಮೊಬೈಲು ಕೊಡಿಸಿದ್ದ ತಮ್ಮನೀಗ ನನಗೇನು ಕೊಟ್ಟೆಯೆಂದು ಸವಾಲು ಹಾಕುತ್ತಾನೆ.
ಲಕ್ಷಗಟ್ಟಲೆ ಸಾಲವ ತಲೆಯ ಮೇಲೆಳೆದುಕೊಂಡು ಮದುವೆ ಮಾಡಿಕೊಟ್ಟ ತಂಗಿ ತಿಂಗಳಿಗೊಮ್ಮೆ ಕರೆ ಮಾಡುವುದನ್ನೂ ಮರೆಯುತ್ತಾಳೆ.
ಅಲ್ಲಿ ದೂರದ ಶಹರದಲ್ಲಿ ಒಂಟಿಯಾಗಿ ಕುಳಿತು ಇವರೆಲ್ಲರೂ ನನ್ನವರು, ನನ್ನವರು ಎಂದು ಸುಳ್ಳು ಹೆಮ್ಮೆಯಲ್ಲಿ ಬದುಕುತ್ತೇವೆ.
ಏಕೆಂದರೆ... ನಾವು ಊರು ಬಿಟ್ಟವರು.
Comments